Ujjain and Khajurau MP
ಮದ್ಯಪ್ರದೇಶ : ಇಂದೋರ್, ಉಜ್ಜಯಿನಿ,ಖಜರಾಹು12/12/2016: ನನ್ನ ತಂಗಿ ಮಂದಾಕಿನಿಯ ಜೊತೆ ನಾನು ಇಂದೋರಿಗೆ ತೆರಳಿ, ನಮ್ಮ ಸಂಬಂದಿಯ ಮೊಮ್ಮಗನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮರುದಿನ ಇಂದೋರಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದೆವು.
13/12/16: ಮೊದಲು ಇಂದೋರಿನ 7 ಅಂತಸ್ಥಿನ ರಾಜವಾಡ ಅರಮನೆಯನ್ನು ವೀಕ್ಷಿಸಿದೆವು ಇದನ್ನು 18ನೇ ಶತಮಾನದಲ್ಲಿ ಹೋಳ್ಕರ್ ರಾಜಮನೆತನದವರು ನಿರ್ಮಿಸಿದ್ದು ಅದರೊಳಗಡೆ ಪ್ರವೇಶವಿಲ್ಲದ ಕಾರಣ ಹೊರಗಡೆಯಿಂದಲೇ ವೀಕ್ಷಿಸಿದೆವು. ಈ ಅರಮನೆಯು ಆಗಿನ ಕಾಲದ ವಾಸ್ತುಶಿಲ್ಪ ಹಾಗೂ ವೈಭವದ ಸಂಕೇತವಾಗಿದೆ.ಖಜರಾನಾ ಗಣೇಶ ಮಂದಿರವನ್ನು ರಾಣಿ ಅಹಲ್ಯಾಬಾಯಿ ಹೋಳ್ಕರ್ ರವರು ಕಟ್ಟಿಸಿದ್ದು, ಇದೊಂದು ವಿಶಾಲವಾದ ಮಂದಿರವಾಗಿದ್ದು, ಮಧ್ಯಪ್ರದೇಶದ ಒಂದು ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಗಣೇಶ ಮಂದಿರದ ಜೊತೆ ಮಾ ದುರ್ಗಾ ಹಾಗೂ ಶಿವಮಂದಿರವೂ ಇದೆ. ಈ ಪ್ರಾಂಗಣದಲ್ಲಿ ಇನ್ನೂ ಅನೇಕ ದೇವರ ಚಿಕ್ಕ ಚಿಕ್ಕ ಗುಡಿಗಳಿದ್ದು ಜನರ ಭಕ್ತಿ ಮತ್ತು ಶ್ರದ್ಧೆಯ ಕೇಂದ್ರವಾಗಿದೆ. ಇಲ್ಲಿ ಗಣೇಶನನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಬೇಡಿಕೊಂಡಲ್ಲಿ ಭಕ್ತರ ಮನೋಕಾಮನೆಗಳು ಈಡೇರುವುದೆಂಬ ನಂಬಿಕೆ ಇದ್ದು, ಜನರು ಅತ್ಯಂತ ಭಕ್ತಿಯಿಂದ ಪೂಜೆಸಲ್ಲಿಸುತ್ತಾರೆ.
ಉಜ್ಜಯಿನಿ
13/12/2016ರಂದು ಟ್ಯಾಕ್ಸಿಯೊಂದನ್ನು ಮಾಡಿಕೊಂದು ನಾವು ಉಜ್ಜಯಿನಿಯ ಮಹಾಂಕಾಳೇಶ್ವರ , ಓಂಕಾಳೇಶ್ವರ ಮತ್ತು ಮಹೇಶ್ವರ ಮಂದಿರವನ್ನು ನೋಡಲು ಹೊರಟೆವು ಉಜ್ಜಯಿನಿಯು ಇಂದೋರಿನಿಂದ ಸುಮಾರು 55 ಕಿ.ಮೀ.ದೂರವಿದ್ದು, ನಾವು ಒಂದು ಗಂಟೆ ಸಮಯದಲ್ಲಿ ಅಲ್ಲಿಗೆ ತಲುಪಿದೆವು. ಇಲ್ಲಿ ಕ್ಷೀಪ್ರಾ ನದಿ ಹರಿಯುತ್ತಿದ್ದು ನಾವು ಪವಿತ್ರ ನದಿಯಲ್ಲಿ ಕೈಕಾಲು ತೊಳೆದುಕೊಂಡು ದೇವರ ದರ್ಶನ ಪಡೆಯಲು ಹೋದೆವು. ದೇವಸ್ಥಾನದ ಪ್ರಾಂಗಣವು ತುಂಬಾ ವಿಶಾಲವಾಗಿದ್ದು, ನೆಲಮಾಳಿಗೆಯನ್ನು ಸೇರಿ ಐದು ಅಂತಸ್ತುಗಳನ್ನು ಹೊಂದಿದೆ. ಒಳಗಡೆ ತುಂಬಾ ನಡೆದುಹೋದ ಮೇಲೆ ಮಹಾಂಕಾಳೇಶ್ವರ ದೇವರ ಗರ್ಭಗುಡಿಯ ದರ್ಶನವಾಯಿತು. ನಮ್ಮ ಪುಣ್ಯವೋ ಏನೋ ಆ ದಿನ ನಮಗೆ ದೇವರ ದರ್ಶನ ಮಾಡಲು ಅವಕಾಶವಾಯಿತು. ದೇವರ ಮುಂದೆ ಬೆಳ್ಳಿಯ ದೊಡ್ಡ ನಂದಿಯ ಸುಂದರ ವಿಗ್ರಹವಿದ್ದು ನಂದಿಗೆ ಕೈ ಮುಗಿದು ಮಹಾಂಕಾಳೇಶ್ವರ ದೇವರ ಗರ್ಭಗುಡಿಯೊಳಗೆ ಪ್ರವೇಶಿಸಿ ಭಗವಂತನನ್ನು ಕಣ್ತುಂಬ ನೋಡಿದಾಗ ಜೀವನ ಸಾರ್ಥಕವೆನಿಸಿತು. ದೇವರಿಗೆ ಹೂ , ಬಿಲ್ವಪತ್ರೆ, ಹಾಲಿನ ಅಭಿಶೇಖವನ್ನು ಸಮರ್ಪಣೆ ಮಾಡಿ ಮುಟ್ಟಿ ನಮಸ್ಕರಿಸುವಾಗ ಮೈ ಭಯಭಕ್ತಿಯಿಂದ ಪುಲಕಿತವಾಯಿತು.ಉಜ್ಜಯಿನಿಯ ಮಹಾಂಕಾಳೇಶ್ವರ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ವಿಶಿಷ್ಟವಾಗಿದ್ದು ಸ್ವಯಂಭು ಲಿಂಗವಾಗಿದೆ. ಇಲ್ಲಿ ಶಿವನು ದಕ್ಷಿಣಾಭಿಮುಖವಾಗಿದ್ದು ಪಶ್ಚಿಮಕ್ಕೆ ಗಣಪತಿ ಉತ್ತರಕ್ಕೆ ಪಾರ್ವತೀ ದೇವಿ ಮತ್ತು ಪೂರ್ವಕ್ಕೆ ಕಾರ್ತಿಕೇಯ ದೇವರ ವಿಗ್ರಹಗಳನ್ನು ನೋಡಬಹುದು.ನಮ್ಮ ಪುರಾಣಗಳ ಪ್ರಕಾರ ಅವಂತಿ ಅಂದರೆ ಈಗಿನ ಉಜ್ಜಯಿನಿ ನಗರದಲ್ಲಿ ವಾಸಿಸುತ್ತಿದ್ದ ಶಿವಭಕ್ತರನ್ನು ದೂಷಣ ಎಂಬ ರಾಕ್ಷಸನು ಆಗಾಗ ಪೀಡಿಸುತ್ತಿದ್ದುದನ್ನು ಕಂಡು ಅಲ್ಲಿರುವ ಒಬ್ಬ ಬ್ರಾಹ್ಮಣನ ಮಗ ವೇದಪ್ರಿಯ ಎಂಬ ಶಿವಭಕ್ತನು ಭಕ್ತಿಯಿಂದ ಶಿವನನ್ನು ಮರೆಹೋಗಿ, ರಾಕ್ಷಸನನ್ನು ಸಂಹಾರ ಮಾಡಿ ತಮ್ಮೆಲ್ಲ ಭಕ್ತರನ್ನು ಕಾಪಾಡಬೇಕೆಂದು ಪ್ರಾರ್ಥಿಸಿದಾಗ, ಶಿವನು ಆತನ ಭಕ್ತಿಗೆ ಮೆಚ್ಚಿ ರಾಕ್ಷಸನನ್ನು ಸಂಹಾರ ಮಾಡಿ ನಿನಗೇನು ವರ ಬೇಕೆಂದು ಕೇಳಲಾಗಿ, ವೇದಪ್ರಿಯನು ದೀನರಾದ ಭಕ್ತರನ್ನು ಅಪಮೃತ್ಯುವಿನಿಂದ ರಕ್ಷಿಸಲು ಹಾಗು ಸರ್ವ ಕಾಲದಲ್ಲೂ ಉಜ್ಜಯಿನಿಯಲ್ಲೇ ನೆಲಸಬೇಕೆಂದು ಬೇಡಿಕೊಂಡಾಗ ಶಿವನು ಜ್ಯೋತಿರ್ಲಿಂಗ ರೂಪದಲ್ಲಿ ಅಲ್ಲಿಯೇ ನೆಲೆಸಿರುವನೆಂದು ಹೇಳುತ್ತಾರೆ.
ಈ ಕ್ಷೇತ್ರದಲ್ಲಿರುವ ಹರಸಿದ್ದಿ ಅನ್ನಪೂರ್ಣ ದೇವಸ್ತಾನ , ಕಾಲಭೈರವ ದೇವಸ್ಥಾನ ಚಿಂತಾಮಣಿ ಗಣಪತಿ ದೇವಾಲಯ, ಶ್ರೀಕೃಷ್ಣನ ಗುರುಗಳಾದ ಸಾಂದೀಪಿನಿ ವಿಶ್ವ ವಿದ್ಯಾಲಯ, ಶಕ್ತಿ ಪೀಠವಾದ ಕಾಳಿಮಾತೆಯ ದೇವಸ್ಥಾನ, ರಾಮಘಾಟ್, ಮಂಗಲನಾಥ್ ದೇವಸ್ಥಾನಗಳು ಮುಖ್ಯವಾದುವುಗಳು.ಇಲ್ಲಿ ಕಾಲಭೈರವ ದೇವಸ್ಥಾನದಲ್ಲಿ ಕಾಲಭೈರವಣಿಗೆ ನೈವೇದ್ಯವೆಂದು ಬ್ರಾಂಡಿ ಕುಡಿಸುವ ವಿಶಿಷ್ಟ ಸಂಪ್ರದಾಯವಿದೆ. ಇಲ್ಲಿರುವ ಮಂಗಳನಾಥ ದೇವಸ್ಥಾನವು ಅತ್ಯಂತ ಶಕ್ತಿಯುತ ಧಾರ್ಮಿಕ ಕೇಂದ್ರವಾಗಿದ್ದು, ಮಂಗಳ ಗ್ರಹದ ಜನ್ಮಸ್ಥಾನವಾಗಿದ್ದು ಭಕ್ತರು ತಮ್ಮ ಅಂಗಾರಕ ದೋಷವನ್ನು ಮತ್ತು ಅನೇಕ ಗ್ರಹದೋಷಗಳನ್ನು ನಿವಾರಿಸಿಕೊಳ್ಳಲು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಬಂದು , ಪೂಜೆ ಸಲ್ಲಿಸುತ್ತಾರೆ. ನಾವು ಮಂಗಳನಾಥೇಶ್ವರನ ದರ್ಶನವನ್ನು ಪಡೆದುಕೊಂಡು, ನಮಸ್ಕರಿಸಿ ಬಂದೆವು.
ಉಜ್ಜಯಿನಿಯಲ್ಲಿರುವ ಕಾಳಿಕಾಮಾತೆಯು ಭಕ್ತ ಕಾಳಿದಾಸನಿಗೆ ದರ್ಶನ ನೀಡಿ , ವಿದ್ಯೆಯನ್ನು ಕರುಣಿಸಿ ಉದ್ಧರಿಸಿದ ಉಲ್ಲೇಖ ಇದ್ದು, ಕಾಳಿದಾಸನ ಮೇಘದೂತದಲ್ಲಿ ಉಜ್ಜಯಿನಿಯ ಉಲ್ಲೇಖವಿರುವುದನ್ನು ಸ್ಮರಿಸಬಹುದು.
ಚಿಂತಾಮಣಿ ಗಣಪತಿಯ ದೇವಾಲಯವು ಜನರ ಶ್ರದ್ದಾಭಕ್ತಿಯ ಕೇಂದ್ರವಾಗಿದ್ದು ಪ್ರತಿದಿನ ಅಧಿಕ ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ.
ಓಂಕಾರೇಶ್ವರ
14/12/2016: ಬೆಳಿಗ್ಗೆ ಇನ್ನೊಂದು ಜ್ಯೋತಿರ್ಲಿಂಗವಾದ ಓಂಕಾರೇಶ್ವರನ ದರ್ಶನ ಪಡೆಯಲು ಹೋದೆವು. ಈ ದೇವಾಲಯವು ನರ್ಮದಾ ನದಿಯ ದ್ವಿಪದ ಮಧ್ಯದಲ್ಲಿದ್ದು ಈ ಸ್ಥಳಕ್ಕೆ ಮಾಂದಾತ ಹಾಗು ಶಿವಪುರಿ ಎಂಬ ಹೆಸರಿದೆ. ಇಲ್ಲಿ ಎರಡು ಮುಖ್ಯ ಶಿವ ದೇವಾಲಯವಿದ್ದು ಒಂದು ಓಂಕಾರೇಶ್ವರ ಇನ್ನೊಂದನ್ನು ಅಮಲೇಶ್ವರ ನೆಂದು ಕರೆಯುತ್ತಾರೆ. ರಾಮನ ವಂಶಜನಾದ ಮಾಂದಾತನ ತಪಸ್ಸಿಗೆ ಒಲಿದು ಇಲ್ಲಿ ದರ್ಶನವನ್ನು ನೀಡಿರುವುದಕ್ಕಾಗಿ ಈಸ್ಥಳಕ್ಕೆ ಮಾಂದಾತ ಎಂಬ ಹೆಸರು ಬಂದಿರುವುದಾಗಿ ಪ್ರತೀತಿ.
ಮಹೇಶ್ವರ್: ಈ ಸ್ಥಳವು ಇಂದೋರಿನಿಂದ ಸುಮಾರು ೯೧ ಕಿಲೀಮೀಟರ್ ದೂರದಲ್ಲಿದೆ. ಇದು ನರ್ಮದಾ ನದಿಯ ಉತ್ತರ ದಂಡೆಯಮೇಲಿದೆ ಇದು ಮರಾಠ ಹೊಲ್ಕರ್ ರಾಜರ ರಾಜಧಾನಿಯಾಗಿತ್ತು. ಇದಕ್ಕೆ ಮಾಹಿಸ್ಪತಿ ಎಂಬ ಹೆಸರಿತ್ತು. ಇಲ್ಲಿ ಹೊಲ್ಕರ್ ವಂಶದ ರಾಣಿ ಅಹಲ್ಯಾಬಾಯಿ ಹೊಲ್ಕರ್ ಯವರು ತಮ್ಮ ಪತಿಯ ಮರಣದ ನಂತರ ರಾಜ್ಯಭಾರ ಮಾಡಿದ್ದು ಅವರು ಧಾರ್ಮಿಕ ಮನೋಭಾವದವರಾಗಿದ್ದು ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಿರುವ ಉಲ್ಲೇಖವಿದೆ. ಈ ವಂಶಸ್ಥರು ಶಿವಭಕ್ತರಾಗಿದ್ದು ಶಿವಾಲಯವನ್ನು ಕಟ್ಟಿಸಿ, ಪ್ರತಿದಿನ ನರ್ಮದಾ ನದಿಯಿಂದ ಮರಳನ್ನು ತಂದು 1011ಶಿವಲಿಂಗಗಳನ್ನು ಮಾಡಿ ಪೂಜಿಸುತ್ತಿದ್ದರೆಂದೂ ಇಂದಿಗೂ ಪ್ರತಿದಿನ ನರ್ಮದಾ ನದಿಯಿಂದ ಮರಳನ್ನು ತಂದು 11 ಶಿವಲಿಂಗಗಳನ್ನು ಮಾಡಿ ಪೂಜಿಸುವ ಪದ್ಧತಿ ಇದೆಯೆಂದು ಆ ದೇವಸ್ಥಾನದ ಪೂಜಾರಿಯವರು ತಿಳಿಸಿದರು. ಹೊಲ್ಕರ್ ರಾಜರ ಅರಮನೆ, ಕೋಟೆ ಹಾಗು ಅವರು ಕಟ್ಟಿಸಿರುವ ಶಿವ ದೇವಾಲಯವನ್ನು ನೋಡಬಹುದು. ನಾವು ಅಲ್ಲಿ ಇವುಗಳನ್ನೆಲ್ಲ ನೋಡಿ, ಸ್ವಲ್ಪ ಹೊತ್ತು ಅಲ್ಲಿ ವಿಹರಿಸಿ, ಶಿವನ ದ ರ್ಶನ ಪಡೆದು ಬಂದೆವು.
ಖಜುರಾಹು :
ಚಾಂಡೇಲಾ ರಾಜ ವಂಶದವರು ಇಲ್ಲಿ ಆಳ್ವಿಕೆ ನಡೆಸಿದ್ದು ಅವರ ಕುಲದೇವರಾದ ಶಿವನಿಗೆ ಅನೇಕ ದೇವಾಲಯಗಳನ್ನು ಕಟ್ಟಿಸಿರುತ್ತಾರೆ. ಇಂದಿಗೂ ಈ ದೇವಾಲಯಗಳಲ್ಲಿ ಪೂಜಾಕಾರ್ಯಗಳು ನಡೆಯುತ್ತವೆ. ಈ ವಂಶದ ಪ್ರತಿ ರಾಜರು ಅವರ ಆಳ್ವಿಕೆಯಲ್ಲಿ ಒಂದೊಂದು ದೇವಾಲಯವನ್ನು ಕಟ್ಟಿಸಿದ್ದು ಈಗಲೂ ಇಲ್ಲಿ ಅನೇಕ ಸುಂದರ ದೇವಾಲಯಗಳನ್ನು ನೋಡಬಹುದು.
ಖಂಡಾರಿಯ ದೇವಸ್ಥಾನ
ಖಂಡಾರಿಯ ಇಲ್ಲಿಯ ಅತಿದೊಡ್ಡ ಹಾಗು ಎತ್ತರದ ಮತ್ತು ಸುಂದರವಾದ ಹಿಂದೂ ದೇವಾಲಯವಾಗಿದ್ದು ೧೧ನೇ ಶತಮಾನದಲ್ಲಿ ಪ್ರಸಿದ್ಧ ರಾಜ ದಂಡದೇವನು ಇದನ್ನು ಕಟ್ಟಿಸಿ , ಪ್ರತಿಷ್ಠಾಪಿಸಿದ ಶಿವಲಿಂಗವು ಸುಂದರವಾಗಿದೆ.
ಚಾಂಡೇಲಾ ರಾಜರುಗಳು ಧರ್ಮ ಸಹಿಸ್ಣುಗಳಾಗಿದ್ದು ಇಲ್ಲಿ ಬ್ರಹ್ಮ, ವಿಷ್ಣು ಮಹೇಶ್ವರರ ದೇವಾಲಯಗಳನ್ನು ಹಾಗು ಜೈನ ಮಂದಿರಗಳನ್ನು ನೋಡಬಹುದು. ಇಲ್ಲಿ ಕಾಮಸೂತ್ರಕ್ಕೆ ಸಂಬಂಧಪಟ್ಟ ಕೆತ್ತನೆಗಳೂ ಇವೆ. ಒಂದೇ ಪ್ರಾಂಗಣದಲ್ಲಿ ಅನೇಕ ಸುಂದರವಾದ ದೇವಾಲಯಗಳಿದ್ದು , ಅವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದ್ದು ಮನಸ್ಸಿಗೆ ಮುದ ನೀಡುತ್ತವೆ
ಕೆಲವು ದೇವಸ್ಥಾನಗಲ್ಲಿ ಮಹಿಳೆಯರ ವಿವಿಧ ಭಂಗಿಗಳಿದ್ದು ದರ್ಪಣ ಸುಂದರಿ, ಮಹಿಳೆ ಪತ್ರ ಬರೆಯುತ್ತಿರುವ ಭಂಗಿ , ಕೊಳಲು ಹಾಗು ವೀಣೆ ನುಡಿಸುತ್ತಿರುವ ಮಹಿಳೆಯರು, ವಿವಿಧ ಆಭರಣಗಳನ್ನು , ಬಳೆಗಳನ್ನು ಕಾಲ್ಗೆಜ್ಜೆಗಳನ್ನು ಧರಿಸಿರುವ ಮಹಿಳೆಯರ ಶಿಲ್ಪಗಳಿದ್ದು, ಆಗಿನ ಕಾಲದಲ್ಲಿ ಮಹಿಳೆಯರ ಜೀವನ ಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತವೆ. ಇವುಗಳಲ್ಲದೆ ಆಗಿನ ಕಾಲದ ಸಾಮಾಜಿಕ ಜೀವನಕ್ಕೆ ಸಂಬಂದಿಸಿದ ಜೀವನ ಶೈಲಿಯ ಕೆತ್ತನೆಗಳು, ಯುದ್ಧಕ್ಕೆ ಸಂಬಂಧ ಪಟ್ಟ, ಹಬ್ಬಗಳಿಗೆ, ಉತ್ಸವಗಳಿಗೆ ಸಂಬಂಧಿಸಿದಂತೆ ಅನೇಕ ರೀತಿಯ ಕೆತ್ತನೆಗಳನ್ನು ನೋಡಿದರೆ ಅವರ ಶಿಲ್ಪ ಕಲಾಕೃತಿಯ ಹಿರಿಮೆಯನ್ನು ನಾವು ಅರಿಯಬಹುದು.
ಪೂರ್ಣವಾಗಿ ಈ ದೇವಾಲಯಗಳನ್ನು ಅವಲೋಕಿಸಿದಾಗ ಬ್ರಹ್ಮ, ವಿಷ್ಣುವಿನ ದಶಾವತಾರದ ಕೆತ್ತನೆಗಳು , ಶಿವನಿಗೆ ಸಂಬಂಧಿಸಿದಂತೆ ವಿಶ್ವನಾಥ, ಖಂಡಾರಿಯ ಮಹಾದೇವ, ಮಾತಂಗೇಶ್ವರ, ವಿಷ್ಣುವಿಗೆ ಸಂಬಂಧಿಸಿದಂತೆ ವಾಮನ, ಚತುರ್ಭುಜ , ವರಾಹ, ಸೂರ್ಯನಾರಾಯಣ ಮುಂತಾದ ದೇವಾಲಯಗಳು, ಲಕ್ಸ್ಮಿ, ಪಾರ್ವತಿ , ಕಾಳಿಕಾಮಾತೆ ದೇವಿಯರ ದೇವಾಲಯಗಳು, ಜೈನ ಧರ್ಮಕ್ಕೆ ಸಂಬಂಧಿಸಿದಂತೆ ಆದಿನಾಥ, ಪಾರ್ಶ್ವನಾಥ, ಶಾಂತಿನಾಥ ದೇವಾಲಯಗಳನ್ನು ಅತ್ಯಂತ ಸುಂದರವಾಗಿ ಕಟ್ಟಿರುತ್ತಾರೆ. ಹೆಚ್ಚಿನ ದೇವಾಲಯಗಳಲ್ಲಿ ನಾಲ್ಕೈದು ಶಿಖರಗಲಿದ್ದು ಅತ್ಯಂತ ಸುಂದರ ವಿನ್ಯಾಸಗಳನ್ನು ಹೊಂದಿವೆ. ಇವುಗಳನ್ನೆಲ್ಲ ವೀಕ್ಷಿಸಿದಾಗ ಆಗಿನ ರಾಜರ ದೈವ ಭಕ್ತಿ ಹಾಗು ಧರ್ಮ ಸಹಿಸ್ಣತೆಯನ್ನು ತಿಳಿಯಬಹುದಾಗಿದೆ
ರಾಣೇ ಫಾಲ್ಸ್
ಖಜಾರಾಹುನಿಂದ ಸಮೀಪದಲ್ಲಿ ರಾಣೇ ಫಾಲ್ಸ್ ಸುಂದರವಾದ ಪ್ರದೇಶ. ನಾವು ಭೇಟಿ ನೀಡಿದ
ಸಮಯದಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಅಲ್ಲಿನ ಗ್ರಾನೈಟ್ ಕಲ್ಲುಗಳ ವಿವಿಧ
ವಿನ್ಯಾಸಗಳನ್ನು ನೋಡಿದೆವು. ಕೆಂಪು ಹಳದಿ, ನೀಲಿ ಭೂದುಬಣ್ಣ ಹೀಗೆ ನಾನಾ
ಬಣ್ಣಗಳಿಂದ ಮನಮೋಹಕವಾಗಿ ಕಂಡವು. ಹಾಗೆಯೆ ಅಲ್ಲಿಯ ರಾಷ್ಟ್ರೀಯ ಉದ್ಯಾನವನ್ನು
ವೀಕ್ಷಿಸಿ, ಅಲ್ಲಿ ನರಿ, ಕಡವೆ, ಮುಂತಾದ ಪ್ರಾಣಿಗಳನ್ನು ನೋಡಿ ಹಿಂದಿರುಗಿದೆವು.
ರಾಣೇಫಾಲ್ಸ್ ವಿವಿಧ ಬಣ್ಣದ ಗ್ರಾನೈಟ್ ಶಿಲೆಗಳು
ಇಂದೋರಿಗೆ ಹಿಂದಿರುಗುವ ಮಾರ್ಗದಲ್ಲಿ ಸಾಂಚಿ ಸ್ತೂಪಗಳನ್ನು ವೀಕ್ಷಿಸಿದೆವು. ಇಲ್ಲಿ ಬೆಟ್ಟದ ಮೇಲೆ ಅನೇಕ ಭೌದ್ದ ಸ್ತೂಪಗಳಿವೆ. ಈ ಸ್ಥಳವು ಇಂದೋರಿನಿಂದ ೪೬ ಕಿಲೋ ಮೀಟರ್ ದೂರದಲ್ಲಿದೆ. ಈ ಸ್ತೂಪಗಳು ಅತ್ಯಂತ ಪುರಾತನ ಕಲ್ಲಿನ ಹಾಗು ಇಟ್ಟಿಗೆಯ ಕಟ್ಟಡವಾಗಿದ್ದು, ಮೂರನೇ ಶತಮಾನದಲ್ಲಿ ಅಶೋಕ ಚಕ್ರವರ್ತಿಯಿಂದ ಕಟ್ಟಿಸಲ್ಪಟ್ಟಿವೆ ಎಂದು ಇತಿಹಾಸದಲ್ಲಿ ಹೇಳಲ್ಪಟ್ಟಿದೆ. ಈಗ ಇಲ್ಲಿ ಅನೇಕ ಸ್ತೂಪಗಳಿದ್ದು ಅವುಗಳನ್ನು ಸುಮಾರು 1912 - 1919ರ ಮದ್ಯದಲ್ಲಿ ಜೀರ್ಣೋದ್ದಾರ ಮಾಡಲಾಗಿದೆ ಎಂಬ ಉಲ್ಲೇಖವಿದೆ ಈ ಸ್ತೂಪಗಳಲ್ಲಿ ಬುದ್ಧದೇವನ ದೇಹದ ಅವಶೇಷಗಳನ್ನು ಇಟ್ಟು ಕಟ್ಟಲಾಗಿದೆ ಎಂಬ ಉಲ್ಲೇಖವಿದೆ. ಇಲ್ಲಿಯ ಸಾಂಚಿ ಮಹಾ ಸ್ತೂಪವನ್ನು ಅತ್ಯಂತ ಸುಂದರವಾಗಿ ನಿರ್ಮಿಸಿದ್ದು, ಇದರಲ್ಲಿ ಸ್ಟೇರ್ಕೇಸುಗಳನ್ನು, ರೇಲಿಂಗುಗಳನ್ನು ನೋಡಬಹುದಾಗಿದೆ ಈ ಮಹಾ ಸ್ತೂಪದ ಹೊರಗಡೆ ಮಹಾದ್ವಾರಗಳನ್ನು ಸುಂದರವಾದ ವಿನ್ಯಾಸಗಳಲ್ಲಿ ನಿರ್ಮಿಸಲಾಗಿದೆ
ಭೋಪಾಲ
ಮಾರ್ಗ ಮದ್ಯದಲ್ಲಿ ರಾಜಧಾನಿ ಭೋಪಾಲನ್ನುವೀಕ್ಷಿಸಿದೆವು. ಇಲ್ಲಿ ಅನೇಕ ಸುಂದರ ಲೇಕ್ ಗಳನ್ನು ನೋಡಬಹುದು. ಅವುಗಳಲ್ಲಿ ಭೋಜಪಾಲ್ ಲೇಕ್ ಅತ್ಯಂತ ದೊಡ್ಡದು. ಅಲ್ಲಿರುವ ಬುಡಕಟ್ಟಿನ ಜನರ ಮ್ಯೂಸಿಯಂ ಅತ್ಯಂತ ಸುಂದರ ಮ್ಯೂಸಿಯಂ ಇಲ್ಲಿ ಬುಡಕಟ್ಟಿನ ಜನರ ಜೀವನ ಶೈಲಿ,ಬುಡಕಟ್ಟು ಜನರ ಉಡುಪುಗಳು, ಅವರ ಕೈಗಾರಿಕೆಗಳು, ಅವರ ಸಂಸ್ಕೃತಿಯ ಅನೇಕ ಪ್ರತಿ ಕೃತಿಗಳನ್ನು ಸುಂದರವಾಗಿ ನಿರ್ಮಿಸಿರುತ್ತಾರೆ. ಭೋಪಾಲಿನಲ್ಲಿ, ರಾಷ್ಟ್ರೀಯ ವನವಿಹಾರ್ ಪಾರ್ಕ್, ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯಗಳನ್ನೂ ನೋಡಬಹುದು. ಸಮಯದ ಅಭಾವದಿಂದ ನಮಗೆ ಇವುಗಳನ್ನು ಸಂಪೂರ್ಣವಾಗಿ ನೋಡಲಾಗಿಲ್ಲ.
ಭೂಪಾಲ್ ಮ್ಯೂಸಿಯಂ
ಹೀಗೆ ಕೆಲವು ಮುಖ್ಯ ಪ್ರೇಕ್ಷಣೀಯ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಬೆಂಗಳೂರಿಗೆ ಮರುಪ್ರಯಾಣ ಕೈಗೊಂಡೆವು.
Comments
Post a Comment