ಓಂ
2011 ಅಕ್ಟೊಬರ್ : ಮೌಂಟ್ ಅಬು ಹಾಗು ಗುಜರಾತ್ ರಾಜ್ಯದ ತೀರ್ಥಕ್ಷೇತ್ರಗಳ ಪ್ರವಾಸ
ಬೆಂಗಳೂರಿನಿಂದ ಮೊದಲು ಗುಜರಾತಿಗೆ ನಾನು, ನನ್ನ ತಂಗಿ ಮಂದಾಕಿನಿ ಮತ್ತು ಗೆಳತಿಯರಾದ ಕಾಮಿನಿ, ಜಯಲಕ್ಷ್ಮಿ, ಲೀಲಾವಸಂತ್ ಹಾಗು ವಸಂತ್ ರವರು ವಿಮಾನ ಪ್ರಯಾಣ ಮಾಡಿದೆವು. ಅಲ್ಲಿಂದ ನಾವು ಒಂದು ವಾಹನದಲ್ಲಿ ಮೌಂಟ್ ಅಬು ನೋಡಲು ಹೊರಟೆವು. ಮಾರ್ಗ ಮಧ್ಯದಲ್ಲಿ ಶ್ರೀ. ಅಂಬಾಜಿ ಮಂದಿರವನ್ನು ನೋಡಿಕೊಡು ಹೊರಟೆವು. ಈ ಮಂದಿರವು ಒಂದು ಶಕ್ತಿ ಪೀಠವಾಗಿದೆ. ಮದ್ಯಾನ್ಹ ಮಂದಿರದ ಬಾಗಿಲು ಹಾಕುವ ವೇಳೆಯಾಗಿದ್ದು, ಅದೃಷ್ಟವಶಾತ್ ನಮಗೆ ದೇವಿಯನ್ನು ನೋಡುವ ಅವಕಾಶ ಸಿಕ್ಕಿ, ಸಿಂಹದಮೇಲೆ ಕುಳಿತಿರುವ ದೇವಿಯ ದರ್ಶನ ಪಡೆದು ನಮ್ಮ ಮುಂದಿನ ಪ್ರಯಾಣ ಮೌಂಟ್ ಅಬುಗೆ ಪ್ರಯಾಣ ಬೆಳೆಸಿದೆವು.
ಮೌಂಟ್ ಅಬು ರಾಜಸ್ತಾನದ ಸಿರೋಹಿ ಜಿಲ್ಲೆಯ ಹಿಲ್ ಸ್ಟೇಷನ್ ಆಗಿದ್ದು ದಟ್ಟವಾದ ಅರಣ್ಯ ಪ್ರದೇಶವನ್ನು ಒಳಗೊಂಡಿದೆ. ಇದು ಗುಜರಾತಿನ ಗಡಿಪ್ರದೇಶ. ಇಲ್ಲಿ ಯಾವಾಗಲು ತಣ್ಣನೆಯ ವಾತಾವರಣವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಗುಜರಾತಿನಿಂದ ಕಾರಿನಲ್ಲಿ ಸುಮಾರು ಐದು ಗಂಟೆಯ ಪ್ರಯಾಣ ಮಾಡಿ ಮೌಂಟ್ ಅಬುವನ್ನು ತಲುಪಿದೆವು. ನನ್ನ ಪರಿಚಿತರೊಬ್ಬರ ಸಹಾಯದಿಂದ ನಾವು ಮೊದಲೇ ಅಲ್ಲಿ ಕೊಠಡಿಯನ್ನು ಕಾದಿರಿಸಿದ್ದೆವು. ಅಲ್ಲಿಯ ಪ್ರಶಾಂತ ವಾತಾವರಣವನ್ನು ನೋಡಿದ ಕೂಡಲೇ ನಮಗೆ ಒಂದು ರೀತಿಯ ಮನೋಲ್ಲಾಸವಾಯಿತು.ನಾವು ಕಾದಿರಿಸಿದ್ದ ರೂಮಿಗೆ ಹೋಗಿ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡೆವು. ಎಲ್ಲಿ ನೋಡಿದರು ಒಂದು ರೀತಿಯ ಪ್ರಶಾಂತತೆ ಹಾಗು ಭಕ್ತಿಯ ವಾತಾವರಣ. ಮೊದಲನೆಯದಾಗಿ ಅಲ್ಲಿಯ ರೂಮುಗಳಿಗೆ ಇಟ್ಟ ಹೆಸರು ನಮ್ಮ ಗಮನವನ್ನು ಸೆಳೆಯಿತು. ಶಾಂತಿ, ಕ್ಷಮೆ, ಭಕ್ತಿ, ಹೀಗೆ ರೂಮುಗಳ ಹೆಸರುಗಳು. ಅಲ್ಲಿಯೇ ವಾಸವಿರುವ ಬಳ್ಳಾರಿಯ ಬ್ರದರ್ ವೆಂಕಟೇಶ್ ರೆಡ್ಡಿ ಎನ್ನುವವರು ನಮ್ಮನ್ನು ಅತ್ಯಂತ ಆದರದಿಂದ ಸ್ವಾಗತಿಸಿದರು ಮತ್ತು ನಮ್ಮ ಜೊತೆಯಲ್ಲಿಯೇ ಬಂದು ಪ್ರಜಾಪಿತ ಬ್ರ ಹ್ಮಕುಮಾರಿ ಆದ್ಯಾತ್ಮ ಕೇಂದ್ರದ ಪರಿಚಯ ಮಾಡಿಕೊಟ್ಟರು.
|
ಮೌಂಟ್ ಅಬು |
|
ಬ್ರದರ್ ವೆಂಕಟೇಶ್ ರವರೊಂದಿಗೆ ವಸತಿಗೃಹದ ಮುಂದೆ |
ಈ ಆದ್ಯಾತ್ಮ ಕೇಂದ್ರ ಜಗತ್ತಿನಾದ್ಯಂತ ಸುಮಾರು 110 ದೇಶಗಲ್ಲಿ ತನ್ನ ಕೇಂದ್ರಗಳನ್ನು ಹೊಂದಿದೆ. ಇಲ್ಲಿ ಯಾವಾಗಲು ಸೆಮಿನಾರುಗಳು, ರಾಜಯೋಗ ಮೆಡಿಟೇಶನ್ ಬಗ್ಗೆ ಕಾರ್ಯಾಗಾರಗಳು ಹಾಗು ಆತ್ಮೋನ್ನತಿ ಬಗ್ಗೆ ಪ್ರವಚನಗಳು ನಡೆಯುತ್ತಿರುತ್ತವೆ. ಈ ರಾಜಯೋಗವು ಸುಲಭ ಹಾಗು ಸರಳವಾಗಿದ್ದು ಇದರಲ್ಲಿ ಯಾವುದೇ ಮಂತ್ರಗಳಾಗಲಿ ಅಥವಾ ಧರ್ಮಾಚರಣೆಗಳು ಇರುವುದಿಲ್ಲ ಧ್ಯಾನ ಎನ್ನುವುದು ಆತ್ಮೋನ್ನತಿಯನ್ನು ಕಂಡುಕೊಳ್ಳುವ ಮಾರ್ಗವೆಂದು ಧ್ಯಾನಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ ಮತ್ತು ಇದನ್ನು ಹೇಗೆ ಅಭ್ಯಾಸ ಮಾಡಬೇಕೆನ್ನುವುದನ್ನು ಹೀಗೆ ವಿವರಿಸುತ್ತಾರೆ. ಧ್ಯಾನಕ್ಕೆ ಮೊದಲು ಪ್ರಶಾಂತವಾದ ಯಾವುದೇ ಸ್ಥಳದಲ್ಲಿ ಕುಳಿತುಕೊಂಡು ಮನಸ್ಸಿನ ದುಗುಡವನ್ನು ಬಿಟ್ಟು ಶರೀರ ಮತ್ತು ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಬೇಕು. ನಂತರ ಮನಸ್ಸನ್ನು ಶಾಂತಿಯತ್ತ ಕೇಂದ್ರೀಕರಿಸಿ ಪ್ರೀತಿ ಬೆಳಕಿನತ್ತ ಹರಿಸಬೇಕು. ಇದು ನಮಗೆ ದೈವಿಕತೆಯ ಬಗ್ಗೆ ಜ್ಞಾನವನ್ನು ಕೊಡುತ್ತದೆ. ಇದು ನಮಗೆ ಒಳ್ಳೆಯ ಹಾಗು ಧನಾತ್ಮಕ ಚಿಂತನೆಯನ್ನು .ಕೊಡುವುದರ ಜೊತೆಗೆ ಇದರಿಂದ ನಾವು ಕ್ಲಿಷ್ಟ ಸನ್ನಿವೇಶಗಳನ್ನು ಒಳ್ಳೆಯ ರೀತಿಯಲ್ಲಿ ಸುಲಭವಾಗಿ ನಿಭಾಯಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತೇವೆ ಹಾಗು ಶಾಂತಿ ಸೌಹಾರ್ದಯುತವಾಗಿ ಜನರೊಡನೆ ಬಾಳುವ ರೀತಿಯನ್ನು ಕಲಿಯುತ್ತೇವೆ ಎನ್ನುವುದನ್ನು ಹೇಳುತ್ತಾರೆ.
ಸಾಯಂಕಾಲ ನಮ್ಮ ವಸತಿಗೃಹದ ಆವರಣದಲ್ಲಿ ಸ್ವಲ್ಪ ಹೊತ್ತು ವಿಹರಿಸಿ, ರಾತ್ರಿ ಊಟವನ್ನು ಮಾಡಿ ಮಲಗಿದೆವು. ಅಲ್ಲಿ ವಸತಿ ಗೃಹಗಳು ಸ್ವಚ್ಛವಾಗಿ ಹಾಗು ಅನುಕೂಲಕರವಾಗಿರುತ್ತವೆ. ಅಲ್ಲಿ ಸಾತ್ವಿಕ ಹಾಗು ಶುದ್ಧವಾದ ಊಟ ಹಾಗು ಉಪಹಾರಗಳು ದೊರೆಯುತ್ತವೆ. ಅಲ್ಲಿಯ ಭೋಜನ ಗೃಹವು ಅತ್ಯಂತ ಸ್ವಚ್ಛ ಹಾಗು ಆಧುನಿಕ ಸೌಕರ್ಯವನ್ನು ಹೊಂದಿವೆ. ಸೌರಶಕ್ತಿಯ ಬಳಕೆಯಿಂದ ಅಡಿಗೆಯನ್ನು ತಯಾರಿಸುತ್ತಾರೆ. ನಾವು ಅಡುಗೆ ಮನೆಯನ್ನು ನೋಡಿದಾಗ ತುಂಬಾ ಸಂತೋಷವಾಯಿತು. ಆದುನಿಕ ಉಪಕರಣಗಳನ್ನು ಹೊಂದಿದ ಅಡುಗೆ ಮನೆಯಲ್ಲಿ ಸೇವಾಕಾಂಕ್ಷಿಗಳು ಆಹಾರವನ್ನು ಪ್ರೀತಿಯಿಂದ ತಯಾರಿಸುತ್ತಿರುವುದನ್ನು ನೋಡಿದೆವು. ಒಟ್ಟಿನಲ್ಲಿ ಅಲ್ಲಿ ಎಲ್ಲರಲ್ಲಿಯೂ ಸೇವಾ ಮನೋಭಾವನೆ, ಪ್ರೀತಿ ಹಾಗು ಶಾಂತಿಯನ್ನು ನಾವು ನೋಡಬಹುದು. ಅಲ್ಲಿ ವೃದ್ದಾಶ್ರಮಗಳಿದ್ದು ಅವುಗಳಲ್ಲಿರುವವರು ಸಂತೃಪ್ತಿಯಿಂದ ಇರುವುದನ್ನು ಗಮನಿಸಿದೆವು.
ಬೆಳಿಗ್ಗೆ ಎದ್ದು ಪ್ರಾರ್ಥನೆ ಹಾಗು ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದೆವು.ಪ್ರಾರ್ಥನೆಯ ವೇಳೆಯಲ್ಲಿ ವಾತಾವರಣವು ಅತ್ಯಂತ ಪ್ರಶಾಂತವಾಗಿದ್ದು ಜನರು ಭಕ್ತಿ ಭಾವದಿಂದ ಪಾಲ್ಗೊಳ್ಳುತ್ತಾರೆ. ಎಲ್ಲರಲ್ಲಿಯೂ ಒಂದು ರೀತಿಯ ಶಿಸ್ತು ಹಾಗು ಏಕಾಗ್ರತೆಯನ್ನು ನೋಡಬಹುದು.
ಬೆಳಿಗ್ಗೆಉಪಹಾರವನ್ನು ಮಾಡಿ ನಾವು ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೋದೆವು. ಅಲ್ಲಲ್ಲಿ ಚಿಕ್ಕ ಚಿಕ್ಕ ಅಪಾರ್ಟ್ಮೆಂಟುಗಳನ್ನು ನಿರ್ಮಿಸಿರುತ್ತಾರೆ. ಅಲ್ಲಿಯ ಧ್ಯಾನ ಕೇಂದ್ರಗಳು ಧ್ಯಾನಕ್ಕೆ ಅನುಕೂಲವಾಗಿವೆ. ಸಭಾಭವನಗಳು., ಧ್ಯಾನಕೇಂದ್ರಗಳ ನ್ನೆಲ್ಲ ನೋಡಿದಾಗ ಮನಸ್ಸಿಗೆ ಒಂದು ರೀತಿಯ ದೈವಿಕ ಅನುಭವವಾಯಿತು. ಸುಂದರವಾದ ಪಾರ್ಕಿನಲ್ಲಿ ಸಂತೋಷದಿಂದ ವಿಹರಿಸಿ, ಫೋಟೋಗಳನ್ನು ತೆಗೆದುಕೊಂಡೆವು.
|
ಧ್ಯಾನ ಮಂದಿರ |
ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳಾದ ನಕ್ಕಿಲೇಕ್, ದಿಲ್ವಾರ ಜೈನ ಮಂದಿರ, ಮ್ಯೂಸಿಯಂ, , ಗುರುಶಿಖರಗಳನ್ನು ನೋಡಿದೆವು. ನಕ್ಕಿ ಲೇಕ್ ಒಂದು ಪವಿತ್ರ ಹಾಗು ಸುಂದರ ಸರೋವರವಾಗಿದ್ದು ಪುರಾಣಗಳ ಕಾಲದಲ್ಲಿ ಇದನ್ನು ಉಗುರುಗಳಿಂದ ಭೂಮಿಯನ್ನು ಬಗೆದು ನಿರ್ಮಿಸಲಾಗಿರುವುದರಿಂದ ಇದಕ್ಕೆ ನಕ್ಕಿ ಲೇಕ್ ಎಂದು ಹೇಳುತ್ತಾರೆಂದು ಸ್ಥಳೀಯರು ಹೇಳುತ್ತಾರೆ. ಜೈನ ಮಂದಿರಗಳನ್ನು ಸುಂದರವಾಗಿ ನಿರ್ಮಿಸಿರುತ್ತಾರೆ. ಅಲ್ಲಿ ಐದು ಜೈನ ಮಂದಿರಗಳಿದ್ದು ನಾವು ಹೋದಾಗ ಪ್ರವೇಶಕ್ಕೆ ಅವಕಾಶವಾಗಲಿಲ್ಲವಾದ್ದರಿಂದ ದೂರದಿಂದಲೇ ನೋಡಿ ಆನಂದಿಸಿದೆವು. ನಾವು ಗುರು ಶಿಖರವನ್ನು ಸಮಯದ ಅಭಾವದಿಂದ ತುತ್ತ ತುದಿಯವರೆಗೆ ಏರಲು ಸಾಧ್ಯವಾಗಲಿಲ್ಲ. ಇನ್ನು 50 ಮೆಟ್ಟಿಲುಗಳನ್ನು ಏರಿದ್ದರೆ ಶಿಖರದ ತುದಿಯನ್ನು ತಲುಪುತ್ತಿದ್ದೆವು..ಅಲ್ಲಿಂದಲೇ ಗುರು ಪಾದುಕೆಗೆ ನಮಸ್ಕರಿಸಿ ಹಿಂದಿರುಗಿದೆವು.
|
ನಕ್ಕಿ ಲೇಕ್ ಮೌಂಟ್ ಅಬು |
|
ಗ್ಲೋಬಲ್ ಆಡಿಟೋರಿಯಂ |
|
ಧ್ಯಾನ ಕೇಂದ್ರ ಮೌಂಟ್ ಅಬು
|
ಮರುದಿನ ಗುಜರಾತಿಗೆ ಹಿಂದಿರುಗಿ, ನಿರ್ಮಲ ಟ್ರಾವಲ್ಸ್ ಗ್ರೂಪನ್ನು ಸೇರಿಕೊಂಡೆವು. ಅಹಮದಾಬಾದಿನಲ್ಲಿ ಮುಖ್ಯವಾಗಿ ನಾವು ಸ್ವಾಮಿ ನಾರಾಯಣ ಅಕ್ಷರದಾಮ , ರಾಣಿ ಸ್ಟೆಪ್ ವೆಲ್ , ಇಸ್ಕಾನ್ ದೇವೆಸ್ಟನ, ರಾಷ್ಟ್ರಪಿತ ಪೂಜ್ಯ ಗಾಂಧೀಜಿಯವರ ಮನೆ, ಸಬರಮತಿ ಆಶ್ರಮ; ಮುಂತಾದವುಗಳನ್ನು ನೋಡಿದೆವು
|
ಸ್ವಾಮಿ ನಾರಾಯಣ ಮಂದಿರ, ಗುಜರಾತ್
ಸ್ವಾಮಿ ನಾರಾಯಣ್ ಅಕ್ಷರಧಾಮವು ತುಂಬಾ ಆಕರ್ಷಣೀಯವಾಗಿದೆ ಇಲ್ಲಿ ನಮ್ಮ ಶಿಲ್ಪಿಗಳ ಶಿಲ್ಪಕಲಾ ನೈಪುಣ್ಯತೆಯನ್ನು ನೋಡಬಹುದು. ಇದನ್ನು ರಾಜಸ್ತಾನದ ಪಿಂಕ್ ಮಾರ್ಬಲ್ಲಿನಿಂದ ನಿರ್ಮಿಸಿರುತ್ತಾರೆ. ಹಲವು ಅಂತಸ್ತುಗಳುಳ್ಳ ಈ ಮಂದಿರದ ಬಾಗಿಲು, ಕಿಟಕಿಗಳು, ಸಣ್ಣ ಸಣ್ಣ ಶಿಖರಗಳನ್ನು ಅತ್ಯಂತ ಆಕರ್ಷಕವಾಗಿ ಕೆತ್ತಿರುತ್ತಾರೆ. ಈ ಮಂದಿರದಲ್ಲಿ ಸ್ವಾಮಿ ನಾರಾಯಣರ ಬಂಗಾರದ ಮೂರ್ತಿಯನ್ನು ಪೂಜಿಸುತ್ತಾರೆ. ಸ್ವಾಮಿ ನಾರಾಯಣರ ಭಕ್ತಿ ಪಂಥಕ್ಕೆ ಕಾರಣರಾದ ನಾರಾಯಣ ಸಂತರ ಜೀವನ ಚರಿತ್ರೆಯನ್ನು ಸಾರುವ ಕಿರು ಚಿತ್ರ ಪ್ರದರ್ಶನವನ್ನು ನೋಡಿದೆವು. ಆ ಮಹಾ ಸಂತರ ಜೀವನ ಚರಿತ್ರೆಯು ಒಂದು ಅದ್ಭುತ ಕೊಡುಗೆಯಾಗಿದೆ. ಒಳಗಡೆ ದೊಡ್ಡ ಪ್ರಾರ್ಥನಾ ಕೊಠಡಿ, ಎಕ್ಸಿಬಿಶನ್ ಕೊಠಡಿ, ಸಂಶೋಧನಾ ಕೇಂದ್ರಗಳನ್ನು ನೋಡಬಹುದು.
ರಾಣಿ ಸ್ಟೆಪ್ ವೆಲ್
ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಕಟ್ಟಲಾಗಿದೆ ಎಂದು ಹೇಳಲ್ಪಡುವ ಅಹಮದಾಬಾದಿನ ಈ ರಾಣಿ ಕಿ ವಾವ್ ಅಂದರೆ ರಾಣಿ ಸ್ಟೆಪ್ ವೆಲ್ಲನ್ನು ಉದಯಮತಿ ಎನ್ನುವ ರಾಣಿಯು ತನ್ನ ಪತಿಯ ನೆನಪಿನಲ್ಲಿ ಕಟ್ಟಿಸಿದ್ದೆಂದು ಹೇಳುತ್ತಾರೆ. ನೆಲ ಮೇಲ್ಮೆಯಿಂದ ಪ್ರಾರಂಭಿಸಿ ಹಂತ ಹಂತವಾಗಿ ಕೆಳಗಡೆ ಹಲವು ಆಕರ್ಷಕ ಕಂಬಗಳ ವಿನ್ಯಾಸಗಳಿಂದ ಕಟ್ಟಿರುವ ಈ ಕಟ್ಟಡದ ಕೆಳಗಿನ ಹಂತದಲ್ಲಿ ದೊಡ್ಡದಾದ ಒಂದು ಬಾವಿಯನ್ನು ನೋಡಬಹುದು. ಈಗ ಇದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಗಿದೆ. ಈ ಕಟ್ಟಡದಲ್ಲಿ ಕೃಷ್ಣಾವತಾರದ ಮೂರ್ತಿಗಳನ್ನು, ಹಿಂದೂ ದೇವ -ದೇವತೆಯರ ಹಾಗು ಜೈನ ಧರ್ಮಕ್ಕೆ ಸಂಬಂದಿಸಿದ ಮೂರ್ತಿಗಳನ್ನು ಸುಂದರವಾಗಿ ನಿರ್ಮಿಸಿರುತ್ತಾರೆ.
ರಾಷ್ಟ್ರಪಿತ ಗಾಂಧೀಜಿಯವರ ಮನೆಯನ್ನು ವೀಕ್ಷಿಸಲು ಹೋದೆವು. ನಾವು ಚಿಕ್ಕವರಿದ್ದಾಗ ಸ್ವಾತಂತ್ರೋತ್ಸವದಲ್ಲಿ ಗಾಂಧೀಜಿಯವರ ಫೋಟೋವನ್ನು ಹಿಡಿದುಕೊಂಡು ಊರಲ್ಲಿ ಭಾರತ್ ಮಾತಾಕಿ ಜೈ, ಗಾಂಧೀಜಿಕಿ ಜೈ ಎಂದು ಪೆರೇಡ್ ಹೋಗುತ್ತಿದ್ದ ನೆನಪು ಮರುಕಳಿಸಿತು. ಈಗ ಅವರು ವಾಸಿಸುತ್ತಿದ್ದ ಮನೆಗೆ ಭೇಟಿಯಿತ್ತಾಗ ತುಂಬಾ ಆನಂದಿಸಿದೆವು. ಅವರಿಗೆ ಸಂಬಂದಿಸಿದ ಹಾಗು ಅವರು ಉಪಯೋಗಿಸುತ್ತಿದ್ದ ವಸ್ತುಗಳನ್ನು ನೋಡಿದಾಗ ಅವರ ಸರಳ ಜೀವನದ ಬಗ್ಗೆ ಹೆಮ್ಮೆ ಎನಿಸಿತು. ನಾವೆಲ್ಲ ಅಲ್ಲಿ ಫೋಟೋವನ್ನು ತೆಗೆದುಕೊಂಡೆವು.
ಗಾಂಧೀಜಿಯವರ ಮನೆಯ ಮುಂದಿನ ಫೋಟೋ
ಅಲ್ಲಿಂದ ನಾವು ಅಹಮದಾಬಾದಿನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದೆವು. ಈ ಆಶ್ರಮವು ಸಬರಮತಿ ನದಿಯ ದಂಡೆಯ ಮೇಲಿದೆ. ಗಾಂಧೀಜಿಯವರು ಇಲ್ಲಿ ತಮ್ಮ ಪತ್ನಿ ಕಸ್ತೂರಿಬಾಗಾಂಧಿ ಹಾಗು ತಮ್ಮ ಅನುಯಾಯಿಗಳೊಡನೆ ಸುಮಾರು 12 ವರ್ಷ ವಾಸವಾಗಿದ್ದರೆಂದು , ಅವರು ಇಲ್ಲಿಂದಲೇ ತಮ್ಮ ಉಪ್ಪಿನ ಸತ್ಯಾಗ್ರಹ ಚಳುವಳಿಯನ್ನು ಪ್ರಾರಂಭಿಸಿದ್ದು, ಭಾರತ ದೇಶದ ಸ್ವತಂತ್ರ ಚಳುವಳಿಯ ಕುರುಹಾಗಿ ಭಾರತ ಸರ್ಕಾರವು ಇದನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಸ್ಥಾಪಿಸಿದೆ.
ನಾವು ಇಲ್ಲಿ ಬಂದ ಸವಿ ನೆನಪಿನ ಕುರುಹಾಗಿ ಗಾಂಧೀಜಿಯವರು ಚರಕದಿಂದ ನೂಲುತ್ತಿದ್ದ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡು ಫೋಟೋ ತೆಗೆದುಕೊಂಡೆವು. ಹೀಗೆ ಅಹಮದಾಬಾದಿನ ಮುಖ್ಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ, ಆ ದಿನ ಅಲ್ಲೇ ತಂಗಿದೆವು. ಇಲ್ಲಿ ನಾವು ವಿನೋಬಾ ಕುಟೀರ, ಉಪಾಸನಾ ಮಂದಿರ, ಮಗನ್ ನಿವಾಸ ಹೀಗೆ ಚಿಕ್ಕ ಚಿಕ್ಕ ಕುಟೀರಗಳನ್ನು ನೋಡಬಹುದು. ವಿನೋಬಾ ಕುಟೀರದಲ್ಲಿ ಆಚಾರ್ಯ ವಿನೋಬಾಭಾವೆ ಯವರು ಸ್ವಲ್ಪ ದಿನ ತಂಗಿದ್ದರೆಂದು ಹೇಳುತ್ತಾರೆ.
ನನ್ನ ಜೀವನವೇ ನನ್ನ ಸಂದೇಶ ಎಂದು ಸಾರುವ ಇಲ್ಲಿರುವ ಮ್ಯೂಸಿಯಂ ನಲ್ಲಿ ಗಾಂಧೀಜಿಯವರ ಜೀವನದ ಪ್ರಮುಖ ಘಟನೆಗಳಿಗೆ ಸಂಬಂದಿಸಿದ ಪೈಂಟಿಂಗ್ಸ್ ಮತ್ತು ಫೋಟೋಗಳ್ಳನ್ನು ನೋಡಬಹುದು.
ಇಲ್ಲಿ ಮಹಾತ್ಮಾ ಗಾಂಧೀಜಿಯವರ ಜೀವನ ಚರಿತ್ರೆ, ಅವರ ಸಂದೇಶ ಹಾಗು ಭಾರತ ಸ್ವಾತಂತ್ರ್ಯ ಚಳುವಳಿಗೆ ಸಂಬಂದಿಸಿದ ಸಾವಿರಾರು ಪುಸ್ತಗಗಳನ್ನೊಳಗೊಂಡ ಪುಸ್ತಕಾಲಯವನ್ನು ನೋಡಬಹುದು.
ಮರುದಿನ ಬೆಳಿಗ್ಗೆ ನಾವು ನಿರ್ಮಲ ಟ್ರಾವೆಲ್ಸ್ ನವರು ಸಿದ್ದಪಡಿಸಿದ್ದ ಬಿಸಿ ಬಿಸಿ ದೋಸೆ, ರುಚಿಯಾದ ಸಿಹಿ ತಿಂಡಿಗಳನ್ನು ಸವಿದು ಬಸ್ಸಿನಲ್ಲಿ ನಮ್ಮ ಮುಂದಿನ ಪ್ರವಾಸ, ಪ್ರಭಾಸ್ ಕ್ಷೇತ್ರ ಹಾಗು ಸೋಮನಾಥ ಕ್ಷೇತ್ರ ನೋಡಲು ಹೊರಟೆವು.
ಪ್ರಭಾಸ್ ಕ್ಷೇತ್ರವು ಸೋಮನಾಥ ಕ್ಷೇತ್ರದ ಹತ್ತಿರವಿದ್ದು, ಇಲ್ಲಿ ಶ್ರೀಕೃಷ್ಣನು ತನ್ನ ಅವತಾರವನ್ನು ಮುಗಿಸುವ ಸಮಯದಲ್ಲಿ ಜರ ಎಂಬ ಬೇಡನ ಬಾಣದ ಹೊಡೆತದಿಂದ ತನ್ನ ಭೌತಿಕ ಶರೀರವನ್ನು ಇಲ್ಲೇ ತ್ಯಜಿಸಿ, ಪರಂಧಾಮ ಪ್ರವೇಶಿರುವನೆಂದು ನಮ್ಮ ಪುರಾಣಗಳು ತಿಳಿಸುತ್ತವೆ. ಇಲ್ಲಿ ಹರಿಯುವ ಸರಸ್ವತಿ ನದಿಗೆ ಬಾಲ್ಕ ತೀರ್ಥವೆಂದು ಹೇಳುತ್ತಾರೆ. ನಾವು ಈ ತೀರ್ಥವನ್ನು ಪ್ರೋಕ್ಷಿಸಿಕೊಂಡು ಇಲ್ಲೇ ಒಂದು ಗ್ರೂಪ್ ಫೋಟೋ ತೆಗೆದುಕೊಂಡು ಶ್ರೀಕೃಷ್ಣನು ದೇಹ ತ್ಯಜಿಸಿದ ಜಾಗದಲ್ಲಿ ಇಟ್ಟಿರುವ ಪಾದುಕೆಗಳನ್ನು ನೋಡಿಕೊಂಡು ನಮಸ್ಕರಿಸಿ, ಅಲ್ಲೇ ಪಕ್ಕದಲ್ಲಿರುವ ಬಲರಾಮನು ತನ್ನ ಅವತಾರವನ್ನು ಮುಗಿಸಿ ಆದಿಶೇಷನಾಗಿ ಹುತ್ತದೊಳಗೆ ಅಂತರ್ಧಾನನಾದನೆಂದು ಹೇಳುವ ದೇವಸ್ತಾನಕ್ಕೆ ಹಾಗು ಇನ್ನೊಂದು ಲಕ್ಷ್ಮೀನಾರಾಯಣ ಮಂದಿರಕ್ಕೆ ಹೋಗಿ, ನಮಸ್ಕರಿಸಿ, ಇವೆಲ್ಲ ನೆನಪುಗಳನ್ನು ತುಂಬಿಕೊಂಡು ಸೋಮನಾಥ ಜ್ಯೋತಿರ್ಲಿಂಗ ದರ್ಶನವನ್ನು ಪಡೆಯಲು ಹೊರಟೆವು.
ಶ್ರೀಕೃಷ್ಣನು ಭೌತಿಕ ದೇಹವನ್ನು ತ್ಯಜಿಸಿದ ಜಗದಲ್ಲಿ ಕೃಷ್ಣಾ ಪಾದುಕೆ , ಪ್ರಭಾಸ್ ಕ್ಷೇತ್ರ
ಬಲರಾಮರು ಭೌತಿಕ ದೇಹತ್ಯಾಗ ಮಾಡಿ, ಆದಿಶೇಷನ ರೂಪದಲ್ಲಿ ಹುತ್ತದೊಳಗೆ ಹೋದ
ಪ್ರಭಾಸ್ ಕ್ಷೇತ್ರದ ಸರಸ್ವತಿ ನದಿಯ ದಂಡೆಯ ಮೇಲೆ ಗ್ರೂಪ್ ಫೋಟೋ
ನಮಗೆಲ್ಲ ತಿಳಿದಿರುವ ಹಾಗೆ ಸೋಮನಾಥ ಜ್ಯೋತಿರ್ಲಿಂಗವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಶಿವ ಪುರಾಣದಲ್ಲಿ ತಿಳಿಸಿರುವ ಹಾಗೆ ಕೃತಯುಗದಲ್ಲಿ ಬ್ರಹ್ಮನ ಮಗನಾದ ದಕ್ಷ ಪ್ರಜಾಪತಿಯ 27 ಹೆಣ್ಣುಮಕ್ಕಳನ್ನು ಚಂದ್ರನು ಅಂದರೆ ಸೋಮನಾಥನು ವಿವಾಹವಾಗುತ್ತಾನೆ. ಆದರೆ ಅವನಿಗೆ ಸುಂದರಿ ರೋಹಿಣಿಯಲ್ಲಿ ಹೆಚ್ಚು ಅನುರಾಗವಿದ್ದು ಬೇರೆ ಹೆಂಡತಿಯರನ್ನು ನಿರ್ಲಕ್ಷಿಸುತ್ತಿದ್ದನೆಂದು ಮಾವ ದಕ್ಷನು ಸಿಟ್ಟಾಗಿ ಚಂದ್ರನಿಗೆ ಕ್ಷಯರೋಗ ಬರಲಿ ಎಂದು ಶಾಪಕೊಡಲು, ಚಂದ್ರನು ದಿನೇ ದಿನೇ ಕ್ಷೀಣಿಸತೊಡಗುತ್ತಾ ಹೋದಾಗ, ಚಂದ್ರನು ಬ್ರಹ್ಮದೇವನನ್ನು ಮರೆಹೋಗೋತ್ತನೆ. ಆಗ ಬ್ರಹ್ಮದೇವನು, ಶಿವನು ಶೀಘ್ರ ಫಲದಾಯಕನಾಗಿದ್ದು ಕೂಡಲೇ ಪ್ರಭಾಸ ಕ್ಷೇತ್ರಕ್ಕೆ ಹೋಗಿ ಅಲ್ಲಿ ಮೃತ್ಯುಂಜಯ ಜಪ ಮಾಡಿ, ಆತನನ್ನು ಭಕ್ತಿಯಿಂದ ಮೊರೆಹೊಕ್ಕರೇ ನೀನು ಶಾಪದಿಂದ ಮುಕ್ತನಾಗುವೆ ಎಂದು ಹೇಳುತ್ತಾನೆ. ಕೂಡಲೇ ಚಂದ್ರನು ಆರು ತಿಂಗಳ ಕಾಲ ಇಲ್ಲಿ ಕಠಿನ ತಪಸ್ಸನ್ನು ಆಚರಿಸಲು ಶಿವನು ಪ್ರತ್ಯಕ್ಷನಾಗಿ , ಚಂದ್ರನಿಗೆ ನಿನಗೆ ತಗುಲಿದ ಶಾಪವನ್ನು ಪೂರ್ತಿ ನಿವಾರಿಸಲು ಸಾಧ್ಯವಿಲ್ಲ , ನಿನ್ನ ತಪ್ಪಿಗೆ ನೀನು ಶಿಕ್ಷೆಯನ್ನು ಅನುಭವಿಸಲೇ ಬೇಕು ಆದರೆ ಶಿಕ್ಷೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿ ಒಂದು ತಿಂಗಳ ಹದಿನೈದು ದಿನಗಳಲ್ಲಿ ನೀನು ತೇಜಸ್ಸನ್ನು ಕಳೆದುಕೊಂಡು ಕಳಾಹೀನನಾಗಿರುವೆ, ಅದಕ್ಕೆ ಕೃಷ್ಣಾ ಪಕ್ಷ ಎನ್ನುತ್ತಾರೆ ಇನ್ನು ಹದಿನೈದು ದಿನಗಳು ನಿನ್ನ ತೇಜಸ್ಸು ವೃದ್ಧಿಯಾಗುತ್ತ ಹೋಗಿ ನೀನು ಪೂರ್ಣ ಚಂದ್ರನಾಗುವೆ. ಇದನ್ನು ಪೂರ್ಣಿಮೆ ಎಂದು ಕರೆಯುತ್ತಾರೆ ಹಾಗು ಈ ಹದಿನೈದು ದಿನಗಳನ್ನು ಶುಕ್ರಪಕ್ಷವೆಂದು ಕರೆಯುತ್ತಾರೆ ಎಂದು ವರ ನೀಡಿ ಅಂತರ್ಧಾನನಾಗುತ್ತಾನೆ. ಈ ಘಟನೆಯ ಸಂಕೇತವಾಗಿ ಶಿವನು ಸೋಮನನ್ನು ರಕ್ಷಿಸಿದ ಸಂಕೇತವಾಗಿ ಸೋಮನಾಥನೆಂದು ಇಲ್ಲಿ ಜ್ಯೋತಿರ್ಲಿಂಗ ರೂಪದಲ್ಲಿ ನೆಲೆಸುತ್ತಾನೆ.
ಸೋಮನಾಥ ಮಂದಿರದ ಮುಂದೆ
ಮುಂದೆ ದ್ವಾಪರ ಯುಗದಲ್ಲಿ ಸೋಮನಾಥ ಶಿವನನ್ನು, ಶೀಕೃಷ್ಣ , ಬಲರಾಮ , ಪಾಂಡವರು ಪರೀಕ್ಷಿತ ಮಹಾರಾಜಾ, ಋಷಿಗಳು, ಯೋಗಿಗಳೆಲ್ಲರೂ ಪೂಜಿಸಿರುವುದನ್ನು ಶಿವ ಪುರಾಣ ಉಲ್ಲೇಖಿಸುತ್ತದೆ. ಇಲ್ಲಿ ತ್ರಿವೇಣಿ ಸಂಗಮವಿದ್ದು ಪವಿತ್ರ ತೀರ್ಥದಲ್ಲಿ ಸ್ನಾನ ಮಾಡಲು ಜನರು ತಮ್ಮ ಪಾಪಗಳನ್ನು ಕಳೆದುಕೊಳ್ಳುತ್ತಾರೆಂಬ ಉಲ್ಲೇಖವಿದ್ದು ಇಲ್ಲಿ ಪ್ರವಾಸಿಗರು ತೀರ್ಥಸ್ನಾನವನ್ನು ಕೈಗೊಳ್ಳುತ್ತಾರೆ. ಮಂದಿರದ ಆವರಣದಲ್ಲಿರುವ ಚಂದ್ರ ಕುಂಡ, ಮೊದಲಾದವುಗಳನ್ನು ನಾವು ವೀಕ್ಷಿಸಿದೆವು. ಸಮಯಾಭಾವದಿಂದ ನಮಗೆ ಇಲ್ಲಿ ಇನ್ನು ಕೆಲವು ಮಂದಿಗಳನ್ನ ವೀಕ್ಷಿಸುವ ಅವಕಾಶವಾಗಲಿಲ್ಲ. ಇಲ್ಲಿಯ ತ್ರಿವೇಣಿ ಸಂಗಮದಲ್ಲಿ ಸ್ವಲ್ಪ ಹೊತ್ತು ಇದ್ದು, ತೀರ್ಥವನ್ನು ಪ್ರೋಕ್ಷಿಸಿಕೊಂಡುವನ್ನು ಸೋಮನಾಥ ಮಂದಿರಕ್ಕೆ ಹೋಗಿ ಅಲ್ಲಿ ಸಾಯಂಕಾಲ ನಡೆಯುತ್ತಿದ್ದ ಸೋಮನಾಥ ಸ್ವಾಮಿಯ ಪೂಜೆಯನ್ನು ಶ್ರದ್ದಾ - ಭಕ್ತಿಯಿಂದ ನಡೆಯುವ ಆರತಿಯನ್ನು ಕಣ್ತುಂಬಿಕೊಂಡು ಅಲ್ಲಿಂದ ನಾವು ಇನ್ನೊಂದು ತೀರ್ಥಕ್ಷೇತ್ರ ದ್ವಾರಕೆಗೆ ಹೊರಟು , ರಾತ್ರಿ ದ್ವಾರಕೆಯಲ್ಲಿ ತಂಗಿದೆವು. ದ್ವಾರಕಾದೀಶ್ ಮಂದಿರ, ದ್ವಾರಕಾ ದ್ವಾರಕೆವು ಹಿಂದುಗಳಿಗೆ ಪವಿತ್ರ ತೀರ್ಥಕ್ಷೇತ್ರವಾಗಿದೆ. ಇಲ್ಲಿ ಜಗತ್ ಮಂದಿರ ಅಥವಾ ದ್ವಾರಕಾದೀಶ್ ಮಂದಿರವೆಂದು ಕರೆಯಲ್ಪಡುವ ಮಂದಿರದಲ್ಲಿ ಶ್ರೀಕೃಷ್ಣನ ಸುಂದರವಾದ ಮೂರ್ತಿಯನ್ನು ನೋಡುವುದೇ ಕಣ್ಣುಗಳಿಗೆ ಒಂದು ಹಬ್ಬ. ದ್ವಾಪರ ಯುಗದ ಕೃಷ್ಣಾವತಾರದ ಕಾಲದಲ್ಲಿ ಶ್ರೀಕೃಷ್ಣನು ತನ್ನ ಸೋದರ ಮಾವ ಕಂಸನನ್ನು ವಧಿಸಿದ ನಂತರ ಇಲ್ಲಿಗೆ ಬಂದು ನೆಲೆಸಿದ್ಧನೆಂದು ನಾವು ನಮ್ಮ ಪುರಾಣಗಳು ಉಲ್ಲೇಖಿಸಿರುವುದನ್ನು ನೋಡಬಹುದು. ಇಲ್ಲಿಗೆ ಶ್ರೀಕೃಷ್ಣನು ಬರುವುದಕ್ಕೆ ಮೊದಲು ದೇವ ಶಿಲ್ಪಿ ವಿಶ್ವಕರ್ಮನಿಗೆ ಅರಮನೆಯನ್ನು ನಿರ್ಮಾಣ ಮಾಡಲು ಹೇಳಿದಾಗ , ವಿಶ್ವಕರ್ಮನು ಮುತ್ತು ರತ್ನ, ವಜ್ರ ವೈಡೂರ್ಯಗಳಿಂದ ಅತಿ ಸುಂದರವಾದ ಮತ್ತು ಸುಸಜ್ಜಿತವಾದ ಅರಮನೆ ಹಾಗು ನಗರವನ್ನು ನಿರ್ಮಾಣ ಮಾಡಲು ಶ್ರೀಕೃಷ್ಣನು ಅಲ್ಲಿಗೆ ಬಂದು ತಾನು ಅವತಾರವನ್ನು ಮುಗಿಸಿ, ಪರಂಧಾಮವನ್ನು ಪ್ರವೇಶಿಸುವ ತನಕ ಅಲ್ಲಿಯೇ ತನ್ನ ಲೀಲೆಗಳನ್ನು ತೋರುತ್ತ ಆಳ್ವಿಕೆಯನ್ನು ನಡೆಸಿರುವುದಾಗಿ ಪುರಾಣಗಳಲ್ಲಿ ಓದಿದ್ದೇವೆ. ಆಗಿನ ದ್ವಾರಕೆಯು ಕೃಷ್ಣಾವತಾರದ ನಂತರ ಸಮುದ್ರದಲ್ಲಿ ಮುಳುಗಿದ್ದು, ಅದೇ ಸ್ಥಳದಲ್ಲಿ ಈಗಿರುವ ದ್ವಾರಕಾದೀಶನ ಮಂದಿರವನ್ನು ಸುಮಾರು 2000 ವರ್ಷಗಳ ಹಿಂದೆ ನಿರ್ಮಿಸಿದ್ದು, 16-17ನೇ ಶತಮಾನದಲ್ಲಿ ಇದನ್ನು ಮತ್ತಷ್ಟು ವಿಸ್ತರಿಸಿ ಕಟ್ಟಲಾಗಿದೆ ಎಂದು ಹೇಳುತ್ತಾರೆ. ನಾವು ನೋಡಿದ ಹಾಗೆ ಐದು ಮಹಡಿಗಳುಳ್ಳ ಈ ಮಂದಿರವು ಪುರಾತನ ಶಿಲ್ಪಕಲೆಯಿಂದ ಕೂಡಿದ್ದು, ತುಂಬಾ ವಿಶಾಲವಾಗಿದೆ. ಇಲ್ಲಿ ಪ್ರತಿದಿನ ಐದು ಸಾರಿ ಧರ್ಮ ಲಾಂಛನವನ್ನು ಬದಲಾಯಿಸುತ್ತಾರೆ. ಈ ಧರ್ಮ ಲಾಂಛನವನ್ನು ಮಂದಿರದ ಮೇಲೆ ಹಾರಾಟ ಮಾಡುವುದಕೋಸ್ಕರವೇ ಒಂದು ಸೇವೆ ಇದ್ದು, ಭಕ್ತರು ಈ ಸೇವೆಗೆ ವರ್ಷಾನುಗಟ್ಟಲೆ ಮೊದಲೇ ಕಾಯಬೇಕಾಗುವುದೆಂದು ಅಲ್ಲಿಯ ಸ್ಥಳೀಯರು ನಮಗೆ ತಿಳಿಸಿದರು. ನಾವೆಲ್ಲ ಒಟ್ಟಾಗಿ ದ್ವಾರಕಾಧೀಶನ ಮಂದಿರದಲ್ಲಿ ನಮ್ಮ ನಮ್ಮ ಕುಟುಂಬದ ಪರವಾಗಿ ಅನ್ನದಾನ ಸೇವೆಯನ್ನು ಕೈಗೊಂಡೆವು. ವಿಧಿಪೂರ್ವಕವಾಗಿ ಅಲ್ಲಿಯ ಪುರೋಹಿತರು ಸೇವೆಯ ಸಂಕಲ್ಪವನ್ನು ಪ್ರತ್ಯೇಕವಾಗಿ ಒಬ್ಬರಿಂದಲೂ ಮಾಡಿಸಿ, ನಂತರ ಒಬ್ಬೊಬ್ಬರಿಗೂ ಮಂದಿರದ ಹಾಗು ದ್ವಾರಕಾಧೀಶನಿರುವ ಶಾಲನ್ನು ಹೊದಿಸಿದರು. ನಂತರ ನಾವು ಸಂತೋಷದಿಂದ ಮಂದಿರದ ಸುತ್ತೆಲ್ಲ ಪ್ರದರ್ಶವನ್ನು ಹಾಕಿದೆವು. ಜನರು ಕಡಿಮೆ ಇದ್ದಿದ್ದರಿಂದ ನಾವು ಎರಡು ಮೂರೂ ಸಾರಿ ದ್ವಾರಕಾಧೀಶನ ದರ್ಶನವನ್ನು ಪಡೆದೆವು.
ನಾವು ಊಟ ಮುಗಿಸಿ ದ್ವಾರಕದಿಂದ ಸ್ವಲ್ಪ ದೂರವಿರುವ ಭೇಟ್ ದ್ವಾರಕಾ ದ್ವೀಪವನ್ನು ನೋಡಲು ಒಂದು ದೊಡ್ಡ ಲಾಂಚಿನಲ್ಲಿ ಹೋದೆವು. ಇಲ್ಲಿ ಹೇರಳವಾಗಿ ಶಂಖಗಳು ಸಿಗುತ್ತಿದ್ದುದರಿಂದ ಇದಕ್ಕೆ ಶಂಕೋಧರ ದ್ವೀಪವೆಂದು ಕೂಡ ಹೇಳುತ್ತಾರೆ.
ಬೆಟ್ ದ್ವಾರಕೆಗೆ ಹೋಗುವಾಗ ಸಮುದ್ರ ದಂಡೆ ಯಲ್ಲಿ ತೆಗೆದ ಫೋಟೋ
ಗೋಪಿ ತಲಾಬ್ ದ್ವಾರಕಾ
ರುಕ್ಮಿಣಿ ಮಂದಿರದ ಎದುರು, ದ್ವಾರಕಾ
| ಸೂರ್ಯಾಸ್ತ, ದ್ವಾರಕಾ
|
ವಿಶಾಲವಾದ ಸಮುದ್ರದಲ್ಲಿ ಹೋಗುವುದೇ ಒಂದು ಅದ್ಭುತ ಅನುಭವ. ನಮ್ಮ ಗ್ರೂಪಿನವರೆಲ್ಲ ತುಂಬಾ ಸಂತೋಷದಿದ ಫೋಟೋಗಳನ್ನು ತೆಗೆದುಕೊಳ್ಳುತ್ತಾ, ಮಾತನಾಡುತ್ತ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿರುವಾಗ ನಮಗೆ ಬೆಟ್ ದ್ವಾರಕ ತಲುಪಿದ್ದೆ ಗೊತ್ತಾಗಲಿಲ್ಲ ಸಮುದ್ರ ತೀರದಿಂದ ಸ್ವಲ್ಪ ದೂರ ನಡೆದು ಮಂದಿರವನ್ನು ತಲುಪಬೇಕು. ಇಲ್ಲಿಯೂ ಕೂಡ ಶ್ರೀ ಕೃಷ್ಣ ಹಾಗು ಯಾದವರು ವಾಸಿಸುತ್ತಿದ್ದರೆಂದು ನಮ್ಮ ಪುರಾಣಗಳಲ್ಲಿ ಉಲ್ಲೇಖಗಳಿವೆ. ನಾವು ಇಲ್ಲಿ ಶ್ರೀಕೃಷ್ಣ ಮಂದಿರ, ಹನುಮಾನ್ ಮಂದಿರ ಮುಂತಾದವುಗಳನ್ನು ನೋಡಿಕೊಂಡು, ದೇವರ ದರ್ಶಗಳನ್ನು ಪಡೆದು ಹಿಂದಿರುಗಿದೆವು. ಇಲ್ಲಿ ಶ್ರೀಕೃಷ್ಣನಿಗೆ ಅವಲಕ್ಕಿ ಸೇವೆಯು ಮುಖ್ಯವಾಗಿದ್ದು, ಭಕ್ತರಿಗೆ ಅವಲಕ್ಕಿಯನ್ನು ಪ್ರಸಾದವಾಗಿ ಕೊಡುತ್ತಾರೆ. ಶ್ರೀಕೃಷ್ಣಾವತಾರದ ಬಗ್ಗೆ ಸ್ವಲ್ಪ ತಿಳಿದುಗೊಂಡಿದ್ದ ನಮಗೆ ಅಲ್ಲೆಲ್ಲ ಹೋಗಿ ನೋಡುವ ಭಾಗ್ಯ ಸಿಕ್ಕಿದ್ದಕ್ಕೆ ಒಂದು ಕ್ಷಣ ಮನಸ್ಸು ಭಾವಾವೇಶಕ್ಕೆ ಒಳಗಾಯಿತು. ಆ ದಿನ ದ್ವಾರಕದಲ್ಲಿ ಉಳಿದು ಮರುದಿನ ನಮ್ಮ ಮರು ಪ್ರಯಾಣವನ್ನು ಕೈಗೊಂಡೆವು.
ಮಾರ್ಗ ಮದ್ಯದಲ್ಲಿ ಇನ್ನೊಂದು ದ್ವಾದಶ ಜ್ಯೋತಿರ್ಲಿಂಗ ನಾಗನಾಥ ಮಂದಿರಕ್ಕೆ ಹೋದೆವು. ಶಿವ ಪುರಾಣದಲ್ಲಿ ತಿಳಿಸಿರುವ ಹಾಗೆ ಈ ಪ್ರದೇಶದಲ್ಲಿರುವ ಅರಣ್ಯಕ್ಕೆ ದಾರುಕಾ ವನವೆಂದು ಹೇಳುತ್ತಾರೆ. ಇಲ್ಲಿ ಶಿವನು ತನ್ನ ಭಕ್ತಾದಿಗಳಿಗೆ ಹಿಂಸೆ ನೀಡುತ್ತಿದ್ದ ದಾರುಕ ಎಂಬ ರಾಕ್ಷಸನನ್ನು ಕೊಂದು ತನ್ನ ಮಹಾ ಭಕ್ತ ಸುಪ್ರಿಯಾ ಎಂಬ ವೈಶ್ಯನನ್ನು ಹಾಗು ಇತರ ಭಕ್ತರನ್ನು ರಕ್ಷಿಸುತ್ತಾನೆ. ನಾಗನಾಥನಿಗೆ ನಮಸ್ಕರಿಸಿ, ಫೋಟೋಗಳನ್ನು ಪ್ರಸಾದವನ್ನು ತೆಗೆದುಕೊಂಡು ನಾವು ಅಹಮದಾಬಾದಿಗೆ ಹಿಂದಿರುಗಿದೆವು
ನಿರ್ಮಲ ಟ್ರಾವಲ್ಲಿನ ಗೈಡು ನಮಗೆ ದ್ವಾರಕೆಯಿಂದ ಅಹಮದಾಬಾದಿನ ದೂರ ಪ್ರಯಾಣದ ಬೇಸರ ಮತ್ತು ಸುಸ್ತನ್ನು ಹೋಗಲಾಡಿಸಲು ಮಾರ್ಗ ಮದ್ಯದಲ್ಲಿ ಒಳ್ಳೆಯ ಸ್ನ್ಯಾಕ್ಸುಗಳನ್ನು ಕೊಟ್ಟು ಹಾಗು ಆಟಗಳನ್ನು ಆಡಿಸಿ ಮನರಂಜಿಸದ್ದನ್ನು ಮರೆಯುವ ಹಾಗಿಲ್ಲ. ಅಲ್ಲಿಂದ ಬೆಂಗಳೂರಿಗೆ ಮೇಲಿನ ಎಲ್ಲ ಕ್ಷೇತ್ರಗಳ ಮದುರ ನೆನಪುಗಳೊಡನೆ ಸುರಕ್ಷಿತ್ಯವಾಗಿ ಹಿಂದಿರುಗಿದೆವು.
ಶುಭಂ |
Comments
Post a Comment