My Trip to Europe (11-July-2023 to 22-July-2023)
ದಿನಾಂಕ 12.7.23: ಬರ್ಲಿನ್ ನಿಂದ ನನ್ನ ಮಗ ಹರ್ಷ, ಸೊಸೆ ಅನುರಾಧ ಹಾಗೂ ಮೊಮ್ಮಗ ಸಾತ್ವಿಕ್ ಪುಟ್ಟುವಿನಿಂದ ಬೀಳ್ಕೊಟ್ಟ ನಾನು ಮತ್ತು ಮಗಳು ಅಶ್ವಿನಿ ಸಾಯಂಕಾಲ ಏಳು ಗಂಟೆಯ ಫ್ಲಿಕ್ಸ್ ಬಸ್ಸಿನಲ್ಲಿ ಪಯಣಿಸಿ ಬೆಳಿಗ್ಗೆ ಎಂಟು ಗಂಟೆಗೆ ಪ್ಯಾರಿಸ್ ತಲುಪಿ, ಅಲ್ಲಿಂದ Zenitude Hotel and SPA CDG ಗೆ ಬಂದೆವು.
ಬರ್ಲಿನ್ ನಿಂದ ಪ್ಯಾರಿಸ್ ನ ಪಯಣ ತುಂಬಾ ಅಹ್ಲಾದಕರವಾಗಿತ್ತು. ಸುವ್ಯವಸ್ಥಿತವಾದ ಬಸ್ಸು ಸುಂದರ ಮಾರ್ಗದಲ್ಲಿ ಪಯಣಿಸಿದ್ದೆ ಒಂದು ಸುಮಧುರ ಅನುಭವ. ಹನ್ನೆರಡು ತಾಸಿನ ಪ್ರಯಾಣ ಸ್ವಲ್ಪವೂ ದಣಿವೆನಿಸಲಿಲ್ಲ . ಮಾರ್ಗ ಮಧ್ಯದಲ್ಲಿ ರಸ್ತೆಯ ಎರಡೂ ಕಡೆ ಹಸಿರು ಸಿರಿಯು ನಮ್ಮೂರು ಮಲೆನಾಡಿನ ಸೊಬಗನ್ನು ನೆನಪಿಸುತ್ತಿತ್ತು. ಅಲ್ಲಲ್ಲಿ Windmill ಗಳು ತಮ್ಮ ಇರುವನ್ನು ದೂರದಿಂದಲೇ ತೋರಿಸುತ್ತಿದ್ದವು. ರಾತ್ರಿ ಒಂಬತ್ತಾದರೂ ಬಿಸಿಲು ಜೋರಾಗಿಯೇ ಇತ್ತು. ನಮ್ಮೂರಿನ ಅಡಿಕೆ ಮರಗಳ ತೋಟದಂತೆ ಕಾಣುವ ಹಸಿರು ಮರಗಳ ಮಧ್ಯದಲ್ಲಿ ಆಗಾಗ ಕೋಲ್ಮಿಂಚಿನಂತೆ ಝಳಪಿಸುವ, ಕೆಲವೊಮ್ಮೆ ಕೆಂಪು ಚೆಂಡಿನಂತೆ ಕಂಗೊಳಿಸುವ ಸೂರ್ಯದೇವ ವನಸಿರಿಗೆ ರಂಗನ್ನು ನೀಡುತ್ತಲೇ ಇರುವುದನ್ನು ನೋಡುವುದೇ ಒಂದು ರೋಚಕ ಅನುಭವ. ಮಾರ್ಗ ಮಧ್ಯದಲ್ಲಿ ಸಿಗುವ ನದಿಗಳು, ಅವುಗಳ ಆಚೆಈಚೆ ಹಸಿರಿನಿಂದ ಕಂಗೊಳಿಸುವ ಪೈರು ನಮ್ಮೂರಿನ ಗದ್ದೆಯನ್ನು ನೆನಪಿಸುತ್ತಿತ್ತು.
ದಿನಾಂಕ 13.7.23: " ದೇಶ ಸುತ್ತು ಕೋಶ ಓದು" ಎಂಬ ನಾಣ್ನುಡಿ ಯಂತೆ, ಯುರೋಪಿಯನ್ ಸ್ಪ್ಲೆಂಡರ್ ಟೂರಿನ ಸವಿಯನ್ನು ಸವಿಯಲು ನಾವು ಭಾರತದ ಬೇರೆ ಬೇರೆ ರಾಜ್ಯಗಳಿಂದ ದಿನಾಂಕ 13.07.2023 ರಂದು ಪ್ಶಾರೀಸಿಗೆ ಬಂದು ಹೊಟೆಲ್ ಝನಿಟೂಡ್ CDG ಗೆ ಬಂದು ತಂಗಿದೆವು. ಅಲ್ಲಿ ಸಾಯಂಕಾಲ ಇಂಡಿಯನ್ ರೆಸ್ಟೋರೆಂಟ್ ನಲ್ಲಿ ಊಟ ಮಾಡಿ, ಬೆಂಗಳೂರು ಮತ್ತು ಮೈಸೂರಿನಿಂದ ಬಂದ ಸಹಪ್ರಯಾಣಿಕ ಸ್ನೇಹಿತರೊಂದಿಗೆ ಹೊಟೆಲ್ ಪಕ್ಕದಲ್ಲೇ ಇರುವ ಪಾರ್ಕನಲ್ಲಿ ಸುತ್ತಾಡಿ, 9.30ಕ್ಕೆ ಹೊಟೆಲ್ ಗೆ ಬಂದು ನಿದ್ದೆಗೆ ಶರಣು ಹೋದೆವು. ಸುಂದರ ಉದ್ಯಾನವನ, ಒಂದು ಚರ್ಚ್, ಒಂದೆರಡು ದಿನಸಿ ಅಂಗಡಿಗಳು, ಹೀಗೆ ಅವಶ್ಯಕ ಸೌಕರ್ಯಗಳು ಇರುವ ಪ್ಯಾರಿಸ್ ನ ಪುಟ್ಟ ಗ್ರಾಮವನ್ನು ನೋಡಿದಾಗ ನಮ್ಮ ದೇಶದ ಪುಟ್ಟ ಗ್ರಾಮಗಳು ನೆನಪಿಗೆ ಬಂದವು.
ದಿನಾಂಕ 14.7.23: ಜೂಲೈ 14 ಫ್ರಾನ್ಸಿನ Bastille day ದಿನವಾದ್ದರಿಂದ ಅಲ್ಲಿಯ ನಾಗರೀಕರಿಗೆ ಸಂಭ್ರಮದ ದಿನ. ನಾವು ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುವ ಹಾಗೆ ಇದನ್ನು ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸುತ್ತಾರೆ. ಇದು ಅವರಿಗೆ ರಾಷ್ಟ್ರೀಯ ರಜಾ ದಿನ.
ಅಂದು ಬೆಳಗಿನ ಉಪಹಾರ ಮುಗಿಸಿ 9ಗಂಟೆಗೆ ಡಿಸ್ನಿಲ್ಯಾಂಡ್ ಸೊಬಗನ್ನು ನೋಡಲು ಹೊರಟೆವು. 9.45ಕ್ಕೆ ಡಿಸ್ನಿ ಲ್ಯಾಂಡ್ ತಲುಪಿದೆವು. Mr .ವಾಲ್ಟ್ ಡಿಸ್ನೆ ಈ ಒಂದು ಮನೋರಂಜನಾ ಪಾರ್ಕ್ ನಿರ್ಮಾಣಕ್ಕೆ ಮುಖ್ಯ ಕಾರಣವಾಗಿರುವುದರಿಂದ ಇದನ್ನು ಅವನ ಹೆಸರಿನಿಂದಲೇ ಕರೆಯಲಾಗುತ್ತಿದೆ. ನಮಗೆಲ್ಲರಿಗೂ ತಿಳಿದ ಹಾಗೆ ಇದೊಂದು ಸುಂದರ ಬಣ್ಣದ ಲೋಕ. ಮಕ್ಕಳು ಕುಣಿದು ಕುಪ್ಪಳಿಸಿ ಆನಂದಿಸುವ ತಾಣ. ತಮಾಷೆ ಎಂದರೆ ನಮ್ಮ ಗ್ರೂಪಿನಲ್ಲಿ ಮಕ್ಕಳ ಬದಲಾಗಿ ಮಕ್ಕಳ ತಾಯಂದಿರು ಅಜ್ಜ- ಅಜ್ಜಿ ಯರೇ ಇದ್ದೆವು.
ಇಲ್ಲಿ ನಮಗೆ ಒಂದು ದಿನದ ಸಮಯಾವಕಾಶವಷ್ಟೇ ಇದ್ದಿದ್ದರಿಂದ ನಾವು ಡಿಸ್ನಿ ಸ್ಟುಡಿಯೊ ಮತ್ತು ಡಿಸ್ನಿ ಪಾರ್ಕ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದ್ದರಿಂದ ನಾವು ಹೆಚ್ಚಿನವರು ಹಿರಿಯ ನಾಗರೀಕರಿರುವುದರಿಂದ ಡಿಸ್ನಿ ಪಾರ್ಕನ್ನು ನೋಡಲು ಆಯ್ಕೆ ಮಾಡಿಕೊಂಡೆವು. ಕಣ್ಮನ ಸೆಳೆಯುವ ರಂಗು ರಂಗಿನ ಹೂವುಗಳಿಂದ ತುಂಬಿರುವ ಆ ಪಾರ್ಕನ್ನು ನೋಡುವುದೇ ಒಂದು ಸುಂದರ ಅನುಭವ. ಅಲ್ಲಿ ನಾವೆಲ್ಲರೂ ಮನಸ್ಸಿಗೆ ತೃಪ್ತಿ ಆಗುವ ವರೆಗೂ ಫೋಟೋಗಳನ್ನು ತೆಗೆದುಕೊಂಡೆವು. ಇನ್ನು ನಮಗೆಲ್ಲರಿಗೂ ತಿಳಿದ ಹಾಗೆ ನಮ್ಮೂರ ಜಾತ್ರೆಯಲ್ಲಿರುವಂತೆ ತರಾವರಿ ಆಟಗಳು, rides ಗಳಿದ್ದವು. ನಾವು ಕೆಲವು ರೈಡ್ಸ್ಗಳನ್ನು ಆಡುವ ದುಸ್ಸಾಹಸಕ್ಕೆ ಹೋಗದೇ, ನಮಗೆ ಸರಿಹೊಂದುವ ಕೆಲವನ್ನು ಆರಿಸಿಕೊಂಡೆವು.
"It's a small world" ಎನ್ನುವ ಈವೆಂಟ್ ಚಿಕ್ಕ ಬೋಟಿನಲ್ಲಿ ಸುತ್ತುತ್ತಾ ವೀಕ್ಷಿಸುವ ಒಂದು ಎನಿಮೇಶನ್ನಿನ ಈವೆಂಟ್. ಇದು ನಮ್ಮನ್ನು ಪ್ರಪಂಚದ ಬೇರೆ ಬೇರೆ ಬಣ್ಣದ ಲೋಕಕ್ಕೆ ಕರೆದುಕೊಂಡು ಹೋಗಿತ್ತು. ಆಯಾದೇಶದ ವೇಷ ಭೂಷಣಗಳೊಂದಿಗೆ ಬಣ್ಣ ಬಣ್ಣದ ಲೈಟ್ ಗಳಲ್ಲಿ ಎನಿಮೇಷನ್ನಿನ ಪುಟಾಣಿ ಮಕ್ಕಳ ಹಾಡು-ಕುಣಿತಗಳನ್ನು ನೋಡುವಾಗ ಅನುಭವಿಸುವ ಆನಂದ ಅವರ್ಣನೀಯ.
ನಂತರ ಅಲ್ಲಿ ಕ್ರೂಸಿನಲ್ಲಿ ಒಂದು ರೌಂಡ್ ಹೋಗಿ ಡಿಸ್ನಿ ಲ್ಯಾಂಡ್ ನ ಸೊಬಗಿನ ಇಣುಕು ನೋಟವನ್ನು ನೋಡಿ ಆನಂದಿಸಿದೆವು.
ಇಲ್ಲಿ ಮಾನವ ನಿರ್ಮಿತ ಕೇವ್, ಕಟ್ಟಿಗೆಯಿಂದ ನಿರ್ಮಿಸಿದ ಹಳೆಯ ಕಟ್ಟಡ , ಸುಂದರವಾದ ಕೋಟೆಗಳನ್ನು , ಬೇರೆ ಬೇರೆ ರೀತಿಯ ಬಣ್ಣದ ಕಟ್ಟಡಗಳನ್ನು ನೋಡಿದೆವು.
ಇಲ್ಲಿರುವ ರೈಲ್ ರೈಡಿನಲ್ಲಿ ನಾವು ಒಂದು ರೌಂಡ್ ಹೋಗಿ ಅಲ್ಲಿರುವ ಪರಿಸರವನ್ನು ಆನಂದಿಸಿದೆವು. Thunder rail , ಝೆಯಿಂಟ್ ವೀಲ್, ಮೆರಿ ಗೋರೌಂಡ್, ಕುದುರೆ, ಎಲಿಫೆಂಟ್ ರೈಡ್ ಮುಂತಾದ ಮಕ್ಕಳು ಖುಷಿಪಡುವಂತಹ ಅನೇಕ ಆಟಗಳನ್ನು ನಾವು ನಮ್ಮ ದೇಶದ ವಂಡರ್ ಲ್ಯಾಂಡ್ ನಲ್ಲಿ ನೋಡುವಂತೆ ಎಲ್ಲಾ ವಂಡರ್ ಗಳನ್ನು ಇಲ್ಲಿ ನೋಡಬಹುದು.
ಆ ದಿನದ ವಿಶೇಷಾರ್ಥವಾಗಿ ಡಿಸ್ನೆ ಲ್ಯಾಂಡ್ ನಲ್ಲಿ ಏರ್ಪಡಿಸಲಾಗಿದ್ದ ಬಣ್ಣದ ವೇಷಭೂಷಣದ ವಿವಿಧ ರೀತಿಯ ಕುಣಿತಗಳಿರುವ ಪೆರೇಡನ್ನು ವೀಕ್ಷಿಸಿ ಆನಂದಿಸಿದೆವು.
ರಾತ್ರಿ ಫೈರ್ ವರ್ಕ್ಸ್ 11 ಗಂಟೆಗೆ ಇದ್ದಿದ್ದರಿಂದ ನಾವು ವಾಪಾಸ್ ಹೋಟೆಲ್ ಗೆ ಬಂದು ವಿರಮಿಸಿದೆವು.
ದಿನಾಂಕ 15.7.23: ರಂದು ಬೆಳಿಗ್ಗೆ ಒಂಬತ್ತಕ್ಕೆ ಹೊರಟ ನಾವು ಮೊದಲು ಪ್ಯಾರೀಸ್ ಸಿಟಿಯ ಕೆಲವು ಮುಖ್ಯವಾದ ಸ್ಥಳಗಳನ್ನು ವೀಕ್ಷಿಸಿದೆವು. ನಮ್ಮ ಟೂರ್ ಗೈಡ್ ಇಲ್ಲಿಯ ಇತಿಹಾಸವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ತನ್ನದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಿ ಅದನ್ನು ವಿಸ್ತರಿಸಬೇಕೆಂಬ ಮಹತ್ವಾಕಾಂಕ್ಷಿಯಾಗಿದ್ದ ನೆಪೋಲಿಯನ್ ಬೋನಾಪಾರ್ಟೆಯ ಬಗ್ಗೆ, ಮೊದಲನೆ ಮತ್ತು ಎರಡನೇ ಮಹಾಯುದ್ಧದ ಬಗ್ಗೆ ನಮ್ಮ ಗೈಡ್ ವಿವರಿಸುತ್ತಾ, ಒಂದು ಬೃಹದಾಕಾರದ ಆರ್ಚಿನ ಹತ್ತರ ನಿಲ್ಲಿಸಿ, ಅದರ ವೈಶಿಷ್ಟ್ಯವನ್ನು ವಿವರಿಸಿದನು. ನೆಪೋಲಿಯನ್ ತನ್ನ ಸೈನ್ಯದ ವಿಜಯದ ಕುರುಹಾಗಿ ಎತ್ತರವಾದ ಆರ್ಚನ್ನು ನಿರ್ಮಿಸುವ ಆಶಾವಾದಿಯಾಗಿದ್ದು ಅದರ ನಿರ್ಮಾಣವನ್ನು ಪ್ರಾರಂಭಿಸಿ, ಅದು ಪೂರ್ಣವಾಗುವ ಮೊದಲೇ ಅವನು ಇಹಲೋಕವನ್ನು ತ್ಯಜಿಸಿದ್ದರಿಂದ ಅವನ ಕಳೇಬರವನ್ನು ಇಲ್ಲಿಗೆ ತಂದಿರಿಸಿ, ಆಮೇಲೆ ಸಮಾಧಿಗೊಳಿಸಲಾಯಿತೆಂಬ ವಿಚಾರವನ್ನು ನಮ್ಮ ಗೈಡ್ ತಿಳಿಸಿದರು.
ನಂತರ ಪ್ರೆಂಚ್ ರೆವಲೂಷನ್ ನಡೆದ ಮೈದಾನಕ್ಕೆ ಅಂದರೆ ಈಗ ಫ್ರಾನ್ಸಿನ ದೊಡ್ಡ ದೊಡ್ಡ ಸಭೆಗಳು ನಡೆಯುವ ಸಾರ್ವಜನಿಕ ಮೈದಾನಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ, ಇಲ್ಲಿ ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ನಡೆದ ಘಟನೆಗಳನ್ನು ಹೇಳುತ್ತಾ, ಅಲ್ಲಿ ನಡೆದ ರಕ್ತಪಾತದ ಬಗ್ಗೆ ವಿವರಿಸಿದರು. ಅಲ್ಲೇ ಹಿಂದಿನ ದಿನ ನಮ್ಮ ನೆಚ್ಚಿನ ಪ್ರಧಾನಿ ಮೋದೀಜಿಯವರು ಬಂದಾಗ ನಿರ್ಮಿಸಿದ ಬೃಹತ್ ಸಭಾಂಗಣವನ್ನು ತೋರಿಸಿದಾಗ , ಮೋದೀಜಿಯವರು ವಿದೇಶಗಳಲ್ಲಿಯೂ ಮಾಡಿದ ಮೋಡಿ, ನಮ್ಮ ದೇಶದ ಹೆಸರು ವಿದೇಶಗಳಲ್ಲಿಯೂ ಮಿನುಗುವಂತೆ ಮಾಡಿದ ಅವರ ಬಗ್ಗೆ ಹಾಗೂ ನಮ್ಮ ದೇಶದ ಬಗ್ಗೆ ಹೆಮ್ಮೆ ಎನಿಸಿತು. ಅಲ್ಲಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಮುಂದೆ ಪ್ರಸಿದ್ಧ ಲೂವ್ರೆ ಮ್ಯೂಸಿಯಂ ನೋಡಲು ಹೊರಟೆವು.
ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ನಿರ್ಮಿಸಿದ ಸಾರ್ವಜನಿಕ ಕಟ್ಟಡಗಳು, ನಿವಾಸಗಳನ್ನು ನೋಡುವಾಗ ಅಲ್ಲಿಯ ನಗರ ನಿರ್ಮಾಣದ ಸೊಬಗು ಹಾಗೂ ಶಿಸ್ತನ್ನು ನೋಡಿ ಸಂತೋಷವಾಯಿತು. ಸ್ವಚ್ಛ ವಾದ ರಸ್ತೆಗಳಲ್ಲಿ, ಆ ಏರಿಯಾಗಳ ಹೆಸರು, ರಸ್ತೆಯ ಬಗ್ಗೆ , ಹೀಗೆ ಎಲ್ಲಾ ಮಾಹಿತಿಗಳ ಫಲಕ ಇವುಗಳನ್ನು ನೋಡುವಾಗ ಇವರು ನಗರ ನಿರ್ಮಾಣ ಹಾಗೂ ಅದರ ನಿರ್ವಹಣೆಯ ಬಗ್ಗೆ ಕೊಡುವ ಮಹತ್ವವನ್ನು ಅರಿತುಕೊಳ್ಳಬಹುದು. ರಸ್ತೆಗಳು ಚಿಕ್ಕದಾಗಿದ್ದರೂ, ಅಲ್ಲಿ ವಾಹನಗಳನ್ನು ನಿಲ್ಲಿಸುವ ರೀತಿಯನ್ನು ನಾವು ನೋಡಿ ಕಲಿಯಬೇಕು. ಎಲ್ಲಿಯೂ ನಿಲ್ಲಿಸಿದ ವಾಹನಗಳನ್ನು ತೆಗೆಯಲು ಸ್ವಲ್ಪವೂ ತೊಂದರೆಯಾಗದಂತೆ ಅಚ್ಚು ಕಟ್ಟಾಗಿ ನಿಯಮಗಳನ್ನು ಪಾಲನೆ ಮಾಡುತ್ತಾರೆ.
ಸಂಚಾರ ನಿಯಮಗಳ ಉಲ್ಲಂಘನೆಗೆ ಇಲ್ಲಿ ತುಂಬಾ ದಂಡ ಕಟ್ಟಬೇಕಾಗಿರುವುದರಿಂದ ಎಲ್ಲರೂ ನಿಯಮವನ್ನು ಸರಿಯಾಗಿ ಪಾಲಿಸುತ್ತಾರೆ. ಜೀಬ್ರಾ ಕ್ರಾಸಿನಲ್ಲಿ ಪಾದಾಚಾರಿಗಳಿಗ ಹೆಚ್ಚಿನ ಮಹತ್ವ ಕೊಡುತ್ತಾರೆ. ಇಲ್ಲಿ ಎಲ್ಲಿಯೂ ರಸ್ತೆ ವ್ಯಾಪಾರವನ್ನು ಮಾಡುವ ಅವಕಾಶವಿಲ್ಲದ್ದರಿಂದ ಪರಿಸರವನ್ನು ಅಶುಚಿಗೊಳಿಸುವ ಪರಿಸ್ಥಿತಿ ನಿರ್ಮಾಣವಾಗುವುದೇ ಇಲ್ಲ.
ಪ್ರಸಿದ್ಧ ಲೂವ್ರೆ ಮ್ಯೂಸಿಯಂ ಹತ್ತಿರ ಬರುವಾಗ ದಾರಿಯಲ್ಲಿ ಅಲ್ಲಿಯ ಪ್ರಸಿದ್ಧ ಶ್ರೀಮಂತ ಹೋಟೆಲ್ ಗಳನ್ನು ತೋರಿಸುತ್ತಾ, ದೇಶದ ಹಾಗೂ ವಿದೇಶದ ಪ್ರಸಿದ್ಧ ವ್ಯಕ್ತಿಗಳು ಬಂದಾಗ ಅಲ್ಲಿ ತಂಗುವರೆಂದು ಹೇಳುತ್ತಾ, ಇಂಗ್ಲೆಂಡಿನ ಯುವರಾಣಿ ಡಯಾನಾ ಬಂದಾಗ ಉಳಿಯುತ್ತಿದ್ದ ಮಹಲ್ಲನ್ನು ತೋರಿಸಿದರು.
ಹಾಗೆಯೇ ಪಕ್ಕದಲ್ಲಿದ್ದ ರಸ್ತೆಯಲ್ಲಿ ಮೂವತ್ತೈದು ವರ್ಷ ವಯಸ್ಸಿನ ಇಂಗ್ಲೆಂಡಿನ ರಾಣಿಯ ಸೊಸೆ ಮುಂದಿನ ರಾಣಿಯಾಗಬೇಕಾಗಿದ್ದ ಯುವರಾಣಿ, ಯುವರಾಜ ಚಾರ್ಲ್ಸ್ ನ ಪತ್ನಿ ಯುವ ಜನತೆಯ ಆಕರ್ಷಣೀಯ ಐಕಾನ್ ಸುಂದರಿ ಡಯಾನ ತನ್ನ ಎರಡು ಚಿಕ್ಕ ಮಕ್ಕಳನ್ನು ಬಿಟ್ಟು ಅಲ್ಲಿಯೇ ರಸ್ತೆಯಲ್ಲಿ ದುರ್ಮರಣಕ್ಕೆ ಈಡಾದ ಸ್ಥಳವನ್ನು ನೋಡಿದಾಗ ಮನಸ್ಸಿಗೆ ಖೇದವಾಯಿತು . ಎಷ್ಟೇ ಶ್ರೀಮಂತರಿರಲಿ, ಪ್ರಸಿದ್ಧಿ ಪಡೆದಿರಲಿ, ವಿಧಿ ಲಿಖಿತವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ನಮ್ಮ ಹಿರಿಯರ ನುಡಿ ಎಷ್ಟು ಸತ್ಯ ಅಲ್ಲವೇ ಎಂದೆನಿಸಿತು.
ಡಯಾನಾ ರಸ್ತೆ ಅಪಘಾತದಲ್ಲಿ ಮಡಿದ ಸ್ಥಳ.
ಲೂವ್ರೆ ಮ್ಯೂಸಿಯಂನ ಆವರಣದಲ್ಲಿರುವ ಅಲ್ಲಿಯ ದೇಶ ಪ್ರೇಮಿಗಳ ಪುತ್ತಳಿಗಳಿರುವ ನೆಪೋಲಿಯನ್ ಕಾಲದ ಅರಮನೆ ಕಟ್ಟಡವನ್ನು, ವೀಕ್ಷಿಸಿ, ಫೋಟೋಗಳನ್ನು ತೆಗೆದುಕೊಂಡೆವು.
ಹಾಗೆಯೇ ಅಲ್ಲಿ ಚೈನಾ ಹಾಗೂ ಅಮೇರಿಕನ್ ವಾಸ್ತುಶಿಲ್ಪವನ್ನೊಳಗೊಂಡ ಬೃಹದಾಕಾರದ ಗಾಜು ಹಾಗೂ ಲೋಹದಿಂದ ನಿರ್ಮಿಸಿದ ಪಿರಾಮಿಡ್ ನೋಡಲು ಅದ್ಭುತವಾಗಿದೆ.
Louvre museum
ಹೆಚ್ಚಿನ ಸಮಯಾವಕಾಶ ಇಲ್ಲದೇ ಇರುವುದರಿಂದ ಮ್ಯೂಸಿಯಂ ಒಳಗಡೆಯ ವೀಕ್ಷಣೆಯಿಂದ ವಂಚಿತರಾದೆವು. ಈ ಮ್ಯೂಸಿಯಂ ಪ್ರಪಂಚದ ಅತಿ ಹೆಚ್ಚು ಜನರು ಭೇಟಿ ನೀಡುವ ದೊಡ್ಡ ವಸ್ತು ಸಂಗ್ರಹಾಲಯ.
ಇದರ ಒಳಗಡೆ ಮೈಕೆಲ್ ಎಂಜಲೋ, ಮುಂತಾದ ಪ್ರಸಿದ್ಧ ವಾಸ್ತುಶಿಲ್ಪಿಗಳ ವಾಸ್ತುಶಿಲ್ಪ ಹಾಗೂ ಲಿಯೋನಾರ್ಡೋ ಡ ವಿಂಚಿಯ ಮೊನಾಲಿಸಾ ಮತ್ತು ಇನ್ನಿತರ ಪ್ರಸಿದ್ದ ಕಲಾಕಾರರ ಪೈಂಟಿಂಗ್ ಗಳಿದ್ದು ನಮಗೆ ಸಮಯಾವಕಾಶವಿಲ್ಲದ್ದರಿಂದ ಮುಂದೆ ಸಾಗಿದೆವು.
ಹಾಗೆಯೇ ಅಲ್ಲಿಯ ಪ್ರಸಿದ್ಧ ಫ್ರೆಂಚ್ ಪರ್ಫ್ಯೂಮ್ ಮ್ಯೂಸಿಯಂ ವೀಕ್ಷಿಸಿದೆವು. ಅಲ್ಲಿ ನಮಗೆ ಪರ್ಫ್ಯೂಮ್ ಮಾಡುವ ವಿಧಾನ, ಹಾಗೂ ಆ ಮ್ಯೂಸಿಯಂ ಇತಿಹಾಸದ ಬಗ್ಗೆ ವಿವರಿಸಲಾಯಿತು. ನಂತರ ಪರ್ಫ್ಯೂಮ್ ಗಳನ್ನ ಖರಿದಿಸಿ ಮುಂದೆ ಸಾಗಿದೆವು.
ಮಧ್ಯಾಹ್ನ ಊಟದ ನಂತರ ಅಲ್ಲಿಯ ಪ್ರಸಿದ್ಧ ಕ್ರೂಸ್ ನಲ್ಲಿ ಒಂದು ಗಂಟೆಯ ಸಿಟಿ ವೀಕ್ಷಣೆಯನ್ನು ಮಾಡಿದೆವು. ಬೃಹದಾಕಾರದ ಕ್ರೂಸಿನಲ್ಲಿ, ಸಾವಿರಾರು ಪ್ರವಾಸಿಗರ ಮಧ್ಯೆ Siene ನದಿಯಲ್ಲಿ ವಿಹರಿಸುವುದೇ ಒಂದು ರೋಚಕ ಅನುಭವ. ಎರಡು ಮಹಡಿಯ ಕ್ರೂಸಿನಲ್ಲಿ ಮೇಲಿನ ಮಹಡಿಯಲ್ಲಿ ಕುಳಿತು, ಶೈನ್ ನದಿಯ ಇಕ್ಕೆಲಗಳಲ್ಲಿ ಕಾಣುವ ಪ್ರಸಿದ್ಧ ಕಟ್ಟಡಗಳಾದ ಐಫೆಲ್ ಟವರ್, ಚರ್ಚ್, ಆಡಳಿತ ಭವನಗಳು, ದೇಶಪ್ರೇಮಿಗಳ, ಚಕ್ರವರ್ತಿಗಳ ಸಮಾಧಿ ಮಾಡಿದ ಕಟ್ಟಡಗಳು, ಮ್ಯೂಸಿಯಂ ಹೀಗೆ ಅನೇಕ ಕಟ್ಟಡಗಳ ಬಗ್ಗೆ ಕ್ರೂಸಿನಲ್ಲಿ ವಿವರಿಸುತ್ತಾ ಸಾಗುತ್ತಿರುವಂತೆ ನಮ್ಮ ವಿಹಾರವೂ ಮುಗಿದಿತ್ತು.
ನಂತರ ಪ್ರಸಿದ್ಧ ಐಫೆಲ್ ಟವರ್ ವೀಕ್ಷಿಸಲು ಹೊರಟೆವು. ರವಿವಾರ ರಜಾ ದಿನವಾದ್ದರಿಂದ ಒಂದೂವರೆ ಘಂಟೆಗೂ ಹೆಚ್ಚು ಕಾಲ ಕ್ಯೂನಲ್ಲಿ ಸಾಗಬೇಕಾದ ಅನಿವಾರ್ಯತೆ. ಅತೀ ಎತ್ತರದ ಕೇವಲ ಕಬ್ಬಿಣದಲ್ಲೇ ಕಟ್ಟಿರುವ ಐಫೆಲ್ ಕಟ್ಟಡವನ್ನು ದೂರದಿಂದ ನೋಡುವಾಗ ಆಗುವ ಆಶ್ಚರ್ಯದ ಜೊತೆ, ಹತ್ತಿರದಿಂದ ನೋಡುವಾಗ ಆಗುವ ವಿಸ್ಮಯವೇ ಬೇರೆ.
ಇದರ ಮೂಲ ಪುರುಷ ಪ್ರಸಿದ್ದ ಫ್ರೆಂಚ್ ಇಂಜಿನೀಯರ್ ಗುಸ್ತಾವ್ ಐಫೆಲ್ ಕಾರಣನಾದ್ದರಿಂದ ಅವರ ಹೆಸರಿನಿಂದಲೇ ಈ ಟವರನ್ನು ಕರೆಯಲಾಗುತ್ತಿದೆ. ಇದು ಮುನ್ನೂರು ಮೀಟರ್ ಎತ್ತರದ ಕಟ್ಟಡವಾಗಿದ್ದು ಸುಮಾರು ಇನ್ನೂರು ವರ್ಷಗಳ ಹಿಂದೆಯೇ ಕೇವಲ ಕಬ್ಬಿಣದಲ್ಲೇ ನಿರ್ಮಿಸಿದ ಕಟ್ಟಡವಾಗಿದ್ದು, ಇದಕ್ಕೆ ತುಕ್ಕು ಹಿಡಿಯದಂತೆ ಕಾಪಾಡಲು ಒಂದು ಸಾರಿ 60 ಟನ್ನು ಪೈಂಟನ್ನು ಬಳಸಲಾಗುತ್ತಿದೆಯಂತೆ. ಇಂದಿಗೂ 7 ವರ್ಷಕ್ಕೆ ಒಂದು ಬಾರಿ ಈ ರೀತಿ ಪೈಂಟ್ ಮಾಡಿ ಕಾಪಾಡಲಾಗುತ್ತಿದೆ ಎನ್ನುವುದನ್ನು ನಮ್ಮ ಟೂರ್ ಗೈಡ್ ತಿಳಿಸಿದರು.
ಐಫೆಲ್ ಟವರ್ ನ ಮೇಲಿನಿಂದ ಪ್ಯಾರಿಸ್ ನೋಟ.
ನಾಲ್ಕು ಕಡೆಯಿಂದ ಬೃಹದಾಕಾರದ ಕಂಬಗಳ ಮೇಲೆ ಸುಮಾರು ಇನ್ನೂರು ವರ್ಷಗಳ ಹಿಂದೆ ಕಟ್ಟಿರುವ ಈ ಟವರ್ ತನ್ನದೇ ಆದ ವಿಸ್ಮಯ ಹಾಗೂ ಸೊಬಗನ್ನು ಹೊಂದಿದೆ. ಈ ಟವರಿನ ಸೊಬಗನ್ನು ರಾತ್ರಿಯ ಇಲಿಮಿನೇಷನ್ನಿನಲ್ಲಿ ನೋಡುವುದೇ ಒಂದು ಅವಿಸ್ಮರಣೀಯ ಅನುಭವ. ಇದನ್ನು ರಾತ್ರಿ ವೀಕ್ಷಿಸಲು ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ರಾತ್ರಿಯ ಈ ಸುಂದರ ಚಿತ್ರವನ್ನು ಕಣ್ಣು ಹಾಗೂ ಮನಗಳಲ್ಲಿ ತುಂಬಿಕೊಂಡು ಹೊಟೆಲ್ ಗೆ ಬಂದು ನಿದ್ರಾದೇವಿಗೆ ಶರಣು ಹೋದೆವು.
ದಿನಾಂಕ 16.7.23: ರಂದು ಬೆಳಿಗ್ಗೆ ಸ್ವಿಡರ್ಲೆಂಡ್ ಗೆ ಪ್ರಯಾಣ ಹಾಗು ಹೊಟೆಲ್ ಒಂದರಲ್ಲಿ ವಾಸ್ತವ್ಯ.
ದಿನಾಂಕ 17.7.23: ರಂದು ಬೆಳಿಗ್ಗೆ ಎಂಟು ಗಂಟೆಗೆ ನಾವು ಸ್ವಿಡರ್ಲೆಂಡ್ ನ ಯುಂಗ್ ಫ್ರೋ ಮೌಂಟೆನ್ನಿನ ಸೊಬಗು ಹಾಗೂ ವಿಸ್ಮಯವನ್ನು ನೊಡಲು ಹೊರಟೆವು. ಇದನ್ನು top of the Europe ಎಂದು ಹೇಳುತ್ತಾರೆ. ನಾವು ಇಳಿದ ಹೋಟೆಲ್ NOVOTEL ನಿಂದ ಸುಮಾರು ಎರಡು ಗಂಟೆಯ ಪಯಣದ ದಾರಿ. ನಮಗೆಲ್ಲರಿಗೂ ತಿಳಿದಿರುವ ಹಾಗೆ ಸ್ವಿಡ್ಜರ್ ಲ್ಯಾಂಡ್ ಜಗತ್ತಿನ ಒಂದು ಸುಂದರ ದೇಶ. ಇದರ ಸೌಂದರ್ಯವನ್ನು ಬಣ್ಣಿಸುವುದು ನಮ್ಮ ಪ್ರಸಿದ್ಧ ಕವಿಗಳಿಗೆ ಮಾತ್ರ ಸಾಧ್ಯವೇನೋ ಎನ್ನಬಹುದು. ದಾರಿಯುದ್ದಕ್ಕೂ ಪ್ರಕೃತಿಯ ಸೊಬಗನ್ನು ನೋಡಿ ಆನಂದಿಸಿದೆವು. ಆ ಸೊಬಗನ್ನು ನಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಷ್ಟು ತೃಪ್ತಿ ಎನ್ನಿಸುತ್ತಿರಲಿಲ್ಲ.
ಯಶ್ ಚೋಪ್ರಾ ವಿಲೇಜ್ ಎಂದು ಕರೆಯುವ ಸ್ಥಳಕ್ಕೆ ಆಗಮಿಸಿದ ಕೂಡಲೇ ನಮ್ಮ ಬಸ್ಸನ್ನು ಅಲ್ಲಿ ನಿಲ್ಲಿಸಿ, ಆ ಸ್ಥಳಕ್ಕೆ ಆ ಹೆಸರು ಬರಲು ಕಾರಣ , ಯಶ್ ಚೋಪ್ರಾ ರವರು ತಮ್ಮ ಸುಪ್ರಸಿದ್ದ ಸಿನೆಮಾಗಳನ್ನು ಸ್ವಿಡರ್ಲೆಂಡಿನ ಈ ಸ್ಥಳದಲ್ಲೇ ಶೂಟಿಂಗ್ ಮಾಡಿರುವುದೆಂದು ಹೇಳುತ್ತಾ ಹಾಗೂ ಇವರಿಂದ ಈ ಸ್ಥಳಕ್ಕೆ ದೊರಕಿದ ಆರ್ಥಿಕ ಲಾಭವನ್ನು ಪರಿಗಣಿಸಿ ಈ ವಿಲೇಜ್ ಗೆ ಅವರ ಹೆಸರನ್ನೇ ಇಡಲಾಗಿದೆ ಎಂದು ತಿಳಿಸಿದರು. ಇಲ್ಲಿ ಕಣ್ಮನ ತುಂಬುವಷ್ಟು ಪ್ರಕೃತಿಯ ಸೊಬಗನ್ನು ಸವಿದು, ಯಶ್ ಚೋಪ್ರಾ ಪುತ್ತಳಿಯ ಜೊತೆ ನೆನಪಿಗಾಗಿ ಫೋಟೋ, ಹಾಗೂ ಆ ಸುಂದರ ಪರಿಸರದಲ್ಲಿ ತೃಪ್ತಿಯಾಗುವಷ್ಟು ಹೊತ್ತು ಇದ್ದು, ಫೋಟೊ ತೆಗೆದುಕೊಂಡು, ಮುಂದೆ ಸಾಗಿದೆವು.
Yash Chopra statue, Interlaken
ಇಂಟರ್ ಲ್ಯಾಕನ್ ಎನ್ನುವ ಸ್ಥಳದಲ್ಲಿ ಯುಂಗ್ ಫ್ರೋ ಪರ್ವತದ ಮೊದಲ ಹಂತವನ್ನು ಕೇಬಲ್ ಕಾರಿನಲ್ಲಿ , ನಂತರ Cogwheel ರೈಲಿನಲ್ಲಿ ಸಾಗಿ 11,782 ಅಡಿ ಮೇಲಿರುವ ಯುಂಗ್ ಪ್ರೋ ಪರ್ವತದ ತುದಿಯನ್ನು ತಲುಪಿದೆವು. ಅರ್ಧಗಂಟೆಯ ಈ ಪರ್ವತವನ್ನು ಏರುವ ಪಯಣ ಎಂದೆಂದಿಗೂ ನಮ್ಮ ಮನಸ್ಸಿನಲ್ಲಿ ಹಸಿರಾಗಿಯೇ ಉಳಿಯುವಷ್ಟು ಸೊಬಗಿನ ತಾಣ. ಸುತ್ತಮುತ್ತ ಎಲ್ಲಿ ನೋಡಿದರೂ ಪ್ರಕೃತಿ ಮಾತೆ ಹಸಿರು ಬಣ್ಣದ ವಿವಿದ ರೀತಿಯ ಉಡಿಗೆಗಳನ್ನುಟ್ಟು ವೈಯಾರದಿಂದ ನಿಂತು ಆ ಪರ್ವತಕ್ಕೆ ಅವರ್ಣನೀಯ ಚೆಲುವನ್ನು ನೀಡಿ, ನಮ್ಮಂತಹ ಪಯಣಿಗರನ್ನು ಕೈ ಬೀಸಿ ಕರೆಯುತ್ತಲೇ ಇರುವುದನ್ನು ನೋಡಿದಾಗ, ಹಾಗೆಯೇ ಇಷ್ಟು ಎತ್ತರ ಪ್ರದೇಶದಲ್ಲಿ ಪರ್ವತವನ್ನು ಕಡಿದು, ಅಲ್ಲಿಯೂ ತನ್ನೆಲ್ಲಾ ಬುದ್ದಿ ಮತ್ತೆಯನ್ನು ಉಪಯೋಗಿಸಿ ಒಂದು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಿದ ಇಂಜಿನೀಯರುಗಳ ಹಾಗೂ ಕಾರ್ಮಿಕರ ಶ್ರಮ , ಸಾಹಸ ಅಚ್ಚರಿ ಮೂಡಿಸುತ್ತದೆ . ಇದನ್ನು ಪೂರ್ಣಗೊಳಿಸಲು ಸುಮಾರು 1872 ರಿಂದ 150 ವರ್ಷಗಳಾಗಿದೆ ಎಂದು ಅಲ್ಲಿಯ ಫಲಕಗಳಲ್ಲಿ ದಾಖಲಿಸಿದ್ದಾರೆ.
ಅಲ್ಲಿರುವ ಐಸ್ ಪ್ಯಾಲೇಸನ್ನು ವೀಕ್ಷಿಸುವುದು ಒಂದು ಸಾಹಸವೇ ಸರಿ. ಹಿಮಗಿರಿಯ ಮೇಲೆ ಹಿಮದಲ್ಲೇ ನಿರ್ಮಿಸಿದ ಇಲ್ಲಿ ವಿವಿದ ರೀತಿಯ ಪ್ರಾಣಿಗಳ ಗೊಂಬೆಗಳು, ಸುಂದರ ಪ್ರತಿಕೃತಿಯನ್ನು ನೋಡುವುದು ಮನಸ್ಸಿಗೆ ಮುದವನ್ನು ನೀಡುವ ಜೊತೆ, ಸ್ವಲ್ಪ ಅಜಾಗರೂಕತೆ ತಾಳಿದರೂ ಬಿದ್ದು ತೊಂದರೆಗೆ ಸಿಕ್ಕಿಕೊಳ್ಳಬೇಕಾಗುವ ಪರಿಸ್ಥಿತಿಯ ಅರಿವನ್ನು ಮರೆಯುವಂತಿಲ್ಲ . ಆದರೂ ನಾವು ಗ್ರೂಪಿನಲ್ಲಿದ್ದುದರಿಂದ ಹುಮ್ಮಸ್ಸಿನಿಂದ ಅಲ್ಲಿರುವ ಎಲ್ಲವನ್ನೂ ವೀಕ್ಷಿಸಿದೆವು.
ಅಲ್ಲಿ ಹೊರಗಡೆ glazierನಲ್ಲಿ ಹಿಮದಲ್ಲಿ ಜಾರುತ್ತಾ, ಭಯದಿಂದ ಪುಟ್ಟ ಮಕ್ಕಳು ಹೆಜ್ಜೆ ಇಡುವಂತೆ ಹೆಜ್ಜೆ ಇಟ್ಟು, ಕೆಲವೊಮ್ಮೆ , ಬೀಳುತ್ತಾ, ಏಳುತ್ತಾ ಫೋಟೋಗಳನ್ನು ತೆಗೆದುಕೊಳ್ಳುವ ಪ್ರವಾಸಿಗರನ್ನು ನೋಡುವುದೇ ಒಂದು ವಿನೋದ. ಹೊಸದಾಗಿ ವಿವಾಹವಾದ ಜೋಡಿ, ಹಳೆಯ ಜೋಡಿಗಳು, ವಿವಿಧ ದೇಶಗಳಿಂದ ಬಂದ ಪ್ರವಾಸಿಗರು ಅಲ್ಲಿ ಮನಸೋ ಇಚ್ಚೆ ವಿಹರಿಸುವುದನ್ನು ನೋಡುವುದೇ ಒಂದು ಸೊಬಗು. ಅಲ್ಲಿಯ ಹಿಮದಲ್ಲಿ ನಾವೆಲ್ಲರೂ ಸುಮಾರು ಒಂದು ಗಂಟೆಯ ಸಮಯವನ್ನು ಸಂಭ್ರಮದಿಂದ ಸವಿದು ನಮ್ಮ ಹೊಟೆಲ್ ಗೆ ಹಿಂದಿರುಗಿ ವಿರಮಿಸಿದೆವು.
Ice cave at Jungfrau
ದಿನಾಂಕ 18.7.23: ಬೆಳಿಗ್ಗೆ 8.30 ಕ್ಕೆ ಹೋಟೆಲಿನಲ್ಲಿ ಉಪಹಾರ ಮಾಡಿ ಇಂಗಲ್ ಬರ್ಗನ ಸುಮಾರು 3020ಮೀಟರ್ ಎತ್ತರವಿರುವ ಮೌಂಟ್ ಟಿಟ್ಲೀಸ್ ನೋಡಲು ಹೊರಟೆವು. ಇದು ಕೂಡ ಒಂದು ನಯನ ಮನೋಹರವಾದ ಸುಂದರ ಪ್ರದೇಶ . ಸುಮಾರು ಇಪ್ಪತ್ತು ನಿಮಿಷಗಳ World famous ಮೊದಲ revolving ಕೇಬಲ್ ಕಾರಿನಲ್ಲಿ ಪರ್ವತವನ್ನು ಏರಿಳಿಯುವುದೇ ಒಂದು ರೋಚಕ ಅನುಭವ. ಟಿಟ್ಲೀಸ್ ಏರಿದಾಗ ಸುಮಾರು 500ಮೀಟರ್ ಎತ್ತರವಿರುವ ಅಲ್ಲಿರುವ ತೂಗು ಸೇತುವೆ ಮೇಲೆ ನಡೆದಾಡುವುದೂ ಕೂಡ ಒಂದು ರೋಚಕ ಅನುಭವ . ಅಷ್ಟು ಎತ್ತರದ ಪರ್ವತದ ಮೇಲಿನಿಂದ ಕೆಳಗಿನವರೆಗೂ ಪ್ರಕೃತಿಯನ್ನು ವೀಕ್ಷಿಸಿದಾಗ ಮೈ ಜುಂ ಎನ್ನುವಷ್ಟು ಎತ್ತರವು ಮನುಷ್ಯ ಎಷ್ಟೇ ಸಾಹಸಿಗ, ಬುದ್ಧಿ ವಂತನಾದರೂ ಪ್ರಕೃತಿಯ ಮುಂದೆ ಎಷ್ಟು ಚಿಕ್ಕವನು ಎನ್ನಿಸುತ್ತದೆ.
Mt. Titlis, Engelberg Titlis Cliff walk
|
Way back to the town of Engelberg through the cable car, Mt. Titlis |
ಅಲ್ಲಿಂದ ಕೆಳಗೆ ಬಂದು , ಮಧ್ಯಾಹ್ನದ ಊಟ ಸವಿದು, Lucerne ನಗರಕ್ಕೆ ಬಂದು ಅಲ್ಲಿಯ ಸುಂದರ ಪಾರ್ಕಿನ ಮಧ್ಯೆ ಕಲ್ಲಿನಲ್ಲಿ ಕೆತ್ತದ ಕರುಣಾಜನಕವಾಗಿ ಸಾವನ್ನಪ್ಪಿದಂತೆ ತೋರುವ ಸಿಂಹದ ಪ್ರತಿಮೆಯನ್ನು ನೋಡಿದೆವು. 1792ರ ಪ್ರೆಂಚ್ ರೆವಲೂಷನ್ ವೇಳೆಯಲ್ಲಿ ಸಾವನ್ನಪ್ಪಿದ ಕಾವಲುಗಾರರ ಸ್ಮರಣಾರ್ಥವಾಗಿ ಅದನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
|
Lion monument of Lucerne, Switzerland |
ನಂತರ ಅಲ್ಲಿಯ ಪ್ರಸಿದ್ಧ ಸ್ವಿಸ್ ವಾಚ್, ನೈಫ್, ಗಡಿಯಾರಗಳು, ಮುಂತಾದ ಅಲ್ಲಿಯ ಪ್ರಸಿದ್ಧ ವಸ್ತುಗಳನ್ನು ಖರೀದಿಸಿ, ಅಲ್ಲಿರುವ ಸುಂದರ ಲೇಕನ್ನು ವೀಕ್ಷಿಸಿ , ಸ್ವಿಡರ್ಲೆಂಡ್ ಇಟಲಿ ಬಾರ್ಡರಿನ ಕೊರೊನೊಡಾ ಹೊಟೆಲಿಗೆ ಸುಮಾರು ಎಂಟು ಗಂಟೆಯ ಸಮಯಕ್ಕೆ ಬಂದು, ರಾತ್ರಿ ಭೋಜನ ಮಾಡಿ ಅಲ್ಲೆ ತಂಗಿದೆವು.
Chapel bridge, Lucerne
ದಿನಾಂಕ 19.7.23: ರಂದು ಬೆಳ್ಳಗ್ಗೆ ಉಪಹಾರ ಮಾಡಿ ಇಟಲಿಗೆ ಹೊರಟೆವು. ದಾರಿಯಲ್ಲಿ ಒಂದು ಸುಂದರ ಪರ್ವತದ ತಪ್ಪಲಿನಲ್ಲಿರುವ ಕೋಮೋ ಲೇಕನ್ನು ವೀಕ್ಷಿಸಲು ಬಸ್ಸನ್ನು ನಿಲ್ಲಿಸಿದರು. ಅದೊಂದು ಸುಂದರ ಪ್ರವಾಸಿ ತಾಣವಾಗಿದ್ದು ಅಲ್ಲಿ ಸ್ವಲ್ಪ ಹೊತ್ತು ವಿಹರಿಸಿ, ಆ ಸೊಬಗಿನ ಸ್ಥಳದ ಫೋಟೋ ತೆಗೆದುಕೊಂಡು, ಮುಂದೆ ಹೊರಟೆವು.
|
Lake Como, Italy |
ಸುಮಾರು 2.30 ಗಂಟೆಯ ಸಮಯಕ್ಕೆ ಇಟಲಿಯ PISA ದಲ್ಲಿರುವ ಲೀನಿಂಗ್ ಟವರನ್ನು ವೀಕ್ಷಿಸಿ, ಅಲ್ಲಿ ವಿವಿಧ ಭಂಗಿಗಳಲ್ಲಿ ಎಲ್ಲರೂ ಛಾಯಾಚಿತ್ರಗಳನ್ನು ತೆಗೆದುಕೊಂಡು, ಅಲ್ಲೇ ಇರುವ ಹೊಟೆಲ್ ಒಂದರಲ್ಲಿ ಫಿಸ್ಸಾ, ಪಾಸ್ತಾ, ಮೊದಲಾದವುಗಳನ್ನು ಸವಿದು ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಇಲ್ಲಿ ಈಗಾಗಲೇ ಬಿಸಿಲಿನ ತಾಪಮಾನ 36 ಡಿಗ್ರಿ ಸೆಲ್ಸಿಯಸ್ಸನ್ನು ತಲುಪಿತ್ತು. ನಾವು ಹೊಟೆಲ್ ಪಾರ್ಕ ಗೆ ಬಂದು ರಾತ್ರಿಯ ಭೋಜನ ಸವಿದು ಅಲ್ಲಿಯೇ ತಂಗಿದೆವು.
ಥಾಮಸ್ ಕುಕ್ SOTC ನಮ್ಮ ಗ್ರೂಪ್
ದಿನಾಂಕ 20.7.23: ರಂದು ಬೆಳಿಗ್ಗೆ ಉಪಹಾರ ಮಾಡಿ ವ್ಯಾಟಿಕನ್ ನಗರವನ್ನು ವೀಕ್ಷಿಸಲು ಹೊರಟೆವು. ನಾವು ತಂಗಿದ ಹೋಟೆಲಿನಿಂದ ವ್ಯಾಟಿಕನ್ ನಗರವನ್ನು ಬಸ್ಸಿನಲ್ಲಿ ಸುಮಾರು ಮೂರು ಗಂಟೆಗಳ ಪ್ರಯಾಣ ಮಾಡಿ ತಲುಪಿದೆವು. ಮಾರ್ಗ ಮಧ್ಯದಲ್ಲಿ ನಮ್ಮ ಟೂರ್ ಮ್ಯಾನೇಜರ್ ವ್ಯಾಟಿಕನ್ ನಗರದ ಹಾಗೂ ಇಟಲಿಯ ಇತಿಹಾಸದ ಬಗ್ಗೆ ವಿವರಿಸಿದರು.
Vatican
ಈ ನಗರದಲ್ಲಿರುವ ಪ್ರಸಿದ್ಧ ಪೋಪ್ ಬೆಸಿಲಿಕಾ ಚರ್ಚನ್ನು ವೀಕ್ಷಿಸಿದೆವು. ಇದನ್ನು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಿದ್ದು ತುಂಬಾ ವಿಶಾಲವಾಗಿ, ಸುಂದರವಾಗಿದೆ. ಒಳಗಡೆ ಒಂದೇ ಸಾರಿ ಸುಮಾರು 50000 ಜನರು ಸೇರಬಹುದಾದ ಈ ಚರ್ಚಿನಲ್ಲಿ ಜೀಸಸ್ ಕ್ರಿಸ್ತನ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ಆಯಿಲ್ ಪೇಂಟಿನಲ್ಲಿ ಚಿತ್ರಿಸಿದ ಸುಂದರ ಚಿತ್ರಗಳನ್ನು ಹಾಗೂ ಆಗಿನ ಭವ್ಯ ಚಿತ್ರಕಲೆಗಳನ್ನು ನೋಡಬಹುದು. ಅನೇಕ ಧಾರ್ಮಿಕ ಗುರುಗಳ ಸಮಾಧಿಗಳನ್ನು ಅಲ್ಲಿ ನಿರ್ಮಿಸಿರುವುನ್ನು ನೋಡಬಹುದು. ಇದು ಇಟಾಲಿಯನ್ನರ ಮುಖ್ಯ ಧಾರ್ಮಿಕ ಕೇಂದ್ರವಾಗಿದೆ. ಪೋಪ್, ಇಟಾಲಿಯನ್ನರ ಪ್ರಧಾನ ಧಾರ್ಮಿಕ ಗುರು ಹಾಗೂ ಆ ದೇಶದ ಮುಖ್ಯಸ್ಥರಾಗಿದ್ದು ಧಾರ್ಮಿಕ ಸಭೆಗಳು ಹಾಗೂ ರಾಜ್ಯದ ಆಡಳಿತದ ನಡೆಯುವ ಪ್ರಧಾನ ಸ್ಥಾನವಾಗಿದೆ ಎಂದು ತಿಳಿಸಿದರು.
|
Colosseum, Rome, Italy |
ಇದನ್ನು ವೀಕ್ಷಿಸಿದ ನಂತರ ಮಧ್ಯಾಹ್ನದ ಭೋಜನದ ನಂತರ ಕೊಲೋಸಿಯಂ ಅಂದರೆ ಆಗಿನ ಕಾಲದ ಆಂಪ್ಲಿ ಥಿಯೇಟರನ್ನು ವೀಕ್ಷಿಸಲು ಹೊರಟೆವು . ಇದು ಕೂಡ ಮೂರು ಮಹಡಿಯ ವಿಶಾಲವಾದ ಕಟ್ಟಡವಾಗಿದ್ದು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಈಗ ಅದು ಅತ್ಯಂತ ಶಿಥಿಲ ಕಟ್ಟಡವಾಗಿದ್ದು, ಅದನ್ನು ಈಗ ಹಾಗೆಯೇ ನಿರ್ವಹಿಸುತ್ತಿದ್ದಾರೆ . ಅಲ್ಲಿಂದ Arezzo ಎಂಬ ಸ್ಥಳಕ್ಕೆ ಹೋಗಿ ಹೊಟೆಲ್ ನಲ್ಲಿ ತಂಗಿದೆವು.
ದಿನಾಂಕ 21.7.23: ರಂದು ಬೆಳಿಗ್ಗೆ ಉಪಹಾರದ ನಂತರ ನಾವು ವೆನೀಸ್ ನೋಡಲು ಬಸ್ಸಿನಲ್ಲಿ ಹೊರಟೆವು. ಸುಮಾರು ಐದೂವರೆ ಗಂಟೆಯ ಬಸ್ ಪ್ರಯಾಣದ ನಂತರ Pier ಎಂಬ ಸ್ಥಳಕ್ಕೆ ಬಂದು, ಅಲ್ಲಿಂದ ದೊಡ್ಡ ದೋಣಿಯಲ್ಲಿ (ferry )ಪಯಣಿಸಿ ವೆನಿಸ್ ತಲುಪಿದೆವು. ವಿಶಾಲವಾದ ಸಮುದ್ರದಲ್ಲಿ ದೋಣಿಯಲ್ಲಿಯಲ್ಲಿ ಪ್ರಯಾಣಿಸುವುದೇ ಒಂದು ಸುಂದರ ಮತ್ತು ರೋಚಕ ಅನುಭವ. ಇದರಲ್ಲಿ ಕುಳಿತು ಮೊದಲು ಪಾವ್ ಬಾಜಿ ಸಹಿತ ಇಂಡಿಯನ್ ಸವಿ ಭೋಜನವನ್ನು ಹಾಗೂ ಐಸ್ಕ್ರೀಮ್ ಸವಿದು, ಪಯಣಿಸಿ ವೆನೀಸ್ ತಲುಪಿದೆವು.
.
ಇದು ಕೂಡ ಇಟಲಿಯ ಪುರಾತನ ಇತಿಹಾಸವಿರುವ ದೇಶ. ಪುರಾತನ ಕಾಲದ ಇಟಾಲಿಯನ್ ಕಟ್ಟಡಗಳು ಒಂದಕ್ಕೊಂದು ಅಂಟಿಕೊಂಡಂತೆ ಕಟ್ಟಲ್ಪಟ್ಟಿದೆ. ಅಲ್ಲಿರುವ ಬೆಸಿಲಿಕಾ ಕಟ್ಡಡ, ಎತ್ತರದ ಬೆಲ್ ಟವರ್ ಮುಂತಾದವುಗಳನ್ನು ನೋಡಿ, ಅದರ ಮುಂದೆ ನಿಂತು ಫೋಟೋ ತೆಗೆಸಿಕೊಂಡು ನಂತರ ನಾವೆಲ್ಲರೂ ಗೊಂಡೋಲ ರೈಡ್ ಗೆ ಹೋದೆವು. ಇದು ಸಿಂಗರಿಸಿದ ದೋಣಿಯಲ್ಲಿ ಕಟ್ಟಡಗಳ ಮಧ್ಯೆ ಹರಿಯುವ ನೀರಿನ ದೊಡ್ಡ ಕಾಲುವೆಯಲ್ಲಿ ವಿಹರಿಸುವುದು. ಇದೂ ಕೂಡ ಒಂದು ವಿಶಿಷ್ಟ ಅನುಭವ. ನಂತರ ಇಲ್ಲಿ ಎಲ್ಲರೂ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ, ರಾತ್ರಿ ಅಲ್ಲಿಯ ಅಲ್ಫಾ ಎನ್ನುವ ಹೋಟೆಲ್ ಗೆ ಬಂದು ತಂಗಿದೆವು.
ದಿನಾಂಕ 22.7.23: ರಂದು ಬೆಳಿಗ್ಗೆ ಉಪಾಹಾರದ ನಂತರ ನಮ್ಮ ಬಸ್ಸಿನಲ್ಲಿ ಅವರ್ಣನೀಯ ಚೆಲುವಿನ ಸುಂದರ ಬೆಟ್ಟ ಗುಡ್ಡಗಳ ನಡುವೆ ಆಸ್ಟ್ರಿಯಾದ Innsbruck ನಗರಕ್ಕೆ ನಮ್ಮ ಪ್ರಯಾಣವನ್ನು ಬೆಳೆಸಿದೆವು. ಹಿಂದೆ ಅಲ್ಲಿಯ ಅರಮನೆಯಲ್ಲಿ ರಾಜರಾಣಿಯರು ಅರಮನೆಯಲ್ಲಿರುವ ಬಂಗಾರದ ಚಾವಣಿಯ ಕೆಳಗೆ ಕುಳಿತು ನಗರವನ್ನು. ವೀಕ್ಷಿಸುತ್ತಿದ್ದ ( ಗೋಲ್ಡನ್ ರೂಫ್ ), ಆಡಳಿತ ಭವನ, ಮುಂತಾದವುಗಳನ್ನು ನೋಡಿ , ನಂತರ ಅಲ್ಲಿಯ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿದೆವು. ನಂತರ ವರ್ಣರಂಜಿತ ಸ್ವರೋಕಿ ಕ್ರಿಸ್ಟಲ್ಲಿನ ಮ್ಯೂಸಿಯಂ ವೀಕ್ಷಿಸಿ, ಅಲ್ಲಿ ವಿಶೇಷವಾಗಿ ಸಿಗುವ ಸ್ವರೋಕಿ ಆಭರಣಗಳ ಖರೀದಿಯ ನಂತರ ಜರ್ಮನಿಯ ಮ್ಯೂನಿಕ್ ನಗರಕ್ಕೆ ಬಂದು ತಲುಪಿ, ಅಲ್ಲಿಯ ಹೊಟೆಲ್ ಒಂದರಲ್ಲಿ ತಂಗಿದೆವು.
ಈ ನಗರಗಳಿಗೆ ಪಯಣದ ಕಾಲಾವಧಿಯನ್ನು ಕಡಿಮೆಗೊಳಿಸಲು ಕೆಲವೆಡೆ ಆರೇಳು ಕಿಲೋಮೀಟರ್ ಗಳಿಗಿಂತಲೂ ಉದ್ದವಾಗಿ ನಿರ್ಮಾಣ ಮಾಡಿದ ಸುರಂಗ ಮಾರ್ಗಗಳು ಸೋಜಿಗವೆನಿಸುತ್ತವೆ.
ದಿನಾಂಕ 22.7.23 ರಂದು, ಹತ್ತು ದಿನಗಳ ಯುರೋಪ್ ಟೂರನ್ನು ಸವಿದು, ಸುಂದರ ಅನುಭವ ದೊಂದಿಗೆ ಜರ್ಮನಿಯ ಮ್ಯೂನಿಕ್ ನಗರದಿಂದ ನಮ್ಮ ನಮ್ಮ ಮನೆಗಳಿಗೆ ಮರು ಪ್ರಯಾಣವನ್ನು ಬೆಳೆಸಿದೆವು.
ಮೆಚ್ಚಿನ ಅಂಶ: ನಮ್ಮ ಟೂರ್ ಮೇನೇಜರ್ ಕ್ಯಾಷಿಯಸ್ ಒಳ್ಳೆಯ ಅನುಭವಿ ಟೂರ್ ಮ್ಯಾನೇಜರ್ ಆಗಿದ್ದು ಟೂರನ್ನು ದಕ್ಷತೆಯಿಂದ ನಿರ್ವಹಿಸುವುದನ್ನು ಮೆಚ್ಚಲೇ ಬೇಕು. ಪ್ರತಿದಿನ ಬೆಳಗ್ಗೆ ಸರಿಯಾದ ಸಮಯಕ್ಕೆ ಒಳ್ಳೆಯ ಉಪಹಾರದ ವ್ಯವಸ್ಥೆಯ ನಂತರ ನಾವು ಆ ದಿನ ಪ್ರಯಾಣ ಮಾಡಬೇಕಾದ ಸ್ಥಳಕ್ಕೆ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದರು. ಮಾರ್ಗ ಮಧ್ಯದಲ್ಲಿ ನಾವು ನೋಡಬೇಕಾದ ಸ್ಥಳದ ವಿವರಗಳನ್ನು ನಮಗೆ ಮನದಟ್ಟು ಮಾಡಿಕೊಡುತ್ತಿದ್ದರು. ಹಾಗೆಯೇ ಅವರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ತಮಾಷೆಯನ್ನು ಮಾಡಿ ನಮ್ಮನ್ನು ನಗಿಸುತ್ತಿದ್ದುದರಿಂದ ನಮಗೆ ಬಸ್ಸಿನಲ್ಲಿ ಪ್ರಯಾಣ ಬೇಸರವೆನಿಸುತ್ತಿರಲಿಲ್ಲ. ಎಲ್ಲಾ ಕಡೆಯೂ ಉಳಿಯಲು ಒಳ್ಳೆಯ ಹೊಟೆಲ್ ಹಾಗೂ ಭೋಜನದ ವ್ಯವಸ್ಥೆಯನ್ನು ಮಾಡುತ್ತಿದ್ದರಿಂದ ನಮಗೆ ಪ್ರಯಾಣದ ದಣಿವು ಭಾದಿಸುತ್ತಿರಲಿಲ್ಲ. ನಮಗೆ ಎಲ್ಲಾ ಸ್ಥಳಗಳಲ್ಲಿ ಪ್ರಯಾಣಿಸಲು ಒಳ್ಳೆಯ ಮರ್ಸೆಡೀಸ್ ಬಸ್ಸಿನ ವ್ಯವಸ್ಥೆ ಮಾಡಿದ್ದರಿಂದ ಪ್ರಯಾಣವು ಅತ್ಯಂತ ಸುಖಕರವಾದ ಅನುಭವವನ್ನು ನೀಡಿತ್ತು.
ನಮ್ಮ ಬಸ್ಸಿನ ಚಾಲಕ ಹಂಗೇರಿಯ ಮಾರ್ಕಸ್, ಒಳ್ಳೆಯ ಅನುಭವೀ ಚಾಲಕನಾಗಿದ್ದು, ಅವರ ರಕ್ಷಣಾತ್ಮಕವಾದ ಹಾಗೂ ಸ್ಮೂತ್ ಡ್ರೈವಿಂಗ್ ನಮ್ಮ ಪ್ರಯಾಣವನ್ನು ಹೆಚ್ಚು ಆನಂದಿಸುವಂತಾಯಿತು. ನಮ್ಮ ಸಹ ಪ್ರಯಾಣಿಕರೂ ಕೂಡ ನಮ್ಮ ಭಾರತದ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದರೂ ಕೂಡ, ಪ್ರವಾಸದಲ್ಲಿ ಒಂದೇ ಕುಟುಂಬದವರಂತಿದ್ದು ನಾವು ಹೆಚ್ಚಿನ ಆನಂದವನ್ನು ಸವಿಯುವಂತಾಯಿತು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ SOTC, THOMAS COOK ದಕ್ಷ ಟ್ರಾವೆಲ್ ಏಜೆನ್ಸಿ ಎನ್ನಬಹುದಾಗಿದ್ದು, ಇದರಲ್ಲಿ ನಾವು ಮಾಡಿದ ಪ್ರವಾಸ ಅವಿಸ್ಮರಣೀಯ.
ಎಲ್ಲಾ ಸಂಗತಿಗಳಿಗಿಂತ ದೇವರ ಅನುಗ್ರಹ ನಮ್ಮ ಮೇಲೆ ಇದ್ದಿದ್ದರಿಂದ ನಮ್ಮ ಪ್ರವಾಸ ಸುರಕ್ಷಿತವಾಗಿ ಸಂಪನ್ನವಾಯಿತು.
"ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂಬಂತೆ ನಮ್ಮ ತಾಯ್ನಾಡು, ನಮ್ಮನ್ನು ಪ್ರೀತಿಯಿಂದ ಕೈ ಬೀಸಿ ಕರೆಯುತ್ತಿದೆ .
ವಂದನೆಗಳೊಂದಿಗೆ,
ಅರುಂಧತಿ ಸುರೇಶ್ ಕುಲಕರ್ಣಿ.
Comments
Post a Comment