ಕಾಶಿ, ಪ್ರಯಾಗ್, ಚಿತ್ರಕೂಟ, ಅಯೋಧ್ಯ ನೈಮಿಷಾರಣ್ಯ ತೀರ್ಥಯಾತ್ರೆ | Kashi, Prayaag, Chitrakoota, Ayodhya, Naimisharanya Pilgrimage
ಕಾಶಿ, ಪ್ರಯಾಗ್, ಚಿತ್ರಕೂಟ, ಅಯೋಧ್ಯ ನೈಮಿಷಾರಣ್ಯ ತೀರ್ಥಯಾತ್ರೆ
ದಿನಾಂಕ 11/09/2019 ರಂದು ನಾವು ಬೆಂಗಳೂರಿನಿಂದ ತೀರ್ಥಯಾತ್ರೆಯ ಸಲುವಾಗಿ ವಿಮಾನದಲ್ಲಿ ಕಾಶಿ ಕ್ಷೇತ್ರಕ್ಕೆ ಹೋಗಿ ಹೋಟೆಲೊಂದರಲ್ಲಿ ತಂಗಿದೆವು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ |
ಕಾಶಿ ವಿಮಾನ ನಿಲ್ದಾಣ |
ಪ್ರಯಾಗ ಕ್ಷೇತ್ರ:
ಪ್ರಯಾಗರಾಜ ಎಂದು ಕರೆಯುವ ಈ ಕ್ಷೇತ್ರದಲ್ಲಿ ಬ್ರಹ್ಮ ದೇವರು ಲೋಕಸೃಷ್ಠಿ ಕೈಗೊಂಡ ಕೂಡಲೇ ಇಲ್ಲಿ ಯಜ್ಞವನ್ನು ಕೈಗೊಂಡು ಪರಿಸರವನ್ನು ಶುದ್ಧಿಕರಿಸಿ ಪವಿತ್ರಗೊಳಿಸಿರುವುದಾಗಿ ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಪವಿತ್ರ ಸಂಗಮ ಪ್ರಯಾಗರಾಜ ತೀರ್ಥದಲ್ಲಿ ಸ್ನಾನಮಾಡುವುದರಿಂದ ಮನುಷ್ಯನ ಸಖಲ ಪಾಪಗಳು ನಾಶವಾಗುವವು ಎಂಬ ನಂಬಿಕೆ ನಮ್ಮಲ್ಲಿದೆ.
ಪ್ರಯಾಗದ ಪಲಿಮಾರು ಮಠಕ್ಕೆ ಹೋಗಿ, ಅಲ್ಲಿಯ ಪುರೋಹಿತರೊಡನೆ ಪ್ರಯಾಗದಲ್ಲಿ ಗಂಗಾ, ಯಮುನಾ ಸರಸ್ವತಿ ನದಿಯ ಪವಿತ್ರ ತ್ರಿವೇಣಿ ಸಂಗಮಕ್ಕೆ ಹೋಗಿ, ಸ್ನಾನ ಸಂಕಲ್ಪ ಹಾಗು ವೇಣೀದಾನ ಸಂಪ್ರದಾಯವನ್ನು ಕೈಗೊಂಡೆವು.
ಇದಕ್ಕೆ ಸಂಬಂಧಿಸಿದಂತೆ ಪೂಜಾ ಕಾರ್ಯಕ್ರಮ ಮಾಡಿಸುತ್ತಾರೆ. ಈ ಸಂಪ್ರದಾಯದಲ್ಲಿ ಪತ್ನಿಯನ್ನು ಪತಿಯ ತೊಡೆಯ ಮೇಲೆ ಕುಳ್ಳಿರಿಸಿ , ಪತ್ನಿಯ ಕೂದಲನ್ನು ಬಾಚಿ, ಜಡೆಯನ್ನು ಪತಿಯು ಹಾಕಬೇಕು. ನಂತರ ಜಡೆಯ ತುದಿಯನ್ನು ಸ್ವಲ್ಪ ಕತ್ತರಿಸಿ ಇಟ್ಟುಕೊಂಡು ಅದನ್ನು ಸ್ನಾನ ಮಾಡುವಾಗ ನೀರಿನಲ್ಲಿ ಬಿಡಬೇಕು. ಪೂಜೆಯನ್ನು ಮಾಡಿಸಿ, ಸಂಕಲ್ಪ ಮಾಡಿಸಿದ ಮೇಲೆ, ಪತಿ ಪತ್ನಿಯರಿಬ್ಬರೂ ತ್ರಿವೇಣಿ ಸಂಗಮದಲ್ಲಿ ಸ್ನಾನವನ್ನು ಮಾಡಬೇಕು. ಈ ವೇಣೀದಾನದಲ್ಲಿ ಪತ್ನಿಯು ಮುತ್ತೈದೆತನದ ಭಾಗ್ಯ ಎಂದೆಂದೂ ಇರಲೆಂದು ಪತಿಯ ಕ್ಷೇಮಾಭಿವೃದ್ಧಿಯನ್ನ ಬಯಸುತ್ತಾಳೆ
ಪ್ರಯಾಣ ತೀರ್ಥದಲ್ಲಿ ವೇಣೀದಾನ ಪೂಜೆ |
ನಾವೆಲ್ಲರು ತೀರ್ಥಸ್ನಾನ ಮಾಡಿ, ಮಠದಲ್ಲಿ ಪ್ರಸಾದ ಸ್ವೀಕರಿಸಿ ನಂತರ ವೇಣಿ ಮಾಧವ, ಅಲೋಪಿಶಂಕರಿ ಶಕ್ತಿಪೀಠ,ಶಿವದೇವಸ್ಥಾನಗಳನ್ನು ವೀಕ್ಷಿಸಿ ಚಿತ್ರಕುಟೀರ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದೆವು. ಸಮಯದ ಅಭಾವದಿಂದ ನಮಗೆ ಎಲ್ಲ ದೇವಸ್ಥಾನಗಳನ್ನು ನೋಡಲು ಅವಕಾಶವಾಗಿಲ್ಲ.
ಚಿತ್ರಕೂಟವು ಹಿಂದುಗಳ ಪವಿತ್ರ ಹಾಗು ಸುಂದರ ಕ್ಷೇತ್ರಗಳಲ್ಲಿ ಒಂದಾಗಿದ್ದು, ರಾಮಾಯಣ ಕಾಲದಲ್ಲಿ ಶ್ರೀರಾಮನು ವನವಾಸದ ಸಂದರ್ಭದಲ್ಲಿ ಇಲ್ಲಿಯೇ ಹನ್ನೊಂದು ವರ್ಷಗಳನ್ನು ಸೀತಾದೇವಿ ಮತ್ತು ಲಕ್ಮಣರೊಡನೆ ಕಳೆದಿರುವುದಾಗಿ ಉಲ್ಲೇಖವಿದೆ ಇಂದಿಗೂ ನಾವು ಅಲ್ಲಿ ರಾಮಾಯಣ ಕಾಲದ ಕುರುಹುಗಳನ್ನು ನೋಡಬಹುದು. ಅತ್ರಿ, ಭಾರದ್ವಾಜ, ಅಗಸ್ತ್ಯರು, ವಿಶ್ವಾಮಿತ್ರರು, ವಾಲ್ಮೀಕಿ ಮುಂತಾದ ಋಷಿ ವರೇಣ್ಯರು ತಪಸ್ಸನ್ನಾಚರಿಸಿದ ಪುಣ್ಯಭೂಮಿ ಇದು. ಇಲ್ಲಿ ಅತ್ರಿ ಮಹಾಮುನಿಗಳು ಶ್ರೀರಾಮರಿಗೆ ವನವಾಸದ ವೇಳೆಯಲ್ಲಿ ಮಾರ್ಗದರ್ಶನ ಮಾಡಿರುವರೆಂದು ನಮ್ಮ ಪುರಾಣಗಳು ಉಲ್ಲೇಖಿಸಿವೆ ಋಷಿ ಪತ್ನಿ ಅನುಸೂಯಾ ದೇವಿಯು ಸೀತಾದೇವಿಯನ್ನು ಉಪಚರಿಸಿ ಸಂತೈಸಿರುವುದು ಇಲ್ಲಿಯೇ ಎಂದು ಪುರಾಣಗಳಲ್ಲಿ ಕೇಳಿದ್ದೇವೆ. ಇಲ್ಲಿ ರಾಮಘಾಟ್, ಸತಿ ಅನುಸೂಯ ಆಶ್ರಮ, ಹನುಮಾನ್ ಧಾರಾ, ಮುಂತಾದ ಸ್ಥಳಗಳನ್ನು ನೋಡಬಹುದು. ಇಲ್ಲಿಯ ಪ್ರಕೃತಿ ಸೌಂದರ್ಯ ಇಂದಿಗೂ ಮನಮೋಹಕವಾಗಿದ್ದು ಅಲ್ಲಿ ನಾವು ವಿಹರಿಸುವಾಗ ಒಂದು ರೀತಿಯ ಧನ್ಯತಾಭಾವದಿಂದ ಪುಳಕಿತರಾಗುತ್ತೇವೆ
ನಾವು ರಾಮ್ ಘಾಟ್ ಗೆ ತೆರಳಿ ಅಲ್ಲಿಯ ಗಂಗಾ ಆರತಿಯನ್ನು ವೀಕ್ಷಿಸಿದೆವು. ನಾವು ಕೂಡ ಗಂಗಾಮಾತೆಗೆ ಆರತಿ ಬೆಳಗಿ ಆ ತಾಯಿಗೆ ಭಕ್ತಿಪೂರ್ವಕ ನಮಸ್ಕಾರವನ್ನು ಸಲ್ಲಿಸಿದವು
ವೇಣಿ ಮಾಧವ ದೇವಸ್ಥಾನ ಪ್ರಯಾಗ |
ಅಲೋಪಿಶಂಕರಿದೇವಿ ಶಕ್ತಿ ಪೀಠ , ಪ್ರಯಾಗ |
ಚಿತ್ರಕೂಟವು ಹಿಂದುಗಳ ಪವಿತ್ರ ಹಾಗು ಸುಂದರ ಕ್ಷೇತ್ರಗಳಲ್ಲಿ ಒಂದಾಗಿದ್ದು, ರಾಮಾಯಣ ಕಾಲದಲ್ಲಿ ಶ್ರೀರಾಮನು ವನವಾಸದ ಸಂದರ್ಭದಲ್ಲಿ ಇಲ್ಲಿಯೇ ಹನ್ನೊಂದು ವರ್ಷಗಳನ್ನು ಸೀತಾದೇವಿ ಮತ್ತು ಲಕ್ಮಣರೊಡನೆ ಕಳೆದಿರುವುದಾಗಿ ಉಲ್ಲೇಖವಿದೆ ಇಂದಿಗೂ ನಾವು ಅಲ್ಲಿ ರಾಮಾಯಣ ಕಾಲದ ಕುರುಹುಗಳನ್ನು ನೋಡಬಹುದು. ಅತ್ರಿ, ಭಾರದ್ವಾಜ, ಅಗಸ್ತ್ಯರು, ವಿಶ್ವಾಮಿತ್ರರು, ವಾಲ್ಮೀಕಿ ಮುಂತಾದ ಋಷಿ ವರೇಣ್ಯರು ತಪಸ್ಸನ್ನಾಚರಿಸಿದ ಪುಣ್ಯಭೂಮಿ ಇದು. ಇಲ್ಲಿ ಅತ್ರಿ ಮಹಾಮುನಿಗಳು ಶ್ರೀರಾಮರಿಗೆ ವನವಾಸದ ವೇಳೆಯಲ್ಲಿ ಮಾರ್ಗದರ್ಶನ ಮಾಡಿರುವರೆಂದು ನಮ್ಮ ಪುರಾಣಗಳು ಉಲ್ಲೇಖಿಸಿವೆ ಋಷಿ ಪತ್ನಿ ಅನುಸೂಯಾ ದೇವಿಯು ಸೀತಾದೇವಿಯನ್ನು ಉಪಚರಿಸಿ ಸಂತೈಸಿರುವುದು ಇಲ್ಲಿಯೇ ಎಂದು ಪುರಾಣಗಳಲ್ಲಿ ಕೇಳಿದ್ದೇವೆ. ಇಲ್ಲಿ ರಾಮಘಾಟ್, ಸತಿ ಅನುಸೂಯ ಆಶ್ರಮ, ಹನುಮಾನ್ ಧಾರಾ, ಮುಂತಾದ ಸ್ಥಳಗಳನ್ನು ನೋಡಬಹುದು. ಇಲ್ಲಿಯ ಪ್ರಕೃತಿ ಸೌಂದರ್ಯ ಇಂದಿಗೂ ಮನಮೋಹಕವಾಗಿದ್ದು ಅಲ್ಲಿ ನಾವು ವಿಹರಿಸುವಾಗ ಒಂದು ರೀತಿಯ ಧನ್ಯತಾಭಾವದಿಂದ ಪುಳಕಿತರಾಗುತ್ತೇವೆ
ನಾವು ರಾಮ್ ಘಾಟ್ ಗೆ ತೆರಳಿ ಅಲ್ಲಿಯ ಗಂಗಾ ಆರತಿಯನ್ನು ವೀಕ್ಷಿಸಿದೆವು. ನಾವು ಕೂಡ ಗಂಗಾಮಾತೆಗೆ ಆರತಿ ಬೆಳಗಿ ಆ ತಾಯಿಗೆ ಭಕ್ತಿಪೂರ್ವಕ ನಮಸ್ಕಾರವನ್ನು ಸಲ್ಲಿಸಿದವು
ರಾಮ್ ಘಾಟ್ ಚಿತ್ರಕೂಟ |
ರಾಮ್ ಘಾಟ್ ಗಂಗಾ ಆರತಿ |
ಮಂದಾಕಿನಿ ನದಿ, ಅನಸೂಯಾದೇವಿ ಆಶ್ರಮದ ಎದುರು |
ಅನಸೂಯಾದೇವಿ ಮಂದಿರ, ಚಿತ್ರಕೂಟ |
ಚಿತ್ರ ಕೂಟದಲ್ಲಿ ಕಾಮದ್ ಗಿರಿ ಬೆಟ್ಟದಲ್ಲಿ ಕಾಮದ್ ನಾಥ್ ಎಂದು ಕರೆಯಲ್ಪಡುವ ರಾಮ ದೇವರ ಮಂದಿರವಿದೆ ಈ ಗಿರಿಯ ಸುತ್ತ ಸುಮಾರು ಐದು ಮೈಲಿ, ಭಕ್ತರು ತಮ್ಮ ಸಕಲ ಪಾಪಗಳು ನಾಶವಾಗಿ, ತಮ್ಮ ಮನೋ ಕಾಮನೆಗಳು ಈಡೇರಲೆಂದು ಆಶಿಸಿ ಪರಿಕ್ರಮ ಮಾಡುತ್ತಾರೆ.
ಕಾಮದ್ ನಾಥ್ ಮಂದಿರ, ಚಿತ್ರಕೂಟ |
ಕಾಮದ್ ಗಿರಿ ಬೆಟ್ಟದ ಮೇಲೆ |
ಶ್ರೀರಾಮ ಸೀತಾದೇವಿಯವರು ವನವಾಸದ ವೇಳೆಯಲ್ಲಿ ವಿಹರಿಸುವಾಗ ವಿಶ್ರಾಂತಿ ಪಡೆದ ಸ್ಪಟಿಕ ಶೀಲಾ ಎಂಬ ಸ್ಥಳವನ್ನು ವೀಕ್ಷಿಸಿದೆವು ಇಲ್ಲಿ ಸುಂದರ ವಾತಾವರಣದಲ್ಲಿ ಮಂದಾಕಿನಿ ನದಿಯ ತೀರದಲ್ಲಿ ರಾಮದೇವರು ಹಾಗು ಸೀತಾದೇವಿಯರು ಕುಳಿತು ವಿಶ್ರಾಂತಿ ಪಡೆಯುತ್ತಿದ್ದರೆನ್ನಲಾದ ದೊಡ್ಡದಾದ ಶಿಲೆಗಳಿದ್ದು, ಅದರ ಮೇಲೆ ಇರುವ ಪಾದಗಳು ಶ್ರೀರಾಮ ಸೀತಾದೇವಿಯರದೆಂದು ಅಲ್ಲಿರುವ ಸ್ಥಳೀಯ ಸಾಧುಗಳು ಹೇಳುತ್ತಾರೆ. ಇದೊಂದು ಸುಂದರ ತಾಣವಾಗಿದೆ.
ನಂತರ ನಾವು ಗುಪ್ತ ಗೋದಾವರಿ ಉಗಮಸ್ಥಾನವನ್ನು ನೋಡಿ, ತೀರ್ಥವನ್ನು ಸ್ಪರ್ಶಿಸಿ, ಪ್ರೋಕ್ಷಣೆ ಮಾಡಿಕೊಂಡು ನಮಿಸಿ ಮುಂದೆ ಸಾಗಿದೆವು. ಈ ಸ್ಥಳ ಬೆಟ್ಟದಮೇಲೆ ಒಂದು ಗುಹೆಯ ಒಳಗಡೆ ಇದ್ದು, ನೋಡಲು ಬಹಳ ಸುಂದರ ಪರಿಸರವಾಗಿರುತ್ತದೆ. ಈ ಗುಹೆಯ ಒಳಗೆ ಹಾಗು ಕೆಳಗಡೆ ನೀರು ಹರಿಯುತ್ತಿದ್ದು ತುಂಬಾ ಜಾಗರೂಕರಾಗಿ ಹೋಗಬೇಕು. ಈ ಗುಹೆಯ ಒಳಗಡೆ ಹೋಗಲು ಒಂದು ಸಣ್ಣ ದ್ವಾರವಿದ್ದು ಅತ್ಯಂತ ಜಾಗರೂಕರಾಗಿ ಒಳಗಡೆ ಪ್ರವೇಶಿಸಬೇಕು. . ಇಲ್ಲಿ ಒಂದು ಸಾರಿ ರಾಮ ಲಕ್ಮಣರು ಗುಪ್ತ ಸಮಾಲೋಚನೆ ನಡೆಸಿದರೆಂಬ ಪ್ರತೀತಿ ಇದ್ದು, ಈಗಲೂ ಅವರು ಕುಳಿತಿದ್ದ ಜಾಗವೆಂದು ಹೇಳುವ ಒಂದು ಕಲ್ಲಿನ ಸಿಂಹಾಸನದಂತಹ ಶಿಲೆಯನ್ನು ನೋಡಬಹುದು.
ಗುಪ್ತಗೋದಾವರಿ ಉಗಮ |
ಗುಪ್ತಗೋದಾವರಿ ಗವಿಯ ಒಳಗಡೆ |
ಗುಪ್ತಗೋದಾವರಿ ಮುಖ್ಯದ್ವಾರದಲ್ಲಿ ಅನುಪಮಾ ಅರವಿಂದರ ಜೋಡಿ |
ಹನುಮಂತನು ಲಂಕೆಯನ್ನು ಸುಟ್ಟು ಬಂದಾಗ ಅದರ ತಾಪವನ್ನು ಆರಿಸಿಕೊಳ್ಳಲು ಶ್ರೀರಾಮನು ನೀರಿನ ದೊಡ್ಡಧಾರೆಯನ್ನು ಸೃಷ್ಟಿಸಿದ ತರುವಾಯ, ಹನುಮಂತನು ಈ ಧಾರೆಯಲ್ಲಿ ಸ್ನಾನ ಮಾಡಿ, ತನ್ನ ತಾಪವನ್ನು ಹೋಗಲಾಡಿಸಿಕೊಂಡಿರುವುದಾಗಿ ಪುರಾಣಗಳಲ್ಲಿ ಉಲ್ಲೇಖಿಸಿದ್ದು ಇಲ್ಲಿ ಹನುಮಾನ್ ಧಾರಾ ನೀರಿನ ಚಿಲುಮೆ ಬೆಟ್ಟದ ಮೇಲಿದ್ದು ಈ ಬೆಟ್ಟವನ್ನು ಮುನ್ನೂರಕ್ಕೂ ಜಾಸ್ತಿ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು.
ಹನುಮಾನ್ ಧಾರಾ ಬೆಟ್ಟಕ್ಕೆ ಹೋಗುವ ದಾರಿ |
ಹನುಮಾನ್ ಧಾರಾ ಬೆಟ್ಟದ ಮೇಲೆ |
ನಾವು ಚಿತ್ರ ಕೂಟದಲ್ಲಿ ಮೇಲೆ ಹೇಳಲಾದ ಮುಖ್ಯ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ, ಅಲ್ಲಿಂದ ನೈಮಿಷಾರಣ್ಯಕ್ಕೆ ಪ್ರಯಾಣ ಬೆಳೆಸಿದೆವು.
ಈ ಪ್ರದೇಶವು ಉತ್ತರ ಪ್ರದೇಶದ ರಾಜದಾನಿಯಾದ ಲಕ್ನೋದಿಂದ 90 ಕಿ.ಮೀ.ದೂರದಲ್ಲಿದ್ದು ಸೀತಾಪುರ ಜಿಲ್ಲೆಯಲ್ಲಿದೆ. ಗಂಗಾನದಿಯ ಉಪನದಿಯಾದ ಗೋಮತಿ ನದಿಯ ದಂಡಿಯ ಮೇಲಿದೆ. ಇದಕ್ಕೆ ಈ ಹೆಸರು ಬರಲು ಅನೇಕ ಕಾರಣಗಳನ್ನು ಪುರಾಣಗಳು ಹೇಳಿದ್ದು ವಿಷ್ಣುವಿನ ನಾಮದಲ್ಲೊಂದಾದ ಅನಿಮಿಷ ಎಂಬ ಪದದಿಂದ ಬಂದಿದ್ದು ವಿಷ್ಣುದೇವರ ಜಾಗೃತ ಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎನ್ನುವುದು ಒಂದು ಕಾರಣ. ಮಹಾವಿಷ್ಣುವು ನಿಮಿಷಾರ್ಧದಲ್ಲಿ ದೈತ್ಯನೊಬ್ಬನನ್ನು ಇಲ್ಲಿ ಸಂಹರಿಸಿದ್ದರಿಂದ ಈ ಪ್ರದೇಶಕ್ಕೆ ಈ ಹೆಸರು ಬಂದಿತೆಂದು ಇನ್ನೊಂದು ಪ್ರತೀತಿ. ಹಿಂದೊಮ್ಮೆ ಬ್ರಹ್ಮ ದೇವರನ್ನು 83000 ಋಷಿಗಳು ಹಾಗೂ ಸಂತರುಗಳೆಲ್ಲ ಸೇರಿಕೊಂಡು ಏಕಾಂತದಲ್ಲಿ ತಪಸ್ಸನ್ನಾಚರಿಸಲು ಹಾಗೂ ಮುಕ್ತಿಹೊಂದಲು ಒಂದು ಪುಣ್ಯಭೂಮಿಯನ್ನು ತೋರಿಸಬೇಕೆಂದು ಬೇಡಿಕೊಂಡಾಗ, ಬ್ರಹ್ಮದೇವರು ಮನೋಮಯ ಚಕ್ರವನ್ನು ಎಸೆದು ಅದು ಎಲ್ಲಿ ಭೂಮಿಯಲ್ಲಿ ಬೀಳುತ್ತದೆಯೋ ಅದು ತಪಸ್ಸಾನಚರಿಸಲು ಯೋಗ್ಯವಾದ ಪುಣ್ಯಭೂಮಿಯೆಂದು ಆ ಚಕ್ರವನ್ನು ಎಸೆದಾಗ ಆ ಚಕ್ರವು ಈ ಪುಣ್ಯಭೂಮಿಯಲ್ಲಿ ಬೀಳಲು ಇದಕ್ಕೆ ನೈಮಿಷಾರಣ್ಯ ಎಂಬ ಹೆಸರು ಬಂದಿರುವುದಾಗಿ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ
ಇಲ್ಲಿ ಚಕ್ರತೀರ್ಥ, ಗೋಮತಿ ಹಾಗು ದಧೀಚಿ ಕೊಂಡಗಳ ಪುಣ್ಯ ಸ್ನಾನ ಅತ್ಯಂತ ಪುಣ್ಯಪ್ರದವಾಗಿದ್ದು, ಜೀವಿಯು ಇವುಗಳಲ್ಲಿ ಸ್ನಾನ ಮಾಡುವುದರಿಂದ ಸಖಲ ಪಾಪಗಳಿಂದ ಮುಕ್ತಿ ಹೊಂದುವನೆಂಬ ನಂಬಿಕೆಯಿಂದ ಯಾತ್ರಿಗಳು ಇವುಗಳಲ್ಲಿ ಪುಣ್ಯಸ್ಥಾನವನ್ನು ಮಾಡುವ ಪೆದ್ದತಿ ಇದೆ.
ಚಕ್ರತೀರ್ಥ, ನೈಮಿಷಾರಣ್ಯ
|
ಶ್ರೀರಾಮನು ರಾವಣನನ್ನು ಸಂಹರಿಸಿದ ಮೇಲೆ ಈ ಪ್ರದೇಶದಲ್ಲಿಯೇ ಅಶ್ವಮೇಧಯಾಗವನ್ನು ಮಾಡಿರುವುದಾಗಿ ಉಲ್ಲೇಖವಿದೆ. ಇದಕ್ಕೆ ಪೂರಕವಾಗಿ ಇಲ್ಲಿ ಶ್ರೀರಾಮನ ದೇವಸ್ಥಾನವನ್ನು ನೋಡಬಹುದು . ಇದೇ ಪ್ರದೇಶದಲ್ಲಿಯೇ ರಾಮನ ಮಕ್ಕಳಾದ ಲವಕುಶರು ದೊಡ್ಡವರಾಗಿ ತಮ್ಮ ತಂದೆಯನ್ನು ಸೇರಿದ ಮೇಲೆ ಸೀತಾದೇವಿಯು ಭೂಗರ್ಭದೊಳಗೆ ಅಂತರ್ದಾನಳಾದಳೆಂಬ ಪೌರಾಣಿಕ ಉಲ್ಲೇಖವಿದೆ.
ಅಹಿರಾವಣರ ವಶದಿಂದ ಶ್ರೀರಾಮ ಲಕ್ಮಣರನ್ನು ಬಿಡಿಸಿಕೊಂಡು ಹನುಮಂತನು ತನ್ನ ಭುಜದ ಮೇಲೆ ಕರೆತಂದನೆಂಬ ಪ್ರತೀತಿಯಂತೆ ಇಲ್ಲಿ ಭೌವ್ಯ ಹಾಗೂ ಬೃಹದ್ರೂಪದ 18 ಅಡಿ ಎತ್ತರದ ಆಂಜನೇಯ ಮೂರ್ತಿ ಇರುವ ದೇವಸ್ಥಾನವನ್ನು ಈಗಲೂ ಕಾಣಬಹುದು.
ವ್ಯಾಸಗದ್ದುಗೆ, ನೈಮಿಷಾರಣ್ಯ |
ಮಹರ್ಷಿ ವೇದವ್ಯಾಸ ದೇವರು ನಾಲ್ಕು ವೇದಗಳನ್ನು ಆರು ಶಾಸ್ತ್ರಗಳನ್ನು ಮತ್ತು ಹದಿನೆಂಟು ಪುರಾಣಗಳನ್ನು ರಚಿಸಿ ಶಿಷ್ಯರಾದ ಜೈಮುನಿ ಋಷಿಗೆ ಸಾಮವೇದವನ್ನು ಇಲ್ಲಿಯೇ ಭೋದಿಸಿರುವುದಾಗಿಯೂ ಪ್ರತೀತಿ ಇದೆ. ಇವೆಲ್ಲವುಗಳಿಗೆ ಪೂರಕವಾಗಿ ನಾವು ಇವರ ದೇವಸ್ಥಾಗಳನ್ನು ನೋಡಬಹುದು. ಸೂತ ಪುರಾಣಿಕರು ಶೌನಕಾದಿ ಋಷಿಗಳಿಗೆ ಸತ್ಯನಾರಾಯಣಸ್ವಾಮಿ ವ್ರತದ ಮಹಿಮೆಯನ್ನು ಹೇಳಿ ಈ ವ್ರತವನ್ನು ಇಲ್ಲಿಯೇ ಮೊದಲು ಪ್ರಾರಂಭಿಸಿರುವುದಾಗಿ ಹೇಳಿದಂತೆ ಇಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿಯ ದೇವಸ್ಥಾನವನ್ನೂ ನೋಡ ಬಹುದು. ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಹಾಗೂ ಬಲರಾಮನು ತನ್ನ ತೀರ್ಥಯಾತ್ರೆಯ ಸಮಯದಲ್ಲಿ ಈ ಪುಣ್ಯ ಕ್ಷೇತ್ರವನ್ನು ಸಂದರ್ಶಿಸಿದ್ದರೆಂಬ ಉಲ್ಲೇಕವೂ ಇದೆ. ತುಳಸೀದಾಸರು ತಮ್ಮ ರಾಮಚರಿತ ಮಾನಸ ಕಾವ್ಯವನ್ನು ಇಲ್ಲಿಯೇ ಬರೆದರೆಂಬ ಉಲ್ಲೇಖವೂ ಇದೆ. ಬ್ರಹ್ಮದೇವರು ಎಸೆದ ಮನೋಮಯ ಚಕ್ರವು ಈ ಪ್ರದೇಶದಲ್ಲಿ ಬಿದ್ಧಾಗ ಅದರ ರಭಸಕ್ಕೆ ಭೂಮಿಯು ಸೀಳಿ ಒಳಗಿನಿಂದ ನೀರು ಉಕ್ಕಲು ಪ್ರಾರಂಬಿಸಿದಾಗ ಮುಂದಾಗುವ ಗಂಡಾಂತರವನ್ನು ಗಮನಿಸಿ ಬ್ರಹ್ಮದೇವರು ಆದಿಶಕ್ತಿ ಲಲಿತೆಯನ್ನು ಬೇಡಲು ಲಲಿತೆಯು ಆ ಚಕ್ರವನ್ನು ತಡೆದು ಅಲ್ಲಿಯೇ ನೆಲೆಸಿರುವಳೆಂಬ ಪ್ರತೀತಿಯಂತೆ ನಾವು ಅಲ್ಲಿ ಲಲಿತಾಂಬ ದೇವಸ್ಥಾನವನ್ನೂ ಕೂಡ ನೋಡಬಹುದು. ಇದು ನೈಮಿಷಾರಣ್ಯ ಕ್ಷೇತ್ರದ ಗ್ರಾಮದೇವತೆಯ ಸ್ಥಾನವಾಗಿದ್ದು ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಇಲ್ಲಿರುವ ಚಕ್ರತೀರ್ಥವು ಅತ್ಯಂತ ಪವಿತ್ರವಾಗಿದ್ದು ಈ ತೀರ್ಥದಲ್ಲಿ ಎಲ್ಲಾ ನದಿಗಳು ಮತ್ತು ಸಾಗರಗಳ ಸಾನಿಧ್ಯವಿದ್ದು ಇದರಲ್ಲಿ ಸ್ನಾನ ಮಾಡುವುದರಿಂದ ಜೀವಿಗಳು ತಮ್ಮ ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಹೊಂದುವರೆಂದು ಹೇಳಲಾಗಿದೆ.
ಈ ಪ್ರದೇಶದಲ್ಲಿ ದಧೀಚಿ ಮಹಾಮುನಿಯು ತಮ್ಮ ಶರೀರದ ಎಲುಬುಗಳನ್ನು ಆಯುಧಗಳನ್ನಾಗಿ ಮಾಡಲು ದೇವತೆಗಳಿಗೆ ನೀಡಿದ್ದು ಆ ಆಯುಧಗಳಿಂದಲೇ ದೇವತೆಗಳು ರಾಕ್ಷರುಗಳನ್ನು ಸಂಹಾರ ಮಾಡಿ ಲೋಕೋಪಕಾರವನ್ನು ಮಾಡಿರುವುದಾಗಿ ಹೇಳಿದ್ದು, ಇಲ್ಲಿ ದಧೀಚಿ ಮಹರ್ಷಿಗಳ ದೇವಸ್ಥಾನ ಹಾಗೂ ದಧೀಚಿ ಕೊಂಡವಿದ್ದು ಇಲ್ಲಿ ಸ್ಥಾನ ಮಾಡುವುದರಿಂದ ಪಾಪದಿಂದ ಮುಕ್ತಿ ಹೊಂದಬಹುದೆಂಬ ನಂಬಿಕೆ ಇದೆ.
ವಿಷ್ಣು ದೇವಸ್ಥಾನ, ನೈಮಿಷಾರಣ್ಯ |
ನೈಮಿಷಾರಣ್ಯ ಮುಖ್ಯ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿಕೊಂಡು ನಾವು ಅಯೋಧ್ಯ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದೆವು. ಮಾರ್ಗ ಮದ್ಯದಲ್ಲಿ ಅಯೋದ್ಯೆಯ ಸಮೀಪವಿರುವ ನಂದಿಗ್ರಾಮ ಕ್ಷೇತ್ರವನ್ನು ವೀಕ್ಷಿಸಿದೆವು.
ನಂದಿ ಗ್ರಾಮ :( ಭರತಕೊಂಡ ):
ನಂದಿಗ್ರಾಮ, ಉತ್ತರಪ್ರದೇಶ |
ತನ್ನ ತಾಯಿಯಿಂದಲೇ ಶ್ರೀರಾಮನು ವನವಾಸಕ್ಕೆ ಹೋಗಬೇಕಾಯಿತೆಂಬುದು ಗೊತ್ತಾದಾಗ ಭರತನು ಅತ್ಯಂತ ದುಃಖಿತನಾಗಿ, ವನವಾಸಕ್ಕೆ ಹೋಗಬೇಡೆಂದು ಶ್ರೀರಾಮನನ್ನು ಪರಿಪರಿಯಾಗಿ ಬೇಡಿಕೊಂಡಾಗಲೂ , ರಾಮನು ಪಿತೃವಾಕ್ಯ ಪರಿಪಾಲನೆಗಾಗಿ ಸೀತಾ ದೇವಿ ಹಾಗು ಲಕ್ಷ್ಮಣರ ಜೊತೆ ಗಂಗಾ ನದಿಯನ್ನು ದಾಟಿ ಚಿತ್ರಕೂಟ ಪರ್ವತದ ಕಡೆ ಪ್ರಯಾಣ ಬೆಳಸಿ, ನಂತರ ಚಿತ್ರಕೂಟದಲ್ಲಿ ಸುಮಾರು ೧೧ ವರ್ಷಗಳಷ್ಟು ಕಾಲ ವನವಾಸ ವನ್ನು ಕಳೆಯುತ್ತಾರೆ. ಭರತನು ತನ್ನ ಅಣ್ಣ ಶ್ರೀರಾಮನು ಕುಳಿತು ಕೊಳ್ಳಬೇಕಾದ ಸಿಂಹಾಸನದಲ್ಲಿ ತಾನು ಕುಳಿತುಕೊಂಡು ರಾಜ್ಯಭಾರ ಮಾಡಲಾರೆ ಎಂದುಕೊಂಡು ಋಷಿಗಳು, ತನ್ನ ಪರಿವಾರದವರು ಮತ್ತು ಅಯೋದ್ಯೆಯ ನಾಗರಿಕರನ್ನೆಲ್ಲ ಸೇರಿಸಿ ಕೊಂಡು ಚಿತ್ರಕೂಟಕ್ಕೆ ಬಂದು ತನ್ನ ಅಣ್ಣ ಶ್ರೀರಾಮನಿಗೆ ಅಯೋದ್ಯೆಗೆ ಮರಳಿ ಬಂದು ರಾಜ್ಯಭಾರ ಮಾಡಲು ಅತ್ಯಂತ ದೈನ್ಯತೆಯಿಂದ /8888ಬೇಡಿಕೊಳ್ಳುತ್ತಾನೆ. ಆದರೆ ಶ್ರೀರಾಮನು ತನ್ನ ತಂದೆಯು ಕೈಕೇಯಿಗೆ ಕೊಟ್ಟ ಮಾತನ್ನು ನಡೆಸಲು ಪುನಃ ಅಯೋದ್ಯೆಗೆ ಬಂದು ರಾಜ್ಯಭಾರ ಮಾಡಲು ಒಪ್ಪುವುದಿಲ್ಲ. ಆಗ ಭರತನು ರಾಮನಿಲ್ಲದ ರಾಜ್ಯದಲ್ಲಿ ಜೀವಿಸಿರಲು ಸಾಧ್ಯವಿಲ್ಲವೆಂದು ಉಪವಾಸ ವ್ರತದಿಂದ ಪ್ರಾಣತ್ಯಾಗ ಮಾಡಿಕೊಳ್ಳುವದಾಗಿ ಹಠ ಹಿಡಿಯಲು ರಾಮನು ಹಾಗೆ ಮಾಡಬಾರದೆಂದು ಬುದ್ದಿವಾದ ಹೇಳುತ್ತಾನೆ. ಆಗ ಭರತನು ರಾಮನಲ್ಲಿ ಶರಣಾಗತಿಯಾಗಿ, ರಾಮನ ಪಾದುಕೆಯನ್ನು ಕೊಡಲು ಬೇಡಿಕೊಳ್ಳುತ್ತಾನೆ ಹಾಗು ಆ ಪಾದುಕೆಯನ್ನು ಸಿಂಹಾಸನದ ಮೇಲೆ ಇಟ್ಟು ರಾಮನ ಪ್ರತಿನಿಧಿಯಾಗಿ ಆಡಳಿತ ನಡೆಸಲು ಒಪ್ಪಿಗೆಯನ್ನು ಕೊಡಲು ಬೇಡಿಕೊಳ್ಳುತ್ತಾನೆ. ಭರತನ ಪ್ರೀತಿ ಹಾಗು ಶರಣಾಗತಿ ಭಕ್ತಿಯನ್ನು ನೋಡಿ, ರಾಮನು ಒಪ್ಪಿ, ತನ್ನ ಪಾದುಕೆಯನ್ನು ಭರತನಿಗೆ ಕೊಡುತ್ತಾನೆ.
ಭ ರತ ಶ್ರೀರಾಮರ ಆಲಿಂಗನ ಮಂದಿರ |
ಭರತ ಹನುಮಂತನ ಆಲಿಂಗನ |
ಭರತ ತಪಸ್ಸನ್ನು ಆಚರಿಸಿದ ಸ್ಥಳ |
ನಂದಿಗ್ರಾಮವನ್ನು ವೀಕ್ಷಿಸಿ ಅಯೋಧ್ಯ ಕ್ಷೇತ್ರಕ್ಕೆ ಹೋಗಿ ತಂಗಿದೆವು.
ಅಯೋಧ್ಯ ಕ್ಷೇತ್ರ:
ಸರಯೂ ನದಿ, ಅಯೋಧ್ಯಾ |
ಸರಿಯು ನದಿ ದಂಡೆಯ ಮೇಲಿರುವ ಈ ಕ್ಷೇತ್ರವು ನಮಗೆ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದೆ. ತ್ರೇತಾಯುಗದಲ್ಲಿ ಇದು ರಘುವಂಶದ ರಾಜಧಾನಿಯಾಗಿದ್ದು ದಶರಥ ಮಹಾರಾಜರು ಇಲ್ಲಿ ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಿರುವ ಕ್ಷೇತ್ರ. ಅಯೋದ್ಯೆಯು ಶ್ರೀರಾಮನ ಜನ್ಮಭೂಮಿಯಾಗಿದ್ದು, ಅವತಾರ ಪುರುಷನಾಗಿ, ಪುರುಶೋತ್ತಮನಾಗಿ ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಿ, ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಂಡು ತನ್ನ ರಾಜ್ಯದಲ್ಲಿ ಎಲ್ಲರೂ ಅತ್ಯಂತ ಸಂತೋಷದಿಂದ ಇರುವಂತೆ ರಾಜ್ಯಭಾರ ಮಾಡಿರುವುದಾಗಿ ನಮ್ಮ ಪುರಾಣಗಳಲ್ಲಿ ಕೇಳುತ್ತೇವೆ. ಇಲ್ಲಿ ನಾವು ಮುಖ್ಯವಾಗಿ, ರಾಮ ಜನ್ಮಭೂಮಿ , ದಶರಥ ಮಹಲು, ಕನಕ ಮಂದಿರ, ಹನುಮಾನ್ ಮಂದಿರಗಳನ್ನು ನೋಡಬಹುದು.
ರಾಮ ಜನ್ಮಭೂಮಿಯ ಮೇಲೆ ಕಟ್ಟಿದ ಬಾಬರಿ ಮಸೀದಿಯನ್ನು ಕೆಡವಿದ ಮೇಲೆ, ಆ ಸ್ಥಳದಲ್ಲಿ ರಾಮಲಾಲನ ಮೂರ್ತಿಯನ್ನ ಇಟ್ಟು ಪೂಜಿಸುತ್ತಿದ್ದು , ಪುನಃ ಇದೆ ಸ್ಥಳದಲ್ಲಿ ರಾಮಮಂದಿರವನ್ನು ಕಟ್ಟಲು ಸುಪ್ರೀಂ ಕೋರ್ಟಿನ ಆದೇಶ ಬರುವುದನ್ನು ನಿರೀಕ್ಷಿಸಿ , ಮಂದಿರವನ್ನು ಕಟ್ಟಲು ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿರುವುದನ್ನು ನೋಡಬಹುದಾಗಿದೆ. ನಾವು ಕೂಡ ರಾಮಜನ್ಮ ಭೂಮಿಯಲ್ಲಿ ಇಟ್ಟಿರುವ ಮೂರ್ತಿಗಳ ದರ್ಶನವನ್ನು ಪಡೆದುಕೊಂಡು ಬಂದೆವು. ಇಲ್ಲಿ ರಾಮ ಮಂದಿರವನ್ನು ಕಟ್ಟಲು ಅಮೃತ ಶಿಲೆಯಗಳಲ್ಲಿ ಕಂಬಗಳನ್ನು ಅತ್ಯಂತ ಸುಂದರವಾಗಿ ನಿರ್ಮಿಸಿಟ್ಟಿರುತ್ತಾರೆ.
ರಾಮಮಂದಿರವನ್ನು ಕಟ್ಟಲು ಕಂಬಗಳನ್ನು ತಯಾರಿಸಿ ಇಟ್ಟಿರುವುದು. |
ರಾಮಮಂದಿರವನ್ನು ಕಟ್ಟಲು ಕಂಬಗಳನ್ನು ತಯಾರಿಸಿ ಇಟ್ಟಿರುವುದು.
ಇಲ್ಲಿರುವ ಹನುಮಾನ್ ಮಂದಿರವನ್ನು 76 ಮೆಟ್ಟಿಲುಗಳನ್ನು ಏರಿ ಹೋಗಬೇಕು. ಇಲ್ಲಿ ಹನುಮಂತನ ತಾಯಿ ಅಂಜನಾದೇವಿ ಮೂರ್ತಿಯೂ ಇದೆ. ಇದು ಭಕ್ತರ ಶ್ರದ್ದಾ ಭಕ್ತಿಯ ಕೇಂದ್ರವಾಗಿದೆ. ಇಲ್ಲಿ ಸಾವಿರಾರು ಭಕ್ತರು ಪ್ರತಿದಿನ ದೇವರ ದರ್ಶನ ಪಡೆಯುತ್ತಾರೆ ಇಲ್ಲಿ ನಿರಂತರ ರಾಮನಾಮ ಸಂಕೀರ್ತನ ನಡೆಯುತ್ತಿರುತ್ತದೆ. ತ್ರೇತಾಯುಗದಲ್ಲಿ ಹನುಮಂತ ದೇವರು ಈ ಸ್ಥಳವನ್ನು ನಿರಂತರವಾಗಿ ರಕ್ಷಿಸುತ್ತಿದರೆಂಬ ನಂಬಿಕೆ ಇದ್ದು, ಇಂದೂ ಕೂಡ ಇಲ್ಲಿ ಈ ಬೃಹತ್ ಮಂದಿರವನ್ನು ನೋಡಬಹುದು.
ಇಲ್ಲಿರುವ ದಶರಥ ಮಹಲ್ಲಿರುವ ಸ್ಥಳದಲ್ಲಿ ದಶರಥ ಮಹಾರಾಜರು ತನ್ನ ಪರಿವಾರದೊಡನೆ ವಾಸವಾಗಿದ್ದರೆಂಬ ಉಲ್ಲೇಖವಿದ್ದು, ಈ ಮಹಲಿನಲ್ಲಿ ರಾಮ, ಸೀತ, ಲಕ್ಶ್ಮಣ, ಭರತ , ಶತ್ರುಘ್ನರ ಮೂರ್ತಿಗಳನ್ನು ಇಟ್ಟು ಪೂಜಿಸುತ್ತಿರುವುದನ್ನು ನೋಡಬಹುದು. ಸ್ವಲ್ಪ ದೂರದಲ್ಲಿಸೀತಾದೇವಿಯ ಅಡಿಗೆಮನೆ ಇರುವ ಸ್ಥಳ ಸೀತಾ ರಸೋಯಿಯನ್ನು ನೋಡಬಹುದು. ಇಲ್ಲಿ ಸಾಂಕೇತಿಕವಾಗಿ ಕೆಲವು ಅಡಿಗೆ ಮಾಡುವ ಪಾತ್ರೆಗಳನ್ನು ಇಟ್ಟಿರುತ್ತಾರೆ.
ಕನಕ ಜಾನಿಕಿ ಮಂದಿರದಲ್ಲಿ ಶ್ರೀ ರಾಮ ಸೀತದೇವಿಯ ಮೂರ್ತಿಗಳಿದ್ದು ವಿಕ್ರಮಾಧಿತ್ಯರ ಕಾಲದಲ್ಲಿ ಈ ಮಂದಿರವನ್ನು ಜಿರ್ಣೋದ್ದಾರ ಮಾಡಿರುವ ಉಲ್ಲೇಖವಿದೆ ಇದನ್ನು ಸೀತಾದೇವಿಗೆ ಅತ್ತೆ ಕೈಕೇಯಿಯವರು ಬಹುಮಾನವಾಗಿ ನೀಡಿರುತ್ತಾರೆಂದು ಉಲ್ಲೇಖವಿದೆ. ಅಲ್ಲಿ ಶ್ರೀರಾಮ ಸೀತೆ ಮೂರ್ತಿಯ ದರ್ಶನ ಪಡೆದು ಗಯಾ ಕ್ಷೇತ್ರಕ್ಕೆ ನಮ್ಮ ಪಯಣ ಪ್ರಾರಂಭಿಸಿದೆವು.
ಗಯಾ ಕ್ಷೇತ್ರ: ಈ ಕ್ಷೇತ್ರವು ಹಿಂದೂಗಳು ಪಿತೃ ಕಾರ್ಯವನ್ನು ಮಾಡುವ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು , ಇದು ಬಿಹಾರ ರಾಜ್ಯದ ದಕ್ಷಿಣ ಭಾಗದಲ್ಲಿದೆ. ಇಲ್ಲಿ ಫಲ್ಗುಣಿ ನದಿ ಹರಿಯುತ್ತಿದ್ದು ನದಿ ದಂಡೆಯ ಪಕ್ಕದಲ್ಲಿಯೇ ಮಹಾವಿಷ್ಣುವಿನ ದೇವಾಲಯವಿದೆ. ದ್ವಾಪರ ಮತ್ತು ತ್ರೇತಾಯುಗದಲ್ಲಿ ಈ ಕ್ಷೇತ್ರದ ಉಲ್ಲೇಖವಿದೆ. ಶ್ರೀ ರಾಮಚಂದ್ರನು ಸೀತಾದೇವಿ ಮತ್ತು ಲಕ್ಷ್ಮಣರೊಡಗೂಡಿ ಇಲ್ಲಿ ದಶರಥ ಮಹಾರಾಜರಿಗೆ ಪಿಂಡ ಪ್ರದಾನ ಮಾಡಿರುವರೆಂದು ನಮ್ಮ ವೇದಗಳಲ್ಲಿ ಉಲ್ಲೇಖಿಸಿದ್ದಾರೆ
ನಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ಜೀವಿಯ ಮರಣದ ನಂತರ ಮೋಕ್ಷ ಸಿಗಲು ಇಲ್ಲಿ ಆ ಜೀವಕ್ಕೆ ಶ್ರಾದ್ಧ ಕರ್ಮಾಧಿಗಳನ್ನು ಮಾಡಿ, ಪಿಂಡಗಳನ್ನು ಫಲ್ಗುಣಿ ನದಿ, ವಟವೃಕ್ಷ ಹಾಗು ವಿಷ್ಣು ಪಾದದ ಮೇಲೆ ವಿಸರ್ಜಿಸುತ್ತಾರೆ. ನಾವುಗಳು ಇಲ್ಲಿ ನಮ್ಮ ಕುಟುಂಬದಲ್ಲಿ ದೈವಾಧೀನರಾದ ಪಿತೃಗಳಿಗೆ ಹಾಗು ದೈವಾಧೀನರಾದ ಸಂಬಂಧಿಗಳಿಗೆ ಶ್ರಾದ್ಧ ಕರ್ಮಾದಿಗಳನ್ನು ಪುರೋಹಿತರ ಮೂಲಕ ಮಾಡಿಸಿ ಈ ಮೂಲಕ ಪಿತೃಗಳ ಆಶೀರ್ವಾದ ಪಡೆದೆವು. ಇಲ್ಲಿ ಮಹಾವಿಷ್ಣುವಿಗೆ ಗದಾಧರನೆಂದು ಕರೆಯುತ್ತಾರೆ. ಗಯಾಸುರನೆಂಬ ರಾಕ್ಷಸನ ಭಕ್ತಿಗೆ ಮೆಚ್ಚಿ ಅವನಿಗೆ ಮುಕ್ತಿಯನ್ನು ನೀಡಿ, ಅವನ ಅಪೇಕ್ಷೆಯಂತೆ ಮಹಾವಿಷ್ಣುವು ಇಲ್ಲಿ ಗಾದಾಧಾರಿಯಾಗಿ ಅವನ ದೇಹದ ಮೇಲೆ ತನ್ನ ಬಲಗಾಲನ್ನು ಇಟ್ಟು ನೆಲೆಸಿರುವನೆಂದು ನಮ್ಮ ವೇದಗಳಲ್ಲಿ ಹೆಸರಿಸಲಾಗಿದೆ. ದೇವರ ಎದುರುಗಡೆ ಧಾರ್ಮ ಶಿಲೆಯ ಮೇಲೆ ಮಹಾವಿಷ್ಣುಮಿನ್ ಬಲಗಾಲಿನ ಪದವನ್ನು ನೋಡಬಹುದು. ಮಹಾವಿಷ್ಣುವಿನ ದರ್ಶನವನ್ನ ಪಡೆದು ನಮ್ಮ ಮುಂದಿನ ಪಯಣ ಬುದ್ಧ ಗಯಾಗೆ ತೆರಳಿದೆವು.
ಪಲ್ಗುಣಿ ನದಿಯಲ್ಲಿ ಪಿಂಡ ಪ್ರದಾನ |
ಬುದ್ಧಗಯಾ : ಇದು ಗಯಾದಿಂದ ಹದಿನಾರು ಕಿಲೋಮೀಟರ್ ದೂರದಲ್ಲಿದ್ದು ಭೌದ್ಧರ ಪವಿತ್ರ ತೀರ್ಥಕ್ಷೇತ್ರವಾಗಿದೆ. ಇಲ್ಲಿ ಗೌತಮಬುದ್ದನು ಮಹಾಬೋಧಿ ವೃಕ್ಷದ ಕೆಳಗೆ ಜ್ಞಾನೋದಯ ಹೊಂದಿದ್ದು ಈ ವೃಕ್ಷವನ್ನೊಳಗೊಂಡಂತೆ ದೊಡ್ಡದಾದ ಕಾಂಪ್ಲೆಕ್ಸ್ ಕಟ್ಟಿದ್ದು, ಇಲ್ಲಿ ಗೌತಮ ಬುದ್ಧನ ಚಿನ್ನದ ವಿಗ್ರಹವಿರುವ ದೇವಾಲಯದಲ್ಲಿ ಭೌದ್ಧರು ಅತ್ಯಂತ ಶ್ರದ್ದಾ ಭಕ್ತಿಯಿಂದ ಪೂಜಿಸುತ್ತಾರೆ.
ಬುದ್ಧಗಯಾ
|
ಬುದ್ಧಗಯಾ |
ಬುದ್ಧಗಯಾ |
ಕಾಶಿ ಕ್ಷೇತ್ರ:
ಪ್ರಳಯ ಕಾಲದಲ್ಲಿ ಮಹಾವಿಷ್ಣುವಿನ ನಾಭಿಯಿಂದ ಭ್ರಹ್ಮ ದೇವನು ಉದ್ಭವಿಸಿದಾಗ
ಭ್ರಹ್ಮ ದೇವನು ಮಹಾವಿಷ್ಣುವಿನ ದಿವ್ಯ ದೇಹವನ್ನು ನೋಡಿ ತನ್ನ ತಲೆಯನ್ನು ಆಶ್ಚರ್ಯದಿಂದ ಅಲುಗಾಡಿಸಿದಾಗ ಆತನ ಕರ್ಣ ಕುಂಡಲದ ಮಣಿ ಇಲ್ಲಿ ಬಿದ್ದಿರುವದರಿಂದ ಮಣಿಕರ್ಣ ತೀರ್ಥ ನಿರ್ಮಾಣವಾಗಿದೆ ಎಂದು ಕೇಳುತ್ತೇವೆ. ಮಹಾ ವಿಷ್ಣು ಈ ಕೊಂಡವನ್ನು ನಿರ್ಮಿಸಿರುವುದಾಗಿಯೂ, ಗಂಗಾ ನದಿಯ ಉಪನದಿಯಾದ ಇಲ್ಲಿರುವ ಮಣಿಕರ್ಣಿಕೆಯು ಮಹಾ ವಿಷ್ಣುವಿನ ತಪೋಭೂಮಿಯಾಗಿದೆ ಎಂದೂ ಉಲ್ಲೇಖಿಸಿರುತ್ತಾರೆ ಬ್ರಹ್ಮ ದೇವನು ಇಲ್ಲಿಯ ಗಂಗಾ ತೀರದಲ್ಲಿ ಹತ್ತು ಅಶ್ವಮೇಧ ಯಾಗವನ್ನು ಮಾಡಿದ್ದರೆಂಬ ಉಲ್ಲೇಖವಿರುವ ದಶಾಶ್ವಮೇಧ ಘಾಟ್ ನಾವು ನೋಡಬಹುದಾಗಿದೆ. ತ್ರಿಮೂರ್ತಿಗಳ ಪಾದ ಸ್ಪರ್ಶದಿಂದ ಪಾವನವಾದ ಈ ಕ್ಷೇತ್ರದಲ್ಲಿ ಮರಣ ಹೊಂದಿದರೆ ಮೋಕ್ಷವು ಸಿದ್ದಿಸುವುದೆಂಬ ನಂಬಿಕೆ ಇದೆ.
ಕಾಶಿ ಪುಣ್ಯ ಕ್ಷೇತ್ರದಲ್ಲಿ ನಾವು ಮೂರು ದಿನ ಇದ್ದೆವು. ನಾವು ಕಾಶಿಯಲ್ಲಿ ಬೆಳಿಗ್ಗೆ ಅಸ್ಸಿ ಘಾಟಿನಲ್ಲಿ ಪುಣ್ಯ ಸ್ನಾನವನ್ನು ಮಾಡಿ, ಸಂಪ್ರದಾಯದಂತೆ ರಾಮೇಶ್ವರದಿಂದ ತಂದ ಮರಳಿನಿಂದ ಶಿವಲಿಂಗವನ್ನು ಮಾಡಿ ಪೂಜಿಸಿ ಗಂಗಾನದಿಯಲ್ಲಿ ಶಿವಲಿಂಗವನ್ನು ವಿಸರ್ಜಿಸಿದೆವು. ನಂತರ ನಾವು ವಿಶ್ವನಾಥ ಸ್ವಾಮಿಯ ದರ್ಶನ ಮಾಡಿದೆವು. ಆ ದಿನ ಸಾಯಂಕಾಲ ನಾವು ಸಪ್ತಋಷಿ ಪೂಜೆಯಲ್ಲಿ ಭಾಗವಹಿಸಿ , ಪೂಜೆಯ ನಂತರ ವಿಶ್ವನಾಥ ಸ್ವಾಮಿಯನ್ನು ಮುಟ್ಟಿ ನಮಸ್ಕರಿಸಲು ಭಗವಂತನು ನಮಗೆ ಅನುಗ್ರಹ ಮಾಡಿದನು.
ಅಸ್ಸಿಘಾಟ್, ಕಾಶಿ ರಾಮೇಶ್ವರ ಮರಳಿನಿಂದ ಶಿವಲಿಂಗ ಪೂಜೆ |
ಗಂಗಾಮಾತೆಗೆ ಆರತಿ |
ಹರಿಶ್ಚಂದ್ರ ಘಾಟ್ , ಕಾಶಿ |
ಕರಿಮಾರಿಯಮ್ಮ ಟೆಂಪಲ್, ಕಾಶಿ |
ಹನುಮಾನ ಘಾಟ್, ಪಂಚಗಂಗಾ ಘಾಟ್, ದಶಾಶ್ವಮೇಧ ಹಾಗು ಮಣಿಕರ್ಣಿಕಾ ಘಾಟುಗಳನ್ನು ದೂರದಿಂದ ನೋಡಿದೆವು. ಹರಿಶ್ಚಂದ್ರ ಘಾಟ್ ನಲ್ಲಿ ಸಾಲು ಸಾಲಾಗಿ ಇಟ್ಟ ಮೃತ ದೇಹವನ್ನು ನೋಡಿದಾಗ ದೇಹದ ನಶ್ವರತೆಯ ಬಗ್ಗೆ ಜ್ಞಾನೋದಯವಾಯಿತು. ಇಲ್ಲಿ ದಹನ ಮಾಡುವುದರಿಂದ ಜೀವಿಯು ಮುಕ್ತನಾಗುತ್ತಾನೆಂಬ ನಂಬಿಗೆಯಿಂದ ಅಲ್ಲಿನ ಸುತ್ತಲಿನ ಪ್ರದೇಶದವರು ಮೃತ ದೇಹವನ್ನು ಇಲ್ಲಿ ತಂದು ದಹನ ಮಾಡುತ್ತಾರೆ. ಗಂಗಾನದಿಯ ಪ್ರವಾಹವು ಉಕ್ಕಿ ಹರಿಯುತ್ತಿದುದರಿಂದ ನಮಗೆ ಎಲ್ಲ ಘಾಟ್ ಗಳನ್ನ ನೋಡಲು ಸಾದ್ಯವಾಗಲಿಲ್ಲ .
ಕಾಶಿಯ ಮುಖ್ಯ ದೇವಾಲಯದಲ್ಲಿ ಒಂದಾದ ಸಂಕಟ ಮೋಚನ ಹನುಮಾನ್ ದೇವಸ್ಥಾನ, ಬನಾರಸ್ ಯೂನಿವರ್ಸಿಟಿ ಆವರಣದಲ್ಲಿರುವ ಹೊಸ ವಿಶ್ವನಾಥ್ ದೇವಾಲಯ, ನಂತರ ಶ್ರೀ ಕೃಷ್ಣ ಮಠವನ್ನು , ಕರಿಮಾರಿಯಮ್ಮ ದೇವಸ್ಥಾನ, ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದೆವು ಸಂಪ್ರದಾಯದಂತೆ ನಮ್ಮ ಯಾತ್ರೆಯ ಮುಕ್ತಾಯದಲ್ಲಿ ಕವಡೆಬಾಯಿ ದೇವಿಯ ದರ್ಶನ ಆಶೀರ್ವಾದ ಪಡೆದು ಹಿಂದಿರುಗಿದೆವು.
,
ಕಾಶಿ ವಿಮಾನ ನಿಲ್ದಾಣ |
ಶುಭಂ
Very nicely written, Amma👌🏼
ReplyDeleteಓದಿದವರಿಗೆ ತಾವೇ ಸ್ವತಃ ತೀರ್ಥಯಾತ್ರೆ ಮಾಡಿ ಬಂದ ಅನುಭವ ಕೊಡುತ್ತದೆ 🙏🏼
ಹಾಗೂ, ಈ ಸ್ಥಳಗಳಿಗೆ ಹೋಗಬಯಸುವವರಿಗೆ ಒಳ್ಳೆ ಮಾರ್ಗಸೂಚಿ.
ಇತ್ತೀಚೆಗೆ ದೂರದರ್ಶನದಲ್ಲಿ ರಾಮಾಯಣ ಪುನಃ ವೀಕ್ಷಿಸಿದ ಮೇಲಂತೂ ಈ ಪುಣ್ಯ ಸ್ಥಳಗಳಿಗೆ ಭೇಟಿ ನೀಡುವ ಉತ್ಸಾಹ ಇನ್ನೂ ಹೆಚ್ಚಾಗಿದೆ.
Thank you Ashwini. ನೀವುಗಳೆಲ್ಲರೂ ನೋಡಲೇಬೇಕಾದ
Deleteಕ್ಷೇತ್ರಗಳು