ಕುಲದೇವರ ಸನ್ನಿಧಿಗೆ ಕುಟುಂಬ ಯಾತ್ರೆ

 || ಶ್ರೀ ಮೈಲಾರ ಲಿಂಗೇಶ್ವರ ಪ್ರಸನ್ನ ||

 || ಶ್ರೀ ಲಕ್ಷ್ಮೀ ಚಂದ್ರಲಾ ಪರಮೇಶ್ವರಿ ಪ್ರಸನ್ನ ||

4.12.25 ರಂದು ಸಾಯಂಕಾಲ ಕುಲಕರ್ಣಿ ಕುಟುಂಬದ  ನಾವು ಕೆಲವು ಸದಸ್ಯರು,ಮೊದಲೇ ಕಾದಿರಿಸಿದ್ದ 7.15ರ ಬೆಂಗಳೂರು ಬೀದರ್ ಎಕ್ಸ್ಪ್ರೆಸ್ ರೈಲಿನಿಂದ ಹೊರಟು ಬೆಳಿಗ್ಗೆ  5.11.25 ರ ಬೆಳಿಗ್ಗೆ ಮೂರು ಗಂಟೆಗೆ ಯಾದಗಿರಿ ತಲುಪಿ, ಅಲ್ಲಿಂದ ಕಾರಿನಲ್ಲಿ ಯರಗೋಳು ಉತ್ತರಾಧಿ ಮಠಕ್ಕೆ  ಬೆಳಿಗ್ಗೆ ನಾಲ್ಕು ಗಂಟೆಗೆ ತಲುಪಿ, ಸ್ನಾನ ಮಾಡಿ ಮೈಲಾರಲಿಂಗನ ಸನ್ನಿದಿಗೆ ಹೊರಟೆವು. ಸುಮಾರು ಒಂದೂವರೆ ಗಂಟೆ ಪ್ರಯಾಣಿಸಿ, ಅಲ್ಲಿ ನಮ್ಮ ಕುಲದೇವರಾದ ಮೈಲಾರ ಲಿಂಗನ ಪೂಜೆ ಕೈಗೊಂಡು, ಹನ್ನಂದೂ ವರೆಗೆ ಮರಳಿ  ಯಾರಗೋಳದ ಉತ್ತರಾಧಿ ಮಠಕ್ಕೆ   ಹನ್ನೆರಡು ಇಪ್ಪತ್ತಕ್ಕೆ ತಲುಪಿದೆವು.

ಮೈಲಾರ ಲಿಂಗನ ಸನ್ನಿಧಿಯು ಮೊದಲಿಗಿಂತ ಅಭಿವೃದ್ಧಿ ಹೊಂದಿದರೂ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದರೆ, ಒಳ್ಳೆಯ ಯಾತ್ರಾಸ್ಥಳ ಆಗುವುದರಲ್ಲಿ  ಸಂದೇಹವಿಲ್ಲ.




                                          

ಅಲ್ಲಿಯ ಹೊನ್ನಕೆರೆ, (ಅಲ್ಲಿ ಹಿಂದೆ ಹೊನ್ನು ಸಿಕ್ಕಿದ್ದರಿಂದ ಆ ಹೆಸರು) ತುಂಬಿ ಹರಿಯುತ್ತಿದ್ದು, ನಾವೆಲ್ಲರೂ ನೀರಿನಲ್ಲಿ  ಸ್ವಲ್ಪ ಆನಂದಿಸಿದೆವು. ಅಲ್ಲಿ ನಮ್ಮ ಮಗ ಗಿರೀಶ್ ಕುಲಕರ್ಣಿ ಕೆರೆಯಲ್ಲಿ ಈಜಿ ಮುಂದೆ ಹೋಗಿ, ಆನಂದಿಸಿ, ಸೂರ್ಯನಿಗೆ ಆರ್ಗ್ಯ ಕೊಟ್ಟಿದ್ದು ನಮಗೆಲ್ಲ  ತುಂಬಾ ಸಂತೋಷವನ್ನು ನೀಡಿತ್ತು.  ನಂತರ ನಾವೆಲ್ಲರೂ ದೇಗುಲದ ಒಳಗೆ ಹೋಗಿ, ಪೂಜೆಯಲ್ಲಿ ಪಾಲ್ಗೊಂಡು, ನಂತರ ಮೈಲಾರಲಿಂಗನ ಪತ್ನಿ ಗಂಗ ಮಾಳವ್ವ, ಮುಂತಾದ ದೇವಿಯರಿಗೆ  ನಮಸ್ಕರಿಸಿ ಧನ್ಯತಾ ಭಾವದಿಂದ ಹಿಂತಿರುಗಿ ಯಾರಗೋಳಕ್ಕೆ ಹೊರಟೆವು.

                                            

ಯರಗೋಳು ಮಠದ ಅರ್ಚಕರ ಕುಟುಂಬದವರು ನಮ್ಮನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡು ಉಪಚರಿಸಿದರು. ನಂತರ  ಮಧ್ವಸಿದ್ಧಾಂತದ  ಯತಿವರೇಣ್ಯರಾದ  ಜಯತೀರ್ಥರು ಸಾಧನೆ ಮಾಡಿದ ಗುಹೆಯ ಹತ್ತಿರ ನಮ್ಮನ್ನು ಕರೆದುಕೊಂಡು ಹೋಗಿ ಆ ಸ್ಥಳದ ಮಹಿಮೆಯನ್ನು  ಸವಿವಾರವಾಗಿ   ತಿಳಿಸಿಕೊಟ್ಟರು. ಅಲ್ಲಿರುವ ಪ್ರಾಣದೇವರ ಸಾಕ್ಷಿಯಾಗಿ ಶ್ರೀಮದಾಚಾರ್ಯರ ಗ್ರಂಥಗಳಿಗೆ  ಟೀಕೆಗಳನ್ನು ಇಲ್ಲಿ ಬರೆದಿದ್ದು, ಅವರು ಸುಮಾರು ಇಲ್ಲಿಯೇ ಹದಿಮೂರು   ವರ್ಷಗಳ ಸಾಧನೆಯನ್ನು ಮಾಡಿದ ಪುಣ್ಯ ಸ್ಥಳವೆಂದು ಅಲ್ಲಿಯ ಸ್ಥಳಮಹಾತ್ಮೆಯನನ್ನು, ಅವರ ಸಾಧನೆಯನ್ನು ವಿವರವಾಗಿ ತಿಳಿಸಿದಾಗ ಅಂತಹ ಯತಿ ಮಹಾತ್ಮಾರ ಸಾಧನ ಸ್ಥಳಕ್ಕೆ ಹೋಗಿದ್ದು  ನಮ್ಮ ಪುಣ್ಯ ಎನಿಸಿತು. 




ಮಧ್ಯಾಹ್ನ ತೀರ್ಥ ಪ್ರಸಾದವನ್ನು  ಸ್ವೀಕರಿಸಿ ಅಲ್ಲಿಂದ ಹೊರಟು ಸುಮಾರು ಏಳಕ್ಕೆ ಸನ್ನತಿ ಕ್ಷೇತ್ರವನ್ನು ತಲುಪಿ, ಪಲ್ಲಕ್ಕಿ ಸೇವೆಯಲ್ಲಿ ಪಾಲ್ಗೊಂಡು ಅಲ್ಲಿ ತಂಗಿದೆವು.

ಸನ್ನತಿ ಕ್ಷೇತ್ರವನ್ನು ಈಗ ಬಹಳ ಚೆನ್ನಾಗಿ ಅಭಿವೃದ್ಧಿಪಡಿಸಿದ್ದು, ಅಲ್ಲಿ ಪುಟ್ಟ ಹೂ ತೋಟ, ಗೋಶಾಲೆ, ಭಕ್ತಾದಿಗಳಿಗೆ ಉಳಿಯಲು ಅತಿಥಿ ಗೃಹ ಇವೆಲ್ಲವೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ  ಬಂದು ಪಾಲ್ಗೊಳ್ಳಲು  ವಿಶೇಷ ಅಂಶಗಳೆನಿಸಿದವು.










ಮದ್ಯಾಹ್ನ ಸೇತುರಾಜನ ಮಡುವನ್ನು ನೋಡಲು ಹೋದೆವು. ಚಂದ್ರಲಾ ದೇವಿಯು ನಾರಾಯಣ ಮುನಿಯ ಪತ್ನಿಯನ್ನು  ದುಷ್ಟ ಸೇತು ರಾಜನಿಂದ ರಕ್ಷಿಸಲು ಬ್ರಮರ ರೂಪದಲ್ಲಿ ಬಂದು ಅಟ್ಟಿಸಿಕೊಂಡು ಹೋಗಿ, ಸಂಹರಿಸಿದ ಪುರಾಣ  ಕಥೆಗನುಗುಣವಾಗಿ ಅವನು ಆ ಮಡುವಿನಲ್ಲಿ ಮುಳುಗಿ ಪಾತಾಳ ಸೇರಿದನೆಂಬ ಪ್ರತೀತಿ  ಇದ್ದು ಇಂದಿಗೂ ಸಾಕ್ಷಿಯಾಗಿ  ಆ ಮಡುವಿದೆ.


ಆ ಮಡುವಿನ ಮೇಲೆ ಸೋಮೇಶ್ವರ ದೇಗುಲವಿದ್ದು ನಾರಾಯಣ ಮುನಿಯ ಪತ್ನಿ ಇಲ್ಲಿಯೇ ವ್ರತ ಕೈಗೊಂಡು ರಕ್ಷಿತಳಾ ದಲೆಂದು ಸ್ಥಳ ಪುರಾಣವು ತಿಳಿಸುತ್ತದೆ.


ಸನ್ನತಿಯಲ್ಲಿಯೇ  ರಾತ್ರಿ ತಂಗಿ 6.12.25 ರಂದು ಬೆಳಗಿನ ಕಾಕಡಾ ಆರತಿಯಿಂದ ಎಲ್ಲಾ ಸೇವೆಯಲ್ಲಿ, ಸರ್ವ ಸೇವೆಯಲ್ಲಿ ಪಾಲ್ಗೊಂಡು, ರಾತ್ರಿ  ವೈಭವದಿಂದ ಸಿಂಗರಿಸಿದ ಪಲ್ಲಕ್ಕಿಯಲ್ಲಿ  ದೇವಿಯ ಉತ್ಸವ ಮೂರ್ತಿಯನ್ನಿಟ್ಟು ಮಂತ್ರ ಘೋಷ, ಭಜನೆಯಿಂದ ಕೂಡಿದ  ಪಲ್ಲಕ್ಕಿ ಸೇವೆಯಲ್ಲಿ ಭಕ್ತಾದಿಗಳ ಜೊತೆ ಪಾಲ್ಗೊಂಡಿದ್ದು ಸಾರ್ಥಕತೆಯ ಭಾವವನ್ನು ನಮ್ಮೆಲ್ಲರಲ್ಲೂ ಮೂಡಿಸಿತ್ತು.  


                                                        

ನಂತರ ಹುನಗುಂಟೆ ಚಂದ್ರಲಾ ಪರಮೇಶ್ವರಿ ಸನ್ನಿದಿಗೆ ಹೊರಟು ರಾತ್ರಿ ಹನ್ನೆರಡು ಗಂಟೆಗೆ ಹುನಗುಂಟೆ ತಲುಪಿ ತಂಗಿದೆವು.ರಾತ್ರಿ ಹನ್ನೆರಡಾದರೂ ಬೇಜಾರು ಮಾಡಿಕೊಳ್ಳದೆ ನಗುಮೊಗದಿಂದ ನಮ್ಮನ್ನು ಬರಮಾಡಿಕೊಂಡು, ಉಳಿಯುವ ವ್ಯವಸ್ಥೆ ಮಾಡಿದ ದೇವಸ್ಥಾನದ ಸಮಿತಿಯವರ ಔದಾರ್ಯ ಮೆಚ್ಚುವಂತಹದು.







ಇಲ್ಲಿಯೂ ಕೂಡ ಈಗ ಉಳಿಯಲು ಕೊಠಡಿಗಳ ವ್ಯವಸ್ಥೆ ಮಾಡಿದ್ದು ಭಕ್ತಾದಿಗಳಿಗೆ ಅನುಕೂಲವಾಗಿದೆ.

ದಿನಾಂಕ 7.12.25 ರಂದು ಬೆಳಿಗ್ಗೆ ಕಾಕಡಾರತಿ, ಅಭಿಷೇಕ, ರಾತ್ರಿ ಪಲ್ಲಕ್ಕಿ ಸೇವೆ, ಸರ್ವ ಸೇವೆಯಲ್ಲಿ ನಾವು ಮನೆಯವರೆಲ್ಲ  ಒಟ್ಟಿಗೆ ಪಾಲ್ಗೊಂಡಿದ್ದು ಹೆಚ್ಚಿನ ಸಂತೋಷವನ್ನು ತಂದಿತ್ತು. ಮಧ್ಯಾನ್ಹ ಸಿಕ್ಕ ಬಿಡುವಿನಲ್ಲಿ ಭೀಮ ನದಿಯ ಇನ್ನೊಂದು ತೀರದಲ್ಲಿರುವ ಸೋಮೇಶ್ವರ ದೇವಸ್ಥಾನವನ್ನು ವೀಕ್ಷಿಸಲು ಹೊರಟೆವು. ಭೀಮ ನದಿಯನ್ನು ದಾಟಿ ಹೋಗಲು ವಿದ್ಯುತ್ ಚಾಲಿತ ದೋಣಿಯ ವ್ಯವಸ್ಥೆ ಇದ್ದು ಈ ಸ್ಥಳ ಸಣ್ಣ ಊರಾಗಿದ್ದು ಪ್ರಶಾಂತ ವಾತಾವರಣವಿದೆ.



ಅಲ್ಲಿಯ ಹಸಿರು ವಾತಾವರಣ, ಜೋಳದ ಗದ್ದೆ, ಪ್ರಶಾಂತವಾಗಿ ಹರಿಯುವ ನದಿಯ ವಾತಾವರಣ ದಲ್ಲಿ  ಖುಷಿ ಪಟ್ಟು ಅಲ್ಲಿ ಎಲ್ಲರೂ ಫೋಟೋ ಕ್ಲಿಕ್ಕಿಸಿಕೊಂಡೆವು. ನದಿಯ ದಡದಲ್ಲಿ ಸ್ಥಾಪಿಸಿದ ಶಿವಲಿಂಗವು ಆ ಸೊಬಗಿಗೆ ವಿಶೇಷ ಮೆರಗನ್ನು ನೀಡಿದೆ.


ನದಿಯ ಆಚೆಯ ದಡದಲ್ಲಿರುವ ಸೋಮೇಶ್ವರ ದೇವಾಲಯವು ಪುರಾತನ ಕಾಲದ್ದಾಗಿದ್ದು  ಅದರ ಉಸ್ತುವಾರಿ ನೋಡಿಕೊಳ್ಳುವ ಮಲ್ಲೇಶಪ್ಪ ಎನ್ನುವವರು  ಬಹಳ ಭಕ್ತಿ ಭಾವದಿಂದ ಅಲ್ಲಿ  ಪೂಜಾ ಕೈಂಕರ್ಯ ನಡೆಸುತ್ತಿದ್ದಾರೆ.

ಇಲ್ಲಿರುವ ಶಿವಲಿಂಗವು ಅಗಸ್ತ್ಯ ಮಹರ್ಷಿಗಳು ಸ್ಥಾಪಿಸಿದೆಂದು  ಅಲ್ಲಿಯ ಸ್ಥಳ ಮಹಿಮೆಯನ್ನು ಅವರು ತಿಳಿಸಿದಾಗ  ನಮಗೆ  ನಮ್ಮ ಮಾತೃ ಭೂಮಿಯ ಬಗ್ಗೆ  ಬಹಳ ಹೆಮ್ಮೆ ಎನಿಸಿತು.  

ಹಿಂದಿನ ಋಷಿಮುನಿಗಳ ಅಪಾರ  ತಪ:ಶಕ್ತಿ,  ಅವರುಗಳು ಸಮಾಜಕ್ಕಾಗಿ, ಮಾನವ ಕುಲಕ್ಕಾಗಿ ನೀಡಿದ ಕೊಡುಗೆ ಅವಿಸ್ಮರಣೀಯ  ಸಾಧನ ಮಾರ್ಗದಲ್ಲಿ ನಡೆಯಲು  ಅವರ ಮಾರ್ಗದರ್ಶನ ಗಳು ಇಂದಿಗೂ ನಮ್ಮ ಜೀವನಕ್ಕೆ ದಾರಿ ದೀಪಾವಾಗಿವೆ. 

ಆ ದೇವಸ್ಥಾನವನ್ನು ಪರಂಪರಾಗತ ವಾದ ರೂಢಿಯಂತೆ ನೋಡಿಕೊಳ್ಳುವ ಪೂಜಾರಿ ಮಲ್ಲೇಶಪ್ಪ ಎನ್ನುವವರು ತಾವು ಸ್ವತಃ  ಐದನೇ ತರಗತಿಯ ವರೆಗಿನ ಕನ್ನಡ ಪ್ರಾಥಮಿಕ ಶಾಲೆಯನ್ನು ನಡೆಸುತ್ತಿದ್ದುದು ಹೆಮ್ಮೆಪಡುವ ವಿಷಯವಾಗಿದೆ. ಅಲ್ಲಿ ಎಂಬತ್ತಕ್ಕಿಂತಲೂ ಹೆಚ್ಚು ಮಕ್ಕಳು ಓದುತ್ತಿದ್ದು, ಸುಮಾರು ನಲವತ್ತು ವಿದ್ಯಾರ್ಥಿಗಳಿಗೆ ಮಲ್ಲೇಶಪ್ಪನವರೇ ಊಟದ ವ್ಯವಸ್ಥೆಯನ್ನು ಪ್ರತಿದಿನ ಮಾಡುತ್ತಿರುವುದು ತುಂಬಾ ಸ್ಲಾಘನೀಯವಾಗಿದೆ.  ಎಲೆಮರೆಯ ಕಾಯಿಯಂತೆ ಈ ರೀತಿಯ  ದೊಡ್ಡ ಸಮಾಜ ಸೇವೆಯನ್ನು ಈ ಪುಟ್ಟ ಗ್ರಾಮದಲ್ಲಿ ಮಾಡುತ್ತಿರುವ ಇವರ ಬಗ್ಗೆ ತುಂಬಾ ಹೆಮ್ಮೆ ಎನಿಸಿತು.

ನಂತರ ಹತ್ತಿರವಿರುವ  ಸ್ಥಳದಲ್ಲಿ ಬುದ್ಧನ ಕಾಲದ ಸ್ತುಪಗಳಿಗೆ   ಸಂಬಂದಿಸಿದಂತೆ ಉತ್ಕಲನ ನಡೆದಿದ್ದು ಅವುಗಳು ಬುದ್ಧನಿಗೆಸಂಬಂದಿಸಿದoತೆ  ಹಾಗೂ   ಆಗಿನ ಕಾಲದ ಜನ ಜೀವನದ  ಬಗ್ಗೆ ಬೆಳಕು ಚೆಲ್ಲುತ್ತವೆ.

ಇವುಗಳನ್ನೆಲ್ಲ ವೀಕ್ಷಿಸಿ ರಾತ್ರಿ ನಮ್ಮ ಕುಲದೇವಿಯಾದ ಚಂದ್ರಲಾ  ಪರಮೇಶ್ವರಿಯ ಸನ್ನಿಧಾನಲ್ಲಿಯೇ ಉಳಿದು ಮರುದಿನ ಬೆಳಿಗ್ಗೆ 8.11.2025 ರಂದು ಅಲ್ಲಿಂದ ಹೊರಟು ಟೀಕರಾಯರು ಅಂದರೆ ಶ್ರೀ ಜಯತೀರ್ಥರ ಮತ್ತು ಅವರಗುರುಗಳಾದ  ಅಕ್ಷಭ್ಯತೀರ್ಥರ    ಮೂಲ ಬೃಂದಾವನವಿರುವ ಮಳಖೇಡಕ್ಕೆ ಬಂದೆವು. ಆ ದಿನ ಅಕ್ಷಭ್ಯ ತೀರ್ಥರ ಆರಾಧನೆಯಿದ್ದು ಉತ್ತರಾದಿ ಮಠದ ಈಗಿನ ಸ್ವಾಮಿಗಳಾದ ಶ್ರೀ ಶ್ರೀ ಶ್ರೀ ಸತ್ಯಾತ್ಮ ತೀರ್ಥರು ಅಲ್ಲಿಗೆ ಆಗಮಿಸಿದ್ದು ನಮಗೆ ಅವರ ಕರಕಮಲ ಗಳಿಂದ ಮೂಲ ರಾಮದೇವರ ವೈಭವೊಪೇತ   ಪೂಜೆಯನ್ನು ನೋಡುವ ಸೌಭಾಗ್ಯ ದೊರಕಿತು. ತೀರ್ಥ ಪ್ರಸಾದದ ನಂತರ ಮಂತ್ರಾಕ್ಷತೆಯನ್ನು ಸ್ವೀಕರಿಸಿ   ಕಲಬುರ್ಗಿಗೆ ಹೊರಟೆವು.

ಕಲಬುರ್ಗಿಯ ಸ್ಥಳೀಯ ಪ್ರೇಕ್ಷಣಿಯ ಸ್ಥಳಗಳಾದ ಬ್ರಹ್ಮಕುಮಾರಿ ಆದ್ಯಾತ್ಮ ಕೇಂದ್ರವನ್ನು ವೀಕ್ಷಿಸಿ ಅಲ್ಲಿಂದ, ಭುದ್ದ ವಿಹಾರವನ್ನು ವೀಕ್ಷಿಸಲು ಹೊರಟೆವು. ಇದು ತುಂಬಾ ಪ್ರಶಾಂತವಾದ ವಿಶಾಲವಾದ ಸ್ಥಳವಾಗಿದ್ದು  ಬೆಳಿಗ್ಗೆ  ಯಿಂದ ಸಾಯಂಕಾಲದ ವರೆಗೆ ಇಲ್ಲಿದ್ದು  ಈ ಒಂದು  ಪ್ರೇಕ್ಷಣಿಯ  ಪರಿಸರದಲ್ಲಿ  ಧ್ಯಾನದ ಜೊತೆ ಆದ್ಯಾತ್ಮಿಕ ಅನುಭವವನ್ನೂ ಪಡೆಯಬಹುದು. ವಿಶಾಲವಾದ ಧ್ಯಾನ ಮಂದಿರ  ಈ ಸ್ಥಳಕ್ಕೆ  ಹೆಚ್ಚಿನ ಮೆರಗನ್ನು ನೀಡಿದೆ. ಅಲ್ಲಿ ಸ್ವಲ್ಪ ಹೊತ್ತು ಇದ್ದು,  ಧ್ಯಾನ ಹಾಗೂ ಸತ್ಸಂಗದಲ್ಲಿ ಭಾಗವಹಿಸಿ ಹೊರಟೆವು.

ನಂತರ ಕಲಬುರ್ಗಿಯಲ್ಲಿ ನಿರ್ಮಿಸಿದ ವೈಷ್ಣವೋದೇವಿ ಮಂದಿರವನ್ನು ವೀಕ್ಷಿಸಿ, ರಾತ್ರಿ 9.00 ಗಂಟೆಗೆ ಬಸವ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಹೊರಟು ಮರುದಿನ ಬೆಳಿಗ್ಗೆ 8 ಗಂಟೆಗೆ ದೇವರ ಅನುಗ್ರಹದಿಂದ ಸುರಕ್ಷಿತವಾಗಿ ಬೆಂಗಳೂರನ್ನು ತಲುಪಿದೆವು.

ಈ ಸಾರಿ  ಹಿರಿಯ ನಾಗರಿಕರಾದ ನಮ್ಮ  ಜೊತೆ ಮಕ್ಕಳಾದ, ಕಲ್ಪನಾ, ಗಿರೀಶ ಹಾಗೂ ಅರ್ಚನಾ ರವರು  ಇದ್ದಿದ್ದು ನಮಗೆ ಪ್ರಯಾಣದ ಆಯಾಸ ಗೊತ್ತೇ ಆಗಲಿಲ್ಲ.  ತಾವೇ ಎಲ್ಲಾ ಹೊರೆಯನ್ನು ಹೊತ್ತು, ಎಲ್ಲಾ ಕಡೆ ನಮಗೆ  ಹೆಚ್ಚಿನ ಮಹತ್ವ ಕೊಟ್ಟು ನಮ್ಮ ಪ್ರಯಾಣ ವನ್ನು  ಸ್ಮರಣೀಯ ಮಾಡಿದರಲ್ಲದೆ, ತಾವೂ ನಮ್ಮ ಜೊತೆ  ಭಕ್ತಿ ಭಾವದಲ್ಲಿ ಎಲ್ಲಾ   ಸೇವೆಯಲ್ಲಿ ಪಾಲ್ಗೊಂಡಿದ್ದು ನಮಗೆ ಹೆಚ್ಚಿನ  ಸಂತೋಷವನ್ನು ನೀಡಿತ್ತು.

ಪ್ರಯಾಣದಲ್ಲಿ  ಒಟ್ಟಿಗೆ ನಾವೆಲ್ಲರೂ ತಂದ  ತಿನಿಸುಗಳನ್ನು ಹಂಚಿಕೊಂಡು ತಿಂದಾಗ ಸಿಕ್ಕ  ಸಂತೃಪ್ತಿ ಅಪಾರ.  ಕಲಬುರಗಿಯ ಗುರುದತ್ತ ಹೋಟೆಲಿನ ಜೋಳದ ರೊಟ್ಟಿ, ಸನ್ನತಿಯ ಮಂಡಾಳ ಮೆಣಸಿನಕಾಯಿ ಬಜ್ಜಿ ವಿಶೇಷವಾಗಿತ್ತು.

ಹಲವು ವರ್ಷಗಳ ನಂತರ ಕುಟುಂಬದವರು ಒಟ್ಟಿಗೆ ಸೇರಿ ಕುಲದೇವರ ಸನ್ನಿಧಿಗೆ ಹೋಗಿ ಬಂದಿದ್ದು ಅವಿಸ್ಮರಣೀಯ.

ದೇವರು ಹೀಗೆಯೇ ನಮಗೆಲ್ಲ ಅವಕಾಶವನ್ನು ಕರುಣಿಸುತ್ತಿರಲಿ ಎನ್ನುವ  ಆಶಾವಾದದೊಂದಿಗೆ ನನ್ನ ಈ ಪುಟ್ಟ ಲೇಖನಕ್ಕೆ ಮಂಗಳ ಹಾಡುವೆ.

ಅರುಂಧತಿ ಸುರೇಶ್ ಕುಲಕರ್ಣಿ,

ಜನವರಿ 2026









Comments

Popular Posts