ಕೈಲಾಸ್ ಮಾನಸ ಸರೋವರ ಮತ್ತು ಮುಕ್ತಿನಾಥ ಯಾತ್ರಾ : ದಿನಾಂಕ 1 2/06/2018: ಬೆಂಗಳೂರಿನ ಶಂಕರ್ ಟ್ರೆಕ್ಸ್ ಮುಕಾಂತರ
ಕೈಲಾಸ್ ಮಾನಸ ಸರೋವರ್ ಯಾತ್ರೆಗೆ ಹೋಗಬೇಕಂದು ಕೊಂಡಾಗಲೇ ಒಂದು ಅನಿರ್ವಚನೀಯ ಸಂತೋಷ ಹಾಗು ರೋಮಾಂಚನ. ಪ್ರತಿಯೊಬ್ಬರಿಗೂ ಈ ಯಾತ್ರೆ ತಮ್ಮ ಜೀವನದ ಸುಂದರ ಕನಸು ಹಾಗು ಹೆಬ್ಬಯಕೆ. ಭಕ್ತಿಭಾವದಿಂದ ಪುಳಕಿತರಾಗುತ್ತೇವೆ. ತಂದೆ- ತಾಯಿಯರನ್ನು, ಗುರು ಹಿರಿಯರನ್ನು ಮನದಲ್ಲಿ ನೆನೆದು , ನಮಸ್ಕರಿಸಿ , ಮನೆ ದೇವರನ್ನು ಸ್ಮರಿಸಿ ಈ ಯಾತ್ರೆಯನ್ನು ಪೂರೈಸುವ ಶಕ್ತಿಯನ್ನು ಕರುಣಿಸೆಂದು ಬೇಡುತ್ತ ನಮ್ಮ ಪಯಣವನ್ನುದಿನಾಂಕ 12/06/2018ರಂದು ಪ್ರಾರಂಬಿಸಿದೆವು
ಈ ಯಾತ್ರೆಗೂ ಮೊದಲು ಶಂಕರ್ ಟ್ರೆಕ್ಸ್ ನವರು ಯಾತ್ರೆಯ ಕಠಿಣತೆಯ ಬಗ್ಗೆ ಸಂಭಾವ್ಯ ಆಗುಹೋಗುಗಳ ಬಗ್ಗೆ ಎಲ್ಲ ವಿವರಗಳನ್ನು ಒಂದು ಸಭೆ ಏರ್ಪಡಿಸಿ ವಿವರಿಸಿ ನಮ್ಮನ್ನು ಈ ಯಾತ್ರೆಗೆ ಸಜ್ಜು ಮಾಡಿದ್ದರು. ಯಾತ್ರೆಯ ಬಗ್ಗೆ ತಿಳಿದಾಗ ಭಯ ಮಿಶ್ರಿತ ರೋಮಾಂಚನ. ಏಕೆಂದರೆ ದುರ್ಗಮ ದಾರಿ, ಹವಾಮಾನದ ವೈಪರೀತ್ಯತೆ, ಸುಮಾರು 16000 ಅಡಿಗಳಿಗೂ ಎತ್ತರದ ಪ್ರದೇಶಗಳಲ್ಲಿ ಉಸಿರಾಟದ ತೊಂದರೆ, ಅಲ್ಲಿಯ ಮೈನಡುಗಿಸುವ ಚಳಿ ಇವೆಲ್ಲ ಒಂದು ರೀತಿಯ ಸವಾಲುಗಳೆ .
ದಿನಾಂಕ 12/06/2018ರಂದು ನಾವು ಬೆಂಗಳೂರಿನಿಂದ ಲಕ್ನೋಗೆ ವಿಮಾನಿನಲ್ಲಿ ಬೆಳಿಗ್ಗೆ 8.30ಕ್ಕೆ ಹೊರಟು 11.೦೦ ಗಂಟೆಗೆ ಲಕ್ನೋ ತಲುಪಿ ಅಲ್ಲಿಂದ ಸುಮಾರು 200 ಕಿ..ಮೀ. ದೂರದ್ಲಲಿರುವ ನೇಪಾಲ ಗಂಜಿಗೆ ಬಸ್ಸಿನಲ್ಲಿ ಪಯಣಿಸಿ, ಹೋಟೆಲ್ ಒಂದರಲ್ಲಿ ತಂಗಿದೆವು.
|
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
|
ಜೂನ್ 13 ಬೆಳಿಗ್ಗೆ ಉಪಹಾರ ಮುಗಿಸಿ ನೇಪಾಲಗಂಜಿನ ವಿಮಾನ ನಿಲ್ದಾಣಕ್ಕೆ ಹೋದವು. ಅದೊಂದು ಪುಟ್ಟ ವಿಮನ ನಿಲ್ದಾಣವಾಗಿದೆ. ಅಲ್ಲಿದ್ದ ಪುಟ್ಟ ವಿಮಾನ ಅಂದರೆ ಸುಮಾರು 15 ಜನರು ಒಂದು ಸಾರಿ ಕುಳಿತುಕೊಳ್ಳಬಹುದಾದ ವಿಮಾನಿನಲ್ಲಿ ಸುಮಾರು 50 ನಿಮಿಷ ಪಯಣಿಸಿ ಸಿಮಿಕೋಟ್ ವಿಮಾನ ನಿಲ್ದಾಣವನ್ನು ತಲುಪಿದೆವು ಅಲ್ಲಿಂದ ನಮಗಾಗಿ ಕಾದಿರಿಸಿದ್ದ ಹೋಟೆಲೊಂದರಲ್ಲಿ ತಂಗಿದೆವು. ಈ ಸ್ಥಳವು ಸುಂದರ ಪರ್ವತ ಪ್ರದೇಶದ ಮಧ್ಯದಲ್ಲಿದ್ದು ಸಣ್ಣ ಊರಾಗಿದೆ. ಇಲ್ಲಿ ಯಾತ್ರಿಗಳ ಸೌಕರ್ಯಕ್ಕೆಂದು ಕೆಲವು ಹೋಟೆಲುಗಳನ್ನು ಬಿಟ್ಟರೆ ಕಡಿಮೆ ಜನ ವಸತಿ ಇರುವ ಪುಟ್ಟ ಊರಾಗಿದೆ ಇವೆಲ್ಲ ಹಿಮಾಲಯ ಪರ್ವತ ಪ್ರದೇಶವಾಗಿದ್ದು ಅಲ್ಲಿಯ ಪ್ರಕೃತಿಯ ರಮಣೀಯತೆಯನ್ನು ನೋಡಿಯೇ ಸವಿಯಬೇಕು. ಇರುವ ಅಲ್ಪ ಸಮಯದಲ್ಲಿಯೇ ಫೋಟೋಗಳನ್ನು ಕ್ಲಿಕ್ಕಿಸಿ ನಮ್ಮ ಮನೆಗಳಿಗೆ ಕಳುಹಿಸಿ ಸಂಬ್ರಮಿಸಿದೆವು.
|
ನೇಪಾಲಗಂಜ್ ವಿಮಾನ ನಿಲ್ದಾಣ |
|
ಸಿಮಿಕೋಟ್ ವಿಮಾನ ನಿಲ್ದಾಣ |
|
ಸಿಮ್ಮಿಕೋಟಿನಲ್ಲಿ ನಾವು ಉಳಿದ ಹೋಟೆಲ್ |
ಅಲ್ಲಿಂದ ಮುಂದಿನ ತಾಣವಾದ ಹಿಲ್ಸ ಎಂಬ ಸ್ಥಳಕ್ಕೆ ಹೆಲಿಕಾಪ್ಟರಿನಲ್ಲಿ 25 ನಿಮಿಷ ಪಯಣಿಸಿ ತಂಗಿದೆವು. ಅಲ್ಲಿಯ ಗುಡ್ಡಗಾಡು ಕೆಣಿವೆ ಪ್ರದೇಶದ್ಲಲಿ ಹೆಲಿಕಾಪ್ಟರಿನಲ್ಲಿ ಹೋಗುವುದೇ ಅದ್ಬುತ ಅನುಭವ. ಹೆಲಿಕಾಪ್ಟರ್ ಒಂದು ಎತ್ತರದಿಂದ ಇನ್ನೊಂದು ಎತ್ತರಕ್ಕೆ ಆ ಕಣಿವೆ ಮಾರ್ಗದಲ್ಲಿ ಏರುವಾಗ ರೋಚಕ ಕ್ಷಣಗಳು ಉಸಿರು ಬಿಗಿ ಹಿಡಿಯುವ ಹಾಗೆ ಮಾಡುತ್ತದೆ . ಕಣಿವೆ ಮಾರ್ಗದಲ್ಲಿ ಪರ್ವತಗಳ ಅಂಚಿನಲ್ಲಿ ಸಾಗುವಾಗ ಅದರ ಚಾಲಕನೇ ನಮ್ಮಪಾಲಿನ ದೇವರಾಗಿರುತ್ತಾನೆ. ಅಂತಹ ಪ್ರದೇಶದಲ್ಲಿ ಚಾಲಕನ ಚಾಕಚಕ್ಯತೆ ದಕ್ಷತೆ ಧೈರ್ಯಗಳನ್ನು ಮೆಚ್ಚಲೇಬೇಕು.
|
ಅಲ್ಲಿಯ ವಿಮಾನುಗಳಿಗೆ ಸೀತ, ತಾರಾ, ಬುದ್ಧ ಹೀಗೆ ಹೆಸರಿರುತ್ತವೆ |
|
ನೇಪಾಲಗಂಜಿನಿಂದ ಪುಟ್ಟ ವಿಮಾನದಲ್ಲಿ ಸಿಮಿಕೋಟ್ ಗೆ ಪ್ರಯಾಣ |
|
ಪರ್ವತ ಮಾರ್ಗದಲ್ಲಿ ಹೆಲಿಕಾಪ್ಟರಿನಲ್ಲಿ ಪ್ರಯಾಣ |
|
ಸಿಮಿಕೋಟಿನಿಂದ ಹೆಲಿಕಾಪ್ಟರ್ ಕಣಿವೆ ಮಾರ್ಗ |
|
ಹಿಲ್ಸ ಸೇತುವೆ
|
14/06/2018: ಮರುದಿನ ಬೆಳಿಗ್ಗೆ ಉಪಹಾರ ಮುಗಿಸಿ ಮದ್ಯಾಹ್ನದ ವರೆಗೆ ಚೀನಾ ಇಮಿಗ್ರೇಶನ್ ಸಲುವಾಗಿ ಕಾಲಾವಕಾಶ ಇದ್ದಿದ್ದರಿಂದ ಹಿಲ್ಸ ಊರನ್ನು ವೀಕ್ಷಿಸಲು ಹೋದೆವು. ಅಲ್ಲಿ ಕರ್ನಾಲಿ ಎಂಬ ನದಿಯು ಹರಿಯುತ್ತಿದ್ದು ಅದಕ್ಕೆ ಅಡ್ಡಲಾಗಿ ಹ್ಯಾಂಗಿಂಗ್ ಬ್ರಿಜ್ ಕಟ್ಟಿರುತ್ತಾರೆ. ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ವಾಟರ್ ಫಾಲ್ಸನ್ನು ವೀಕ್ಷಿಸಿದೆವು. ಹಾಗು ಸುತ್ತಮುತ್ತಲು ವಿಹರಿಸಿ ಪ್ರಕೃತಿ ಸೌಂದರ್ಯವನ್ನು ಸವಿದೆವು. ನಂತರ ನೇಪಾಳದ ಇಮಿಗ್ರೇಶನ್ ಸೆಂಟರಿಗೆ ಹೋದೆವು ಅಲ್ಲಿ ಬ್ಯಾಗ್ ಮತ್ತು ಮೊಬೈಲ್ ತಪಾಸಣೆಯ ನಂತರ ಇಮಿಗ್ರೇಷನ್ ಪ್ರೊಸೀಜರ್ ಮುಗಿಸಿ , ನಮಗೆ ಮುಂದೆ ಹೋಗಲು ಅನುವು ಮಾಡಿ ಕೊಟ್ಟರು.
ನೇಪಾಳ ಗಡಿಯನ್ನು ದಾಟಿದ ನಾವು ನಮಗಾಗಿ ಮೀಸಲಿಟ್ಟ ಬಸ್ಸಿನಲ್ಲಿ ಸ್ಫಲ್ಪ ದೂರ ಪಯಣಿಸಿ, ಚೀನಾದ ಇಮಿಗ್ರೇಷನ್ ಸೆಂಟರ್ ತಲುಪಿದೆವು. ನಿಬಂಧನೆಗಳು ಅತ್ಯಂತ ಕ್ಲಿಷ್ಟವಾಗಿದ್ದು ನಮ್ಮ ಬ್ಯಾಗನ್ನು ಇಂಚಿಂಚು ಬಿಡದಂತೆ ತಪಾಸಣೆ ಮಾಡಿದರು. ಸುಮಾರು 4 ಗಂಟೆ ಅಲ್ಲಿ ನಾವು ಕಾಯಬೇಕಾಯಿತು. ಚೀನಾಗೆ ವಿರುದ್ಧವಾದ ಯಾವುದೇ ಬರವಣಿಗೆಯಾಗಲಿ ಅಥವಾ ದಲೈಲಾಮ ರವರ ಯಾವುದೇ ಫೋಟೋ ಇರದಂತೆ ಎಚ್ಚರವಹಿಸಲು ನಮ್ಮ ಆಯೋಜಕರು ಮೊದಲೇ ಹೇಳಿದ್ದರಿಂದ, ಯಾವುದೇ ತೊಂದರೆ ಇಲ್ಲದೆ ಇಮಿಗ್ರೇಷನ್ ಪ್ರೊಸೀಜರ್ ಮುಗಿಸಿ ನಂತರ ನಮ್ಮ ಮುಂದಿನ ಪ್ರಯಾಣಕ್ಕೆ ಪರವಾನಿಗಿ ಸಿಕ್ಕಿ ಅಲ್ಲಿಂದ ನಾವು ಚೀನಾದ ತಕ್ಲಕೋಟೆ ಎಂಬ ಸ್ಥಳಕ್ಕೆ ಪ್ರಯಾಣಿಸಿ ಅಲ್ಲಿಯ ಹಿಮಾಲಯ ಎಂಬ ಹೋಟೆಲಿನಲ್ಲಿ ತಂಗಿದೆವು. ಇಮಿಗ್ರೇಷನ್ ಸೆಂಟರಿನಿಂದ ತಕ್ಲಕೋಟಕ್ಕೆ ಹೋಗುವ ದಾರಿ ಚೆನ್ನಾಗಿದ್ದರೂ ಕೂಡ ತಕ್ಲಕೋಟೆ ತುಂಬಾ ಎತ್ತರದ ಪ್ರದೇಶವಾದ್ದರಿಂದ ಅಲ್ಲಿಗೆ ಹೋಗುವ ಮಾರ್ಗದಲ್ಲಿ ಸ್ವಲ್ಪ ಆತಂಕವಾಗುವುದು ಸಹಜ.
|
ಚೀನಾ ಇಮಿಗ್ರಷನ್ ಸೆಂಟರ್ |
15/6/2018: ತಕ್ಲಕೋಟವು ಸಮುದ್ರಮಟ್ಟದಿಂದ ಸುಮಾರು 13000 ಅಡಿ ಎತ್ತರದಲ್ಲಿದ್ದು ಈ ವಾತಾವರಣಕ್ಕೆ ಹೊಂದಿಕೊಳ್ಳಲು ಒಂದು ದಿನ ವಾಸ್ತವ್ಯವನ್ನು ಅಲ್ಲಿಯೇ ಮಾಡಲಾಯಿತು. ಅಲ್ಲಿ ಹೋಟೆಲ್ ವ್ಯವಸ್ಥೆಯು ಚೆನ್ನಾಗಿರುವುದರಿಂದ ನಮಗೆಲ್ಲ ಸಂತೋಷವಾಯಿತು. ಊಟದ ವ್ಯವಸ್ಥೆಯು ಚೆನ್ನಾಗಿತ್ತು. ನಮಗೆ ಪ್ರತಿದಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ರಾತ್ರಿ ಆಯೋಜಕರು ಒಂದು ಮಾತ್ರೆಯನ್ನು ಕೊಡುತ್ತಿದ್ದರು. ಮರುದಿನ ನಾವು ಅಲ್ಲಿ ಓಡಾಡಿ ಕೈಲಾಶ್ ಪರಿಕ್ರಮಕ್ಕೆ ಬೇಕಾದ ವಾಕಿಂಗ್ ಸ್ಟಿಕ್ , ಮುಂತಾದವುಗಳನ್ನು ಖರೀದಿಸಿದೆವು.
|
ಥಕ್ಲಕೋಟ್ನಲ್ಲಿ ಶಾಪಿಂಗ್ ಹೋದಾಗ |
16/6/2018: ತಕ್ಲಕೋಟಿನಿಂದ ಬೆಳಿಗ್ಗೆ ಬಸ್ಸಿನಲ್ಲಿ ಮಾನಸ ಸರೋವರಕ್ಕೆ ಹೊರಟೆವು. ಮಾರ್ಗ ಮದ್ಯದಲ್ಲಿ ಎಲ್ಲೆಲ್ಲೂ ಪರ್ವತಗಳ ಸಾಲುಗಳೇ. ಬೂದಿ ಬಣ್ಣದ ಕಲ್ಲುಮಣ್ಣುಗಳಿಂದ ಕೂಡಿದ ಪರ್ವತದ ಸಾಲುಗಳು, ಕೆಲವೆಡೆ ಬೇರೆ ಬೇರೆ ವಿನ್ಯಾಸಗಳಲ್ಲಿ ಕಡೆದ ಕಂಬಗಳಂತೆ ಕಾಣುತ್ತಿದ್ದವು. ಸುಮಾರು ದೂರ ಕ್ರಮಿಸಿ ನಾವು ರಾಕ್ಷಸ್ತಲ್ ಸರೋವರವನ್ನು ತಲುಪಿದೆವು.
|
ರಾಕ್ಷಸತಲ್ ( ಸರೋವರ) |
|
ರಾಕ್ಷಸ ತಲ್
|
ನೀಲಿಬಣ್ಣದ ಈ ಸರೋವರವು ನಯನ ಮನೋಹರವಾಗಿದೆ. ಇಲ್ಲಿ ಗಾಳಿಯ ರಭಸವನ್ನು ತಡೆದುಕೊಳ್ಳುವುದು ಒಂದು ಸಾಹಸವೇ ಸರಿ. ದೇವತೆಗಳು ಮಾನಸ ಸರೋವರದಲ್ಲಿ ರಾಕ್ಷಸರಿಗೆ ಅಂದರೆ ದಾನವರಿಗೆ ಸ್ನಾನ ಮಾಡಲು ಅವಕಾಶವನ್ನು ನಿರಾಕರಿಸಿದ್ದರಿಂದ , ಮಹಾ ಶಿವ ಭಕ್ತನಾದ ರಾವಣನು ತಪಸ್ಸನ್ನಾಚರಿಸಿ, ತಾನು ತಪಸ್ಸನ್ನಾಚರಿಸಿದ ಸ್ಥಳಕ್ಕೆ ಆ ಮಾನಸ ಸರೋವರದ ನೀರು ಹರಿದು ಬರುವಂತೆ ಶಿವನನ್ನು ಪ್ರಾರ್ಥಿಸಿದ ಫಲವಾಗಿ, ಶಿವನ ಕರುಣೆಯಿಂದ ಈ ರಾಕ್ಷಸ ಸರೋವರ ಉದ್ಭವಿಸಿರುವುದಾಗಿ ಪುರಾಣಗಳಲ್ಲಿ ಉಲ್ಲೇಖವಿರುವುದನ್ನು ನಾವು ನೋಡಬಹುದು. ಇಲ್ಲಿಯ ಸುಂದರ ವಾತಾವರಣದಲ್ಲಿ ಫೋಟೋಗಳನ್ನು ತೆಗೆದುಕೊಡು ಮಾನಸ ಸರೋವರಕ್ಕೆ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು.
ಸಂಜೆ ಮಾನಸ ಸರೋವರದ ದಂಡೆಯ ಮೇಲಿರುವ ಚುಗುಂಪಾ ಎಂಬ ಸ್ಥಳವನ್ನು ತಲುಪಿ ನಮಗಾಗಿ ಕಾದಿರಿಸಿದ್ದ ರೂಮಿನಲ್ಲಿ ತಂಗಿದೆವು. ಈ ಸ್ಥಳವು ಸುಮಾರು 14000 ಅಡಿ ಎತ್ತರದ ಪ್ರದೇಶವಾಗಿದ್ದು ಮೈ ಕೊರೆಯುವ ಚಳಿಯನ್ನು ಸಹಿಸುವುದೇ ಒಂದು ಸವಾಲು. ಆಮ್ಲಜನಕದ ಕೊರತೆಯಿಂದ ಹೆಚ್ಚಿನವರಿಗೆ ಉಸಿರಾಟವು ಸ್ವಲ್ಪ ಕಷ್ಟಕರವೆನಿಸುವುದು ಸಹಜ. ರಾತ್ರಿ ಸಮಯದಲ್ಲಿ ಹಾಸಿಗೆಯಂತಿರುವ ರಾಸಾಯಿಯಲ್ಲಿ ಮುದುಡಿದರೆ ಸ್ವಲ್ಪ ಅಲುಗಾಡಿದರು ಚಳಿಯಿಂದ ಸುಧಾರಿಸಿಕೊಳ್ಳುವುದು ಕಷ್ಟಸಾಧ್ಯ ಎನ್ನಿಸುತ್ತದೆ. ಅಲ್ಲಿರುವ ಕೊಠಡಿಯನ್ನು ಮಣ್ಣಿನಿಂದ ನಿರ್ಮಿಸಿದ್ದು ಚಿಕ್ಕ ಚಿಕ್ಕದ್ದಾಗಿ ನಿರ್ಮಿಸಲಾಗಿದೆ. ಅಲ್ಲಿ ಸ್ನಾನ ಅಥವಾ ಶೌಚದ ಕೊಠಡಿಯ ವ್ಯವಸ್ಥೆ ಇರುವುದಿಲ್ಲ. ಭಗವಂತನ ಸನ್ನಿಧಾನವನ್ನ ತಲುಪಲು ನಾವು ಇದಕ್ಕೆಲ್ಲ ತಯಾರಿರಬೇಕಾಗಿರುತ್ತದೆ.
ಈ ಮಾನಸ ಸರೋವರವು ಬ್ರಹ್ಮದೇವರ ಮನಸ್ಸು ಮಾತ್ರದಿಂದ ಉದ್ಭವಿಸಿರುವುದರಿಂದ ಇದಕ್ಕೆ ಮಾನಸ ಸರೋವರ ಎಂಬ ಹೆಸರು ಬಂದಿರುವುದಾಗಿ ಪುರಾಣಗಳಲ್ಲಿ ಉಲ್ಲೇಖವಿದೆ. ಇದು ಬ್ರಹ್ಮ ವಿಷ್ಣು ಮಹೇಶ್ವರರು ಹಾಗು ದೇವತೆಗಳ ಆವಾಸಸ್ಥಾನವಾಗಿರುವುದರಿಂದ ನಾವೆಲ್ಲ ಅತೀವ ಭಕ್ತಿ ಭಾವದಿಂದ ಪುಳಕಿತರಾದೆವು. ಮಾನಸ ಸರೋವರವನ್ನು ವೀಕ್ಷಿಸುವುದೇ ಒಂದು ಮರೆಯಲಾಗದ ಸನ್ನಿವೇಶ. ಸುಮಾರು ಬೆಳಗಿನ ಎರಡು ಗಂಟೆ ಸಮಯದಿಂದ ನಾಲ್ಕು ಗಂಟೆ ಸಮಯದಲ್ಲಿ ಅಲ್ಲಿಗೆ ದೇವತೆಗಳು ನಕ್ಷತ್ರ ರೂಪದಲ್ಲಿ ಸ್ನಾನಕ್ಕೆಂದು ಬರುತ್ತಾರೆಂಬ ನಂಬಿಕೆ ಇದ್ದು, ನಾವು ಆ ನಕ್ಷತ್ರ ರೂಪದ ದೇವತೆಗಳನ್ನು ನೋಡಲು ರಾತ್ರಿಯ ಕೊರೆಯುವ ಚಳಿ ಹಾಗು ರಭಸದಿಂದ ಬೀಸುವ ಗಾಳಿಯನ್ನು ಲೆಕ್ಕಿಸದೆ ಹೊರಗೆ ಬಂದು ಸ್ವಲ್ಪ ಹೊತ್ತು ನೋಡಿದೆವು. ನಮ್ಮಂತಹ ಸಾದಾರಣ ಹುಲು ಮಾನವರಿಗೆ ದೇವತೆಗಳು ಕಾಣಲು ಸಾಧ್ಯವೇ? ಮನಸ್ಸಿನಲ್ಲಿಯೇ ದೇವತೆಗಳನ್ನು ನೋಡಿದಂತೆ ಕಲ್ಪಿಸಿಕೊಂಡು , ಮತ್ತೆ ಬೇಗನೇ ರೂಮಿನೊಳಗೆ ನುಗ್ಗಿ ಹಾಸಿಗೆಯಲ್ಲಿ ಮುದುಡಿಕೊಂಡೆವು.
17/06/2018: ಮರು ದಿನ ಬೆಳಗ್ಗೆ ಎದ್ದು ನಾವು ಮಾನಸ ಸರೋವರದಲ್ಲಿ ಭಕ್ತಿಯಿಂದ ಸ್ನಾನವನ್ನು ಮಾಡಿ ಅಲ್ಲಿ ನಮಗಾಗಿ ಆಯೋಜಕರು ಏರ್ಪಡಿಸಿದ್ದ ರುದ್ರಾಭಿಷೇಕ ಪೂಜೆಯಲ್ಲಿ ಭಾಗಿಯಾದೆವು. ನಾವೆಲ್ಲ ಯಾತ್ರಿಗಳು ಅತ್ಯಂತ ಭಕ್ತಿ ಭಾವದಿಂದ ನಾವು ತೆಗೆದುಕೊಂಡು ಹೋಗಿದ್ದ ಬಿಲ್ವಪತ್ರೆ, ದ್ರಾಕ್ಷಿ, ತುಪ್ಪ ಜೇನುತುಪ್ಪ ಮುಂತಾದ ಪದಾರ್ಥಗಳಿಂದ ಅಭಿಷೇಖವನ್ನು ಮಾಡಿದೆವು. ನಮ್ಮ ಆಯೋಜಕರಾದ ಶ್ರೀ ಶಂಕರವರು, ಹಾಗು ಯಾತ್ರಿಗಳಲ್ಲಿ ಅನೇಕ ಪುರುಷರು ರುದ್ರ ಮಂತ್ರವನ್ನು ಜಪಿಸುತ್ತ ನಮ್ಮಿಂದಲೂ ಅಭಿಷೇಖವನ್ನು ಮಾಡಿಸಿದರು. ಪೂಜೆಯ ನಂತರ ನಾವು ಒಂದು ಸ್ಪಟಿಕ ಲಿಂಗ ಹಾಗು ಒಂದು ರುದ್ರಾಕ್ಷಿ ಮಾಲೆಯನ್ನು ಪ್ರಸಾದವಾಗಿ ಸ್ವೀಕ ರಿಸಿದೆವು.
|
ಮಾನಸ ಸರೋವರದ ದಂಡೆಯಲ್ಲಿ ರುದ್ರಾಭಿಷೇಖ ಪೂಜೆ
|
ದೇವರ ಅನುಗ್ರಹ ಪಡೆದು ನಂತರ ಸುಮಾರು 200 ಕಿ.ಮೀ ದೂರದ ಮಾನಸ ಸರೋವರದ ಪರಿಕ್ರಮವನ್ನು, ಬಸ್ಸಿನಲ್ಲಿ ಪ್ರಾರಂಭಿಸಿದೆವು . ಪರಿಕ್ರಮದ ಅನುಭವ ಅನಿರ್ವಚನೀಯ. ಅತ್ಯಂತ ಸ್ವಚಂದ ಸರೋವರ, ಅದರ ಇನ್ನೊಂದು ಬದಿಯ ಕೈಲಾಸ ಪರ್ವತದ ರಮಣೀಯ ದೃಶ್ಯ, ಸುಂದರ ಆಗಸ ನಮ್ಮನ್ನು ದೇವಲೋಕದ ಸೌಂದರ್ಯದಲ್ಲಿ ಮುಳುಗಿಸಿ ಮೈಮರೆಸಿತ್ತು. ನಾವು ಪರಿಕ್ರಮಿಸುವಾಗ ಸರೋವರದ ನೀರಿನ ಮೇಲೆ ಬಿದ್ದ ಬಿಸಿಲಿನಿಂದ ಸರೋವರವು ಹಗಲಿನಲ್ಲೇ ನಕ್ಷತ್ರಗಳಿಂದ ತುಂಬಿರುವಂತೆ ಮನಮೋಹಕವಾಗಿ ಕಾಣುತ್ತಿತ್ತು. ಪರಿಕ್ರಮದ ಮದ್ಯದಲ್ಲಿ ಒಂದು ಕಡೆ ಸರೋವರದ ಪವಿತ್ರ ತೀರ್ಥವನ್ನು ತುಂಬಿಕೊಳ್ಳಲು ಬಸ್ಸಿನಿಂದ ಇಳಿದೆವು. ಆ ನೀರು ನಮ್ಮ ಪ್ರತಿಬಿಂಬವನ್ನು ನೋಡಿಕೊಳ್ಳುವಷ್ಟು ಸ್ವಚ್ಛವಿದ್ದು ನಮಗಾದ ಸಂತೋಷ ವರ್ಣಿಸಲು ಅಸದಳ. ನಾವು ಕೈಲಾಸಾಧೀಶನಿಗೆ ಹಾಗು ಎಲ್ಲ ದೇವತೆಗಳಿಗೆ ನಮಸ್ಕರಿಸಿ , ಗಂಗಾಮಾತೆಯನ್ನು ಸ್ಮರಿಸಿ ಕೈ ಮುಗಿದು ಪವಿತ್ರ ತೀರ್ಥವನ್ನು ಶೇಖರಿಸಿದೆವು. ಹಾಗೆಯೆ ಸೂರ್ಯದೇವರಿಗೆ ಅರ್ಗ್ಯವನ್ನು ನೀಡಿ, ನಮಿಸಿ ಶ್ರಿಲಕ್ಷ್ಮಿ ನಾರಾಯಣರನ್ನು, ಬ್ರಹ್ಮ ಸರಸ್ವತಿ ದೇವಿ ಹಾಗು ಶಿವಪಾರ್ವತಿ ದೇವಿಯರೆಲ್ಲರನ್ನು ಮತ್ತೊಮ್ಮೆ ಸ್ಮರಿಸಿ , ಮುಂದಿನ ಪರಿಕ್ರಮವನ್ನು ಪೂರೈಸಿ ದಾರ್ಚೆನ್ ಎಂಬ ಸ್ಥಳದಲ್ಲಿ ಹೋಟೆಲೊಂದರಲ್ಲಿ ಉಳಿದೆವು. ಈ ಸ್ಥಳವು ಸಮುದ್ರ ಮಟ್ಟದಿಂದ 15000 ಅಡಿ ಎತ್ತರದಲ್ಲಿದೆ. ಇಲ್ಲಿ ಒಳ್ಳೆಯ ಹೋಟೆಲ್ ವ್ಯವಸ್ಥೆ ಇದೆ. ಈ ಸ್ಥಳದಿಂದ ಕೈಲಾಶ್ ಪರ್ವತದ ದಕ್ಷಿಣ ಮುಖವನ್ನು ನೋಡಬಹುದು.
18/06/2018: ಪರಿಕ್ರಮಕ್ಕೆ ಮೂರು ದಿನಗಳು ಬೇಕಾಗಿದ್ದು, ಒಟ್ಟು ಐವತ್ತೆರಡು ಕಿಲೋಮೀಟರ್ ಕ್ರಮಿಸಬೇಕು. ಬೆಳಿಗ್ಗೆ ಹೋಟೆಲಿನಿಂದ ಬಸ್ಸಿನಲ್ಲಿ ಹೊರಟು ಸುಮಾರು 20ಕಿ.ಮೀ. ಕ್ರಮಿಸಿ , ಕೈಲಾಸ ಪರಿಕ್ರಮದ ಪ್ರಾರಂಭ ಸ್ಥಳವಾದ ಯಮದ್ವಾರಕ್ಕೆ ತೆರಳಿದೆವು. ಹಿಂದಿನ ದಿನವೇ ಹೋಟೆಲಿನಿಂದ ಕುದುರೆ ಹಾಗು ಒಬ್ಬ ಸಹಾಯಕರನ್ನು, ಕುದುರೆಗೆ 3 ದಿನದ ಪರಿಕ್ರಮಕ್ಕೆ 20000 ಸಾವಿರ ರೂಪಾಯಿಯಂತೆ ಹಾಗು ಸಹಾಯಕನಿಗೆ 10000 ರೂಪಾಯಿಯಂತೆ ಗೊತ್ತು ಪಡಿಸಿಕೊಂಡಿದ್ದರಿಂದ ಅವರೆಲ್ಲ ನಮಗಾಗಿ ಅಲ್ಲಿ ಕಾಯುತ್ತಿದ್ದರು. ಕುದುರೆ ಹಾಗು ಸಹಾಯಕರನ್ನು ನಾವೇ ಸೆಲೆಕ್ಟ್ ಮಾಡುವ ಹಾಗಿಲ್ಲ. ಚೀಟಿಯನ್ನು ಎತ್ತಿ ನಮಗೆ ಬಂದ ಕುದುರೆ ಏರಿ ನಾವು ಪರಿಕ್ರಮವನ್ನು ಪ್ರಾರಂಭಿಸಬೇಕಾದ ನಿಯಮವಿದೆ. ಪರಿಕ್ರಮ ಪ್ರಾರಂಭಿಸುವ ಮೊದಲು ಇಲ್ಲಿ ನಮ್ಮ ರಕ್ತದ ಆಕ್ಸಿಜನ್ ಲೆವೆಲ್ ನೋಡಿ, ಅರವತ್ತಕ್ಕೂ ಹೆಚ್ಚು ಆಕ್ಸಿಜನ್ ಪ್ರಮಾಣ ಇರುವವರಿಗೆ ಮಾತ್ರ ಮುಂದೆ ಪರಿಕ್ರಮಕ್ಕೆ ಅನುಮತಿ ನೀಡುತ್ತಾರೆ.
|
ಯಮದ್ವಾರ |
ಯಮದ್ವಾರದಲ್ಲಿ ನಿರ್ಮಿಸಿರುವ ದೊಡ್ಡ ಬಾಗಿಲಿಗೆ ನಮಸ್ಕರಿಸಿ ಅಲ್ಲಿ ಕಟ್ಟಿರುವ ಗಂಟೆಯನ್ನು ಭಾರಿಸಿ, ಶಿವಪಾರ್ವತಿಯರನ್ನು ಸ್ಮರಿಸಿ ಬಾಗಿಲನ್ನು ದಾಟಿ ನಮ್ಮ ಮೊದಲ ದಿನದ ಕೈಲಾಸ ಪರಿಕ್ರಮವನ್ನು ಪ್ರಾರಂಭಿಸಿದೆವು. ಶಿವನ ಸಾನಿದ್ಯದೊಳಗೆ ಬಂದ ಮೇಲೆ ನಮಗೆ ಅವನ ರಕ್ಷಣೆಯಿದ್ದು ಯಮನ ಭಯ ಇರುವುದಿಲ್ಲ ಎಂಬ ನಂಬಿಕೆ ಇಟ್ಟುಕೊಂಡು, ಕುದುರೆ ಏರಿ ಹೊರಟೆವು. ಆಮ್ಲಜನಕದ ವಿರಳತೆಯಿಂದ ಪ್ರಯಾಣವು ಸ್ವಲ್ಪ ಕಷ್ಟಕರವೇ ಆಗಿರುತ್ತದೆ. ಕುದುರೆ ಸವಾರಿಯ ಅಭ್ಯಾಸವಿಲ್ಲದ ನಮಗೆ ಅದರಲ್ಲೂ ಹೆಚ್ಚಿನವರು ಹಿರಿಯ ನಾಗರೀಕರಾಗಿದ್ದು ಕುದುರೆಯನ್ನು ಹತ್ತಿ ಇಳಿಯುವುದೇ ಒಂದು ದೊಡ್ಡ ಸವಾಲಾಗಿತ್ತು. ತುಂಬಾ ಆಯಾಸವಾಗುವುದರಿಂದ ಅಲ್ಲಲ್ಲಿ ಸ್ವಲ್ಪ ನಿಂತು, ಡ್ರೈ ಫ್ರೂಟುಗಳನ್ನು ತಿನ್ನುತ್ತಾ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಕೈಲಾಸ ಪರ್ವತದ ಉತ್ತರ ಮುಖ ಧೀರಾಪುಕ್ ಎಂಬ ಸ್ಥಳಕ್ಕೆ ಬಂದು ತಲುಪಿದೆವು.
|
ಯಮದ್ವಾರದಿಂದ ಕುದುರೆಯಲ್ಲಿ ಪರಿಕ್ರಮ ಪ್ರಾರಂಭ |
|
ಕೈಲಾಶ್ ಪಶ್ಚಿಮ ಮುಖ |
|
ಕೈಲಾಸ ಪರ್ವತದ ಉತ್ತರ ಮುಖ ಧೀರಾಪುಕ್
|
ಬೆಳ್ಳಿಯ ಶಿಖರದಂತೆ ಕಾಣುತ್ತಿದ್ದ ಶಿಖರವನ್ನು ನೋಡಿದಾಕ್ಷಣ ದಾರಿಯ ದಣಿವೆಲ್ಲಾ ಮಾಯವಾಗಿ ಆನಂದಭಾಷ್ಪ ತಾನಾಗಿಯೇ ಉರುಳಿತು. ಇಲ್ಲಿ ಶಿವಪಾರ್ವತಿಯರ ಸಾನಿಧ್ಯ ಇರುವುದಾಗಿ ಉಲ್ಲೇಖವಿದ್ದು, ಶಿವನು ಒಬ್ಬಬ್ಬರಿಗೆ ಒನ್ನೊಂದು ರೀತಿಯಲ್ಲಿ ಕಾಣುತ್ತಾನೆಂಬ ನಂಬಿಕೆಯಿದ್ದು ನಾವೆಲ್ಲ ಆ ಶಿಖರವನ್ನು ನೋಡಲಾಗಿ, ನಮಗೆ ಜಟೆಕಟ್ಟಿರುವ ಶಿವನ ಮುಖವು ಗೋಚರಿಸಿತು. ಇನ್ನೊಂದು ಕಡೆ ಆಶೀರ್ವದಿಸುವ ಒಂದು ಹಸ್ತ ಗೋಚರಿಸಿತು. ಅಲ್ಲಿ ವಾಸ್ತವ್ಯ ಇದ್ದುದರಿಂದ ನಾವೆಲ್ಲ ಅಂದು ಸೋಮವಾರವಾಗಿದ್ದರಿಂದ ನಾವು ತೆಗೆದುಕೊಂಡು ಹೋಗಿದ್ದ ತುಪ್ಪದ ದೀಪವನ್ನು ಭಜನೆ ಹೇಳುತ್ತಾ ಆ ಶಿಖರದ ಎದುರಿಗೆ ಬೆಳಗಿಸಿದೆವು. ನಾವೆಲ್ಲ ಒಂದು ಮನೆಯವರಂತೆ ಇದ್ದು ಆ ಶಿವ ಸಾನಿಧ್ಯದಲ್ಲಿ ಅನುಭವಿಸಿದ ಸಂತೋಷ ವರ್ಣನಾತೀತಾ. ಹಾಗೆಯೆ ಅಲ್ಲಿಯ ಛಳಿಯ ವಾತಾವರಣವನ್ನು ನೆನೆದರೆ ಈಗಲೂ ನಡುಕ ಹುಟ್ಟುತ್ತದೆ. ಅಲ್ಲಿ ಉಳಿಯಲು ರೂಮುಗಳಿದ್ದು ಶೌಚ ಹಾಗು ಸ್ನಾನದ ಅನುಕೂಲತೆಗಳು ಇರುವುದಿಲ್ಲ. ಪರಿಕ್ರಮದ 3 ದಿವಸವೂ ಇದೇ ಪರಿಸ್ಥಿತಿ ಇರುವುದರಿಂದ ನಾವುಗಳು ಭಕ್ತಿಯನ್ನು ಮಾತ್ರ ಹೊಂದಿ ಮುಂದುವರಿಯಬೇಕಾಗುತ್ತದೆ. ಮರುದಿನ ಬೆಳಿಗ್ಗೆ ಐದು ಗಂಟೆಗೆ ಎರಡನೆಯ ದಿನದ ಪರಿಕ್ರಮ ಪ್ರಾರಂಭಿಸಲು ನಮ್ಮ ಕುದುರೆ ಸವಾರರು ಹಾಜರಿರುತ್ತಾರೆ. ನಮ್ಮ ಟೀಮಿನ ಜೊತೆ ಬಂದ ಶೆರ್ಪಾಗಳ ಹಾಗು ಕುದುರೆ ಸವಾರರು ಮತ್ತು ಸಹಾಯಕರ ಸೇವೆಗೆ ಬೆಲೆಯನ್ನು ಕಟ್ಟಲಾಗುವುದಿಲ್ಲ. ಅಷ್ಟು ಭಯ ಹುಟ್ಟಿಸುವ ಚಳಿಯಲ್ಲೂ ಬೆಳಿಗ್ಗೆ ಹಾಗು ರಾತ್ರಿ ನಮಗೆ ಟೀ ಕಾಫಿ ಹಾಗು ಊಟದ ವ್ಯವಸ್ಥೆಯನ್ನು ವೇಳೆಗೆ ಸರಿಯಾಗಿ ನಗುಮೊಗದಿಂದ ಮಾಡುತ್ತಿದ್ದರು. ಅವರು ತುಂಬಾ ಕಷ್ಟ ಜೀವಿಗಳಾಗಿದ್ದು ಜೀವನ ನಿರ್ವಣೆಗೆ ಹೆಚ್ಚಾಗಿ ಯಾತ್ರಿಗಳನ್ನೇ ಅವಲಂಬಿಸಿರುತ್ತಾರೆ.
\
19/06/2018:ಎರಡನೆಯ ದಿನದ ಪರಿಕ್ರಮ ತುಂಬಾ ಸವಾಲಿನಂತಿರುತ್ತದೆ. ಆ ದಿನ 16000 ಅಡಿಗಳಿಗೂ ಮೇಲಿರುವ ಪ್ರದೇಶವನ್ನು ಏರಬೇಕಾಗಿರುವುದರಿಂದ ಹಾಗು ಇಪ್ಪತ್ತೆರಡು ಕಿಲೋಮೀಟರ್ ಕ್ರಮಿಸಬೇಕಾಗಿರುವುದರಿಂದ ಬೆಳಿಗ್ಗೆ ಐದು ಗಂಟೆಗೆ ಟೀ /ಕಾಫಿ ಕುಡಿದು ಹೊರಟೆವು. ಮಾರ್ಗವು ಹಿಮಗಟ್ಟಿಯಿಂದ ಕೂಡಿದ್ದು ತುಂಬಾ ಎಚ್ಚರಿಕೆಯಿಂದ ಸಾಗಬೇಕು. ಆರು ಕಿಲೋಮೀಟರ್ ದೋಲ್ಮಾ ಫಾಸನ್ನು ಕಾಲ್ನಡಿಗೆಯಿಂದಲೇ ಕ್ರಮಿಸ ಬೇಕಾಗಿರುವುದರಿಂದ ಕುದುರೆ ಸವಾರರು ನಮ್ಮನ್ನು ಅಲ್ಲಿಯೇ ಇಳಿಸಿ , ದೋಲ್ಮಾ ಫಾಸಿನ ಆಚೆ ಕುದುರೆ ಸಹಿತ ಕಾಯುತ್ತಿರುತ್ತಾರೆ. ಇದೊಂದು ಮರೆಯಲಾಗದ ಅನುಭವ. ಜಾರುವ ಕಾಲುಗಳನ್ನು ಸರಿಪಡಿಸಿಕೊಳ್ಳುತ್ತ ಎರಡು ಕೈಗಳಿಂದ ಸ್ಟಿಕ್ಕುಗಳನ್ನು ಊರುತ್ತ ಏದುಸಿರು ಬಿಡುತ್ತ, ಅಲ್ಲಲ್ಲಿ ಕುಳಿತುಕೊಂಡು ಸಾಗುವಾಗ , ದೇವರೇ ಮುಂದಿನ ತಂಗುವ ಸ್ಥಳ ಯಾವಾಗ ಬರುತ್ತದೆಯೋ ಅನ್ನಿಸುತ್ತದೆ. ನಮ್ಮ ಜೊತೆ ಇರುವ ಸಹಾಯಕರು ನಮಗೆ ಧೈರ್ಯ ಹೇಳುತ್ತಾ ಸ್ಫೂರ್ತಿಯನ್ನು ಕೊಡುತ್ತಾರೆ.
|
ದೋಲ್ಮಾ ಫಾಸ್
|
ಮದ್ಯಾಹ್ನ ಒಂದು ಕಡೆ ಊಟಕ್ಕೆ ನಿಲ್ಲಿಸುವುದರಿಂದ ಅಲ್ಲಿ ಊಟ ಮಾಡಿ ಮತ್ತೆ ಕುದುರೆಯೇರಿ ಮುಂದಿನ ವಾಸ್ತವ್ಯದ ಝುತುಲ್ಪುಕ್ ಸ್ಥಳವನ್ನು ಸೇರಲು ಮುಂದೆ ಸಾಗುತ್ತೇವೆ.ಬೆಳಿಗ್ಗೆ ಆರು ಗಂಟೆಗೆ ಹೊರಟ ನಾವು ಇಪ್ಪತ್ತೆರಡು ಕಿಲೋಮೀಟರನ್ನು ಕ್ರಮಿಸಿ ಝುತುಲ್ಪುಕ್ ಸೇರುವಾಗ ಸಾಯಂಕಾಲ ಐದು ಗಂಟೆಯಾಗಿತ್ತು. ಧೀರಾ ಪುಕ್ನಿಂದ ಝುತುಲ್ಪುಕ್ ಸ್ಥಳಕ್ಕೆ ಸುಮಾರು 22 ಕಿಲೋಮೀಟರ್ ಪ್ರಯಾಣಿಸಬೇಕು.
|
ದೋಲ್ಮಾ ಫಾಸ್
|
ಮಾರ್ಗ ಮದ್ಯದಲ್ಲಿ ಅಲ್ಲಲ್ಲಿ ದೇವರ ಸ್ತುತಿ ಇರುವ ಬಣ್ಣ ಬಣ್ಣ ಬಾವುಟಗಳ ಮಾಲೆಗಳನ್ನು ಕಟ್ಟಿದ್ದು ಅಲ್ಲಿ ದೇವರಿರುವುದಾಗಿ ನಂಬಿಕೆ. ನಾವು ಮಾರ್ಗ ಮದ್ಯದಲ್ಲಿ ಪಾರ್ವತೀ ದೇವಿಯು ವಿಹರಿಸುತ್ತಾಳೆ ಹಾಗು ಅಲ್ಲಿ ಸ್ನಾನವನ್ನು ಮಾಡುತ್ತಾಳೆ ಎಂದು ಪ್ರತೀತಿ ಇರುವ ಗೌರಿಕೊಂಡ ಕೊಳವನ್ನು ನೋಡಿದೆವು. ಆ ಸ್ಥಳಕ್ಕೆ ಕೈ ಮುಗಿದು, ತೀರ್ಥವನ್ನು ಶೇಖರಿಸಿ ನಮ್ಮ ಪಯಣವನ್ನು ಝುತುಲ್ಪುಕ್ ಎಂಬ ಸ್ಥಳಕ್ಕೆ ಮುಂದುವರಿಸಿದೆವು. ಅಲ್ಲಿಯೂ ಕೂಡ ಉಳಿಯಲು ಕೇವಲ ರೂಮಿನ ವ್ಯವಸ್ಥೆ ಇರುತ್ತದೆ. ನಾವು ರಾತ್ರಿ ಅಲ್ಲಿಯೇ ತಂಗಿದೆವು.
|
ಗೌರಿ ಕೊಂಡ
|
|
ಝುತುಲ್ಪುಕ್ ನಲ್ಲಿ ನಾವು ತಂಗಿದ ಹೋಟೆಲಿನ ಹತ್ತಿರದ ಟೆಂಟುಗಳು |
20/06/2018: ಬೆಳಿಗ್ಗೆ ಏಳುವುದರೊಳಗೆ ನಮ್ಮ ರೂಮಿನ ವರೆಗೂ ಹಿಮ ಬಿದ್ದು ಎಲ್ಲಿ ನೋಡಿದರು ಬಿಳಿಯ ಹಾಸನ್ನು ಹಾಸಿದ ಹಾಗೆ ಇದ್ದು, ತುಂಬಾ ನಯನ ಮನೋಹರವಾಗಿ ಕಾಣುತ್ತಿತ್ತು. ನಮ್ಮ ಸುತ್ತಲಿನ ಪ್ರದೇಶ , ಶಿಖರಗಳು ಹಿಮದಿಂದ ಅವರಿಸಲ್ಪಟ್ಟಿದ್ದು ರಜತ ಪರ್ವತವಾಗಿತ್ತು. ಬೆಳಿಗ್ಗೆ ಅಲ್ಲಿಂದ ಹೊರಟ ನಾವು ಸ್ವಲ್ಪ ದೂರ ಕ್ರಮಿಸಿದ ನಂತರ ಮತ್ತೆ ಕಡಿದಾದ ಶಿಖರದ ಅಂಚಿನಲ್ಲಿ ಸಾಗುವಾಗ ಕುದುರೆಯಿಂದಿಳಿದು ಕಾಲ್ನಡಿಗೆಯಲ್ಲೇ ಸಾಗಬೇಕಾಯಿತು . ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಾಪಾಯದ ಭಯ.
|
ಝುತುಲ್ಪುಕ್ನಿಂದ ಹಿಮದನಡುವೆ ಪರಿಕ್ರಮ
|
|
ಹಿಮದ ನಡುವೆ ಪರಿಕ್ರಮದ ಮುಕ್ತಾಯದ ದಿನ
|
|
ಬೆಟ್ಟದ ಅಂಚಿನಲ್ಲಿ ಪರಿಕ್ರಮದ ಮೂರನೇ ದಿನದ ಪ್ರಯಾಣ |
ಮೂರ್ನಾಲ್ಕು ಗಂಟೆಯ ಪ್ರಯಾಣದ ನಂತರ ಪರಿಕ್ರಮವನ್ನು ಪೂರ್ಣಗೊಳಿಸಿ, ವಿಜಯದ ನಗೆ ಬಿರಿದೆವು. ಎಲ್ಲರು ಗ್ರೂಪ್ ಫೋಟೋವನ್ನು ತೆಗೆಸಿಕೊಂಡು ಸಂಭ್ರಮಿಸಿ ನಮ್ಮ ಕುದುರೆಸವರಾರು ಮತ್ತು ಸಹಾಯಕರಿಗೆ ಕೃತಜ್ಞತೆ ಸಲ್ಲಿಸಿ ಬೀಳ್ಕೊಟ್ಟೆವು . ನಂತರ ನಮಗಾಗಿ ರೆಡಿಯಿದ್ದ ಬಸ್ಸಿನಲ್ಲಿ ನಾವು ಉಳಿದ ಹಿಮಾಲಯ ಹೋಟೆಲ್ಲಿಗೆ ಬಂದು ತಂಗಿದೆವು.
|
ಕೈಲಾಸ ಪರಿಕ್ರಮ ಮುಗಿಸಿದ ನಂತರ ಗ್ರೂಪ್ ಫೋಟೋ |
|
ಕೈಲಾಸ್ ಪರಿಕ್ರಮದಲ್ಲಿ ನಮಗೆ ಒಳ್ಳೆಯ ಊಟದ ವ್ಯವಸ್ಥೆ ಮಾಡುತ್ತಿದ್ದ ಶೆರ್ಪಾಗಳು |
ಕೊರೆಯುವ ಚಳಿಯಲ್ಲೂ ಸಮಯಕ್ಕೆ ಸರಿಯಾಗಿ ಒಳ್ಳೆಯ ಊಟ ಟೀ ಕಾಫಿ ರೆಡಿಮಾಡಿ ಕೊಡುತ್ತಿದ್ದ ಕಷ್ಟ ಜೀವಿಗಳಾದ ಶೆರ್ಪಾಗಳನ್ನು ನಾವು ಮರೆಯುವ ಹಾಗಿಲ್ಲ
ಕೈಲಾಸ ಪರಿಕ್ರಮಕ್ಕೆ ಆರೋಗ್ಯದ ಜೊತೆ ದೇವರ ಅನುಗ್ರಹವು ಇರಲೇ ಬೇಕು. ಏಕೆಂದರೆ ಅಲ್ಲಿಯ ಹವಾಮಾನವು ಆಗಾಗ ಬದಲಾಗುತ್ತಿರುವುದರಿಂದ ನಮ್ಮ ದೇಹವು ಅದಕ್ಕೆ ಹೊಂದಿಕೊಂಡರೇನೇ ಪರಿಕ್ರಮ ಪೂರ್ಣಗೊ ಳಿಸಲು ಸಾಧ್ಯವಾಗುವುದು.
|
ಕೈಲಾಶ್ ಯಾತ್ರೆಗೆ ಮೈಸೂರಿನಿಂದ ಒಬ್ಬರೇ ಬಂದ ಸುಮಾರು 65 ವರ್ಷದ ಅಜ್ಜಿ
|
21/06/2018: ನಾವು ಈ ದಿನ ಧಾರ್ಚೆಂನಿಂದ ಹೊರಟು ಹಿಲ್ಸಗೆ ಮರು ಪ್ರಯಾಣ ಹೊರಟೆವು. ಹಿಲ್ಸದಿಂದ ಪುನಃ ಹೆಲಿಕಾಪ್ಟರ್ನಲ್ಲಿ ಸಿಮಿಕೋಟ್ಗೆ ತಲುಪಿ ಅಲ್ಲಿಯೇ ಒಂದು ಹೋಟೆಲಿನಲ್ಲಿ ತಂಗಿದೆವು. ಮರುದಿನ ಬೆಳಿಗ್ಗೆ ಅಂದರೆ 22/06/2018 ರಂದು ಕಠಮಂಡುವಿಗೆ ವಿಮಾನದಲ್ಲಿ ಪ್ರಯಾಣಿಸಿ, ಹೋಟೆಲೊಂದರಲ್ಲಿ ತಂಗಿದೆವು.
ದಿನಾಂಕ 23/06.2018 ರಂದು ಉಪಹಾರ ಮುಗಿಸಿ ಮನೋಕಾಮನದೇವಿ ದರ್ಶನಕ್ಕೆ ಬಸ್ಸಿನಲ್ಲಿ ಹೊರಟೆವು. ಸುಮಾರು ನೂರಾ ಇಪ್ಪತೈದು ಕಿಲೋಮೀಟರ್ ಮಾರ್ಗ ಅತ್ಯಂತ ರಮಣೀಯ ವಾಗಿದೆ. ಸುಂದರ ಬೆಟ್ಟ ಗುಡ್ಡಗಳ ಸಾಲುಗಳು , ಎಲ್ಲೆಲ್ಲಿಯೂ ಹಸಿರೇ ಹಸಿರು.
|
ಮನೋಕಾಮನಾಗೆ ಹೋಗುವ ಮಾರ್ಗದ ದೃಶ್ಯ
|
ನಾಲ್ಕು ಗಂಟೆಯ ಪ್ರಯಾಣದ ನಂತರ ಮನೋಕಾಮನ ಶಕ್ತಿಪೀಠ ಇರುವ ಸ್ಥಳವನ್ನು ತಲುಪಿದೆವು. ದೇವಸ್ಥಾನವು ಎತ್ತರದ ಪ್ರದೇಶದಲ್ಲಿದ್ದು ಕೇಬಲ್ ಕಾರಿನಲ್ಲಿಯೇ ಹೋಗಬೇಕು. ಹೋಗುವಾಗ ಕಣ್ಮನ ತಣಿಸುವ ಸೊಬಗು. ಎಲ್ಲ ದೇವಸ್ಥಾನಗಳ ಹಾಗೆ ಇಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ನೋಡಬಹುದು. ದೇವಿಯ ದರ್ಶನ ಪಡೆದು, ನಮ್ಮ ಮನೋಕಾಮನೆಗಳನ್ನು ಪೂರೈಸಲು ದೇವಿಗೆ ಪ್ರಾರ್ಥಿಸಿದೆವು. ಪ್ರಾಂಗಣದಲ್ಲಿ ಓಡಾಡಿ ಪುನಃ ಕೇಬಲ್ ಕಾರಿನಲ್ಲಿ ಕೆಳಗಡೆ ಬಂದೆವು.
|
ಮನೋಕಾಮನ ದೇವಸ್ಥಾನಕ್ಕೆ ಕೇಬಲ್ ಕಾರಿನ ಮಾರ್ಗ
|
|
ಮನೋಕಾಮನ ದೇವಿ ಮಂದಿರದ ಆವರಣದಲ್ಲಿ
|
ಅಲ್ಲಿಂದ ಬಸ್ಸಿನಲ್ಲಿ ಹೊರಟು ಸುಮಾರು ತೊಂಬತ್ತು ಕಿಲೋಮೀಟರ್ ಕ್ರಮಿಸಿ ಪೋಕ್ರಾ ಎಂಬ ಸ್ಥಳಕ್ಕೆ ಬಂದು ಹೋಟೆಲೊಂದರಲ್ಲಿ ತಂಗಿದೆವು.
ಪೋಕ್ರಾ ಕೂಡ ಸುಂದರ ಪ್ರದೇಶ. ಕಾಲಾವಕಾಶ ಇದ್ದಿದ್ದರಿಂದ ಅಲ್ಲಿರುವ ಕೇದಾರೇಶ್ವರ ದೇವಸ್ಥಾನವನ್ನು ವೀಕ್ಷಿಸಿದೆವು. ಈ ದೇವಸ್ಥಾನದ ಪ್ರಾಂಗಣದಲ್ಲಿ ದೇವಿ, ಆಂಜನೇಯ ಗಣಪತಿ ದೇವರ ಸಣ್ಣ ಸಣ್ಣ ಗುಡಿಗಳಿದ್ದು ದರ್ಶನ ಪಡೆದೆವು ಮರುದಿನ ಬೆಳಿಗ್ಗೆ ಅಲ್ಲಿಯ ಪ್ರೇಕ್ಷಣೀಯ ಸ್ಥಳವನ್ನು ವೀಕ್ಷಿಸಿದೆವು ಅದರಲ್ಲಿ ದೇವಿ ಫಾಲ್ಸ್ , ಗುಪ್ತೆಶ್ವರ ದೇವಸ್ಥಾನ ಹಾಗು ಭರಾಹಿ ಲೇಕ್ ಮುಖ್ಯವಾದವು. ಗುಪ್ತೆಶ್ವರ ದೇವಸ್ಥಾನ ಗುಹಾ ದೇವಸ್ಥಾನವಾಗಿದ್ದು ತುಂಬಾ ಕೆಳಗಡೆ ಇಳಿದು ನೋಡಬೇಕು. ಅಲ್ಲಿ ನೀರಿನ ಸೆಲೆ ಇರುವುದರಿಂದ ಗುಹೆಯ ಕಲ್ಲುಗಳ ಸಂದುಗಳಿಂದ ನೀರು ಸೋರುತ್ತಿರುವುದತಿಂದ ತುಂಬಾ ಎಚ್ಚರಿಕೆಯಿಂದ ಬಗ್ಗಿ ಸಾಗಬೇಕು. ಈ ಗುಹಾ ದೇವಸ್ಥಾನದ ಒಳಗಡೆ ಬೆಳಕು ಇಲ್ಲದಿರುವುದರಿಂದ ನಾವು ವಿದ್ಯುತ್ ದೀಪವನ್ನಾಗಲಿ ಅಥವಾ
ಟಾರ್ಚಿನ ಬೆಳಕನ್ನೇ ಅವಲಂಬಿಸಬೇಕು. ಒಳಗಡೆ ಶಿವಲಿಂಗವಿದ್ದು ನಾವು ದರ್ಶನ ಪಡೆದು ಬಂದೆವು. ದೇವಸ್ಥಾನದ ಒಳಗೆ ಕೆಳಗಡೆ ಇಳಿದು ಹೋದರೆ ಅಲ್ಲಿ ದೇವಿ ಪಾಲ್ಸ್ ನಿಂದ ಬಿದ್ದ ನೀರು ಹರಿದು ದೇವಸ್ಥಾನದ ಕೆಳಗಡೆ ಹರಿದು ಹೋಗುವುದನ್ನು ನೋಡಬಹುದು.
|
ಗುಪ್ತೆಶ್ವರ ದೇವಾಲಯಕ್ಕೆ ಹೋಗುವ ದಾರಿ |
|
ದೇವಿ ಫಾಲ್ಸ್ ಪೊಕ್ರಾ
|
ನಂತರ ಭರಾಹಿ ಲೇಕಿನಲ್ಲಿ ವಿಹರಿಸಿ, ಅಲ್ಲಿರುವ ದೇವಿಯ ದರ್ಶನ ಪಡೆದು
ಹೊರಗಡೆ ಬಂದು ವಿಂಡೋ ಶಾಪಿಂಗ್ ಮುಗಿಸಿ ಪುನಃ ಹೋಟೆಲ್ಲಿಗೆ ಬಂದು ತಂಗಿದೆವು.
|
ಭರಾಹಿ ಲೇಕ್ ನಲ್ಲಿ ವಿಹಾರ
|
|
ಭರಹಿದೆವಿ ದೇವಾಲಯ ಪೊಕ್ರಾ
|
ಪೋಕ್ರಾದ ಕೇದಾರೇಶ್ವರ ದೇವಾಲಯವು ಅತ್ಯಂತ ಪುರಾತನವಾಗಿದ್ದು ಪ್ರಕೃತಿಯ ಮದ್ಯೆ ರಮಣೀಯ ಸ್ಥಳವಾಗಿದೆ
|
ಪೋಕ್ರದಲ್ಲಿರುವ ಕೇದಾರೇಶ್ವರ ಮಂದಿರದ ಸುಂದರ ದೃಶ್ಯ |
|
ಕೇದಾರೇಶ್ವರ ದೇವಾಲಯ ಪೊಕ್ರಾ |
ಫೊಕ್ರ ದಿಂದ ಅನ್ನಪೂರ್ಣ ಪರ್ವತದ ಸಾಲುಗಳನ್ನು ನೋಡಬಹುದಾಗಿದ್ದು, ಅತ್ಯಂತ ಸುಂದರವಾಗಿ ಗೋಚರಿಸುತ್ತದೆ. ಪೋಕ್ರಾ ದಿಂದ ಮುಕ್ತಿನಾಥಕ್ಕೆ ವಿಮಾನಿನಲ್ಲಿ ಜೋಮ್ ಸೋಮ್ \ಪುಟ್ಟ ಪಟ್ಟಣಕ್ಕೆ ಬಂದು ಒಂದು ಹೋಟೆಲ್ಲಿನಲ್ಲಿ ಉಳಿದೆವು
|
ಪೋಕ್ರಾ ವಿಮಾನ ನಿಲ್ದಾಣ
|
ಜೋಂಸೋಮ್ ವಿಮಾನ ನಿಲ್ದಾಣ , ಮುಕ್ತಿನಾಥ
|
|
ಮರುದಿನ ಬೆಳಿಗ್ಗೆ ಅಲ್ಲಿಂದ ಮುಕ್ತಿನಾಥಕ್ಕೆ ವಿಮಾನದಲ್ಲಿ ಪಯಣಿಸಿ ಜೋಮ್ ಸೋಮ್ ಎಂಬ ಪುಟ್ಟ ಪಟ್ಟಣಕ್ಕೆ ಬಂದು ತಲುಪಿದೆವು. ಇದು ಕೂಡ ಸಣ್ಣ ವಿಮಾನ ನಿಲ್ದಾಣವನ್ನು ಹೊಂದಿದ್ದು ಪುಟ್ಟ ಪ್ರದೇಶವಾಗಿರುತ್ತದೆ. ಮರುದಿನ ಬೆಳಿಗ್ಗೆ ಮುಕ್ತಿನಾಥ ವಿಷ್ಣು ದೇವರನ್ನು ವೀಕ್ಷಿಸಲು ಒಂದು ಜೀಪಿನಲ್ಲಿ ಹೊರಟೆವು. ಒಂದು ಜೀಪಿನಲ್ಲಿ ಸುಮಾರು ಐದಾರು ಜನರು ಕುಳಿತುಕೊಳ್ಳಬಹುದಾಗಿದ್ದು ಮಾರ್ಗವು ಅತ್ಯಂತ ದುರ್ಗಮವಾಗಿರುತ್ತದೆ. ನಾವು ಭೇಟಿ ನೀಡಿದಾಗ ಸರಿಯಾದ ದಾರಿಯೇ ಇರಲಿಲ್ಲ. ಮಾರ್ಗ ಮದ್ಯದಲ್ಲಿ ಸುಮಾರು ಇಪ್ಪತ್ತರಿಂದ ಇಪ್ಪತ್ತೆರಡು ಸಣ್ಣ ಸಣ್ಣ ಗುಡ್ಡಗಳನ್ನು ಸುತ್ತಿ ಸುತ್ತಿ ಹೋಗಬೇಕು. ಈ ದುರ್ಗಮ ಕಿರಿದಾದ ದಾರಿಯಲ್ಲಿ ೨೨ ಕಿಲೋಮೀಟರ್ ಕ್ರಮಿಸಲು ಸುಮಾರು ಎರಡು ಗಂಟೆಯ ಕಾಲಾವಧಿ ಹಿಡಿಸಿತು. ಜೀಪಿನ ಚಾಲಕನು ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಾಪಾಯ ತಪ್ಪಿದ್ದಲ್ಲ. ನಾವು ಉಸಿರು ಬಿಗಿಹಿಡಿದುಕೊಂಡು ಕುಳಿತಿದ್ದೆವು. ಜೀಪಿನಲ್ಲಿ ಕುಳಿತ ನಮಗೆ ವಾಹನದ ಕುಲುಕುವಿಕೆಯಿಂದ ಮೈಕೈ ನೋವು ಅನುಭವಿಸುವಂತಾಯಿತು. ಮುಕ್ತಿನಾಥೇಶ್ವರದ ಎತ್ತರದ ಶಿಖರವನ್ನು ಅಲ್ಲಿಂದ ಒಂದೂವರೆ ಕಿಲೋಮೀಟರ್ ಹತ್ತಬೇಕು. ಹತ್ತಲಾರದವರಿಗೆ ಕುದುರೆಯ ವ್ಯವಸ್ಥೆ ಇರುತ್ತದೆ. ಅದು ಕೂಡ ತುಂಬಾ ಕಷ್ಟದ ಪಯಣವೇ.
|
ಜೋಮ್ ಸೋಮ್ ನಲ್ಲಿ ನಾವು ಉಳಿದ ಹೋಟೆಲ್ಲಿನ ಎದುರು |
ಅಂತೂ ನಾವು ವಿಷ್ಣು ದೇವಸ್ಥಾನ ಮಹಾದ್ವಾರವನ್ನು ದಾಟಿ ಒಳಗಡೆ ಹೋದಾಗ ಒಂದು ಗರ್ಭ ಗುಡಿಯಸ್ಟೇ ಇರುವ ಪುಟ್ಟ ಕಳಸ ಹೊಂದಿರುವ ದೇವರ ಗುಡಿಯನ್ನು ನೋಡಿದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. ದೇವಸ್ಥಾನದ ಹಿಂದೆ 108 ನೀರಿನ ಚಿಲುಮೆಗಲಿದ್ದು , ಚಿಲುಮೆಯ ನೀರು ಗೋಮುಖದಿಂದ ಬರುವಂತೆ ಮಾಡಿದ್ದಾರೆ. ಮುಕ್ತಿನಾಥನ ಎದುರುಗಡೆ ಪಾಪದ ಕಲ್ಯಾಣಿ ಮತ್ತು ಪುಣ್ಯದ ಕಲ್ಯಾಣಿ ಎಂಬ ಎರಡು ಕಲ್ಯಾಣಿ ಇದ್ದು ಪುಣ್ಯದ ಕಲ್ಯಾಣಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುವುದೆಂಬ ಪ್ರತೀತಿ. ನಾವು ಗಂಡಕೀನದಿಯ ನೂರಾಎಂಟು ಗೋಮುಖ ತೀರ್ಥದಡಿಯಲ್ಲಿ ಓಡೋಡುತ್ತ ಸ್ನಾನವನ್ನು ಮಾಡಿದೆವು. ನೀರು ಅತ್ಯಂತ ತಣ್ಣಗಿದ್ದರೂ ಭಕ್ತಿಯಿಂದ ಸ್ನಾನವನ್ನು ಮುಗಿಸಿ ಮುಕ್ತಿನಾಥೇಶ್ವರನ ಪೂಜೆ ಕೈಗೊಂಡೆವು. ಅಲ್ಲಿ ಎಲ್ಲಿ ನೋಡಿದರು ಸಾಲಿಗ್ರಾಮವು ಗೋಚರಿಸುವುದು. ಮುಕ್ತಿನಾಥೇಶ್ವರನ ಬಳಿ ಇರುವ ಬೃಹದಾಕಾರದ ವಿಷ್ಣುಚಕ್ರ ಸಾಲಿಗ್ರಾಮವನ್ನು ನೋಡಿ ನಮಗಾದ ದಣಿವೆಲ್ಲಾ ತಾನಾಗಿಯೇ ಕರಗಿತು. ನಂತರ ಅಲ್ಲಿರುವ ಸಣ್ಣ ಹೋಟೆಲ್ಲಿಗೆ ಊಟಕ್ಕೆ ತೆರಳಿದೆವು.
|
ಮುಕ್ತಿನಾಥೇಶ್ವರ ಮಂದಿರದ ಹೆಬ್ಬಾಗಿಲು
|
ಮುಕ್ತಿನಾಥೇಶ್ವರಾ ಮಂದಿರಕ್ಕೆ ಹೋಗುವ ದಾರಿ
|
ಶ್ರೀ ಮುಕ್ತಿನಾಥೇಶ್ವರ ದೇವಸ್ಥಾನ
|
|
ಶ್ರೀ ಮುಕ್ತಿನಾಥದಲ್ಲಿ ನೂರಾಎಂಟು ಗೋಮುಖದಲ್ಲಿ ಗಂಡಕಿ ತೀರ್ಥ
ಮುಕ್ತಿನಾಥೇಶ್ವರದಿಂದ ಕೆಳಗಿಳಿದು ಜೋಮ್ ಸೋಮ್ಗೆ ಬಂದು ತಂಗಿದೆವು. ಅಲ್ಲಿಂದ ಪುನಃ ಪೋಕ್ರಾಕ್ಕೆ ಬಂದು ಅಲ್ಲಿಂದ ಬಸ್ಸಿನಲ್ಲಿ ಕಠಮಂಡುವಿಗೆ ಪಯಣಿಸಿ ಅಲ್ಲಿ ಹೋಟೆಲ್ಲಿನಲ್ಲಿ ತಂಗಿದೆವು.
ದಿನಾಂಕ 26/06/2018ರಂದು ಪಶುಪತಿನಾಥ ದೇವರ ದರ್ಶನ ಪಡೆಯಲು ಹೋದೆವು. ಅಲ್ಲಿ ಗರ್ಭಗುಡಿಯ ನಾಲ್ಕು ಬಾಗಿಲುಗಳಿಂದಲೂ ಪಶುಪತಿನಾಥನ ದರ್ಶನ ಪಡೆದೆವು. ದೇವಸ್ಥಾನವು ಅತ್ಯಂತ ಪುರಾತನ ಹಾಗು ದೊಡ್ಡದಾಗಿದ್ದು ದೇವಸ್ಥಾನದ ಪ್ರಾಂಗಣದಲ್ಲಿರುವ ಆಂಜನೇಯ, ಗಣಪತಿ ಮುಂತಾದ ದೇವರುಗಳ ದರ್ಶನ ಪಡೆದೆವು
|
|
|
|
ಪಶುಪತಿನಾಥ್ ಕಠಮಂಡು ನೇಪಾಳ
|
ನಂತರ ಜಲನಾರಾಯಣ ದೇವರ ದರ್ಶನ ಪಡೆದು ಇರುವ ಸಮಯದಲ್ಲಿಯೇ ಅಲ್ಲಿ ಪಶುಪತಿನಾಥನ ಸ್ಪಟಿಕ ಲಿಂಗಗಳನ್ನು ಖರೀದಿಸಿ ನಮ್ಮ ಮುಂದಿನ ಪಯನ ನವದೆಹಲಿಗೆ ವಿಮಾನದಲ್ಲಿ ತೆರಳಿದೆವು.
|
ಶ್ರೀ ಜಲನಾರಾಯಣ ಕಠಮಂಡು
|
|
ಕೈಲಾಸ ಯಾತ್ರೆಗೆ ಒಬ್ಬರೇ ಬಂದ ಈ 65 ವರ್ಷದ ಅಜ್ಜಿಯನ್ನು ಮೆಚ್ಚಲೇ ಬೇಕು |
ದೇವರ ಅನುಗ್ರಹದಿಂದ ನಾವೆಲ್ಲ ನಮ್ಮ ಯಾತ್ರೆಯನ್ನು ಪೂರೈಸಿ ನಮ್ಮ ನಮ್ಮ ಮನೆಗಳನ್ನು ಸುರಕ್ಷಿತವಾಗಿ ತಲುಪಿದೆವು
ಶುಭಂ
Comments
Post a Comment