Rameshwara and Kanyakumari
ರಾಮೇಶ್ವರಂ ಯಾತ್ರೆ
ಓಂ ನಮ: ಶಿವಾಯ
ರಾಮನಾಥ ದೇವಾಲಯ ರಾಮೇಶ್ವರಂ |
(image courtesy google)
ಭಗವಾನ್ ಶಂಕರನು ಎಲ್ಲರ ಆರಾಧ್ಯ ದೈವ. ಶ್ರದ್ದೆ ಭಕ್ತಿಯಿಂದ ಅವನನ್ನು ಆರಾಧಿಸಿದರೆ ಕ್ಷಿಪ್ರ ಅಂದರೆ ಶೀಘ್ರ ಫಲವನ್ನು ನೀಡುತ್ತಾನೆ.
ಶಿವನ ಹಲವಾರು ರೂಪಗಳಲ್ಲಿ ಲಿಂಗ ರೂಪಕ್ಕೆ ಪ್ರಾಧಾನ್ಯತೆ. ನಮ್ಮ ಪುಣ್ಯ ಭೂಮಿಯಲ್ಲಿ ಸುಮಾರು 64 ಕಡೆಗಳಲ್ಲಿ ಶಿವನು ವಿಶೇಷ ಲಿಂಗರೂಪದಲ್ಲಿ ಪೂಜೆಗೊಳ್ಳುತ್ತಾನೆ. ಅವುಗಳಲ್ಲೂ ಹನ್ನೆರಡು ಕ್ಷೇತ್ರಗಳಲ್ಲಿ ಜ್ಯೋತಿರ್ಲಿಂಗ ರೂಪದಲ್ಲಿ ಪೂಜೆಗೊಳ್ಳುತ್ತಾನೆ. ಆ ಜ್ಯೋತಿರ್ಲಿಂಗಗಲ್ಲಿ ರಾಮೇಶ್ವರದ ರಾಮನಾಥ ಜ್ಯೋತಿರ್ಲಿಂಗವೂ ಒಂದು.
ತ್ರೇತಾಯುಗದಲ್ಲಿ ಶ್ರೀ ರಾಮನು ರಾವಣಾಸುರನನ್ನು ಸಂಹಾರ ಮಾಡಿ ಸೀತೆಯನ್ನು ತನ್ನ ರಾಜ್ಯಕ್ಕೆ ಕರೆದೊಯ್ಯಲು ಲಂಕಾನಗರಿಗೆ ಸೇತು ನಿರ್ಮಾಣ ಮಾಡಿಸಿದನು. ಇದಕ್ಕೆ ಮೊದಲು ತನ್ನ ಯುದ್ಧ ಕಾರ್ಯ ಸುಗಮವಾಗಿ ನಡೆಯಲಿ ಎಂದುಕೊಂಡು ಸಮುದ್ರ ತೀರದಲ್ಲಿ ಮರಳಿನ ಲಿಂಗವನ್ನು ಮಾಡಿ ಪೂಜಿಸಿದಾಗ ಶಿವನು ಶ್ರೀರಾಮನಿಗೆ ಸೇತುಬಂಧ ನಿರ್ಮಾಣದ ಹಾಗು ರಾವಣ ಸಂಹಾರದ ರಹಸ್ಯವನ್ನು ತಿಳಿಸಲಾಗಿ , ಶ್ರೀರಾಮನು ' ದೇವಾ, ಈ ಘಟನೆಯ ನೆನಪಿಗಾಗಿ ಇಲ್ಲಿಯೇ ನೆಲೆಸು 'ಎಂದು ಪ್ರಾರ್ಥಿ ಸಲಾಗಿ ಶಿವನು ಅಲ್ಲಿಯೇ ಜ್ಯೋ ತಿರ್ಲಿಂಗ ರೂಪಿಯಾಗಿ ನೆಲೆಸಿದನು. ಶ್ರೀರಾಮನು ಪ್ರತಿಷ್ಠಾಪಿಸಿ ಪೂಜೆ ಮಾಡಿದ್ದರಿಂದ ಇದು ರಾಮೇಶ್ವರ ಎಂದು ಪ್ರಸಿದ್ದಿಯಾಯಿತೆಂದು ನಮ್ಮ ಪುರಾಣಗಳು ಉಲ್ಲೇಖಿಸುತ್ತವೆ. ಪುರಾಣದ ಇನ್ನೊಂದು ಉಲ್ಲೇಖದ ಪ್ರಕಾರ, ರಾವಣನು ಬ್ರಾಹ್ಮಣನಾಗಿದ್ದರಿಂದ ಅವನ ಹತ್ಯೆಯಿಂದ ಉಂಟಾದ ಬ್ರಹ್ಮಹತ್ಯಾ ದೋಷವನ್ನು ಪರಿಹರಿಸಿಕೊಳ್ಳಲು ಶ್ರೀರಾಮನು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿರುವುದಾಗಿ ಹೇಳುತ್ತಾರೆ.
ಕಾಶಿ ಯಾತ್ರೆಯಲ್ಲಿ ವಿಶ್ವನಾಥನ ದರ್ಶನವನ್ನು ಪಡೆದು, ಅಲ್ಲಿಯ ಪವಿತ್ರ ಗಂಗಾನದಿಯಲ್ಲಿ ತೀರ್ಥ ಸ್ನಾನವನ್ನು ಮಾಡಿ, ಆ ಗಂಗಾಜಲವನ್ನು ರಾಮೇಶ್ವರದ ರಾಮನಾಥನಿಗೆ ಅಭಿಷೇಕ ಮಾಡಬೇಕೆಂದು ಅಲ್ಲಿಂದ ಗಂಗಾಜಲವನ್ನು ತಂದು ನಂತರ ರಾಮೇಶ್ವರ ಯಾತ್ರೆಯನ್ನು ಕೈಗೊಂಡೆನು. ನನ್ನ ತಮ್ಮ ಹಾಗು ಅಕ್ಕನ ಜೊತೆಯಲ್ಲಿ 23.01.2020 ರಂದು ರಾತ್ರಿ .ಕ್ಕೆ ಬೆಂಗಳೂರಿನಿಂದ SRS ಬಸ್ಸಿನಲ್ಲಿ ರಾಮೇಶ್ವರ ಕ್ಷೇತ್ರಕ್ಕೆ ಪ್ರಯಾಣವನ್ನು ಬೆಳೆಸಿದೆವು. ಸುಮಾರು ಬೆಳಿಗ್ಗೆ 9ಕ್ಕೆ ರಾಮೇಶ್ವರವನ್ನು ತಲುಪಿದೆವು. ಅಲ್ಲಿ ನಾವು ಮೊದಲೇ ರೂಮುಗಳನ್ನು ಕಾದಿರಿಸಿದ್ದ ಶ್ರೀ ಕೃಷ್ಣ ಮಠದಲ್ಲಿ ಬೆಳಗಿನ ಕಾರ್ಯಕ್ರಮವನ್ನು ಮುಗಿಸಿ, ಹೊರಗಡೆಯಿಂದ ರಾಮನಾಥನಿಗೆ ನಮಸ್ಕರಿಸಿ, ದೇವಸ್ಥಾನದ ಒಳಾಂಗಣದಲ್ಲಿದ್ಧ 22 ಪುಣ್ಯ ತೀರ್ಥಗಳ ಸ್ನಾನಕ್ಕಾಗಿ ಹೋದೆವು. ಅಲ್ಲಿ ಗಂಗಾ, ಯಮುನ, ಸರಸ್ವತಿ,ಗಾಯತ್ರಿ, ಗಯಾ, ಸೂರ್ಯ, ಚಂದ್ರ ಮುಂತಾದ 22 ತೀರ್ಥಗಳ ಬಾವಿಯಿಂದ ಒಂದೊಂದು ಕೊಡದಂತೆ ನಮಗೆ ನೀರನ್ನು ಹಾಕುತ್ತಾರೆ. ಈ ತೀರ್ಥಗಳ ಸ್ನಾನದಿಂದ ನಮ್ಮ ಪಾಪಗಳೆಲ್ಲವೂ ನಾಶವಾಗುವುದೆಂಬ ನಂಬಿಕೆ ಇರುವುದರಿಂದ ಈ ಯಾತ್ರೆಯನ್ನು ಕೈಗೊಂಡ ಪ್ರತಿಯೊಬ್ಬರೂ ಈ ತೀರ್ಥಗಳಲ್ಲಿ ಸ್ನಾನವನ್ನು ಮಾಡುತ್ತಾರೆ.
ದೇವಸ್ಥಾನದ ಹೊರಗಡೆ ಇರುವ ಸಮುದ್ರವೇ ಅಗ್ನಿ ತೀರ್ಥ. ನಾವು ಅಲ್ಲಿಗೆ ಹೋಗಿ ಸಮುದ್ರದಲ್ಲಿ ಪುಣ್ಯ ಸ್ನಾನವನ್ನು ಮಾಡಿದೆವು. ನಂತರ ಶ್ರೀ ಕೃಷ್ಣ ಮಠಕ್ಕೆ ಬಂದು ಅಲ್ಲಿ ಮದ್ಯಾನ್ಹದ ಪ್ರಸಾದವನ್ನು ಸ್ವೀಕರಿಸಿ, ಮಠದವರ ಸಲಹೆಯನ್ನು ಪಡೆದು ಒಂದು ಕಾರಿನಲ್ಲಿ ರಾಮೇಶ್ವರದ ಸ್ಥಳಗಳನ್ನು ವೀಕ್ಷಿಸಲು ಹೋದೆವು.
ಅಗ್ನಿತೀರ್ಥ ರಾಮೇಶ್ವರಂ (image courtesy google) |
ಮೊದಲು ಶ್ರೀರಾಮಪಾದುಕೆ ಇರುವ ದೇವಸ್ತಾನಕ್ಕೆ ಹೋದೆವು. ಸುಮಾರು ಮೆಟ್ಟಿಲುಗಳನ್ನು ಏರಿ ಹೋದರೆ ಅಲ್ಲಿ ಪೂಜಿಸಲ್ಪಡುವ ಶಿಲೆಯ ರಾಮ ಪಾದುಕೆಯ ದರ್ಶನವನ್ನು ಪಡೆಯಬಹುದು. ದೇವಸ್ಥಾನದ ಮೇಲಿಂದ ಮನೋಹರವಾದ ದೃಶವನ್ನು ನೋಡಿ ನಾವು ಅಲ್ಲಿಂದ ಹೊರಟು ರಾಮ, ಸೀತಾ ಲಕ್ಷ್ಮಣರು ಸ್ನಾನ ಮಾಡಿದ ಕಲ್ಯಾಣಿಗಳಾದ ರಾಮತೀರ್ಥ, ಲಕ್ಮಣತೀರ್ಥ, ಸೀತಾತೀರ್ಥಗಳನ್ನೂ ಮತ್ತು ಪಂಚಮುಖಿ ಹನುಮಾನ್ ದೇವಸ್ಥಾನ ಮುಂತಾದ ಪ್ರಮುಖ ಸ್ಥಳಗಳನ್ನು ವೀಕ್ಷಿಸಿದೆವು.
ರಾಮಪಾದುಕೆ ಇರುವ ದೇವಸ್ಥಾನ |
ರಾಮತೀರ್ಥ
ಲಕ್ಷ್ಮಣ ತೀರ್ಥ
ನಮ್ಮ ಹೆಮ್ಮೆಯ ರಾಷ್ಟ್ರಪತಿಯವರಾಗಿದ್ದ ಡಾ: ಅಬ್ದುಲ್ ಕಾಲಾಂ ಜೀ ಯವರ ಮೆಮೋರಿಯಲ್ ಭವನಕ್ಕೆ ಭೇಟಿ ನೀಡುವುದೇ ಒಂದು ಹೆಮ್ಮೆಯ ವಿಷಯ. ಅಲ್ಲಿ ಅವರ ಜೀವನದ ಪ್ರಮುಖ ಘಟ್ಟಗಳನ್ನು ವಿವರಿಸಿರುವ ಪ್ರತಿಕೃತಿಯನ್ನು ನೋಡಿ ಆನಂದಿಸಿದೆವು.
ಇವೆಲ್ಲವುಗಳನ್ನು ವೀಕ್ಷಿಸಿ ಸಾಯಂಕಾಲ ಶ್ರೀರಾಮ ಸೇತುವೇ ಸ್ಥಳ ಇರುವ ಸುಮಾರು ರಾಮೇಶ್ವರ ದಿಂದ ಹತ್ತೊಂಬತ್ತು ಕಿಲೋಮೀಟರ್ ದೂರವಿರುವ ಧನುಶ್ಕೋಟಿಗೆ ಹೋದೆವು. ಮೂರೂ ಕಡೆ ಸಮುದ್ರವಿರುವ ಈ ಸ್ಥಳ ನಯನ ಮನೋಹರವಾಗಿದೆ. ಎಲ್ಲೆಲ್ಲಿ ನೋಡಿದರು ನೀಲಿ ಮತ್ತು ಹಸಿರು ಬಣ್ಣಗಳಿಂದ ಕಂಗೊಳಿಸುವ ಸಮುದ್ರ. ಸಮುದ್ರದ ಮೇಲಿಂದ ಬೀಸುವ ಗಾಳಿಯು ಎಂತವರ ಮನಸ್ಸನ್ನು ಪುಳಿಕಿತಗೊಳಿಸದೇ ಇರಲಾರದು. ಅಲ್ಲಿಯ ಸೌಂದರ್ಯವನ್ನು ಸ್ವಲ್ಪಹೊತ್ತು ಸವಿದು, ಅಲ್ಲಿಂದ ರಾಮೇಶ್ವರಕ್ಕೆ ಮರುಪ್ರಯಾಣ ಬೆಳೆಸಿದೆವು.
ಧನುಶ್ಕೋಟಿ ರಾಮೇಶ್ವರಂ
ಮಾರ್ಗ ಮದ್ಯದಲ್ಲಿ ರಾಮಭಕ್ತ , ರಾವಣನ ತಮ್ಮ ವಿಭೀಷಣನಿಗೆ ಪಟ್ಟಾಭಿಷೇಖ ಮಾಡಿದ ದೇವಸ್ಥಾನವನ್ನು ವೀಕ್ಷಿಸಿದೆವು.
ಮೇಲಿನ ಪ್ರಮುಖ ಸ್ಥಳಗಳನ್ನು ವೀಕ್ಷಿಸಿ ಸಾಯಂಕಾಲ ರಾಮೇಶ್ವರನ ದರ್ಶನವನ್ನು ಪಡೆದೆವು. ವಿಶಾಲವಾದ ದೇವಸ್ಥಾನದ ಪ್ರಾಂಗಣದಲ್ಲಿ ಸುಮಾರು ದೂರ ಕ್ಯೂನಲ್ಲಿ ಸಾಗಿ, ಭಗವಂತನ ದರ್ಶನವನ್ನು ಪಡೆದಾಗ ಮನಸ್ಸಿಗೆ ಒಂದು ತರಹ ಧನ್ಯತಾ ಭಾವ. ಕಣ್ತುಂಬ ರಾಮೇಶ್ವರನನ್ನು ದರ್ಶಿಸಿ ನಂತರ ದೇವಿಯ ದರ್ಶನ ಪಡೆದೆವು. ಹೊರಗಡೆ ಬಂದು, ದೇವಸ್ಥಾನದ ಹೊರಗಡೆ ಆವರಣದಲ್ಲಿ ನಮಗೆ ಬೇಕಾದ ಶಂಖ, ಹಿತ್ತಾಳೆಯ ಆರತಿ, ಕುಂಕುಮ ಪಂಚವಾಳ, ಮುಂತಾದ ಕೆಲವು ಮುಖ್ಯ ವಸ್ತುಗಳನ್ನು ಖರೀದಿಸಿ ರಾತ್ರಿ ಶ್ರೀಕೃಷ್ಣ ಮಠದಲ್ಲಿ ತಂಗಿದೆವು.
ಮರುದಿನ ಬೆಳಿಗ್ಗೆ ಮೂರು ಗಂಟೆಗೆ ಎದ್ದು, ಸ್ಪಟಿಕಲಿಂಗ ದರ್ಶನವನ್ನು ಪಡೆಯಲು ಹೊರಟೆವು. ಸ್ಪಟಿಕ ಲಿಂಗ ದರ್ಶನ ಬೆಳಿಗ್ಗೆ ಐದೂವರೆಯಿಂದ ಕೆಲವೇ ಸಮಯದ ವರೆಗೆ ಮಾತ್ರ ಇರುವುದರಿಂದ ಭಕ್ತಾದಿಗಳು ಆ ವೇಳೆಗಾಗಲೇ ಕ್ಯೂ ನಲ್ಲಿ ನಿಂತಿರುತ್ತಾರೆ. ಅಲ್ಲಿ ಸ್ಪಟಿಕ ಲಿಂಗ ದರ್ಶನಕ್ಕೆ ಟಿಕೇಟನ್ನು ಪಡೆಯುವಾಗ ಕಾಶಿಯಿಂದ ತಂದ ಗಂಗಾ ತೀರ್ಥದ ಅಭಿಷೇಕಕ್ಕೂ ಟಿಕೇಟನ್ನು ಪಡೆದು, ಅಲ್ಲಿ ನಾವು ಕೊಟ್ಟ ಗಂಗಾಜಲವನ್ನು ಸ್ವಾಮಿಗೆ ಅಭಿಷೇಖ ಮಾಡುವುದನ್ನು ನೋಡಿದಾಗ ನಮಗಾದ ಸಂತೋಷ ಅವರ್ಣನೀಯ. ಸ್ವಾಮಿಯ ಅನುಗ್ರಹ ಪಡೆದು ನಮ್ಮ ಮುಂದಿನ ಪಯಣ ಕನ್ಯಾಕುಮಾರಿಗೆ ಕಾರಿನಲ್ಲಿ ದಿನಾಂಕ 25.01.2020 ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ರಾಮೇಶ್ವರದಿಂದ ಪ್ರಯಾಣ ಬೆಳೆಸಿದೆವು.
ಸುಮಾರು ಹನ್ನೆರಡು ಗಂಟೆಗೆ ಕನ್ಯಾಕುಮಾರಿಯನ್ನು ತಲುಪಿ, ಅಲ್ಲಿ ನಾವು ಕಾದಿರಿಸಿದ್ದ ಶ್ರೀ. ರಾಮಕೃಷ್ಣಮಠದ ವಸತಿ ಗೃಹದಲ್ಲಿ ರೂಮಗಳನ್ನು ಪಡೆದು ಸ್ವಲ್ಪ ವಿಶ್ರಮಿಸಿಕೊಂಡು, ಊಟವನ್ನು ಮುಗಿಸಿ, ಕನ್ಯಾಕುಮಾರಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೊರಟೆವು.
ಕನ್ಯಾಕುಮಾರಿ ದೇವಸ್ಥಾನವನ್ನು ಭಗವತಿ ಅಮ್ಮನ್ ದೇವಸ್ಥಾನವೆಂದೂ ಕರೆಯುತ್ತಾರೆ. 108 ಶಕ್ತಿ ಪೀಠಗಳಲ್ಲಿ ಇದು ಒಂದಾಗಿದೆ. ಪ್ರತಿದಿನ ಅನೇಕ ಯಾತ್ರಿಗಳು ಅಮ್ಮನವರ ದರ್ಶನವನ್ನು ಪಡೆಯುತ್ತಾರೆ.
ಸ್ಕಂದ ಪುರಾಣದಲ್ಲಿ ಕನ್ಯಾಕುಮಾರಿ ಅಮ್ಮನವರ ಉಲ್ಲೇಖವಿರುವ ಪ್ರಕಾರ ಶಿವನು ಒಂದುಸಾರಿ ಈಗ ತಮಿಳುನಾಡಿನಲ್ಲಿರುವ ವೆಳ್ಳಿಯನ್ ಗಿರಿಗೆ ಬಂದಾಗ , ತೇಜಸ್ವಿನಿಯಾದ ಕನ್ಯೆಯೊಬ್ಬಳು ಶಿವನನ್ನು ಇಷ್ಟ ಪಡುತ್ತಾಳೆ. ಒಂದು ನಿರ್ಧಾರಿತ ದಿನದಂದು ಹಾಗು ನಿರ್ಧಾರಿತ ವೇಳೆಯಲ್ಲಿ ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಬಂದು ವಿವಾಹವಾಗುವುದಾಗಿ ಶಿವನು ಭರವಸೆ ನೀಡಿರುತ್ತಾನೆ. ಆದರೆ ಆ ವಿವಾಹವು ನಾರದರಿಂದ ತಪ್ಪಿ ಹೋಗುತ್ತದೆ. ಆ ನಿರ್ಧಾರಿತ ದಿನದಂದು ಬ್ರಾಹ್ಮೀ ಮುಹೂರ್ಥವಿದ್ದರೂ, ಬೆಳಗಾಯಿತೆಂದು ಕೋಳಿ ಕೂಗಿದ ದನಿಯನ್ನು ನಾರದರು ಮಾಡಿದ ಫಲವಾಗಿ, ಶಿವನು ಸರಿಯಾದ ಸಮಯಕ್ಕೆ ಬರಲಿಲ್ಲವೆಂದುಕೊಂಡು ಮದುವೆಗೆ ಬಂದವರೆಲ್ಲ ವಾಪಸು ಹೋಗುತ್ತಾರೆ. ಶಿವನು ತನಗೆ ಭರವಸೆ ನೀಡಿದಂತೆ ಸರಿಯಾದ ಸಮಯಕ್ಕೆ ಬರಲಿಲ್ಲವೆಂದು ಈ ಮದುವೆಯು ತಪ್ಪಿಹೋಯಿತೆಂದು ದೇವಿಯು ನಿರಾಶಳಾಗಿ, ದುಃಖದಿಂದ ತನ್ನ ಅಲಂಕಾರವನ್ನೆಲ್ಲ ಕಿತ್ತೊಗೆದು ಮೂರು ಸಮುದ್ರಗಳು ಸೇರುವ ಈ ಸ್ಥಳದಲ್ಲಿ ಅಂದರೆ ಕನ್ಯಾಕುಮಾರಿಗೆ ಬಂದು ನೆಲೆಸಿ, ಕಠಿಣ ತಪಸ್ಸು ಮಾಡುತ್ತಾಳೆ ಹಾಗು ತಾನು ಕನ್ಯೆಯಾಗಿಯೇ ಇರುವುದಾಗಿ ನಿರ್ಧರಿಸುತ್ತಾಳೆ. ಆದ್ದರಿಂದ ಈ ಸ್ಥಳಕ್ಕೆ ಕನ್ಯಾಕುಮಾರಿ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ.
ಬಾಣಾಸುರ ಅಸುರನು ಬ್ರಹ್ಮನಿಂದ ಒಬ್ಬ ಕನ್ಯೆಯ ವಿನಃ ಬೇರೆ ಯಾರಿಂದಲೂ ಅವನ ಮರಣ ಸಾಧ್ಯವಿಲ್ಲವೆಂದು ವರವನ್ನು ಪಡೆದು, ದೇವತೆಗಳಿಗೆಲ್ಲ ತುಂಬಾ ಕಿರುಕುಳ ನೀಡುತ್ತಿದ್ದನು. ಅದರಿಂದ ದೇವಿಯು ಕನ್ಯೆಯಾಗಿಯೇ ಉಳಿದು ಅವನ ಸಂಹಾರ ಮಾಡಬೇಕೆಂದು ನಾರದರು ದೇವಿಯು ಕನ್ಯೆಯಾಗಿಯೇ ಉಳಿಯಲು ಶಿವನೊಡನೆ ವಿವಾಹವನ್ನು ತಪ್ಪಿಸಿದ್ದರೆಂದೂ ಮುಂದೆ ಈ ಬಾಣಾಸುರನನ್ನು ಕನ್ಯಾಕುಮಾರಿ ದೇವಿಯು ಸಂಹಾರ ಮಾಡಿದಳೆಂದು ಹೇಳುತ್ತಾರೆ.
ಕನ್ಯಾಕುಮಾರಿಯಲ್ಲಿ ಮೊದಲು ನಾವು ವಿವೇಕಾನಂದ ರಾಕ್ ಮೆಮೋರಿಯಲ್ ಭವನ ವನ್ನು ನೋಡಲು ಹೋದೆವು. ಟಿಕೇಟನ್ನು ಪಡೆದು ಕ್ಯೂನಲ್ಲಿ ಸುಮಾರು ಎರಡು ಗಂಟೆಯ ಕಾಲ ಕಾಯ್ದು ಸಮುದ್ರದ ದಂಡೆಯಿಂದ ಸುಮಾರು ದೂರವಿದ್ದ ಈ ವಿವೇಕಾನಂದ ರಾಕ್ ಮೆಮೋರಿಯಲ್ ಭವನಕ್ಕೆ ನಮ್ಮ ಸರದಿಯು ಬಂದ ಕೂಡಲೇ ದೊಡ್ಡ ಮೋಟಾರ್ ಬೋಟಿನಲ್ಲಿ ಹೋದೆವು. ಇದು ಕನ್ಯಾಕುಮಾರಿಯ ಮುಖ್ಯವಾದ ಪ್ರೇಕ್ಷಣೀಯ ಸ್ಥಳವಾಗಿದೆ. ಇದನ್ನು 1970 ರಲ್ಲಿ ನಮ್ಮ ಧೀಮಂತ ಸಂನ್ಯಾಸಿ ಹಿಂದೂ ಧರ್ಮದ ಹೆಗ್ಗಳಿಕೆಯನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಬೆಳಗಿದ ಹಾಗು ನಮ್ಮ ಯುವಕರ ಹೃದಯದಲ್ಲಿ ದೇಶಪ್ರೇಮದ ಕಿಡಿಯನ್ನು ಹಚ್ಚಿದ ಸ್ವಾಮಿ ವಿವೇಕಾನಂದರ ನೆನಪಿನಲ್ಲಿ, ಮುಖ್ಯವಾಗಿ ಅವರು ಇದೇ ಬಂಡೆಯಮೇಲೆ ಜ್ಞಾನೋದಯ ಪಡೆದ ಕುರುಹಾಗಿ ವಿವೇಕಾನಂದ ಭವನ ಹಾಗೂ ಮಂಟಪವನ್ನು ಇಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಧ್ಯಾನ ಮಾಡಲು ಧ್ಯಾನ ಮಂಟಪ ಹಾಗು ಸಭಾ ಮಂಟಪವನ್ನೂ ನಿರ್ಮಿಸಲಾಗಿದೆ. ಇಲ್ಲಿ ಶ್ರೀಪಾದ ಮಂಟಪವೂ ಇದ್ದು ಇದರಲ್ಲಿ ಕನ್ಯಾಕುಮಾರಿ ದೇವಿಯ ಪಾದಗಳಿವೆ. ಧೀಮಂತ ಸನ್ಯಾಸಿಯ ನೆನಪುಗಳನ್ನು, ಇಲ್ಲಿಯ ಸೊಬಗನ್ನು ಸೌಂದರ್ಯವನ್ನು ಅನುಭವಿಸಿ ಮನದಲ್ಲಿ ತುಂಬಿಕೊಂಡು ಹಿಂದಿರುಗಿದೆವು. ಹಾಗೆಯೆ ಇಲ್ಲಿಂದ ಸ್ವಲ್ಪ ದೂರದಲ್ಲಿ ತಮಿಳು ಕವಿ ಹಾಗು ದಾರ್ಶನಿಕರು ಆದ ತಿರುವೆಳ್ಳೂರ್ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಸ್ವಾಮಿ ವಿವೇಕಾನಂದ ಮೆಮೋರಿಯಲ್ ಧ್ಯಾನ ಮಂದಿರ
ರಾಷ್ಟ್ರಪಿತನ ಚಿತಾಭಸ್ಮವನ್ನು ಇಲ್ಲಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಭವನದಲ್ಲಿ ಇಡಲಾಗಿದ್ದು, ಇದರ ವ್ಯಸಿಷ್ಠವೆಂದರೆ ಪ್ರತಿವರ್ಷ ಅಕ್ಟೊಬರ್ ೨ರಂದು ಸೂರ್ಯ ಕಿರಣವು ಮಹಾತ್ಮಾ ಗಾಂಧಿಯವರ ಚಿತಾಭಸ್ಮವನ್ನು ಇಟ್ಟ ಜಾಗದ ಮೇಲೆ ಬೀಳುವುದೆಂದು ಹೇಳುತ್ತಾರೆ. ಇದರ ಮಹತ್ವದ ಬಗ್ಗೆ ಒಬ್ಬ ಗೈಡ್ ಸವಿವರವಾಗಿ ಹೇಳುತ್ತಾರೆ.
ಕನ್ಯಾಕುಮಾರಿಯ ಸಮುದ್ರ ತೀರದಲ್ಲಿ ಸೂರ್ಯೋದಯ ಹಾಗು ಸೂರ್ಯಾಸ್ತದ ಸೊಬಗು ನಯನ ಮನೋಹರ. ಸಂಜೆಯ ತಂಪಿನ ವಾತಾವರಣದಲ್ಲಿ ಹಸಿರು ನೀಲಿ ಬಣ್ಣಗಳಿಂದ ಕಂಗೊಳಿಸುವ ನೀರಿನ ಮೇಲೆ ಸೂರ್ಯಕಿರಣಗಳು ಬಿದ್ದು ತಮ್ಮದೇ ಆದ ರಂಗಿನ ಪ್ರಪಂಚವನ್ನೇ ನಿರ್ಮಿಸುತ್ತವೆ. ಅಲ್ಲಿಯ ರಂಗಿನ ವಾತಾವರಣದಲ್ಲಿ ಸುಮಾರು ಸಮಯಯವನ್ನು ಸವಿದು, ಅಲ್ಲಿ ಪ್ರವಾಸಿಗರ ಹಿಂದೆಯೇ ಸುತ್ತಾಡುವ ವ್ಯಾಪಾರಿಗಳಿಂದ ಮುತ್ತಿನ ಸರ ಬಳೆ ಮುಂತಾದುವನ್ನು ಖರೀದಿಸಿ , ಅಲ್ಲಿಯೇ ತಯಾರಿಸಿದ ಖಾರ ಮಂಡಕ್ಕಿ, ಟೀ ಕುಡಿದು, ಹಿಂದಿರುಗಿ ವಿವೇಕಾನಂದ ವಸತಿ ಗೃಹದಲ್ಲಿ ತಂಗಿದೆವು
ಮರುದಿನ ಬೆಳಿಗ್ಗೆ ನಸುಕಿನಲ್ಲಿಯೇ ಎದ್ದು ವಸತಿ ಗೃಹದಿಂದ ಸ್ವಲ್ಪವೇ ದೂರವಿದ್ದ ಸಮುದ್ರ ತೀರದಲ್ಲಿ ಸೂರ್ಯೋದಯದ ಸೊಬಗನ್ನು ಸವಿಯ ಹೋದೆವು. ಬೆಳಗಿನ ಮನೋಹರವಾದ ವಾತಾವರಣದಲ್ಲಿ ಅಲೆಗಳ ಕುಣಿದಾಟದಿಂದ ಕೂಡಿದ ಸಮುದ್ರದಲ್ಲಿ ಸೂರ್ಯೋದಯವನ್ನು ನೋಡಿ ಆನಂದಿಸಿದೆವು.
ಸೂರ್ಯೋದಯ ಕನ್ಯಾಕುಮಾರಿ
ನಂತರ ಕನ್ಯಾ ಕುಮಾರಿಯ ತ್ರಿವೇಣಿ ಸಂಗಮಕ್ಕೆ ಬಂದುತೀರ್ಥವನ್ನು ಪ್ರೋಕ್ಷಿಸಿಕೊಂಡು ರಾಮಕೃಷ್ಣ ವಸತಿ ಗೃಹಕ್ಕೆ ಬಂದು, ಬೆಳಗಿನ ಉಪಹಾರವನ್ನು ಮುಗಿಸಿ ಪುನಃ ರಾಮೇಶ್ವರಕ್ಕೆ ನಮ್ಮ ಮುಂದಿನ ಪಯಣವನ್ನು ಬೆಳೆಸಿದೆವು.
ದೇವರ ಅನುಗ್ರಹದಿಂದ ರಾಮೇಶ್ವರವನ್ನು ಸುರಕ್ಷಿತವಾಗಿ ತಲುಪಿ, ಪುನಃ ಸ್ವಲ್ಪ ವಸ್ತುಗಳನ್ನು ಖರೀದಿಸಿ, ರಾಮೇಶ್ವರನಿಗೆ ನಮಿಸಿ SRS ಬಸ್ಸಿನಲ್ಲಿ ಬೆಂಗಳೂರಿಗೆ ಮರುಪ್ರಯಾಣವನು ಕೈಗೊಂಡೆವು.
ವಿಶೇಷ ಗಮನ : ರಾಮೇಶ್ವರದ ಶ್ರೀಕೃಷ್ಣಮಠ ಹಾಗು ಕನ್ಯಾಕುಮಾರಿಯ ರಾಮಕೃಷ್ಣ ವಸತಿ ಗೃಹಗಳು ಸ್ವಚ್ಛತೆಯಿಂದ ಕೂಡಿದ್ದು, ಒಳ್ಳೆಯ ಊಟ ಉಪಹಾರಗಳು ಕೈಗೆಟಕುವ ದರದಲ್ಲಿ ದೊರೆಯುತ್ತವೆ. ಹಾಗು ಒಳ್ಳೆಯ ಆತಿಥ್ಯವು ಮನಸ್ಸಿಗೆ ಮುದ ನೀಡುತ್ತದೆ.
ಶುಭಂ
Comments
Post a Comment