ಧರ್ಮಸ್ಥಳ ಹಾಗು ಅಷ್ಟ ವಿನಾಯಕ ಯಾತ್ರೆ



                                                   

ಧರ್ಮಸ್ಥಳ ಹಾಗು  ಅಷ್ಟ  ವಿನಾಯಕ ಯಾತ್ರೆ (2017)


ಗಜಾನನಂ ಭೂತ ಗಣಧಿಸೇವಿತಂ ಕಪಿತ್ಥಜಂಬು  ಫಲಸಾರ ಭಕ್ಷಿತಂ |

ಉಮಾ ಸುತಂ ಶೋಕ ವಿನಾಶ ಕಾರಣಂ, ನಮಾಮಿ ವಿಘ್ನೇಶ್ವರ ಪಾದಪಂಕಜಂ ||

ಆನೆಯ ಮುಖವನ್ನು ಹೊಂದಿದ, ಎಲ್ಲ ಗಣಗಳಿಗೆ  ಅಧಿಪತಿಯಾದ ,  ಕಪಿತ್ಥ  ನೇರಳೆ ಮೊದಲಾದ ಫಲಗಳನ್ನು ಸೇವಿಸುವ  ವಿಘ್ನಗಳನ್ನು ಪರಿಹರಿಸುವ ,  ಎಲ್ಲರ ದುಃಖವನ್ನು ದೂರಮಾಡುವ, ಉಮೆಯ ಮಗನಾದ ವಿಘ್ನೇಶ್ವರನ ಚರಣಕಮಲಗಳಿಗೆ  ಭಕ್ತಿಪೂರ್ವಕ ವಂದನೆಗಳನ್ನು ಮಾಡುತ್ತ ನನ್ನ  ವಿನಾಯಕ ಯಾತ್ರೆಯ ಸವಿನೆನಪುಗಳನ್ನು  ಈ ಮೂಲಕ ಹಂಚಿಕೊಳ್ಳಲು ಆಶಿಸುತ್ತೇನೆ. 

ನನ್ನ ಸ್ನೇಹಿತೆ ಸತ್ಯಭಾಮಾ, ಪ್ರೊಫೆಸರ್(ರಿ) ಹಾಗು ಅವರ ಪತಿ ಪ್ರೊ. ರಟ್ಟೀಹಳ್ಳಿ (ರಿ)ರವರು ಗೆಸ್ಟ್ ಪ್ರೊಫೆಸರ್ ಆಗಿ  ಧರ್ಮಸ್ಥಳದಲ್ಲಿರುವಾಗ    ತಮ್ಮ ಮನೆಗೆ ಬರುವಂತೆ    ಯಾವಾಗ್ಲೂ ಹೇಳುತ್ತಿದ್ದರು. ನಾನು ಆ ವರ್ಷವೇ ಅಂದರೆ 2017 ಮಾರ್ಚಿಯಲ್ಲಿ ನಿವೃತ್ತಿ ಹೊಂದಿ ಆರಾಮಾಗಿ ಮನೆಯಲ್ಲಿದ್ದಿದ್ದರಿಂದ  ಅವರ ಪ್ರೀತಿಯ ಕರೆಗೆ ಓಗೊಟ್ಟು ಬೆಂಗಳೂರಿನಿಂದ ಬಸ್ಸಿನಲ್ಲಿ 15 ನವೆಂಬರ್ 2017 ರಂದು ಧರ್ಮಸ್ಥಳಕ್ಕೆ ಹೋದೆನು. ಅವರು ನನಗಾಗಿ ಅವರ ಮನೆಯ ಹತ್ತಿರ  ನಿರೀಕ್ಷಿಸುತ್ತಿದ್ದರು. ತುಂಬಾ ವರ್ಷಗಳ ನಂತರದ ಭೇಟಿ ನಮಗೆ ಅತೀವ ಸಂತೋಷವನ್ನುಂ ಟುಮಾಡಿತು. ಸತ್ಯಭಾಮ ಹಾಗು ನನ್ನದು ನಲವತ್ತು ವರ್ಷಗಳ ನಂಟು.  ಅವರು ಬೆಂಗಳೂರಿನ  ಕೃಷಿ ವಿಶ್ವವಿದ್ಯಾನಿಲಯದಲ್ಲಿ  1979 ರಲ್ಲಿ  ಉಪನ್ಯಾಸಕರಾಗಿದ್ದರು. ನಾನು ಕರ್ನಾಟಕ ಸರ್ಕಾರದ ರಾಜ್ಯ ಗುಪ್ತವಾರ್ತೆ ಇಲಾಖೆಯಲ್ಲಿ  ಬೆರಳಚ್ಚುಗಾರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದೆನು. ಇಬ್ಬರೂ  ಬೇರೆಬೇರೆ ಊರುಗಳಿಂದ ಬಂದಿರುವುದರಿಂದ ನಾವು, ಬೆಂಗಳೂರಿನ ಸುಬ್ಬಯ್ಯ ವೃತ್ತದ ಹತ್ತಿರವಿರುವ  ಯೂನಿವರ್ಸಿಟಿ ಆಫ್ ವರ್ಕಿಂಗ್ ವುಮೆನ್ಸ್  ಅಸೋಸಿಯೇಷನ್    ವಸತಿ ಗೃಹದಲ್ಲಿ ಒಂದೇ  ಕೊಠಡಿಯಲ್ಲಿದ್ದೆವು. ಅವರು ವಿವಾಹದ ನಂತರ ಅವರ ಪತಿಯವರು ಕೊಲ್ಲಾಪುರ ಯೂನಿವೆರ್ಸಿಟಿಯಲ್ಲಿ  ಉಪನ್ಯಾಸಕರಾಗಿದ್ದರಿಂದ  ಇವರೂ ಕೂಡ ಕೊಲ್ಲಾಪುರಕ್ಕೆ ಹೋಗಬೇಕಾಯಿತು.  ಆಷ್ಟರಲ್ಲಿ ನನ್ನ ಅಕ್ಕನನ್ನು ಅವರ ಮನೆಗೆ ಸೊಸೆಯಾಗಿ ತಂದುಕೊಳ್ಳುವ ವಿಚಾರದಲ್ಲಿ ನಮ್ಮಿಬ್ಬರ  ಕುಟುಂಬದಲ್ಲಿ ಮಾತುಕತೆಯಾಗಿ  ಮಂದೆ  ನಾವು ಸಂಬಂಧಿಕರೂ ಆದೆವು. ಸಂಬಂದಕ್ಕಿಂತ ಹೆಚ್ಚಾಗಿ ನಮ್ಮ ಗೆಳೆತನವು ಇನ್ನೂ ಹೆಚ್ಚಿನ  ಆತ್ಮೀಯತೆಯಲ್ಲಿ ಮುಂದುವರಿಯುತ್ತಿದೆ ಎನ್ನಲು ಸಂತೋಷವಾಗುತ್ತದೆ.  ಹೀಗೆ ಗೆಳತಿಯನ್ನು ಭೇಟಿ ಮಾಡಲು ಧರ್ಮಸ್ಥಳಕ್ಕೆ ಹೋದೆನು. ಅಲ್ಲಿ ಆಗ ಲಕ್ಷ ದೀಪೋತ್ಸವ ನಡೆಯುತ್ತಿತ್ತು. ನಾನು ಹಾಗು ಅವರ ಮನೆಯವರೆಲ್ಲ ಸೇರಿ ಲಕ್ಷ ದೀಪೋತ್ಸವ ಹಾಗು ಮರುದಿನ ಸುತ್ತಮುತ್ತಲಿರುವ ದೇವಸ್ಥಾನಗಳನ್ನು  ನೋಡಲು ಹೋದೆವು. 


ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ 

ಧರ್ಮಸ್ಥಳದ ಲಕ್ಷ ದೀಪೋತ್ಸವವನ್ನು ನೋಡುವುದು ಒಂದು ಸೌಭಾಗ್ಯ ಹಾಗು ಕಣ್ಣಿಗೆ ಮರೆಯಲಾರದ ಹಬ್ಬ.  ಲಕ್ಷ ದೀಪೋತ್ಸವ ಹಾಗು ಅದರ ನಿಮಿತ್ತ ಧರ್ಮಸ್ಥಳದಲ್ಲಿ  ಧರ್ಮಾಧಿಕಾರಿಯವರಾದ ಶ್ರೀ. ವೀರೇಂದ್ರ ಹೆಗ್ಗಡೆಯವರು ಏರ್ಪಡಿಸಿದ್ದ ಸರ್ವಧರ್ಮ ಸಮ್ಮೇಳನವನ್ನು ನೋಡುವ ಅವಕಾಶವಾದದ್ದು ನನ್ನ ಪುಣ್ಯ ಎನ್ನಿಸುತ್ತದೆ. ಏಕೆಂದರೆ ಅಲ್ಲಿ ಸೇವಾಮನೋಭಾವದಿಂದ ನಡೆಯುವ  ಕಾರ್ಯಕ್ರಮ ಹಾಗು ಧರ್ಮಕಾರ್ಯಗಳ ಬಗ್ಗೆ ತಿಳಿದಿದ್ದ ನನಗೆ  ಖುದ್ದಾಗಿ ಅಲ್ಲಿ ಇದ್ದು ನೋಡುವ ಅವಕಾಶವಾದದ್ದು ಆ ಮಂಜುನಾಥನ  ಕೃಪೆ ಎನ್ನಿಸುತ್ತದೆ. ಧರ್ಮಾಧಿಕಾರಿಯವರನ್ನು ತುಂಬಾ ಹತ್ತಿರದಿಂದ ನೋಡುವಾಗ ಮನಸ್ಸಿಗೆ ಅವರ್ಣನೀಯ ಸಂತೋಷ. ಅತೀ ಸರಳ, ಸೌಮ್ಯ ಧೀಮಂತ ವ್ಯಕ್ತಿತ್ವದ ಅವರು ದೇವರ ಸೇವೆ  ಹಾಗು ಸಮಾಜ ಸೇವೆಯನ್ನೇ  ತಮ್ಮ ಉಸಿರಾಗಿಸಿಕೊಂಡಿರುವುದನ್ನು ನಾವು ಮನಗಾಣಬಹುದು.  ಅಲ್ಲಿ ಲಕ್ಷದೀಪೋತ್ಸವದ ಸಲುವಾಗಿ ಲಕ್ಷಾನುಗಟ್ಟಲೆ ಜನಸ್ತೋಮ. ಅಂತಹ ಸಂಧರ್ಭದಲ್ಲಿಯೂ ಅಲ್ಲಿ ಪಾಲಿಸುತ್ತಿರುವ ಶಿಸ್ತು, ಶುಚಿತ್ವ , ಅನ್ನದಾನ ಸೇವೆ, ದೇವಸ್ಥಾನದಲ್ಲಿ ಸಮಯಕ್ಕೆ ಸರಿಯಾಗಿ ನಡೆಸುವ ದೇವರ ಪೂಜಾಕಾರ್ಯಕ್ರಮಗಳು, ಇವುಗಳನ್ನೆಲ್ಲ ನೋಡಿದಾಗ ಈ ಸ್ಥಳದ ಶಕ್ತಿ ಹಾಗು ಮಹಿಮೆಯ ಬಗ್ಗೆ ನಮಗೆ ಹೆಮ್ಮೆ ಎನ್ನಿಸುತ್ತದೆ ಹಾಗು ಭಕ್ತಿ ಹೆಚ್ಚಾಗುತ್ತದೆ.   ಸರ್ವಧರ್ಮ  ಸಮ್ಮೇಳನದಲ್ಲಿ  ಶ್ರೀ. ಹೆಗ್ಗಡೆಯವರು , ಸುಧಾಮೂರ್ತಿ ಮೇಡಂ,  ಸಮ್ಮೇಳನಕ್ಕೆ  ಮುಸ್ಲಿಂ-  ಕ್ರಿಶ್ಚಿಯನ್ ಧರ್ಮದ     ಕಡೆಯಿಂದ ಬಂದ   ಮಹನೀಯರುಗಳೆಲ್ಲ  ಮಾತನಾಡಿ  ಎಲ್ಲ ಧರ್ಮದ ತಿರುಳು ಒಂದೇ ಎಂದು ಮಾತನಾಡಿದ್ದನ್ನು ಕೇಳಿದಾಗ ಹಾಗು  ಈ ಸಮನ್ವಯವನ್ನು ನೋಡಿದಾಗ  ಈ ಜಾಗದ ಮಹಿಮೆಯನ್ನು ಧರ್ಮಸ್ಥಳ ಎಂಬ  ಹೆಸರಿನ ಸಾರ್ಥಕ್ಯವನ್ನು ನಾವು ಮನಗಾಣಬಹುದು. ಇಲ್ಲಿ ಬಡವ ಬಲ್ಲಿದ, ಮೇಲು-ಕೀಳು, ಜಾತಿ-ಮತ, ಧರ್ಮ  ಎಂಬ ಯಾವ ಬೇಧ-ಭಾವಗಳಿಲ್ಲದ  ವಾತಾವರಣವನ್ನು   ನೋಡಿದಾಗ, ಇಂತಹ ಪುಣ್ಯ ಸ್ಥಳಕ್ಕೆ ಬಂದಿದ್ದು ನನ್ನ ಪುಣ್ಯವೇ ಎನಿಸಿತು. ಶ್ರೀ. ವೀರೇಂದ್ರ ಹೆಗಡೆಯವರಿಗೆ ಹೆಗಲಾಗಿ ನಿಂತ ಅವರ ಕುಟುಂಬದವರನ್ನೂ ಹಾಗು ಅವರೆಲ್ಲರ  ಸರಳ ಸ್ವಭಾವವನ್ನೂ  ನಾನು ಇಲ್ಲಿ ನೋಡಿ ಜೀವನದಲ್ಲಿ ಇವರಿಂದ ನಾವೆಷ್ಟು ಕಲಿಯುವುದಿದೆ ಎನ್ನಿಸಿತು.  ಧರ್ಮ ಸಮ್ಮೇಳನದಲ್ಲಿ  ಅವರ ಕುಟುಂಬದವರೆಲ್ಲ  ಸಾರ್ವಜನಿಕರು ಕುಳಿತುಕೊಳ್ಳುವ ಕುರ್ಚಿಗಳಲ್ಲಿಯೇ  ಕುಳಿತದ್ದನ್ನು , ಅವರು ಜನರೊಡನೆ  ಸ್ವಾಭಾವಿಕವಾಗಿ ಬೆರೆತಿದ್ದನ್ನು   ನೋಡಿದಾಗ ನನಗೆ ಅವರೆಲ್ಲರೂ ಆದರ್ಶ  ಹಾಗು   ಅನುಕರಣೀಯ ವ್ಯಕ್ತಿಗಳಾಗಿ ಕಂಡರು. ಇವೆಲ್ಲವನ್ನೂ ನೋಡಿಕೊಂಡು, ನಾವು ಸಾಯಂಕಾಲ ಶ್ರೀ.ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದು, ಭಗವಂತನಿಗೆ ಭಕ್ತಿಯಿಂದ ತಲೆಬಾಗಿ ನಮಿಸಿ,   ಹೊರಗಡೆ  ಬಂದು ಲಕ್ಷದೀಪೋತ್ಸವವನ್ನು ಕಣ್ಣು ತುಂಬಿಕೊಂಡಿದ್ದು  ಮರೆಯಲಾಗದ ಅನುಭವ. ರಾತ್ರಿ ಅಲ್ಲಿಯೇ ಪ್ರಸಾದವನ್ನು ಸ್ವೀಕರಿಸಿ, ಮನೆಗೆ ಹಿಂದಿರುಗಿದೆವು. 

ಮರುದಿನ ನಾವು ಧರ್ಮಸ್ಥಳದ ಸುತ್ತಲಿರುವ ದೇವಸ್ಥಾನವನ್ನು ನೋಡಲು ಹೋದೆವು.



ಸದಾಶಿವರುದ್ರ  ದೇವಸ್ಥಾನ , ಸೂರ್ಯ 


ಸದಾಶಿವರುದ್ರ ದೇವಸ್ಥಾನ ಸೂರ್ಯಗ್ರಾಮ 


ಸದಾಶಿವ ದ್ರ ದೇವಸ್ಥಾನದ  ಹರಕೆಯ ಬನದಲ್ಲಿ ,  ಸೂರ್ಯ ಗ್ರಾಮ 

ಸದಾಶಿವರುದ್ರ ದೇವರಿಗೆ ನಮಸ್ಕರಿಸಿ, ಮಣ್ಣಿನ ಹರಕೆಯ ಬನವನ್ನು ನೋಡಿದೆವು.   ಇಲ್ಲಿ ಭಕ್ತಾದಿಗಳು ಮಣ್ಣಿನ ಗೊಂಬೆಯ ಹರಕೆಯನ್ನು ಹೇಳಿಕೊಂಡು  ಅದನ್ನು ಒಪ್ಪಿಸುತ್ತಾರೆ.  ಮುಂದೆ  ನಾವು ಮಹಾಗಣಪತಿ  ದೇವಸ್ಥಾನ ಅಡ್ಯನಡಕಕ್ಕೆ ಹೋದೆವು.

ಮಹಾಗಣಪತಿ ಅಡ್ಯನಡಕ 

ಮಹಾಗಣಪತಿ ದೇವಸ್ಥಾನದಲ್ಲಿ ಗಂಟೆಯ ಹರಕೆ 

ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರು ಗಂಟೆಯ ಹರಕೆಯನ್ನು ಹೇಳಿಕೊಂಡು, ಅದನ್ನು ತಂದು ಗುಡಿಯಲ್ಲಿ ಒಪ್ಪಿಸುತ್ತಾರೆ. ಮದ್ಯಾನ್ಹ ಅಲ್ಲಿ ಪ್ರಸಾದವನ್ನು ಸ್ವೀಕರಿಸಿ, ಶಿಶಿಲೇಶ್ವರ ದೇವಸ್ಥಾನಕ್ಕೆ ಹೋದೆವು.  

ಶಿಶಿಲೇಶ್ವರ ದೇವಸ್ಥಾನವು ಕಪಿಲ ನದಿಯ ದಂಡೆಯಮೇಲಿದ್ದು ಒಂದು ಸುಂದರ ಪರಿಸರವಾಗಿದೆ.  
ಈ ದೇವಸ್ಥಾನದ ಬಗ್ಗೆ ಕೆಳಗಿರುವ ಬಿತ್ತಿ ಪತ್ರದಲ್ಲಿ ತಿಳಿಯಬಹುದು. 


ಅಲ್ಲಿ ನಾವುಗಳು ಸುಂದರ ಪರಿಸರದಲ್ಲಿ ನೆನಪಿಗೋಸ್ಕರ ಛಾಯಾಚಿತ್ರವನ್ನು ತೆಗೆದುಕೊಂಡೆವು. 

ಕಪಿಲಾನದಿಯ ತೂಗು ಸೇತುವೆ ಮೇಲೆ 


ಹೀಗೆ ಧರ್ಮಸ್ಥಳದ ಸುತ್ತಮುತ್ತಲಿನ ದೇವಸ್ಥಾನಗಳನ್ನು ನೋಡಿಕೊಂಡು ಮನೆಗೆ ಹಿಂದಿರುಗಿದೆವು.  ಇದೊಂದು ನನ್ನ ಗೆಳತಿಯ ಕುಟುಂಬದವರೊಡನೆ  ಮಾಡಿದ ಧರ್ಮಸ್ಥಳದ  ಸುಂದರ ಯಾತ್ರೆ. 

ಎರಡು ದಿನಗಳ  ನಂತರ ನಾವು ಪೂನಾಕ್ಕೆ ಹೋದೆವು. ಅಲ್ಲಿ ಸತ್ಯಭಾಮರವರ ಗೆಳತಿಯ ಮನೆಯಲ್ಲಿ ನಾವು ಉಳಿದುಕೊಂಡೆವು. ಅವರ ಮನೆಯಲ್ಲಿ ನಮಗೆ ತುಂಬಾ ಆದರದಿಂದ ಪ್ರೀತಿಯಿಂದ ಉಪಚರಿಸಿದರು.  ನಾವು ಮರುದಿನ ದೌಲತಾಬಾದ್ ಫೋರ್ಟ್ ,  ಆಘಾಖಾನ್ ಅರಮನೆ, ಅಲ್ಲಿಯ ಸುತ್ತಲಿನ ಕೆಲವು ಸ್ಥಳಗಳನ್ನು  ನೋಡಿದೆವು. 

ದೌಲತಾಬಾದನ್ನು ಮೊದಲು ದೇವಗಿರಿ ಎಂದು ಕರೆಯುತ್ತಿದ್ದರೆಂದು ನಾವು ಇತಿಹಾಸದಲ್ಲಿ ಓದುತ್ತೇವೆ.  ಪುರಾಣದ ಉಲ್ಲೇಖದ ಪ್ರಕಾರ ಶಿವನು ಈ ದೇವಗಿರಿಯ ಪರ್ವತದಲ್ಲಿ ವಾಸವಿದ್ದನೆಂದು ಆದ್ದರಿಂದ ಇದಕ್ಕೆ ದೇವಗಿರಿ ಎಂದು ಹೆಸರು ಬಂದಿತೆಂದು ಹೇಳುತ್ತಾರೆ. ಇಲ್ಲಿಯ ಸುಂದರ ಪರಿಸರವನ್ನು ನೋಡಿಕೊಂಡು ನಾವು ಆಘಾಖಾನ್ ಅರಮನೆಯನ್ನು  ನೋಡಲು ಹೋದೆವು. 



ಆಘಾಖಾನ್ ಅರಮನೆ - ಗಾಂಧಿ ನ್ಯಾಷನಲ್ ಮೆಮೋರಿಯಲ್ 



ಹತ್ತೊಂಬತ್ತನೇ ಶತಮಾನದಲ್ಲಿ ಅಂದರೆ  ಸ್ವಾತಂತ್ರದ ಪೂರ್ವದಲ್ಲಿ  ಆಘಾಖಾನ್ ಎಂಬ ಮುಸ್ಲಿಂ ದೊರೆಯು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ಒಮ್ಮೆ ಬರಗಾಲ ಬಂದು ಜನರು ಕಂಗೆಟ್ಟಾಗ  ಅಲ್ಲಿಯ ಸುತ್ತಮುತ್ತಲಿನ ಗ್ರಾಮದವರಿಗೆ ಕೆಲಸವನ್ನು ಕೊಡುವ ಉದ್ದೇಶದಿಂದ ಈ 
ಅರಮನೆಯನ್ನು ಕಟ್ಟಿಸಿದನೆಂದು ಹೇಳುತ್ತಾರೆ. ಸ್ವತಂತ್ರ ನಂತರದಲ್ಲಿ ಆಘಾಖಾನರ   ವಂಶಸ್ಥ  ಖರೀಂ ಆಘಾಖಾನ್  ಎಂಬುವರು  1969  ರಲ್ಲಿ ಭಾರತಕ್ಕೆ ಬಂದಾಗ ಈ ಅರಮನೆಯನ್ನು  ಇದರ ಸುತ್ತಮುತ್ತಲಿನ  ಪ್ರದೇಶದೊಡನೆ ಭಾರತ ಸರ್ಕಾರದ ಗಾಂಧಿ ಸ್ಮಾರಕ ನಿಧಿಗೆ ಕೊಡುಗೆಯಾಗಿ, ಮಹಾತ್ಮಾ ಗಾಂಧೀಜಿಯವರು ಮತ್ತು ಅವರ ತತ್ವಸಿದ್ದಂತಾದ ನೆನಪಿಗಾಗಿ  ನೀಡಿದನೆಂದು ಹೇಳುತ್ತಾರೆ.  ಈ ಸ್ಮಾರಕವು ಈಗ ಭಾರತದ ಸ್ವತಂತ್ರ ಚಳುವಳಿಯ  ರಾಷ್ಟ್ರೀಯ ಸ್ಮಾರಕವೆಂದು ಗುರುತಿಸಲ್ಪಟ್ಟಿದೆ.  ಇಲ್ಲಿ ಮಹಾತ್ಮಾ ಗಾಂಧೀಜಿಯವರ ಜೀವನಕ್ಕೆ ಹಾಗು ಅವರ ಚಳುವಳಿಗಳಿಗೆ ಸಂಬಂಧಿಸಿದ  ಅನೇಕ ಛಾಯಾಚಿತ್ರಗಳನ್ನು ನೋಡಬಹುದು
 
ಆಘಾಖಾನ್ ಅರಮನೆಯಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪುತ್ತಳಿ. 

           ಆಘಾಖಾನ್ ಅರಮನೆಯ ಸುಂದರ ವರಾಂಡ 

            ಆಘಾಖಾನ್ ಅರಮನೆಯ ಮುಂಭಾಗ 

ಆ ದಿನ ಸಾಯಂಕಾಲ ಶ್ರೀ.ರಟ್ಟೀಹಳ್ಳಿ, ಸತ್ಯಭಾಮ ಹಾಗು ಅವರ  ಆತ್ಮೀಯ ಸ್ನೇಹಿತರೆಲ್ಲ ಒಂದು  ಹೋಟೆಲ್ಲಿನಲ್ಲಿ ಭೇಟಿಮಾಡಿ  ಅವರ ಹಿಂದಿನ ನೆನಪಿನ ದಿನಗಳನ್ನು  ಹಂಚಿಕೊಂಡರು. ನನಗೂ ಕೂಡ ಅವರೆಲ್ಲರ ಗೆಳೆತನವನ್ನು ನೋಡಿ ಸಂತೋಷವಾಯಿತು. 

ಆತ್ಮೀಯರ ಭೇಟಿ , 20.11.2017

ಅಷ್ಟ ವಿನಾಯಕ ಯಾತ್ರೆ:

ಮಹಾರಾಷ್ಟ್ರದ ಈ ಅಷ್ಟವಿನಾಯಕ ದೇವಾಲಯಗಳಲ್ಲಿರುವ ಗಣೇಶ ಮೂರ್ತಿಗಳು ಸ್ವಯಂಬು ಮೂರ್ತಿಗಳಾಗಿದ್ದು  ಜಾಗೃತ ಸ್ಥಳವಾಗಿವೆ.  ಶ್ರದ್ದಾ ಭಕ್ತಿಯಿಂದ ವಿನಾಯಕ ಸ್ವಾಮಿಯನ್ನು ಬೇಡಿಕೊಂಡಲ್ಲಿ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆಂಬ ನಂಬಿಕೆ ಭಕ್ತರಲ್ಲಿ.  ಆದ್ದರಿಂದ ಈ ದೇವಾಲಯಗಳಿಗೆ ಯಾವಾಗಲು ಭಕ್ತರು ಯಾತ್ರೆ  ಕೈಗೊಳ್ಳುತ್ತಾರೆ. 

ನಾನು ಹಾಗು ಸತ್ಯಭಾಮ ಪುಣೆಯಿಂದ ದಿನಾಂಕ 21.11.2017 ರಂದು ಅಷ್ಟವಿನಾಯಕ ಯಾತ್ರೆ ಪ್ಯಾಕೇಜ್ ಟೂರಿನ ಬಸ್ಸಿನಲ್ಲಿ ಈ ಯಾತ್ರೆಯನ್ನು ಕೈಗೊಂಡೆವು. 
 
ಬೆಳಿಗ್ಗೆ ಹೋರಾ ಪುಣೆಯಿಂದ ಹೊರಟ   ನಾವು  ಮೊದಲು ಮೊರ್ಗಾವ್ ನಲ್ಲಿರುವ ಮಯೂರೇಶ್ವರ ಗಣಪತಿಯ ದರ್ಶನವನ್ನು ಪಡೆದು ನಮಸ್ಕರಿಸಿ ಹೊರಟೆವು. ಸಂಪ್ರದಾಯದ ಪ್ರಕಾರ  ಯಾತ್ರಿಕರು  ಮೊದಲು ಮತ್ತು ತಮ್ಮ ಯಾತ್ರೆಯ ಮುಕ್ತಾಯದಲ್ಲಿ  ಈ ಗಣಪತಿಯ ದರ್ಶನವನು ಮಾಡುತ್ತಾರೆ. ಗಣೇಶ ಪುರಾಣ ಕಥೆಯ ಪ್ರಕಾರ ಇಲ್ಲಿ ಗಣೇಶನು  ಮಯೂರವನ್ನು ತನ್ನ ವಾಹನವನ್ನಾಗಿ ಮಾಡಿಕೊಂಡು ಸಿಂಧು ಎಂಬ ರಾಕ್ಷಸನನ್ನು ವಧಿಸಿದ್ದರಿಂದ ಮಯೂರೇಶ್ವರನೆಂದು ಪ್ರಸಿದ್ಧಿಯಾಗಿರುವುದಾಗಿ ಹೇಳುತ್ತಾರೆ. 

 ಮೊಘಲ್ ಆಡಳಿತದ ವೇಳೆಯಲ್ಲಿ  ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸುತ್ತಿದ್ದುದರಿಂದ, ಅವರಿಂದ ರಕ್ಷಿಸಿಕೊಳ್ಳಲು ಈ ದೇವಾಲಯವನ್ನು ಸ್ವಲ್ಪ ಮಸೀದಿಯನ್ನು ಹೋಲುವ ಹಾಗೆ ಕಟ್ಟಿರುವರೆಂದು ಹೇಳುತ್ತಾರೆ.  

          ಮಯೂರೇಶ್ವರ ಗುಡಿಯ ಎದುರು
        

ನಂತರ  ಅಹಮದ್  ನಗರ ಜಿಲ್ಲೆಯ ಸಿದ್ಧಟೇಕ್ ಗ್ರಾಮದಲ್ಲಿರುವ ಶ್ರೀ. ಸಿದ್ಧಿವಿನಾಯಕ ದೇವರ ದರ್ಶನವನ್ನು ಪಡೆದು ನಮ್ಮೆಲ್ಲರ ಇಷ್ಟಾರ್ಥಗಳನ್ನೆಲ್ಲ ಸಿದ್ದಿಸುವ ಹಾಗೆ ಅನುಗ್ರಹಿಸು ಎಂದು ಬೇಡಿಕೊಂಡು , ರಾಯಗಡ ಜಿಲ್ಲೆಯ ಮಹಾಡ್ ಗ್ರಾಮದಲ್ಲಿರುವ ವರದ ವಿನಾಯಕ ದೇವರ ದರ್ಶನವನ್ನು ಪಡೆಯಲು ಹೋದೆವು.  ಇಲ್ಲಿ ಗಣಪತಿಯು  ಭಕ್ತಿಯಿಂದ ಪೂಜಿಸಲು ವರವನ್ನು ಕರುಣಿಸುವನೆಂದು ಹೇಳುತ್ತಾರೆ. 

      ಸಿದ್ದಿ  ವಿನಾಯಕ ಗುಡಿಯ ಎದುರುಗಡೆ

ಮುಂದೆ ಪುಣೆ ಜೆಲ್ಲೆಯ ರಂಜನ್  ಗಾವ್ ನಲ್ಲಿರುವ ಮಹಾಗಣಪತಿ ದೇವರ ದರ್ಶನವನ್ನು ಮಾಡಿ, ಅದೇ  ಜಿಲ್ಲೆಯ ತೇವೂರಿನಲ್ಲಿರುವ ಚಿಂತಾಮಣಿ ಗಣಪತಿಯ ದರ್ಶನವನ್ನು ಪಡೆದೆವು.   ಓಝರ್ ಗ್ರಾಮದಲ್ಲಿರುವ ವಿಜ್ಞೇಶ್ವರನ ದರ್ಶನವನ್ನು ಪಡೆಯಲು ಅಲ್ಲಿಗೆ ಹೋಗಿ, ರಾತ್ರಿ ಅಲ್ಲಿಯೇ ಒಂದು ಹೋಟೆಲ್ಲಿನಲ್ಲಿ ತಂಗಿದೆವು. 

        ಮಹಾಗಣಪತಿ ಗುಡಿಯ  ಆವರಣದಲ್ಲಿ 

ಶಿವನು ತ್ರಿಪುರಾಸುರನನ್ನು ವಧಿಸುವ ಮೊದಲು ಈ ಗಣಪತಿಯನ್ನು ಸ್ತುತಿಸಿದ್ದರಿಂದ ಈ ಗಣಪತಿಗೆ ಮಹಾ ಗಣಪತಿ ಎಂಬ ಹೆಸರು ಬಂದಿರುವುದಾಗಿ ಹೇಳುತ್ತಾರೆ. 

         ಚಿಂತಾಮಣಿ ಗಣಪತಿ, ಥೇವೂರು 

ಕಪಿಲ ಋಷಿಯ ಪವಿತ್ರ ಚಿಂತಾಮಣಿಯನ್ನು  ಇಲ್ಲಿ ಗುಣ ಎಂಬ ಅಸುರನಿಂದ  ಗಣಪತಿಯು  ಕಪಿಲರಿಗೆ ಹಿಂದಿರುಗಿಸಿದ್ದರಿಂದ , ಋಷಿ ಕಪಿಲರು ಆ ಮಣಿಯನ್ನು ಗಣಪತಿಗೆ ಅರ್ಪಿಸಿದ ಸಲುವಾಗಿ  ಈ ಗಣಪತಿಗೆ ಚಿಂತಾಮಣಿ ಗಣಪತಿ  ಎಂಬ ಹೆಸರು ಬಂದಿರುವುದಾಗಿ ಹೇಳುತ್ತಾರೆ. 

ಓಝರ್ ಗ್ರಾಮದಲ್ಲಿರುವ ವಿಜ್ಞೇಶ್ವರ ಗುಡಿಯ ಆವರಣದಲ್ಲಿ 

     ಓಝರ್ ಗ್ರಾಮದಲ್ಲಿರುವ ವಿಘ್ನೇಶ್ವರ 

ಇಲ್ಲಿ ಶ್ರದ್ದಾ  ಭಕ್ತಿಯಿಂದ ಪೂಜಿಸಲು ವಿನಾಯಕನು ನಮ್ಮ ವಿಘ್ನಗಳನ್ನೆಲ್ಲ ಕಳೆದು ಕಾಪಾಡುತ್ತಾನೆ ಎಂಬ ನಂಬಿಕೆ ಇದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಪೂಜಿಸುತ್ತಾರೆ. 

 ಓಝರ್ ನಲ್ಲಿ   ನಾವು ತಂಗಿದ ಹೋಟೆಲ್ಲಿನಲ್ಲಿ  ಸಹ ಯಾತ್ರಿಕರೊಂದಿಗೆ  

24/11/2017 ರಂದು ಬೆಳಿಗ್ಗೆ  ವಿಘ್ನೇಶ್ವರ ಸ್ವಾಮಿಯ ದರ್ಶನ ಪಡೆದು, ಲೇಣ್ಯಾದ್ರಿಯಲ್ಲಿರುವ ಗಿರಿಜಾತ್ಮಜ  ಗಣೇಶನ ದರ್ಶನವನ್ನು ಪಡೆಯಲು ಹೋದೆವು. ಈ ದೇವಸ್ಥಾನಕ್ಕೆ  ಸುಮಾರು 200 ಮೆಟ್ಟಿಲುಗಳನ್ನೇರಿ ಹೋಗಬೇಕು. ನಾವೆಲ್ಲರೂ ಮೆಟ್ಟಿಲುಗಳನ್ನೇರಿ ಹೋಗುವಾಗ  ವಾನರ ಸಮುಹವೇ ನಮ್ಮನ್ನು ಹಿಂಬಾಲಿಸುತ್ತಿತ್ತು. ತುಂಬಾ ಜಾಗರೂಕತೆಯಿಂದ ಇರಬೇಕು. ಈ ದೇವಸ್ಥಾನವು ಪೌರಾಣಿಕವಾಗಿ ಪ್ರಸಿದ್ದಿ. ಮಾತೆ  ಗಿರಿಜೆಯು ಒಂದು ದಿನ ತಾನು ಸ್ನಾನವನ್ನು ಮಾಡಲು ಹೋಗುವಾಗ ತನ್ನ ಮೈಯಲ್ಲಿರುವ ಅರಿಶಿನ ಹಾಗು ಧೂಳಿನಿಂದ ಒಂದು ಮಗುವನ್ನು  ಸೃಷ್ಠಿಸಿ  , ಮನೆಯೊಳಗೆ  ಯಾರನ್ನೂ ಬಿಡದಂತೆ ತಡೆಯಲು ಆ ಮಗುವಿಗೆ   ಹೇಳಿ ಹೋಗಿರುತ್ತಾಳೆ. ಆ ವೇಳೆಯಲ್ಲಿ ಶಿವನು ಬರಲಾಗಿ ತಾಯಿಯ ಆಜ್ಞೆ ಯಾಗಿರುವುದಾಗಿ  ಹೇಳಿ ಶಿವನನ್ನು ಒಳಗಡೆ ಬರಲು ತಡೆಯಲಾಗಿ , ಶಿವನು ಕೋಪಗೊಂಡು ಆತನ ತಲೆಯನ್ನು ಕಡಿದು, ಮುಂದೆ ವಿಷಯವು ತಿಳಿಯಲಾಗಿ ಪಶ್ಚತ್ತಾಪಗೊಂಡು  ಆನೆಯ ತಲೆಯನ್ನು ತಂದು ಅಂಟಿಸಿ, ಆ ಮಗುವಿಗೆ ಜೀವ ತುಂಬುತ್ತಾನೆ. ಆದ್ದರಿಂದ  ಆತನಿಗೆ ಗಜಾನನನೆಂದು, ಗಿರಿಜೆಯೂ ಸೃಷ್ಠಿಸಿದ್ದರಿಂದ  ಗಿರಿಜಾತ್ಮಜ ನೆಂದು ಸ್ವಾಮಿಯು ಪ್ರಸಿದ್ಧನಾಗುತ್ತಾನೆ . ಎತ್ತರವಾದ ಪ್ರದೇಶದಲ್ಲಿರುವ ಗುಹಾ ಗುಡಿಯು ಸುಂದರ ತಾನದಲ್ಲಿದ್ದು, ಮನಸ್ಸಿಗೆ ಮುದವನ್ನು ನೀಡುತ್ತದೆ.  

ಪುಣೆ ಜಿಲ್ಲೆಯ ಲೇಣ್ಯಾದ್ರಿ ದೇವಸ್ಥಾನದ ಆವರಣದಲ್ಲಿ 


ಗಿರಿಜಾತ್ಮ ಗಣಪತಿಯ ದರ್ಶನವನ್ನು ಪಡೆದು ನಾವು ಮುಂದೆ ರಾಯಗಡ ಜಿಲ್ಲೆಯಲ್ಲಿರುವ ಪಾಲಿ ಗ್ರಾಮದ ಬಲ್ಲಾಳೇಶ್ವರ ವಿನಾಯಕನ ದರ್ಶನವನ್ನು ಪಡೆದು, ಪುನಃ ಪೂನಾಕ್ಕೆ ಹಿಂದಿರುಗಿದೆವು.   ಪುಣೆ ಜಿಲ್ಲೆಯ ಸುಂದರ ಪ್ರಕೃತಿ ಸೌಂದರ್ಯದಲ್ಲಿರುವ ಈ ಅಷ್ಟ ವಿನಾಯಕ ದೇವರ ಯಾತ್ರೆಯು ಒಂದು ಮರೆಯಲಾಗದ ಅನುಭವ.    


                           // ಶುಭಂ//


Comments