Navanarasimha, Shrishaila and Mahanandi Yatre
ಓಂ ಶ್ರೀ ನೃಸಿಂಹಾಯ ನಮಃ
ನವನಾರಸಿಂಹ ಕ್ಷೇತ್ರ , ಶ್ರೀಶೈಲ ಮತ್ತು ಮಹಾನಂದಿ:
ನಾವು ಸ್ನೇಹಿತರೆಲ್ಲ ಸೇರಿಕೊಂಡು ಮಾಘಸ್ನಾನದ ಉದ್ದೇಶದಿಂದ ಶ್ರೀಶೈಲ, ಮಹಾನಂದಿ ಹಾಗು ನವನಾರಸಿಂಹ ತೀರ್ಥಕ್ಷೇತ್ರಗಳಿಗೆ ಹೊರಟೆವು. ಎಲ್ಲರೂ ಬೆಂಗಳೂರಿನಿಂದ ಬಸ್ಸನ್ನು ಈ ಪ್ರವಾಸದ ಉದ್ದೇಶಕ್ಕೆ ಬಾಡಿಗೆಯ ಆದರದ ಮೇಲೆ ನಿಗದಿಪಡಿಸಿಕೊಂಡು ಮೊದಲು ನವನಾರಸಿಂಹ ಕ್ಷೇತ್ರವನ್ನು ನೋಡಲು ರಾತ್ರಿ ಬೆಂಗಳೂರಿನಿಂದ ಹೊರಟೆವು.
ಶ್ರೀ ಮಹಾವಿಷ್ಣುವಿನ ನಾಲ್ಕನೆಯ ಅವತಾರವೇ ಶ್ರೀ. ನರಸಿಂಹಾವತಾರ. ಈ ಅವತಾರದ ಬಗ್ಗೆ ನಾವು ಭಾಗವತ, ವಿಷ್ಣುಪುರಾಣ , ನೃಸಿಂಹ ಪುರಾಣಗಳಲ್ಲಿ ತಿಳಿಯುತ್ತೇವೆ.
ನಮಗೆಲ್ಲ ತಿಳಿದಿರುವ ಹಾಗೆ ಬ್ರಹ್ಮದೇವನ ಮಾನಸ ಪುತ್ರರಾದ ಸನಕ , ಸನಂದನ, ಸನಾತನ ಸನತ್ಕುಮಾರ ಮುನಿಗಳು ವಿಷ್ಣುವಿನ ದರ್ಶನಕ್ಕಾಗಿ ವೈಕುಂಠಕ್ಕೆ ಬರಲು, ದ್ವಾರಪಾಲಕರಾದ ಜಯ ವಿಜಯರು ಅವರನ್ನು ಒಳಗಡೆ ಬಿಡದೆ ಮುನಿಗಳ ಶಾಪಕ್ಕೆ ಗುರಿಯಾಗುತ್ತಾರೆ. ವಿಷ್ಣುವಿನ ಕರುಣೆಯಿಂದಾಗಿ ಶಾಪಗ್ರಸ್ತ ಜಯ ವಿಜಯರಿಗೆ ಒಂದು ಆಯ್ಕೆ ಸಿಗುತ್ತದೆ. ಮೊದಲನೆಯದು ವಿಷ್ಣುಭಕ್ತರಾಗಿ ಭೂಲೋಕದಲ್ಲಿ 7 ಜನ್ಮಗಳನ್ನು ಸವೆಸುವುದು ಅಥವಾ ವಿಷ್ಣುದ್ವೇಷಿಗಳಾಗಿ ಕೇವಲ ಮೂರು ಜನ್ಮಗಳನ್ನು ಕಳೆಯುವುದು. ಭಗವಂತನ ಸಾನಿಧ್ಯ ಬೇಗನೆ ಪಡೆಯಬೇಕೆಂಬ ಉದ್ದೇಶದಿಂದ ಅವರು ಮೂರು ಜನ್ಮಗಳನ್ನೆತ್ತುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮೊದಲನೆಯ ಜನ್ಮದಲ್ಲಿ ಹಿರನ್ಯಾಕ್ಷ-ಹಿರಣ್ಯಕಶ್ಯಪು, ಎರಡನೆಯ ಜನ್ಮದಲ್ಲಿ ರಾವಣ-ಕುಂಭಕರ್ಣ ಹಾಗು ಮೂರನೆಯ ಜನ್ಮದಲ್ಲಿ ದಂತವಕ್ರ - ಶಿಶುಪಾಲರಾಗಿ ಜನಿಸಿ ಶ್ರೀ. ಹರಿಯ ದ್ವೇಷಿಗಳಾಗಿ ಹುಟ್ಟಿ, ಶ್ರೀಹರಿಯಿಂದಲೇ ವಧಿಸಲ್ಪಟ್ಟು ಮತ್ತೆ ತಮ್ಮ ಸ್ವಾಮಿ ವಿಷ್ಣುವಿನ ಸಾನಿಧ್ಯವನ್ನು ಪಡೆಯುತ್ತಾರೆ.
ಅಹೋಬಲ ಅಥವಾ ಅಹೋಬಿಲ ಎಂದು ಕರೆಯಲ್ಪಡುವ ಈ ಕ್ಷೇತ್ರವು ನರಸಿಂಹ ಸ್ವಾಮಿಯು ಅವತರಿಸಿದ ಕ್ಷೇತ್ರ. ಇದು ಆಂದ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿದೆ. ನಂದ್ಯಾಳದಿಂದ ಸುಮಾರು 60 ಕಿ.ಮೀ. ದೂರದಲ್ಲಿದೆ. ಈ ಕ್ಷೇತ್ರವು ಸುಮಾರು 250 ಮೈಲಿಗಳಷ್ಟು ಉದ್ದಕ್ಕೆ ದಕ್ಷಿಣೋತ್ತರವಾಗಿ ಹರಡಿರುವ ಪೂರ್ವಘಟ್ಟದ ಬೆಟ್ಟಸಾಲಿನ ಮದ್ಯ ಭಾಗದಲ್ಲಿದೆ. ಪೌರಾಣಿಕವಾಗಿ ಇದು ಘಟ್ಟ ಪ್ರದೇಶದ ಮೇಲೆ ಮೈ ಚಾಚಿ ಮಲಗಿರುವ ಆದಿಶೇಷನ ನಡುಭಾಗವನ್ನು ಪ್ರತಿನಿಧಿಸುತ್ತದೆ ದಕ್ಷಿಣಕ್ಕಿರುವುದು ವೆಂಕಟಾಚಲ, ಉತ್ತರಕ್ಕಿರುವುದು ಶ್ರೀಶೈಲ. ತಿರುಮಲೆಯು ಆದಿಶೇಷನ ಹೆಡೆಯ ಭಾಗವನ್ನು ಶ್ರೀಶೈಲವು ಬಾಲದ ಭಾಗವನ್ನು ಪ್ರತಿನಿಧಿಸುತ್ತಾರೆ.
ಅಹೋಬಲದ ಅಕ್ಕ-ಪಕ್ಕದಲ್ಲಿರುವ ಎರಡು ಶಿಖರಗಳಲ್ಲಿ ಒಂದನ್ನು ಗರುಡಾದ್ರಿ ಎಂದೂ ಇನ್ನೊಂದನ್ನು ವೇದಾದ್ರಿ ಎಂದೂ ಕರೆಯುತ್ತಾರೆ. ಇವೆರಡು ಶಿಖರಗಳ ನಡುವೆಯೇ ಹಿರಣ್ಯ ಕಶಿಪುವಿನ ಅರಮನೆಯು ಇರುವ ಜಾಗವೆಂದು ಹೇಳುತ್ತಾರೆ. ಮಹಾವಿಷ್ಣುವು ತನ್ನ ಮಹಾ ಭಕ್ತ ಹಿರಣ್ಯಕಶಿಪುವಿನ ಮಗ ಪ್ರಹ್ಲಾದನನ್ನು ರಕ್ಷಿಸಲು ಹಾಗು ಹಿರಣ್ಯಕಶಿಪುವನ್ನು ಸಂಹಾರ ಮಾಡಲು ಹಿರಣ್ಯಕಶಿಪುವಿನ ಅರಮನೆಯ ಕಂಭವನ್ನು ಸೀಳಿಕೊಂಡು ನರಸಿಂಹರೂಪದಲ್ಲಿ ಪ್ರತ್ಯಕ್ಷನಾಗಿರುವ ಸ್ಥಳ ಇದು.
ಹಿರಣ್ಯಕಶಿಪುವಿನ ಒಡಲನ್ನು ನರಸಿಂಹ ಸ್ವಾಮಿಯು ಸೀಳಿದ ರಭಸಕ್ಕೆ ಬಿದ್ದ ರಕ್ತ ಮಾಂಸದ ತುಂಡುಗಳಿಂದ ಅಪವಿತ್ರವಾದ ಈ ಸ್ಥಳವನ್ನು ಮಂದಾಕಿನಿ ನದಿಯು ಇಲ್ಲಿ ಹರಿದು ಸ್ವಚ್ಛಗೊಳಿಸಿದ್ದರಿಂದ ಅವಳನ್ನು ಇಲ್ಲಿ ಭವನಾಶಿನಿ ಎಂದು ಕರೆಯುತ್ತಾರೆ. ನರಸಿಂಹ ದೇವರ ಕೋಪ ಶಮನಮಾಡಲು ಲಕ್ಷ್ಮೀದೇವಿಯು ಇಲ್ಲಿ ಉಪಸ್ಥಿತಳಿರುವು ದರಿಂದ ಈ ಅರಣ್ಯ ಪ್ರದೇಶವನ್ನು ಲಕ್ಷ್ಮೀವನವೆಂದು ಕರೆಯುತ್ತಾರೆಂದು ಹೇಳುತ್ತಾರೆ.
ಈ ಕ್ಷೇತ್ರವನ್ನು ಕೆಳಗಿನ ಅಹೋಬಲ (ದಿಗುವ ಅಹೋಬಿಲಂ)ಮೇಲಿನ ಅಹೋಬಲ (ಎಗುವ ಅಹೋಬಿಲಂ) ಎಂದು ಕರೆಯುತ್ತಾರೆ.
ನಾವು ಮೊದಲು ಕೆಳಗಿನ ಅಹೋಬಿಲದಲ್ಲಿರುವ ಯೋಗನರಸಿಂಹ ದೇವರ ದರ್ಶನ ಪಡೆದೆವು. ಇಲ್ಲಿ ಸ್ವಾಮಿಯು ಯೋಗಮುದ್ರೆಯಲ್ಲಿದ್ದು ಮಂದಸ್ಮಿತನಾಗಿರುವುದರಿಂದ ಈ ಮೂರ್ತಿಯನ್ನು ಯೋಗಾನಂದ ನರಸಿಂಹಸ್ವಾಮಿ ಎನ್ನುತ್ತಾರೆ.
ಹಿರಣ್ಯಕಶಿಪುವಿನ ವಧೆಯಾದ ನಂತರ ನರಸಿಂಹಸ್ವಾಮಿಯು ಪ್ರಹ್ಲಾದನಿಗೆ ಇಲ್ಲಿ ಯೋಗಾಸನಗಳನ್ನು ಹೇಳಿಕೊಟ್ಟಿರುವನೆಂದು ಹೇಳುತ್ತಾರೆ. ಸ್ವಾಮಿಯ ಒಂದು ಕೈಯಲ್ಲಿ ಶಂಖ ಇನ್ನೊಂದು ಕೈಯಲ್ಲಿ ಚಕ್ರವಿದೆ. ಕಾಲುಗಳ ಸುತ್ತ ಯೋಗಪಟ್ಟಿ ಇದೆ.
![]() |
| ಛತ್ರವಟ ನರಸಿಂಹ ದೇಗುಲದ ಎದುರು |
ನಂತರ ಭಾರ್ಗವ ನರಸಿಂಹನನ್ನು ನೋಡಿದೆವು. ಈ ದೇವಸ್ಥಾನವನ್ನು ಪ್ರವೇಶಿಸಲು ಸುಮಾರು 132 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಮೆಟ್ಟಿಲುಗಳ ಬಳಿಯಲ್ಲಿ ಸುಂದರವಾದ ಅಕ್ಷಯ ತೀರ್ಥವೆಂಬ ಕೊಳವಿದೆ. ನಾವು ತೀರ್ಥವನ್ನು ಪ್ರೋಕ್ಷಿಸಿಕೊಂಡು ದೇವಾಲಯಕ್ಕೆ ಹೋದೆವು. ಹಿರಣ್ಯಕಶಿಪುವನ್ನು ವಧಿಸಿದ ಮಹಾವಿಷ್ಣುವಿನ ರೂಪವನ್ನು ನೋಡಬೇಕೆಂದು ಪರಶುರಾಮನು ಅಕ್ಷಯ ತೀರ್ಥದ ಬಳಿ ಧ್ಯಾನಿಸಿದಾಗ ಆವರ್ಭವಿಸಿದ ನರಸಿಂಹರೂಪವಾದ್ದರಿಂದ ಇದಕ್ಕೆ ಭಾರ್ಗವ ನರಸಿಂಹನೆನ್ನುತ್ತಾರೆಂದು ಹೇಳುತ್ತಾರೆ. ಈ ಮೂರ್ತಿಯ ಸಮೀಪದಲ್ಲಿ ನಮಸ್ಕರಿಸುತ್ತಿರುವ ಪ್ರಲ್ಹದನ ಮೂರ್ತಿಯೂ ಇದೆ. ಇಲ್ಲಿ ತುಂಬಾ ವಾನರ ಸೈನ್ಯವಿರುವುದರಿಂದ ಪ್ರವಾಸಿಗರು ಜಾಗರೂಕರಾಗಿರಬೇಕು.
ಪಾವನ ನರಸಿಂಹ ಸ್ವಾಮಿಯ ಗುಡಿಗೆ ಹೋಗುವುದೇ ಒಂದು ಸಾಹಸ. ಕೆಳಗಿನ ಅಹೋಬಲದಿಂದ ಒಂದು ಜೀಪಿನಲ್ಲಿ ಹೋದೆವು. ಕಾಡಿನಲ್ಲಿ ರಸ್ತೆಯು ಬಂಡೆ ಕಲ್ಲುಗಳಿಂದ ಕೂಡಿದ್ದು ವಾಲಿಕೊಂಡು, ಮೇಲೆ ಮೇಲೆ ಹಾರಿಕೊಂಡು ಹೋಗುವ ಜೀಪಿನಲ್ಲಿ ಉಸಿರು ಬಿಗಿಹಿಡಿದುಕೊಂಡು ಕುಳಿತುಕೊಳ್ಳಬೇಕು. ಅಂತೂ ಸುಮಾರು 15 ಕಿ.ಮೀ. ಪ್ರಯಾಣದ ನಂತರ ಪಾವನ ನರಸಿಂಹ ಸ್ವಾಮಿಯ ದೇವಸ್ಥಾನ ತಲುಪಿದೆವು. ಇಲ್ಲಿ ಸ್ವಾಮಿಯು ಲಕ್ಷ್ಮೀದೇವಿಯೊಡನಿರುತ್ತಾನೆ. ಭಾರದ್ವಾಜ ಮುನಿಯು ಇಲ್ಲಿ ನರಸಿಂಹದೇವರನ್ನು ಪೂಜಿಸಿ ತಮ್ಮ ಪಾಪಗಳಿಂದ ವಿಮುಕ್ತರಾದರೆಂದು ಹೇಳುತ್ತಾರೆ ಹಾಗು ಈ ಸ್ವಾಮಿಯ ದರ್ಶನದಿಂದ ಪಾಪವಿಮುಕ್ತರಾಗಬಹುದೆಂಬ ನಂಬಿಕೆಯಿಂದ ಭಕ್ತರು ಕಷ್ಟಕರವಾದ ಈ ದಾರಿಯಲ್ಲಿ ಬಂದು ದರ್ಶನ ಪಡೆಯುತ್ತಾರೆ.
ಕಾರಂಜ ನರಸಿಂಹ ಅಥವಾ ಸಾರಂಗ ನರಸಿಂಹ ಈ ದೇವಾಲಯವು ಕಾರಂಜಾ ವೃಕ್ಷದಡಿಯಲ್ಲಿ ಇದೆ. ಆದಿಶೇಷನ ಹೆಡೆಯಡಿಯಲ್ಲಿ ನರಸಿಂಹ ಮೂರ್ತಿ ಇದೆ. ಮೇಲಿನ ಎರಡು ಕೈಗಳಲ್ಲಿ ಒಂದು ಕೈಯಲ್ಲಿ ಚಕ್ರ ಇನ್ನೊಂದು ಕೈಯಲ್ಲಿ ಬಿಲ್ಲು(ಸಾರಂಗ) ಇರುವುದರಿಂದ ಈ ನರಸಿಂಹ ದೇವರಿಗೆ ಸಾರಂಗ ನರಸಿಂಹನೆನ್ನುತ್ತಾರೆ.
![]() |
| ಕಾರಿಂಜ ನರಸಿಂಹ ದೇವರ ಗುಡಿಯ ಎದುರು |
ಈ ಜ್ವಾಲಾ ನರಸಿಂಹ ದೇವರನ್ನು ನೋಡಲು ಅರಣ್ಯ ಮಾರ್ಗದಲ್ಲಿ ರುದ್ರ ರಮಣೀಯ ದೃಶಗಳನ್ನು ನೋಡುತ್ತಾ ಮೇಲೆ ಮೇಲೆ ಸಾಗುವುದೇ ಒಂದು ಸಾಹಸಮಯವಾದರೂ ಸಂತೋಷಕರವಾದ ಪ್ರಯಾಣ. ಮೊದಲೇ ನಮಗೆ ಕಾಡಿನಲ್ಲಿ ಕಲ್ಲು-ಬಂಡೆಗಳ ಮದ್ಯದಲ್ಲಿ ಸಾಗಲು ನಮ್ಮ ಆಯೋಜಕರು ನಮಗೆಲ್ಲ ಒಂದೊಂದು ಮರದ ದೊಣ್ಣೆಯನ್ನು ಅಂದರೆ ಊರುಗೋಲನ್ನು ತೆಗೆದುಕೊಳ್ಳಲು ಹೇಳಿದ್ದರು.

![]() |
| ಜ್ವಾಲಾ ನರಸಿಂಹ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಸೇತುವೆ |
![]() |
| ಜ್ವಾಲಾನರಸಿಂಹ ದೇವಸ್ಥಾನದ ಎದುರು |
ಇಲ್ಲಿ ನಾವು ಮೂರು ಮೂರ್ತಿಗಳನ್ನು ನೋಡಬಹುದು. ಕಂಬವನ್ನು ಸೀಳಿ ಹೊರಬರುತ್ತಿರುವ ಚತುರ್ಭುಜ ನರಸಿಂಹ , ಹಿರಣ್ಯಕಶಿಪುವಿನ ಉದರವನ್ನು ಬಗೆಯುತ್ತಿರುವ ಅಷ್ಟಭುಜ ನರಸಿಂಹ ಹಾಗು ಕತ್ತಿಯನ್ನೆತ್ತಿ ತನ್ನತ್ತ ನುಗ್ಗಿ ಬರುತ್ತಿರುವ ಅಸುರನನ್ನು ಹಿಡಿದು ಬಲಗೈಯಿಂದ ಏಟು ಹಾಕುತ್ತಿರುವ ನರಸಿಂಹ.. ಹಾಗೆಯೆ ಪಕ್ಕದಲ್ಲಿ ಗಾಬರಿಗೊಂಡು ದೂರದಲ್ಲಿ ನಿಂತಿರುವ ಪ್ರಹ್ಲಾದನ ಮೂರ್ತಿಯನ್ನು ಕಾಣಬಹುದು. ಸ್ವಾಮಿಯ ದರ್ಶನ ಮಾತ್ರದಿಂದಲೇ ಆಯಾಸವೆಲ್ಲವೂ ಪರಿಹಾರವಾಗಿ, ದಿವ್ಯ ಆನಂದವಾಗುತ್ತದೆ.
ಈ ದೇಗುಲದ ಬಳಿಯೇ ರಕ್ತಕುಂಡವೆಂಬ ಕೊಳವಿದೆ. ಇದರ ನೀರು ಕೆಂಪಾಗಿದ್ದ್ದು ನರಸಿಂಹ ರೂಪಿ ಪರಮಾತ್ಮನು ಅಸುರನ ಹೊಟ್ಟೆ ಬಗೆದಾಗ ರಕ್ತಸಿಕ್ತ ತನ್ನ ಕೈಯನ್ನು ಇದರಲ್ಲೇ ತೊಳೆದನೆಂದು ಹೇಳುತ್ತಾರೆ.
ದೇಗುಲದ ಮುಂದೆ ನಾವು ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಹಿಂದಿರುಗುವಾಗ ದೂರದಿಂದ ಹಿರಣ್ಯ ಕಶಿಪುವಿನ ಅರಮನೆಯ ಕಂಬವೆಂದು ಹೇಳಲ್ಪಡುವ ಒಂದು ದೊಡ್ಡ ಮುರಿದ ಕಂಬವನ್ನು ನೋಡಬಹುದು.
ತನ್ನ ಕೋಪದಿಂದ ಹಿರಣ್ಯಕಶಿಪುವನ್ನು ವಧಿಸಿ ಉಗ್ರರೂಪಿಯಾಗಿದ್ದ ನರಸಿಂಹನ ಕೋಪವನ್ನು ತಣಿಸಿ ಶಾಂತ ಮೂರ್ತಿಯನ್ನಾಗಿ ಮಾಡಿದ ಲಕ್ಷ್ಮೀದೇವಿಯ ಕ್ಷೇತ್ರವಿದು . ಶಾಂತ ಮೂರ್ತಿಯಾದ ಸ್ವಾಮಿಯು ಭಕ್ತರ ಅಭೀಷ್ಟವನ್ನು ನೆರವೇರಿಸುತ್ತಾನೆಂಬ ನಂಬಿಕೆಯಿಂದ ಭಕ್ತರು ಶ್ರದ್ದೆಯಿಂದ ಬೇಡಿಕೊಳ್ಳುತ್ತಾರೆ.
ಇನ್ನೊಂದು ಹೇಳಿಕೆಯ ಪ್ರಕಾರ ಹಿರಣ್ಯಕಶಿಪುವಿನ ವಧೆಗಾಗಿ ಶ್ರೀ ಮಹಾವಿಷ್ಣುವು ಅವನ ಅರಮನೆಯ ಕಂಬವನ್ನು ಸೀಳಿಕೊಂಡು ನರಸಿಂಹ ರೂಪದಿಂದ ಹೊರಬಂದು ಅಸುರನ ಒಡಲನ್ನು ತನ್ನ ಉಗುರುಗಳಿಂದಲೇ ಬಗೆದು ವಧಿಸಿದಾಗ ಅಲ್ಲಿ ಸೇರಿದ್ದ ದೇವತೆಗಳು ಅಚ್ಚರಿಗೊಂಡು ಅಹೋಬಲ ಎಂದು ಉದ್ಗರಿಸಿದ್ದರಿಂದ ಇದಕ್ಕೆ ಅಹೋಬಲವೆಂದು ಕೂಡ ಹೇಳುತ್ತಾರೆ ಎನ್ನುವ ಪ್ರತೀತಿ ಇದೆ.

![]() |
| ಮಹಾನಂದಿ ಶಿವ ದೇವಸ್ಥಾನದ ಎದುರು |









Comments
Post a Comment