Trip to Kollapur, Shiradi, Bhimashankar, Trayambakeshwar,
Gushmeshwar and Elora
ಮಹಾರಾಷ್ಟ್ರವು ಅನೇಕ ಹಿಂದೂ ದೇವಾಲಯಗಳಿಗೆ ಪ್ರಸಿದ್ದಿಯಾಗಿದೆ. ಅವುಗಳಲ್ಲಿ ಕೊಲ್ಲಾಪುರ, ಭೀಮಾಶಂಕರ್, ತ್ರಯಂಬಕೇಶ್ವರ, ಗೃಷ್ಣೇಶ್ವರ್ ಜ್ಯೋತಿರ್ಲಿಂಗಗಳನ್ನು, ಶಿರಡಿ , ಎಲ್ಲೋರಾ, ಸಿದ್ಧಗಿರಿ ಮಠ್,ಮುಂತಾದವುಗಳನ್ನು ವೀಕ್ಷಿಸಲು ನಾನು ,ನನ್ನ ತಮ್ಮನ ಕುಟುಂಬದೊಡನೆ ದಿನಾಂಕ ೦3/10/1914 ರಂದು ಬೆಳಗಾವಿಯಿಂದ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ಮೊದಲು ಕೊಲ್ಲಾಪುರದ ಶ್ರೀ. ಮಹಾಲಕ್ಷ್ಮೀದೇವಿಯ ದರ್ಶನ ಪಡೆಯಲು ಹೋದೆವು.
|
Mahalakshmi devi outside temple
|
|
Kollapur Temple
|
ಇದು ಪುರಾತನ ದೇವಾಲಯವಾಗಿದ್ದು, ಚಾಲುಕ್ಯರ ಕಾಲದಲ್ಲಿ ಇದನ್ನು ಕಟ್ಟಲಾಗಿರುವುದಾಗಿ ಉಲ್ಲೇಖಿಸಿರುವುದನ್ನು ನಾವು ಕೊಲ್ಲಾಪುರ ಕುರಿತ ಪುಸ್ತಕಗಳಲ್ಲಿ ನೋಡಬಹುದು. ದೇವಾಲಯದ ಶಿಲ್ಪಕಲೆಯು ಚಾಲುಕ್ಯರ ಶಿಲ್ಪಕಲೆಯಿಂದ ಕೂಡಿ ಸುಂದರವಾಗಿದೆ. ನಮ್ಮ ಪುರಾಣಗಳಲ್ಲಿಯೂ ಈ ದೇವಿಯ ಉಲ್ಲೇಖವಿದೆ. ಈ ದೇವಾಲಯದಲ್ಲಿ ಕಪ್ಪು ಶಿಲೆಯಿಂದ ನಿರ್ಮಿಸಿ, ಪ್ರತಿಷ್ಠಾಪಿಸಿರುವ ಮಹಾಲಕ್ಸ್ಮಿ ದೇವಿಯ ಮೂರ್ತಿಯು ಸುಂದರವಾಗಿದ್ದು ಸರ್ವಾಭರಣ ಭೂಷಿತಳಾಗಿ ಪೂಜಿಸಲ್ಪಡುತ್ತಾಳೆ. ಬೆಳಿಗ್ಗೆ 4.30ಯಿಂದ ಕಾಕಡಾರತಿ, ನಂತರ ಮಹಾಪೂಜೆ, ನೈವೇದ್ಯ, ಮದ್ಯಾನ್ಹದ ಆರತಿ, ಅಲಂಕಾರ ಪೂಜೆ, ಸಾಯಂಕಾಲ ಧೂಪಾರತಿ, ರಾತ್ರಿ ಶಯನಾರತಿ ಹೀಗೆ ರಾತ್ರಿ ೧೦ ಗಂಟೆಯ ವರೆಗೂ ವಿವಿಧ ರೀತಿಯ ಪೂಜೆಗಳು ನಡೆಯುತ್ತಿರುತ್ತದೆ. ನಾವು ಸರ್ವಾಭರಣ ಭೂಷಿತಳಾದ ದೇವಿಯ ದರ್ಶನ ಹಾಗು ಅನುಗ್ರಹ ಪಡೆದೆವು
ಈ ದೇವಸ್ಥಾನದ ವೈಶಿಷ್ಟ್ಯವೆಂದರೆ ಪ್ರತಿ ವರ್ಷ ಜನವರಿ ಮೂವತ್ತೊಂದು ಹಾಗು ನವೆಂಬರ್ 9 ರಂದು ಸೂರ್ಯಕಿರಣಗಳು ನೇರವಾಗಿ ದೇವಿಯ ಪಾದಗಳ ಮೇಲೆ, ಫೆಬ್ರುವರಿ ಒಂದು ಮತ್ತು ನವೆಂಬರ್ ಹತ್ತರಂದು ಸೂರ್ಯಕಿರಣಗಳು ದೇವಿಯ ಎದೆಯ ಮೇಲೆ ಹಾಗು ಫೆಬ್ರುವರಿ 2 ಹಾಗು ನವೆಂಬರ್ 11 ರಂದು ದೇವಿಯ ಪೂರ್ಣ ಮೂರ್ತಿಯ ಮೇಲೆಲ್ಲ ಸೂರ್ಯಕಿರಣಗಳು ಬೀಳುತ್ತವೆ ಎಂದು ಆ ದಿನಗಳಲ್ಲಿ ವಿಶೇಷವಾಗಿ ಕಿರಣೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವು ದೆಂದು ಹೇಳುತ್ತಾರೆ.
ದೇವಸ್ಥಾನ ಪ್ರಾರಾಂಗಣದಲ್ಲಿ ನವಗ್ರಹ, ಸೂರ್ಯ, ಮಹಿಷಾಸುರಮರ್ಧಿನಿ, ಪಾಂಡುರಂಗ -ರುಕ್ಮ, ಶಿವ, ವಿಷ್ಣು, ತುಳುಜಾ ಭವಾನಿ ಮುಂತಾದ ದೇವರ ಮೂರ್ತಿಗಳನ್ನು ನೋಡಬಹುದು. ನಾವು ದೇವಿಯ ಪ್ರಸಾದವನ್ನು ಪಡೆದು ನಮ್ಮ ಮುಂದಿನ ಪಯಣ ಸಿದ್ಧಗಿರಿ ಮಠಕ್ಕೆ ತೆರಳಿದೆವು.
|
ಸಿದ್ಧಗಿರಿ ಮಠದ ಮ್ಯೂಸಿಯಂ ಮಹಾದ್ವಾರ
|
ಸಿದ್ಧಗಿರಿ ಮಠವು ಒಳ್ಳೆಯ ಹಸಿರು ಪರಿಸರದಲ್ಲಿದ್ದು ಪ್ರವಾಸಿಗರ ಮನಸ್ಸಿಗೆ ಮುದವನ್ನೀಯುತ್ತದೆ. ಮಠವು ಕೊಲ್ಲಾಪುರದಿಂದ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿದೆ. ಇದಕ್ಕೆ ಕನೇರಿ ಮಠವೆಂದು ಹೇಳುತ್ತಾರೆ.ಇಲ್ಲಿರುವ ಗ್ರಾಮೀಣ ಜೀವನವನ್ನು ಪ್ರದಿನಿದಿಸುವ ಮ್ಯೂಸಿಯಂ ಒಂದು ಸಾರಿಯಾದರೂ ನೋಡಲೇಬೇಕು. ಸುಮಾರು ಇನ್ನೂರು ವರ್ಷಗಳ ಹಿಂದಿನ ಗ್ರಾಮೀಣ ಜನರ ಜೀವನದ ಪ್ರತಿಕೃತಿಗಳನ್ನು ಸೊಗಸಾಗಿ ಮಾಡಿದ್ದಾರೆ. ಎಲ್ಲಾ ಪ್ರತಿಕೃತಿಗಳು ಜೀವಕಳೆಗಳಿಂದ ತುಂಬಿವೆ. ಸಿದ್ಧಗಿರಿ ಗುರುಕುಲ ಫೌಂಡೇಶನ್ ನವರು ಇದನ್ನು ನಿರ್ಮಿಸಿ ನಿರ್ವಹಿಸುತ್ತಿದ್ದಾರೆ. ಅಕ್ಕಸಾಲಿಗರ ಜೀವನ, ಕಮ್ಮಾರರು, ಕುಂಬಾರರು, ಬಡಗಿಗಳು, ಕ್ಷೌರಿಕರು, ಕೃಷಿಕರ ಜೀವನವನ್ನು ಪ್ರತಿನಿಧಿಸುವ ಪ್ರತಿಕೃತಿಗಳು ತುಂಬಾ ಚೆನ್ನಾಗಿವೆ . ಹಾಗೆಯೆ ಮಹಿಳೆಯು ಹತ್ತಿಯಿಂದ ನೂಲು ತೆಗೆಯುತ್ತಿರುವುದು, ಹಳ್ಳಿಯ ಜನರು ಊರಿನ ಸಾರ್ವಜನಿಕ ಬಾವಿಯಿಂದ ನೀರು ತರುತ್ತಿರುವುದು, ಕಿರಾಣಿ ಅಂಗಡಿ, ಅಲ್ಲಿ ಹಿಂದಿನ ಕಾಲದಲ್ಲಿ ತೂಕ ಮಾಡುತ್ತಿದ್ದ ತಕ್ಕಡಿ, ಮಹಿಳೆಯು ಸೊಂಟದ ಮೇಲೆ ಮಗುವನ್ನು ಎತ್ತಿಕೊಂಡು ಅಂಗಡಿಯಲ್ಲಿ ಸಾಮಾನುಗಳನ್ನು ಕೊಳ್ಳುತ್ತಿರುವುದು, ರೈತ ಹೊಲ ಊಳುತ್ತಿರುವುದು, ಜಾತ್ರೆಯ ಸನ್ನಿವೇಶಗಳು, ಜನರು ದೇವಸ್ಥಾನಗಳಲ್ಲಿ ಸಾಮೂಹಿಕ ಭಜನೆ ಮಾಡುತ್ತಿರುವುದು ಇವುಗಳನ್ನೆಲ್ಲ ತುಂಬಾ ಜೀವತುಂಬಿದ ಹಾಗೆ ನಿರ್ಮಿಸಿದ್ದಾರೆ. ಇಲ್ಲಿ ಪುರಾತನ ಶಿವನ ದೇವಸ್ಥಾನವು ಇದೆ.
ಇದಲ್ಲದೆ, ಹಿಂದಿನ ಕಾಲದ ವೈದ್ಯ ಪದ್ಧತಿಗಳಾದ, ಆಯುರ್ವೇದ, ಹೋಮಿಯೋ , ಯುನಾನಿ ಮುಂತಾದ ವೈದ್ಯಕೀಯ ವೃತ್ತಿಯ ಪ್ರತಿಕೃತಿಗಳು ತುಂಬಾ ತಿಳುವಳಿಕೆಯನ್ನು ನಮಗೆ ನೀಡುತ್ತವೆ. ಅನಾದಿ ಕಾಲದಲ್ಲಿ ಅವರು ಹೇಗೆ ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಿದ್ದರು, ಔಷಧಿಯನ್ನು ಹೇಗೆ ತಯಾರಿಸುತ್ತಿದ್ದರು, ಗಿಡಮೂಲಿಕೆಗಳನ್ನು ಹೇಗೆ ಉಪಯೋಗಿಸುತ್ತಿದ್ದರು ಎಂದು ತೋರಿಸುವ ಪ್ರತಿಕೃತಿಗಳು ಅಷ್ಟು ಹಿಂದಿನಕಾಲದಲ್ಲೇ ಆಗಿನ ಜನರು ಎಷ್ಟು ಜ್ಞಾನವನ್ನು ಹೊಂದಿದ್ದರು ಎಂಬುದು ಅರಿವಾಗುತ್ತದೆ.
ಇವುಗಳ್ಳದೆ, ಭೌತಶಾಸ್ತ್ರ , ರಸಾಯನ ಶಾಸ್ತ್ರ ಮುಂತಾದವುಗಳ ಪ್ರತಿಕೃತಿಗಳನ್ನು ನೋಡಿದಾಗ ಅವರ ಜ್ಞಾನ ಭಂಡಾರದ ಅರಿವು ನಮಗಾಗುವುದರ ಜೊತೆಗೆ ಇದಕ್ಕೆ ನಾವು ಭೇಟಿ ನೀಡಿದ್ದು ಸಾರ್ಥಕ ವೆನಿಸುತ್ತದೆ. ಇಲ್ಲಿ ವಸತಿ ಊಟ ಉಪಹಾರಗಳ ವ್ಯವಸ್ಥೆಯೂ ಇದೆ.
ಇಲ್ಲಿಂದ ನಾವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಭೀಮಾಶಂಕರ ದೇವಾಲಯಕ್ಕೆ ಪ್ರಯಾಣ ಬೆಳೆಸಿದೆವು. ಈ ದೇವಾಲಯವು ಸಹ್ಯಾದ್ರಿ ಪರ್ವತದ ಘಟ್ಟ ಪ್ರದೇಶವಾಗಿದ್ದು, ಹಸಿರು ತುಂಬಿದ ಘಟ್ಟ ಪ್ರದೇಶದಲ್ಲಿ ಪಯಣಿಸುವುದೇ ರೋಚಕ ಹಾಗು ಆನಂದದಾಯಕ. ರಾತ್ರಿ ಭೀಮಾಶಂಕರಕ್ಕೆ ತಲುಪಿ ಅಲ್ಲಿ ತಂಗಿದೆವು.
|
ಭೀಮಾಶಂಕರ್ ದೇವಾಲಯ (image curtesy google)
|
ಶಿವ ಪುರಾಣದ ಉಲ್ಲೇಖದಂತೆ, ತ್ರೇತಾಯುಗದಲ್ಲಿ ಬ್ರಹ್ಮದೇವನಿಂದ ವರ ಪಡೆದ ಭೀಮಾಸುರನೆಂಬ ರಾಕ್ಷಸನು ತನ್ನನು ಸೋಲಿಸಲು ಹಾಗು ವಧಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಗರ್ವಿತನಾಗಿ ದೇವತೆಗಳಿಗೆ ಹಾಗು ಶಿವ ಭಕ್ತರಿಗೆ ಕಿರುಕುಳ ಕೊಡುತ್ತಿದ್ದನ್ನು. ಹೀಗೆ ಒಂದು ಸಲ ಕಾಮರೂಪ ರಾಜ್ಯದ ಮಹಾ ಶಿವಭಕ್ತರಾದ ರಾಜ ದಂಪತಿ ಸುಲಕ್ಷಣಾ ಸುದಕ್ಷಿಣೆಯರನ್ನು ಅವನು ಸೆರೆಮನೆಯಲ್ಲಿ ಬಂದಿಸಿಡುತ್ತಾನೆ. ಆ ರಾಜ ದಂಪತಿಗಳು ಕಾರಾಗೃಹದಲ್ಲಿಯೂ ಮರೆಯದೆ ಶಿವ ಪೂಜೆಯನ್ನು ಮಾಡುವ ವಿಷಯವನ್ನು ತಿಳಿದ ಭೀಮಾಸುರನು ಅಲ್ಲಿಗೆ ಬಂದು ಅವರು ಪೂಜಿಸುತ್ತಿದ್ದ ಮಣ್ಣಿನ ಲಿಂಗವನ್ನು ತನ್ನ ಕತ್ತಿಯಿಂದ ಒಡೆಯಲು ಉದ್ಯುಕ್ತನಾಗುತ್ತಾನೆ. ಆ ಕ್ಷಣದಲ್ಲಿ ಮಣ್ಣಿನ ಲಿಂಗದಿಂದ ಶಿವನು ಆವಿರ್ಭವಿಸಿ ಬಂದು, ಭೀಮಾಸುರನನ್ನು ಸಂಹಾರ ಮಾಡುತ್ತಾನೆ. ಅಲ್ಲದೆ ಆ ರಾಕ್ಷಸ ವಂಶವನ್ನೇ ಶಿವನು ಸುಟ್ಟು ಬೂದಿ ಮಾಡಿತ್ತಾನೆ. ಆ ಮಹಾಭಕ್ತರಾದ ರಾಜದಂಪತಿಗಳನ್ನು ರಕ್ಷಿಸಿ , ಭೀಮಾಸುರನ ನೆಪದಿಂದ ತನ್ನ ಅದ್ಭುತ ಲೀಲೆ ತೋರಿದ ಶಿವನು ಭಕ್ತರ ಪ್ರಾರ್ಥನೆಯಂತೆ ಅಲ್ಲೇ ನೆಲಸಿ ಭೀಮೇಶ್ವರನೆಂಬ ಹೆಸರಿನ ಜ್ಯೋತಿರ್ಲಿಂಗವಾಗಿ ಪೂಜಿಸಲ್ಪಡುತ್ತಾನೆ.
ರಾತ್ರಿ ಅಲ್ಲಿಯೇ ತಂಗಿದ್ದ ನಾವು ಬೆಳಿಗ್ಗೆ ಐದು ಗಂಟೆಗೆ ಎದ್ದು ಸ್ನಾನಮಾಡಿ, ಭೀಮೇಶ್ವರನ ದರ್ಶನ ಪಡೆಯಲು ಹೋದೆವು.ಇನ್ನೂರು ಮೆಟ್ಟುಟ್ಟಿಲುಗಳನ್ನು ಇಳಿದು ಹೋಗಬೇಕು. ಆ ಬೆಳಗಿನ ಪ್ರಶಾಂತ ವಾತಾವರಣದಲ್ಲಿ ಇಳಿದು ಕೊಂಡು ಹೋಗುವುದೇ ನಮಗೆ ಒಂದು ತರಹ ಅದ್ಭುತ ಅನುಭವ. ನಮ್ಮ ಪುಣ್ಯವೋ ಏನೋ, ಆ ದಿನ ಸ್ವಲ್ಪವೂ ಜನರ ಗದ್ದಲವಿಲ್ಲದೆ ಪ್ರಶಾಂತ ವಾತಾವರಣವಿತ್ತು. ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಭೀಮಾಶಂಕರ ದೇವಸ್ಥಾನವನ್ನು ಆ ವಾತಾವರಣವನ್ನು ಜೀವನದಲ್ಲಿ ಒಂದು ಸಾರಿಯಾದರು ಅನುಭವಿಸಬೇಕು. ನಿರ್ಜನವಾಗಿದ್ದ ಆ ಬೆಳಗಿನಲ್ಲಿ ಭೀಮಾಶಂಕರನನ್ನು ಅಭಿಷೇಖ ಮಾಡಿ ನಾವೆಲ್ಲ ಹೃದಯ ತುಂಬಿ ಪೂಜಿಸಿದೆವು. ದೇವರು ನೀಡಿದ ಆ ಭಾಗ್ಯ ನಮ್ಮ ಜೀವನದ ಅತ್ಯಂತ ಮರೆಯಲಾಗದ ಅನುಭವ. ಅಲ್ಲಿಯೇ ಇರುವ ಪಾರ್ವತೀ ದೇವಿಯನ್ನು ಪೂಜಿಸಿ, ಪ್ರಾರ್ಥಿಸಿ, ಸುತ್ತಲೂ ಇರುವ ದೇವರಿಗೆಲ್ಲಾ ನಮಸ್ಕರಿಸಿ, ನಾವು ನಮ್ಮ ಮುಂದಿನ ಪಯಣ ತ್ರಯಂಬಕೇಶ್ವರ ಜ್ಯೋತಿರ್ಲಿಂಗವನ್ನು ನೋಡಲು ಹೊರಟೆವು.
|
ತ್ರಯಂಬಕೇಶ್ವರ ದೇವಸ್ಥಾನ |
ಈ ದೇವಸ್ಟಾನನು ಕೂಡ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇದು ಮಹಾರಾಷ್ಟ್ರದ ನಾಸಿಕ್ ಹತ್ತಿರವಿದೆ. ಪಂಚವಟಿಯು ಈ ಕ್ಷೇತ್ರದ ಹತ್ತಿರವೇ ಇದೆ. ತ್ರೇತಾಯುಗದಲ್ಲಿ ಶ್ರೀರಾಮನು ವನವಾಸಕ್ಕೆ ಬಂದಾಗ ಶೂರ್ಪನಖಿಯ ಮೂಗನ್ನು ಲಕ್ಷ್ಮಣನು ಕತ್ತರಿಸಿದ್ದು, ಸೀತಾಮಾತೆಯ ಆಪಹರಣವಾದುದು ಇಲ್ಲೇ ಎಂದು ಶಿವಪುರಾಣದಲ್ಲಿ ಹೇಳಲಾಗಿದೆ.
ಋಷಿ ಗೌತಮರ ತಪೋಭೂಮಿ ಇದಾಗಿತ್ತೆಂದು ಕೂಡ ಶಿವಪುರಾಣದಲ್ಲಿ ಉಲ್ಲೇಖಿಸಲಾಗಿದೆ.ಅವರ ಹಲವಾರು ವರ್ಷಗಳ ಕಾಲ ಘೋರ ತಪಸ್ಸಿನ ಫಲವಾಗಿ ಇಲ್ಲಿ ಗೋದಾವರಿ ನದಿಯು ಉದ್ಭವವಾಯಿತೆಂದೂ ಹೇಳುತ್ತಾರೆ.
ತ್ರಯಂಬಕೇಶ್ವರ ದೇವಾಲಯದಲ್ಲಿ ಮೂರೂ ಲಿಂಗಗಳಿದ್ದು ಅವುಗಳನ್ನು ಬ್ರಹ್ಮ ವಿಷ್ಣು ಮತ್ತು ಶಿವ ಲಿಂಗಗಳೆಂದು ಹೇಳುತ್ತಾರೆ. ಮತ್ತು ಇದನ್ನು ತ್ರಿಮೂರ್ತಲಿಂಗ ಎನ್ನುತ್ತಾರೆ. ಗೋದಾವರಿ ನದಿಯ ಧಾರೆ ಯಾವಾಗಲು ತ್ರಯಂಬಕೇಶ್ವರನ ಮೇಲೆ ಬೀಳುತ್ತಿರುತ್ತದೆ. ಹಿಂದೊದುಸಾರಿ ಗೋದಾವರಿ ತೀರದಲ್ಲಿ ಬರಗಾಲ ಬಂದಿದ್ದಾಗ ಗೌತಮರು ತಮ್ಮ ಪತ್ನಿ ಅಹಲ್ಯೆಯೊಡನೆ ಜನರಿಗೆ ಆಶ್ರಯ ನೀಡಿ ಖ್ಯಾತಿವಂತರಾಗಲು ಅಲ್ಲೇ ಇರುವ ಇತರ ಋಷಿಮುನಿಗಳ ಅಸೂಯೆಯ ಕಾರಣದಿಂದಾಗಿ ಗೌತಮರ ಮೇಲೆ ಗೋಹತ್ಯಾ ದೋಷವು ಬಂದು ಅವರು ಆಶ್ರಮವನ್ನು ತೊರೆಯುತ್ತಾರೆ. ಮುಂದೆ ಅವರು ತಮ್ಮ ಪತ್ನಿ ಅಹಲ್ಯೆಯೊಡನೆ ಈ ಗೋದಾವರಿ ತೀರದಲ್ಲಿ ಘೋರ ತಪಸ್ಸನಾಚರಿಸಲು ಶಿವನು ಇವರ ತಪಸ್ಸಿಗೊಲಿದು ಇಲ್ಲಿಯೇ ತ್ರಯಂಬಕೇಶ್ವರನಾಗಿ ನೆಲೆಸಿರುವನೆಂದು ಹೇಳುತ್ತಾರೆ. ಇಲ್ಲಿಯ ಸುಂದರ ಹಸಿರು ಪರಿಸರ ಮನೋಹರವಾಗಿದೆ.
ನಾವು ಭೇಟಿಯಿತ್ತ ಸಮಯದಲ್ಲಿ ತುಂಬಾ ಜನಸಂದಣಿಯಿದ್ದಿದ್ದರಿಂದ ತ್ರಯಂಭಕೇಶ್ವರ ಸ್ವಾಮಿಯ ದರ್ಶನಕ್ಕೆ ಸುಮಾರು ಎರಡು ಗಂಟೆಗಳ ಕಾಯ್ದು ಸ್ವಾಮಿಯ ದರ್ಶನ ಪಡೆದು, ನದಿಯ ತೀರ್ಥ ಪ್ರೋಕ್ಷಿಸಿಕೊಂಡು ನಮ್ಮ ಮುಂದಿನ ಪಯಣ ಶಿರಡಿಗೆ ಹೊರಟೆವು.
|
ಶ್ರೀ. ಸಾಯಿಬಾಬಾ , ಶಿರಡಿ. |
ರಾತ್ರಿ ಸುಮಾರು ಒಂಬತ್ತು ಗಂಟೆಗೆ ಶಿರಡಿ ಕ್ಷೇತ್ರವನ್ನು ತಲುಪಿ, ತಂಗಿದೆವು. ಇದು ಮಹಾರಾಷ್ಟ್ರರಾಜ್ಯದ ಅಹಮದ್ ಜಿಲ್ಲೆಯ ಒಂದು ಗ್ರಾಮ. ಇಲ್ಲಿ ಮಹಾ ಸಂತ ಸಾಯಿಬಾಬಾರವರ ಸಮಾಧಿಯ ಮಂದಿರವಿದ್ದು ಭಕ್ತರ ಶ್ರದ್ಧಾಭಕ್ತಿಯ ಕೇಂದ್ರ ವಾಗಿದೆ. ಇಲ್ಲಿ ಬಾಬಾರವರು ಜಾತಿ-ಮತ ಭೇದವಿಲ್ಲದೆ, ಇಡೀ ಮನುಕುಲದ ಉದ್ದಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಅನೇಕ ಪವಾಡಗಳ ಮೂಲಕ ಪವಾಡಪುರುಷರೆನ್ನಿಸಿಕೊಂಡಿದ್ದಾರೆ. ಸಬ್ ಕಾ ಮಲಿಕ್ ಏಕ್ ಹೈ ಎನ್ನುವ ನುಡಿಯ ಮೂಲಕ ಎಲ್ಲರ ದೇವರು ಒಬ್ಬನೇ ಎಂದು ಸಾರಿದ್ದಾರೆ. ಸಾವಿರ ಸಾವಿರ ಸಂಖ್ಯೆಗಳಲ್ಲಿ ದೇಶ ವಿದೇಶಗಳಿಂದ ಭಕ್ತರು ಇಲ್ಲಿಗೆ ಬಂದು ತಮ್ಮ ಕಷ್ಟ-ಸುಖಗಳನ್ನು ಬಾಬಾರವರ ಮುಂದೆ ನಿವೇದಿಸಿಕೊಂಡು, ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಬಾಬಾರವರನ್ನು ನಂಬಿ ಅನನ್ಯ ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಇಲ್ಲಿಗೆ ಬಂದು ಬಾಬಾರವರ ದರ್ಶನ ಮಾಡಿ, ತಮ್ಮ ದುಃಖವನ್ನು ಮರೆತು ಶಾಂತಿ-ಸಮಾಧಾನವನ್ನು ಹೊಂದಿ ತೆರಳುತ್ತಾರೆ.
ಸಾಯಿಬಾಬರವರು ಅವತಾರಪುರುಷರಾಗಿ ಶಿರಡಿಯಲ್ಲಿ ಸುಮಾರು ೬೦ ವರ್ಷಗಳ ಕಾಲ ಜನರ ಸೇವೆಯನ್ನು ಮಾಡಿ, ನಂಬಿಕೆ, ಶ್ರದ್ದೆ,ಶಾಂತಿ, ಸಹನೆ, ಸೇವೆ ಹೀಗೆ, ತಮ್ಮ ಪವಿತ್ರ ಸಂದೇಶವನ್ನು ಮನು ಕುಲಕ್ಕೆ ನೀಡಿದ್ದಾರೆ. ಬಡವರ ಉದ್ದಾರಕ್ಕಾಗಿ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಇವರಿಂದ ಈ ಪುಟ್ಟ ಗ್ರಾಮ ವಿಶ್ವ ಮಟ್ಟದ ಪ್ರಖ್ಯಾತಿಗೆ ಬಂದಿದೆ.
ಶಿರಡಿಗೆ ವರ್ಷದ ಯಾವ ಋತುಮಾನದಲ್ಲಾದರೂ ಬರಬಹುದು. ಇಲ್ಲಿ ಇಂದಿಗೂ ಭಕ್ತರು ಬರಿದಾದ ಹೃದಯದಲ್ಲಿ ಬಂದು ಪೂರ್ತಿ ಭರವಸೆ ಮತ್ತು ತೃಪ್ತಿಯನ್ನು ಹೃದಯದಲ್ಲಿ ತುಂಬಿಕೊಂಡು ಬಾಬಾರವರ ಆಶೀರ್ವಾದವನ್ನು ಪಡೆದು ಹೋಗುತ್ತಾರೆ. ಇಲ್ಲಿ ಬ್ರಾಹ್ಮೀ ಮುಹೂರ್ತದಿಂದ ಪ್ರಾರಂಭಿಸಿ ರಾತ್ರಿಯ ವರೆಗೂ ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ.
ಶಿರಡಿ ಸಾಯಿಬಾಬ ಸಂಸ್ಥಾನ ಟ್ರಸ್ಟ್ ನವರು ಈ ಕೇಂದ್ರದ ದಿನನಿತ್ಯದ ಚಟುವಟಿಕೆಗಳನ್ನು ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯವರು ಜನರಿಗೆ ಅನೇಕ ಸೌಲಭಗಳನ್ನು ಒದಗಿಸುತ್ತಿದ್ದಾರೆ. ಪ್ರತಿದಿನ ಉಚಿತ ಊಟದ ವ್ಯವಸ್ಥೆ ಇರುತ್ತದೆ. ಇಲ್ಲಿ ವಸತಿ ಸೌಲಭ್ಯ, ಹೋಟೆಲ್ಲುಗಳ ವ್ಯವಸ್ಥೆಗಳು ಇರುತ್ತವೆ. ಈ ಟ್ರಸ್ಟ್ ಶಾಲೆ-ಕಾಲೇಜುಗಳನ್ನು, ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಒದಗಿಸುವುದಲ್ಲದೆ, ಚಾರಿಟಿಯ ಮುಕಾಂತರ ಆಸ್ಪತ್ರೆಗಳನ್ನು ನಡೆಸುತ್ತಿದೆ. ಹೀಗೆ ಬಾಬಾರವರ ಹೆಸರಿನಲ್ಲಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಲ್ಲಿ ಅನೇಕ ಜನೋಪಯೋಗಿ ಸೇವೇಗಳು ನಡೆಯುತ್ತವೆ.
ನಾವು ಬಾಬಾರವರ ಬೆಳಗಿನ ಜಾವದ ಕಾಕಡಾರತಿಯನ್ನು ಕಣ್ತುಂಬಿಕೊಂಡು, ಪ್ರಸಾದವನ್ನು ಸ್ವೀಕರಿಸಿ ನಮ್ಮ ಮುಂದಿನ ಪ್ರಯಾಣ ಶನಿ ಶಿಂಗಣಾಪುರಕ್ಕೆ ಹೊರಟೆವು.
ಶನಿ ಮಹಾತ್ಮನ ದೇವಸ್ಥಾನ ಶನಿಸಿಂಗನಾಪುರ
|
ದೇವಸ್ಥಾನದ ಆವರಣದಲ್ಲಿರುವ ದತ್ತಾತ್ರೇಯ ಸ್ವಾಮಿ
|
ಈ ಭಕ್ತಿ ಕೇಂದ್ರವು ಕೂಡ ಅಹಮದ್ ನಗರದಿಂದ 32 ಕಿ.ಮೀ. ದೂರದಲ್ಲಿದ್ದು, ಶನಿ ಮಹಾತ್ಮನ ದೇವಸ್ಥಾನವು ಒಂದು ಜಾಗೃತ ಕೇಂದ್ರವಾಗಿದ್ದು ಜನರು ಇಲ್ಲಿ ಅತ್ಯಂತ ಭಯ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಇಲ್ಲಿ ತಪ್ಪು ಮಾಡಿದವರಿಗೆ ದೇವರು ತಕ್ಷಣ ಶಿಕ್ಷೆಯನ್ನು ಕೊಡುತ್ತಾನೆ ಎನ್ನುವ ಭಯವಿದ್ದು ಜನರು ತಪ್ಪುಗಳನ್ನು ಮಾಡಲು ಹೆದರುತ್ತಾರೆ. ಕಳ್ಳತನವನ್ನು ಮಾಡಿದರೆ ಶಿಕ್ಷೆಯನ್ನು ಕೂಡಲೇ ಅನುಭವಿಸುವ ಭಯದಿಂದ ಈಗಲೂ ಇಲ್ಲಿ ಕಳ್ಳತನವನ್ನು ಮಾಡುವುದಿಲ್ಲಎಂಬ ನಂಬಿಕೆಯಿಂದ ಅನೇಕ ಮನೆಗಳಿಗೆ ಬಾಗಿಲನ್ನು ಇಡುವುದಿಲ್ಲವೆಂದು ಹೇಳುತ್ತಾರೆ.
|
ಶನಿಮಹಾತ್ಮ ದೇವರಿಗೆ ಎಳ್ಳೆಣ್ಣೆಯ ಸೇವೆ |
ನಾವು ಶನಿ ಮಹಾತ್ಮನಿಗೆ ಅಲ್ಲಿಯ ಪ್ರಸಿದ್ಧಿಯ ಸೇವೆಯಾದ ಎಳ್ಳೆಣ್ಣೆಯನ್ನು ಸಮರ್ಪಿಸಿ ನಮಸ್ಕರಿಸಿ , ನಮಗೆ ಮಂಗಲವನ್ನುಂಟುಮಾಡೆಂದು ಬೇಡಿಕೊಂಡು ಅನುಗ್ರಹ ಪಡೆದು ಅಲ್ಲಿಂದ ಸಮೀಪವಿರುವ ಪ್ರತಿಬಾಲಾಜಿ ಮಂದಿರವನ್ನು ನೋಡಲು ಹೋದೆವು.
ಈ ಮಂದಿರವು ಹೆಸರು ಸೂಚಿಸುವ ಹಾಗೆ ತಿರುಪತಿ ಬಾಲಾಜಿ ಮಂದಿರದ ಪ್ರತಿರೂಪವಾಗಿದ್ದು ಬಾಲಾಜಿ , ಪದ್ಮಾವತಿ ಅಮ್ಮನವರ ಹಾಗು ಲಕ್ಷ್ಮಿದೇವಿಯ ವಿಗ್ರಹಗಳು ಹಾಗು ಅಲಂಕಾರಗಳು ಕಣ್ಮನಗಳನ್ನು ತುಂಬುತ್ತವೆ. ಇದನ್ನು ವಿಶ್ವ ಹಿಂದೂ ಗ್ರೂಪಿನವರು ಕಟ್ಟಿದ್ದು, ಸುಮಾರು 1993 ರಲ್ಲಿ ಪ್ರಾರಂಭಿಸಿ 2003 ರಲ್ಲಿ ಮಂದಿರವನ್ನು ಪೂರ್ಣಗೊಳಿಸಲಾಗಿದೆ. ನಾವು ದೇವರ ದರ್ಶನವನ್ನು ಪಡೆದು, ಸ್ವಲ್ಪ ಹೊತ್ತು ಅಲ್ಲಿಯ ಮನೋಹರವಾದ ವಾತಾವರಣದಲ್ಲಿದ್ದು ನಂತರ ಅಲ್ಲಿಂದ ಸುಮಾರು 15 ಕಿ.ಮೀ. ದೂರವಿರುವ ಎಲ್ಲೋರಾ ಗುಹಾ ದೇವಾಲಯಗಳನ್ನು ನೋಡಲು ಹೋದೆವು
|
ಎಲ್ಲೋರಾ ಗುಹಾ ದೇವಸ್ಥಾನ
|
|
ಎಲ್ಲೋರಾ ಗುಹಾದೇವಸ್ತಾನಕ್ಕೆ ಭೇಟಿಯಿತ್ತಾಗ
|
ಎಲ್ಲೋರಾದಲ್ಲಿ ಕಲ್ಲುಗಳನ್ನು ಕೊರೆದು ನಿರ್ಮಿಸಿದ ದೇವಾಲಯಗಳು ಪ್ರಪಂಚದ ಅತಿದೊಡ್ಡ ಗುಹಾ ದೇವಾಲಯವಾಗಿವೆ. ಇಲ್ಲಿ ಹಿಂದೂಧರ್ಮ, ಭೌದ್ದ ಮತ್ತು ಜೈನ ಧರ್ಮಕ್ಕೆ ಸಂಬಂಧಿಸಿದ ವಿಗ್ರಹಗಳು ಮತ್ತು ದೇವಾಲಯಗಳನ್ನು ನೋಡಬಹುದು. ಶಿವ-ಪಾರ್ವತಿಯರ ಮತ್ತು ವಿಷ್ಣುವಿಗೆ ಸಂಬಂದಿಸಿದ ದೇವಾಲಯಗಳನ್ನು ಅತಿ ಸುಂದರವಾಗಿ ನಿರ್ಮಿಸಿರುತ್ತಾರೆ. ವಿಷ್ಣುವಿನ ದಶಾವತಾರ ಶಿಲ್ಪಗಳನ್ನು, ಶಿವನ ವಿವಿಧ ಭಂಗಿಯ ಶಿಲ್ಪಗಳನ್ನು, ಸಿಂಹದ ಮೇಲೆ ಕುಳಿತಿರುವ ಅಂಬಿಕೆಯ ವಿಗ್ರಹಗಳನ್ನು , ಇನ್ನು ಅನೇಕ ಹಿಂದೂ ಧರ್ಮದ ದೇವರ ಶಿಲ್ಪಗಳನ್ನು ಹಾಗೂ ದೇವಾಲಯಗಳನ್ನು ನೋಡಬಹುದು. ಇಲ್ಲಿರುವ ಕೈಲಾಸ ಶಿವ ದೇವಾಲಯವನ್ನು ಅತಿ ಸುಂದರವಾಗಿ ನಿರ್ಮಿಸಿದ್ದಾರೆ. ಬೌದ್ದ ಧರ್ಮಕ್ಕೆ ಹಾಗು ಜೈನ ಧರ್ಮಕ್ಕೆ ಸಂಬಂದಿಸಿದ ವಿಗ್ರಹಗಳನ್ನು ಸುಂದರವಾಗಿ ನಿರ್ಮಿಸಿದ್ದಾರೆ. ಭೌದ್ಧ ಧರ್ಮಕ್ಕೆ ಸಂಬಂದಿಸಿದ ಸುಮಾರು 12 ಗುಹಾ ದೇವಾಲಯಗಳು, , ಹಿಂದೂ ಧರ್ಮಕ್ಕೆ ಸಂಬಂದಿಸಿದ 17 ಗುಹಾ ದೇವಾಲಯಗಳನ್ನು ಹಾಗು 5 ಜೈನ ಧರ್ಮಕ್ಕೆ ಸಂಬಂದಿಸಿದ ಗುಹಾದೇವಾಲಯಗಳನ್ನು ಎರಡು ಮೂರು ಅಂತಸ್ತುಗಳಲ್ಲಿ ಕಟ್ಟಿರುವುದನ್ನು ನೋಡಿದಾಗ , ಆಗ ಅವರು ತೆಗೆದುಕೊಂಡ ಶ್ರಮ, ಅವರ ಶಿಲ್ಪಕಲಾ ನೈಪುಣ್ಯತೆ, ಹಾಗು ಅವರ ಧರ್ಮ ಸಹಿಸ್ಣತೆಯನ್ನು ನಾವು ಮನಗಾಣಬಹುದು. ಇವುಗಳೆಲ್ಲ ಒಂದರ ಪಕ್ಕದಲ್ಲೊಂದು ಇದ್ದು ಆಗಿನ ಕಾಲದಲ್ಲಿದ್ದ ಧರ್ಮಸಹಿಸ್ಣತೆಯನ್ನು ಸಾರುತ್ತವೆ. ಇವುಗಳನ್ನು 8ನೇ ಶತಮಾನದಲ್ಲಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆಯೆಂದು ದಾಖಲಿಸಲಾಗಿದೆ ನಮಗೆ ಸಮಯದ ಅಭಾವದಿಂದ ಇವುಗಳಲ್ಲಿ ಎಲ್ಲವನ್ನು ನೋಡಲು ಸಾದ್ಯವಾಗಲಿಲ್ಲವಾದ್ದರಿಂದ ಕೆಲವನ್ನು ಮಾತ್ರ ವೀಕ್ಷಿಸಿ ಹತ್ತಿರದಲ್ಲಿರುವ ಘುಷ್ಮೇಶ್ವರ ದ್ವಾದಶ ಜ್ಯೋತಿರ್ಲಿಂಗ ನ್ನು ನೋಡಲು ಹೊರಟೆವು.
ಘು ಸ್ಮೇಶ್ವರ ದೇವಾಲಯದ ಎದುರುಗಡೆ |
|
|
ಈ ದೇವಸ್ಥಾನವು ಕೂಡ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇದರ ಪೂರ್ವೇತಿಹಾಸದ ಪ್ರಕಾರ ಹಿಂದೆ ಇಲ್ಲಿ ದೇವಗಿರಿ ಎಂಬ ಪರ್ವತದಲ್ಲಿ ಸುಧರ್ಮ ನೆಂಬ ಶಿವಭಕ್ತ ರಾಜನಿದ್ದನು. ಅವನ ಪತ್ನಿ ಸುದೇಹಿಯಿಂದ ಅವನಿಗೆ ಸಂತಾನವಾಗದಿದ್ದಾಗ ಹಿರಿಯರ ಸಲಹೆಯಂತೆ ಅವಳ ತಂಗಿ ಘುಶ್ಮಾಳನ್ನುವಿವಾಹವಾಗುತ್ತಾನೆ. ಘುಶ್ಮಳೂ ಕೂಡ ಮಹಾನ್ ಶಿವಭಕ್ತೆಯಾಗಿದ್ದು ಪ್ರತಿದಿನವೂ 108 ಮಣ್ಣಿನ ಲಿಂಗಗಳನ್ನು ಮಾಡಿಭಕ್ತಿಯಿಂದ ಪೂಜಿಸುತ್ತಿದ್ದಳು. ಇದರ ಫಲವಾಗಿ ಅವಳಿಗೆ ಪುತ್ರಸಂತಾನ ವಾಗಲು ಅವಳ ಅಕ್ಕ ಸುದೇಹಿಗೆ ಅಸೂಯೆ ಉಂಟಾಗಿ ಒಂದುದಿನ ಅವಳ ಮಗನನ್ನುಕೊಂದು ಮೃತದೇಹವನ್ನು ಸರೋವರದ ತೀರದಲ್ಲಿ ಎಸೆದಿರುತ್ತಾಳೆ. ಘುಸ್ಮಳು ಮರುದಿನ ಶಿವಪೂಜೆ ಮಾಡಿ, ಲಿಂಗಗಳನ್ನು ವಿಸರ್ಜಿಸಲು ಸರೋವರಕ್ಕೆ ಹೋದಾಗ, ಮಗನ ಮೃತದೇಹವನ್ನು ನೋಡಿ ಮೂರ್ಚಿತಳಾಗುತ್ತಾಳೆ. ಆದರೆ ಮೂರ್ಛೆಯಿಂದ ಏಳುವುದರೊಳಗೆ ಶಿವನ ಕೃಪೆಯಿಂದ ಆ ಮಗುವಿಗೆ ಜೀವ ಬಂದಿರುತ್ತದೆ. ಶಿವನು ಪ್ರತ್ಯಕ್ಷನಾಗಿ ತನ್ನ ಮಹಾನ್ ಭಕ್ತೆಗೆ ಅಪಚಾರ ಮಾಡಿದ್ದರಿಂದ ಅವಳ ಅಕ್ಕನನ್ನು ಸಂಹಾರ ಮಾಡುತ್ತೇನೆಂದಾಗ ಘುಸ್ಮಾಳು , ಅಜ್ಞಾನದಿಂದ ಮಾಡಿದ ತಪ್ಪಿಗೆ ತನ್ನ ಅಕ್ಕನನ್ನು ಕ್ಷಮಿಸಬೇಕೆಂದು ಶಿವನಲ್ಲಿ ಬೇಡಿಕೊಳ್ಳುತ್ತಾಳೆ. ಶಿವನು ಅವಳ ಒಳ್ಳೆಯ ಗುಣ ಹಾಗು ಭಕ್ತಿಗೆ ಮೆಚ್ಚಿ , ವರ ಕೇಳೆಂದು ಹೇಳಿದಾಗ ಜ್ಯೋತಿರ್ಲಿಂಗ ರೂಪದಲ್ಲಿ ಇಲ್ಲೇ ನೆಲೆಸೆಂದು ಸ್ವಾಮಿಯನ್ನು ಬೇಡಿಕೊಂಡಾಗ, ಶಿವನು ಅಲ್ಲಿಯೇ ನೆಲೆಸಿರುವುದಾಗಿ ಹಾಗು ಆ ಭಕ್ತಳ ಹೆಸರಿನಲ್ಲೇ ಘುಶ್ಮೇಶ್ವರನೆಂದು ನೆಲೆಸಿರುವುದಾಗಿ ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಇಲ್ಲಿ ನಮಗೆ ದೇವರನ್ನು ಪೂಜಿಸುವ ಸೌಭಾಗ್ಯ ದೊರೆತ ಫಲವಾಗಿ ನಮ್ಮ ಪ್ರವಾಸ ಸಾರ್ಥಕವಾಯಿತೆಂದುಕೊಂಡು ಅತ್ಯಂತ ಭಯ ಭಕ್ತಿಯಿಂದ ಶಿವಲಿಂಗವನ್ನು ಪೂಜಿಸಿ, ಸ್ವಲ್ಪ ಹೊತ್ತು ಅಲ್ಲಿ ಕುಳಿತುಕೊಂಡು ಭಗವಂತನ ಧ್ಯಾನ ಮಾಡಿ, ನಮಸ್ಕರಿಸಿ ಔರಂಗಾಬಾದ್ ಮೂಲಕ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು.
|
ಔರಂಗಾಬಾದಿನ ತಾಜ್ ಮಹಲ್ಲಿನಂತೆಯೇ ಕಟ್ಟಲಾಗಿರುವ ಔರಂಗಜೇಬನ ಹೆಂಡತಿಯ ಸ್ಮಾರಕವನ್ನು ನೋಡಿಕೊಂಡು ನಂತರ ಮಾರಾಠ ರಾಜ ಶಿವಾಜಿ ಮಹಾರಾಜನ ಮ್ಯೂಸಿಯಂಗೆ ಭೇಟಿ ಇತ್ತು ಅಲ್ಲಿ ಅವರ ಯುದ್ಧಸಾಮಗ್ರಿಗಳನ್ನು ಮತ್ತು ಆಗಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಇತರೆ ವಸ್ತುಗಳನ್ನು ನೋಡಿಕೊಂಡು ನಮ್ಮ ಪ್ರಯಾಣವನ್ನು ಮುಂದುವರಿಸಿ, ರಾತ್ರಿ ಮಾರ್ಗ ಮದ್ಯದ ಒಂದು ಹೋಟೆಲ್ಲಿನಲ್ಲಿ ತಂಗಿ, ಮರುದಿನ ಬೆಳಗಿನ ಜಾವ ನಮ್ಮ ಪ್ರಯಾಣವನ್ನು ಬೆಳಗಾವಿಗೆ ಮುಂದುವರಿಸಿದೆವು. ಅಲ್ಲಿಂದ ನಮ್ಮ ಸ್ವಗ್ರಾಮವಾದ ಕೆರೆಮನೆಗೆ ಹಿಂದಿರುಗುವ ಮೂಲಕ ನಮ್ಮ ಪ್ರವಾಸವನ್ನು ದೇವರ ದಯೆಯಿಂದ ಸುರಕ್ಷಿತವಾಗಿ ಪೂರ್ಣಗೊಳಿಸಿದೆವು.
: ಶುಭಂ :
|
Comments
Post a Comment