ನವಗ್ರಹ ದೇವಸ್ಥಾನಗಳು ತಮಿಳುನಾಡು:


 

                                       ನವಗ್ರಹ ದೇವಸ್ಥಾನಗಳು ತಮಿಳುನಾಡು:

ನಮ್ಮ ಭಾರತವು ಪುಣ್ಯಭೂಮಿ. ಇಲ್ಲಿ ನಾವು ಪ್ರಕೃತಿಯ ಎಲ್ಲಾ  ಶಕ್ತಿಗಳನ್ನೂ ಪೂಜಿಸುತ್ತೇವೆ ಮತ್ತು ಅವುಗಳು ನಮ್ಮ ಜೀವನದ ಮೇಲೆ ಬೀರುವ ಪ್ರಭಾವವನ್ನು ನಂಬುತ್ತೇವೆ. ಅವುಗಳಲ್ಲಿ ನವಗ್ರಹ ಪೂಜೆಯೂ ಒಂದು.  ನಮ್ಮ ಜನ್ಮಕುಂಡಲಿಯಲ್ಲಿ ನವಗ್ರಹಗಳು    ಬೀರುವ  ಪರಿಣಾಮ ಹಾಗು ಅವುಗಳ ದೋಷಗಳ ಪರಿಹಾರವನ್ನು ನಮ್ಮ ಪೂರ್ವಜರು ಸೂಚಿಸಿರುತ್ತಾರೆ. ಋಷಿಮುನಿಗಳು ನವಗ್ರಹಗಳ   ಸ್ತೋತ್ರಗಳನ್ನು ರಚಿಸಿ ಅವುಗಳಿಗೆ ವಂದನೆಗಳನ್ನು ಸಲ್ಲಿಸಿ, ನಮ್ಮ ಜೀವನವು ತೊಂದರೆ - ದೋಷಗಳಿಂದ ವಿಮುಕ್ತವಾಗುವಂತೆ ಬೇಡಿಕೊಳ್ಳುವುದರ ಮೂಲಕ ಅವುಗಳ ಮಹತ್ವವನ್ನು   ತಿಳಿಸಿಕೊಟ್ಟಿದ್ದಾರೆ . ನವಗ್ರಹಗಳು ಪಿಡಾ ಪರಿಹಾರಗಳ  ಮುಖ್ಯ ದೇವತೆಗಳು.   

ತಮಿಳುನಾಡಿನ ನವಗ್ರಹ ದೇವಸ್ಥಾನಗಳು ಅತ್ಯಂತ ಮಹತ್ವದ ದೇವಸ್ಥಾನಗಳಾಗಿವೆ. ಇದರ  ಬಗ್ಗೆ ಕೇಳಿ ತಿಳಿದಿದ್ದ ನಮಗೆ ಒಂದು ಸಾರಿ  ಅಲ್ಲಿಗೆ ಹೋಗಿ ನವಗ್ರಹಗಳ ದರ್ಶನ ಭಾಗ್ಯವನ್ನು ಪಡೆಯಬೇಕೆನ್ನಿಸಿತು. ನಾನು, ನನ್ನ ಸಹೋದರಿ ಹಾಗು ಗೆಳತಿಯ ಕುಟುಂಬದೊಡನೆ 22/04/2012ರಂದು ರಾತ್ರಿ ನಾವು ಬೆಂಗಳೂರಿನಿಂದ ರೈಲಿನಲ್ಲಿ ತಮಿಳುನಾಡಿಗೆ  ಪ್ರಯಾಣ  ಕೈಗೊಂಡೆವು. 

ಕುಂಬಕೋಣಂನಲ್ಲಿ ಒಂದು ಹೋಟೆಲಿನಲ್ಲಿ ಉಳಿದುಕೊಂಡು, 23/04/2012ರಂದು ಬೆಳಿಗ್ಗೆ ಒಂದು ವಾಹನ ಮಾಡಿಕೊಂಡು ನವಗ್ರಹಗಳ ದರ್ಶನಕ್ಕೆ ಹೊರಟೆವು. 

ಗ್ರಹಗಳು ದೈವಿಕ ಶಕ್ತಿಯ  ಪ್ರತಿನಿಧಿಗಳು. ಅವು ಮನುಷ್ಯನ ಸುಖ-ದುಃಖಗಳನ್ನೂ ನಿರ್ಧರಿಸುತ್ತವೆ. ಗ್ರಹಗಳು ಪ್ರತಿಯೊಬ್ಬನ ಜನನಕಾಲದಿಂದ ಸಂಚರಿಸಲು ಪ್ರಾರಂಭಿಸುತ್ತವೆ. ಅವುಗಳ ಸಂಚಾರದ ಆಧಾರದ ಮೇಲೆ ನಮ್ಮ ಅದೃಷ್ಟವು ನಿರ್ಧಾರವಾಗುತ್ತವೆ ಪ್ರತಿಯೊಂದು ಗ್ರಹವೂ ನಮ್ಮ ಮೇಲೆ ಅದರದೇ ಆದ ಪರಿಣಾಮವನ್ನು ಬೀರುತ್ತದೆ. ಇದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ.  ಪೀಡೆಗಳ  ದುಷ್ಪರಿಣಾಮವನ್ನ ಸಂಬಂದಿಸಿದ ಗ್ರಹವನ್ನು ಸ್ತೋತ್ರಗಳ ಮೂಲಕ ಭಕ್ತಿಯಿಂದ  ಪೂಜಿಸುವುದರ ಮೂಲಕ   ಕಡಿಮೆ ಮಾಡಿಕೊಳ್ಳಬಹುದೆಂದು  ನಮ್ಮ ಜ್ಯೋತಿಶ್ಯಾಸ್ತ್ರವು ಹೇಳುತ್ತದೆ. ನವಗ್ರಹ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥಿಸುವುದರ ಮೂಲಕವೂ ನಮ್ಮಗೆ ದೋಷಗಳೇನಾದರೂ ಇದ್ದರೆ ಪರಿಹಾರವಾಗುತ್ತದೆಂದು  ಹೇಳುತ್ತಾರೆ. 

ನಾವು ಒಂದು ವಾಹನದಲ್ಲಿ  ಮೊದಲನೆಯ ದಿನ ಶುಕ್ರ, ಬುಧಗ್ರಹ, ಸೂರ್ಯ, ರಾಹು ಕೇತುಗಳ ದೇವಸ್ಥಾನಗಳಿಗೆ  ಹೋಗಿ ಪ್ರಾರ್ಥಿಸಿದೆವು. 

ನಾವು ಮೊದಲು ಕುಂಬಕೋಣಂನಿಂದ 6 ಕಿ.ಮೀ. ದೂರವುಳ್ಳ ಗಂಜನೂರಿನ ಶುಕ್ರಗ್ರಹ ದೇವಸ್ಥಾನಕ್ಕೆ ಹೋದೆವು. ಶುಕ್ರಗ್ರಹವು ಒಳ್ಳೆಯ ಅದೃಷ್ಟವನ್ನು ನೀಡುತ್ತಾನೆ. ಈತನು ತುಲಾ ರಾಶಿಗೆ ಅಧಿಪತಿ.   ಶುಕ್ರದೊಷ ಇರುವವರು ಬಿಳಿಯಬಟ್ಟೆ, ಬೆಳ್ಳಿ, ಕಡಲೆಬೇಳೆ ದಾನ ಮಾಡುವುದರಿಂದ ವಜ್ರದ ಒಡವೆ ಧರಿಸುವುದರಿಂದ  ದೇವಿ ಮಹಾತ್ಮೆಯನ್ನು ಪಠಿಸುವುದರಿಂದ ದೋಪರಿಹಾರವಾಗುತ್ತದೆಂದು  ಹೇಳುತ್ತಾರೆ. 


ಶುಕ್ರಗ್ರಹ ದೇವಸ್ಥಾನದ ಎದುರು 

ಬುಧನು ವಿಜ್ಞಾನ ಮತ್ತು ಕಲೆಗೆ ಅಧಿಪತಿ. ಈ  ದೇವಸ್ಥಾನವು ಕುಂಬಕೋಣಂನಿಂದ  28 ಕಿ.ಮೀ. ದೂರದಲ್ಲಿ ತಿರುವೆಂಗಾಡು ಎಂಬ ಊರಿನಲ್ಲಿದೆ. ನಾವು ಬುಧಗ್ರಹದ ದರ್ಶನ ಪಡೆದೆವು   ಬುಧನು  ಸೌಮ್ಯ ಹಾಗು ಶುಭ ಗ್ರಹ. ಬುಧನು ಕನ್ಯಾರಾಶಿಗೆ ಅಧಿಪತಿ. ಆತನು ಪ್ರತಿಯೊಬ್ಬರ ವಿದ್ಯಾಭ್ಯಾಸದಲ್ಲಿ  ಪ್ರಮುಖ ಪಾತ್ರ ವಹಿಸುತ್ತಾನೆ. ಬುಧ ದೋಷ ಇರುವವರು ವಿಷ್ಣು ಸಹಸ್ರನಾಮ ಪಠಣ ಮಾಡಬೇಕು ಮತ್ತು ಬಿಳಿಯ ವಸ್ತ್ರ ಧರಿಸಬೇಕೆನುತ್ತಾರೆ ಹಾಗು ಬುಧವಾರ ಉಪವಾಸ ಮಾಡಿದರೆ ಒಳ್ಳೆಯದೆನ್ನುತ್ತಾರೆ. 

ಗುರುಗ್ರಹ ಸೌಮ್ಯ  ಹಾಗು ದೊಡ್ಡ   ಗ್ರಹ. ಈ ದೇವಸ್ಥಾನವು  ಕುಂಬಕೋಣಂನಿಂದ  ಇಪ್ಪಂತೆಂಟು  ಕಿಲೋಮೀಟರು  ದೂರದಲ್ಲಿದೆ.  ಗುರುವು ಸುಪ್ರೀತನಾಗಿದ್ದಾಗ ಮನೆಯಲ್ಲಿ ಮಂಗಳ ಕಾರ್ಯಗಳು ಆಗುತ್ತವೆ. ಆದ್ದರಿಂದ ಒಳ್ಳೆಯ ಕಾರ್ಯವನ್ನು ಮಾಡುವಾಗ ಗುರುಬಲವನ್ನು ನೋಡುತ್ತಾರೆ. ಈತನು ಐಶ್ವರ್ಯವನ್ನು ನೀಡುತ್ತಾನೆ ಮತ್ತು ಬೇರೆ ಗ್ರಹಗಳ  ದೋಷಗಳನ್ನು ಪರಿಹರಿಸುತ್ತಾನೆ.

ಕೇತುಗ್ರಹ ದೇವಸ್ಥಾನವು ಪೆರಂಪಳ್ಳಂ  ಎನ್ನುವ ಊರಿನಲ್ಲಿದ್ದು ಕುಂಬಕೋಣಂನಿಂದ 14 ಕಿ.ಮೀ. ದೂರದಲ್ಲಿದೆ.  ಕೇತು ದೋಷ ಇರುವವರು ವಿನಾಯಕನನ್ನು ಪೂಜಿಸಬೇಕೆನ್ನುತ್ತಾರೆ. ಕೇತು  ಗ್ರಹವು ಒಳ್ಳೆಯ ಬುದ್ದಿ ಮತ್ತು ಮೋಕ್ಷವನ್ನು ಕರುಣಿಸುತ್ತಾನೆನ್ನುತ್ತಾರೆ. ಕೇತುದೋಷ(ಸರ್ಪದೋಷ) ಇರುವವರು   ಮಕ್ಕಳನ್ನು ಪಡೆಯಲು  ಇಲ್ಲಿರುವ ಮರಕ್ಕೆ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ.  ಇಲ್ಲಿ ಕೇತುಗ್ರಹಕ್ಕೆ ಕೈ ಮುಗಿದು ಮುಂದೆ ಸಾಗಿದೆವು. 

              ಭಕ್ತರು ಹರಕೆಯನ್ನು ಮರಕ್ಕೆ ಕಟ್ಟಿದ್ದನ್ನು ನೋಡಬಹುದು. 


ಕುಂಬಕೋಣಂನಿಂದ ಸುಮಾರು 62ಕಿ.ಮೀ. ದೂರದಲ್ಲಿ ತಿರುನಾಗೇಶ್ವರ ಎನ್ನುವಲ್ಲಿ   ರಾಹು ದೇವಸ್ಥಾನವಿದೆ.  ಈತನು ಬುದ್ದಿಗೆ ಅಧಿಪತಿ. ರಾಹುದೋಷಕ್ಕೆ ಉದ್ದನ್ನು ಹಾಗು ಬೆಳ್ಳಿಯ ಹಾವನ್ನು   ದಾನ ಮಾಡಬೇಕು.  ನಾವು ಈ ಗ್ರಹಕ್ಕೆ ನಮಿಸಿ,  ಮುಂದಿನ ದೇವಸ್ಥಾನವನ್ನು ನೋಡಲು ಹೋದೆವು. 




ಈ ಮೇಲಿನ ದೇವಸ್ಥಾನಗಳನ್ನು   ನೋಡಿಕೊಂಡು ಪುನಃ ಹೋಟೆಲ್ಲಿಗೆ ಬಂದು ಉಳಿದೆವು.  ಮರುದಿನ  24/04/2012 ಬೆಳ್ಳಿಗ್ಗೆ  ಎದ್ದು ಮಂಗಳ ಗ್ರಹ ದೇವಸ್ಥಾನವಿರುವ ವೈದ್ಯೇಶ್ವರ  ದೇವಸ್ಥಾನವನ್ನು ನೋಡಲು ಹೋದೆವು.   ಈತನು ಅರೋಗ್ಯ ಹಾಗು ಭೂಮಿಗೆ ಸಂಬಂದಿಸಿದ ಗ್ರಹ.  ಈ ದೋಷವಿದ್ದವರಿಗೆ, ಅನಾರೋಗ್ಯ ಹಾಗು  ಮದುವೆಯು ವಿಳಂಬವಾಗುವುದಲ್ಲದೆ ದಾಂಪತ್ಯ ಜೀವನಕ್ಕೆ ತೊಂದರೆಯಾಗುವುದರಿಂದ  ದೋಷ ಪರಿಹಾರ ಮಾಡಿಕೊಳ್ಳಬೇಕೆನ್ನುತ್ತಾರೆ.   

 ನಾವು ಈ ದೇವಸ್ಥಾನಕ್ಕೆ   ಹೋಗುವಾಗ ಸಾವಿರಾರು ಸಂಖ್ಯೆಯಲ್ಲಿ ಹರಕೆಯನ್ನು ಹೇಳಿಕೊಂಡ ಜನರು ಬರಿ ಕಾಲಿನಲ್ಲಿ ಉರಿಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದೆವು.   ಜನರ ಭಕ್ತಿ ಹೇಗೆಂದರೆ ಕೆಲವರಿಗೆ ಉರಿಬಿಸಿಲಿನಲ್ಲಿ ಬರಿ ಕಾಲಿನಲ್ಲಿ ಬಹಳ ದೂರದಿಂದ ನಡೆದು ಬಂದಿದ್ದರಿಂದ ಕಾಲಿನಲ್ಲಿ ರಕ್ತ ಚಿಮ್ಮುತ್ತಿದ್ದರು ಬಟ್ಟೆಯನ್ನು ಗಾಯಕ್ಕೆ ಕಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು ನಡೆಯುವುದನ್ನು ನೋಡಿದಾಗ ನಮ್ಮ ಮನಸ್ಸಿಗೆ ನೋವಾಯಿತು. ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದು ಮನಸ್ಸಿನಲ್ಲಿಯೇ ಬೇಡಿಕೊಂಡೆವು. 


ಹರಕೆಯನ್ನು ಹೇಳಿಕೊಂಡ ಜನರು ಬರಿಗಾಲಿನಲ್ಲಿಬಂದು ಸೇವೆ ಸಲ್ಲಿಸುತ್ತಾರೆ.  


ಮಂಗಳಗ್ರಹ ದೇವಸ್ಥಾನದಲ್ಲಿರುವ ಕಲ್ಯಾಣಿ 


                                          
                          ಮಂಗಳಗ್ರಹ ದೇವಸ್ಥಾನದಲ್ಲಿರುವ ಕಲ್ಯಾಣಿ ಎದುರು 

ಕುಂಭಕೋಣಂ ನಿಂದ ಸುಮಾರು 57 ಕಿಲೋಮೀಟರ್ ದೂರದಲ್ಲಿ ತಿರುನಳ್ಳಾರ್ ಶನೈಶ್ಚರ ದೇವಸ್ಥಾನವಿದೆ.  ಶನಿ ದೋಷ ಇರುವವರು ಎಳ್ಳನ್ನು  ದಾನ ಮಾಡಬೇಕು. ಕಪ್ಪು ಬಟ್ಟೆಯನ್ನು ಧರಿಸಬೇಕು ಮತ್ತು ಎಳ್ಳೆಣ್ಣೆಯನ್ನು ಶನಿದೇವಾಲಯಗಳಲ್ಲಿ ಕೊಡುವುದರಿಂದ ದೋಷಮುಕ್ತರಾಗುತ್ತಾರೆಂದು ಹೇಳುತ್ತಾರೆ.  ಅಲ್ಲಿಂದ ಮುಂದೆ  ಚಂದ್ರ ಗ್ರಹ ದೇವಸ್ಥಾನಕ್ಕೆ ಹೋದೆವು  

ಶನೈಶ್ಚರ ದೇವಸ್ಥಾನದ ಪಕ್ಕದ ಕೊಳದ ಮುಂದೆ.  

ತಿಂಗಳೂರು ಕುಂಬಕೋಣಂನಿಂದ ಹದಿನೆಂಟು ಕಿಲೋಮೀಟರು ದೂರವಿದ್ದು ಇಲ್ಲಿ ಚಂದ್ರಗ್ರಹದ ಸನ್ನಿಧಾನವಿದೆ.  ಸೂರ್ಯನ ನಂತರ ನವಗ್ರಹಗಳಲ್ಲಿ ಈ ಗ್ರಹಕ್ಕೆ ಎರಡನೇ ಪವಿತ್ರ ಸ್ಥಾನ ಈತನು ಔಷಧಿಗಳಿಗೆ ಹಾಗು ಭೂಮಿಗೆ ದೇವತೆ.  ಕಾಯಿಲೆಯಿಂದ ನರಳುವಾಗ, ನಿರಾಶೆಯಾದಾಗ, ಅಂಥವರು ಚಂದ್ರನನ್ನು ಬಿಳಿಯ ಹೂವಿನಿಂದ ಪೂಜಿಸಿದರೆ ಒಳ್ಳೆಯದೆನ್ನುತ್ತಾರೆ. ಪ್ರತಿಯೊಬ್ಬರ ಮನಸ್ಸಿನ  ಮೇಲೆ ಚಂದ್ರ ಗ್ರಹದ ಪರಿಣಾಮ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಚಂದ್ರ ತೀರ್ಥವಿದ್ದು ಇಲ್ಲಿ ಸ್ನಾನ ಮಾಡುವುದರಿಂದ ಚರ್ಮವ್ಯಾಧಿಯಿಂದ ಮುಕ್ತರಾಗುತ್ತಾರೆಂದು ನಂಬಿಕೆ. ಈ  ದೇವಸ್ಥಾನದಲ್ಲಿರುವ ಪೆರಿಯನಾಯಕಿ ಎಂದು ಕರೆಯಲ್ಪಡುವ ದೇವಿಗೆ ಹಾಗು ದಕ್ಷಿಣಾಮೂರ್ತಿ ಎಂದು ಕರೆಯಲ್ಪಡುವ ಶಿವನಿಗೆ ನಮಸ್ಕರಿಸಿ, ದೇವಸ್ಥಾನದ ಆವರಣದಲ್ಲಿರುವ ವೃಕ್ಷದ ಕೆಳಗೆ ಸ್ವಲ್ಪಹೊತ್ತು  ಕುಳಿತುಕೊಂಡು ,  ಹಿಂದಿರುಗಿದೆವು.
          

ಚಂದ್ರ ಗ್ರಹ ದೇವಸ್ಥಾನದ ಆವರಣದಲ್ಲಿ 

ಕುಂಬಕೋಣಂನಿಂದ ಸುಮಾರು ಹನ್ನೆರಡು ಕಿಲೋಮೀಟರ್ ದೂರದಲ್ಲಿ ಗಂಜನೂರು ಎನ್ನುವಲ್ಲಿ ಸೂರ್ಯ ದೇವಸ್ಥಾನವಿದೆ. ಈ ಗ್ರಹದ ದೋಷವಿರುವವರು ಕಷ್ಟಗಳ ಪರಿಹಾರಕ್ಕೆ  ಗೋದಿಯನ್ನು ದಾನ ಮಾಡಬೇಕು ಹಾಗು ಸೂರ್ಯ ನಮಸ್ಕಾರ ಮಾಡಬೇಕು. ಈತನು ಸಿಂಹ ರಾಶಿಗೆ ಅಧಿಪತಿ. ಕತ್ತಲೆಯನ್ನು ಕಳೆದು ಬೆಳಕನ್ನು ನೀಡುವ ಸೂರ್ಯದೇವರಿಗೆ ನಮಸ್ಕರಿಸಿ , ಹಿಂದಿರುಗಿದೆವು.  

       ನವಗ್ರಹ ದೇವಸ್ಥಾನಗಳಲ್ಲಿ ನಾವು ತೆಗೆದುಕೊಂಡ ಕೆಲವು ಫೋಟೋಗಳು 















ಕೇತುಗ್ರಹ ದೇವಸ್ಥಾನದ ಆವರಣದಲ್ಲಿ 




ಹೀಗೆ ನವಗ್ರಹ ದೇವಸ್ಥಾನಗಳನ್ನು ನೋಡಿಕೊಂಡು ನಮಗೇನಾದರೂ ದೋಷವಿದ್ದರೆ
ಪರಿಹಾರವಾಗಲಿ ಎಂದು ನವಗ್ರಹಗಳ ಅಧಿದೇವತೆಗಳಿಗೆ  ಬೇಡಿಕೊಂಡು 24/04/2012ರ ರಾತ್ರಿ  ರೈಲಿನಲ್ಲಿ ಬೆಂಗಳೂರಿಗೆ ಹಿಂದಿರುಗಿದೆವು.  

                                    ಶುಭಂ  

Comments